'ಹೌದಲ್ವ್ರಾ, ದೊಡ್ಡ ಮನುಷ್ಯರಿಗೆ ಎಲ್ಲೆಲ್ಲೋ ತಾವು! ಅವರಿಗಿರೋ ಆಸ್ತಿ ಏನು, ಅಂತಸ್ತ್ ಏನು ಯಾರು ಬಲ್ಲೋರು? ದೊಡ್ಡೋರ ಆಟವೆಲ್ಲ ದೊಡ್ಡದೇ...' ಪ್ರಜಾವಾಣಿ ಹೆಡ್‌ಲೈನ್ ಓದಿಕೊಂಡು ನಂಜ ನನ್ ಮುಸುಡಿಗೆ ಒತ್ತಿ ಹಿಡಿದು ತೋರಿಸಿದ ನೋಡಿದ್ರೆ ಕುಸಾ ಸಾಹೇಬ್ರೂ ವತಿಯಿಂದ ಡಿಲ್ಲಿನ್ಯಾಗೆ ನಡೆದಂಗೆ ಕಾರ್ಯಾಚರಣೆ ಮಾಡ್‌ತಾರಂತೆ ಅಂತ ತಿಳೀತು.
'ನಂಜೂ, ನೋಡೋ...ಇಂತೋರ್ ಮಾತೆಲ್ಲ ನಂಬೋ ಮಾತೇನ್ಲಾ...' ಅಂದೆ.
'ಹೌದ್ ಸಾಮಿ, ಯಾಕಿರ್‌ಬಾರ್ದು?' ಅಂತ ನನ್ನನ್ನೇ ಪ್ರಶ್ನೆ ಕೇಳ್ತಾ 'ಹಿಂದೆ ಬೇಕಾದಷ್ಟು ಸರ್ತಿ ಹಿಂಗ್ ಆಗೈತ್ರೀ, ನಾನೇ ಪೇಪರ್‌ನಾಗೆ ಓದೀನಿ...' ಅಂದಿದ್ದಕ್ಕೆ
'ಅಲ್ವೋ, ಪೇಪರ್‌ನಾಗೆ ಬಂದಿದ್ದೆಲ್ಲಾ ನಿಜಾ ಆಗಂಗಿದ್ರೆ ನಾನೂ-ನೀನು ಇಷ್ಟೊತ್ತಿಗೆ ಇಲ್ಲ್ಯಾಕಿರತಿದ್ವಿ...ಇಷ್ಟೊಂದು ಓದ್‌ತೀನಿ ಅಂತೀ, ಇನ್ನೂ ಹೈಸ್ಕೂಲ್ ಹುಡ್ರು ಮಾತಾಡ್ದಂಗ್ ಮಾತಾಡದ್ ಬಿಟ್ಟಿಲ್ಲಲ್ಲ ನೀನು...' ಎಂದೆ.
'ಸುಮ್ಕಿರ್ರಿ, ನಿಮಗೊತ್ತಾಗಂಗಿಲ್ಲ, ನಮ್ ಸಾಹೇಬ್ರೂ ಶಾನೇ ಮಾತಿಗೆ ತಪ್ಪದ ಮಗ...' ಎಂದೋನನ್ನ ಅಲ್ಲೇ ನಿಲ್ಲಿಸಿ...
'ಹಂಗಾದ್ರೆ, ಬೆಂಗಳೂರು ಪದ್ಮನಾಭನಗರಾನೇ ಧ್ವಂಸ ಮಾಡ್ತಾರೇ ಅನ್ನು!' ಎಂದಿದ್ದನ್ನ ಅವನು ಒಂಥರಾ ಅರ್ಥಾನೇ ಆಗದವರ ಹಾಗೆ ಕಣ್ ಪಿಳಿಪಿಳಿ ಮಾಡ್ತಾ ನೋಡೋದನ್ನ ನೋಡಿ ನನಗೋ ಒಳಗೊಳಗೇ ನಗುಬಂತು.