Sunday, December 30, 2007

ಕುಂತೀ ಮಕ್ಕಳಿಗೆ ಎಂದಾರ ಅಧಿಕಾರ ಸಿಕ್ಕತೇನು?

’ಏನ್ ಸಾರ್, ಅಪರೂಪವಾಗೋಯ್ತು ನಿಮ್ಮ ದರುಶನಾ ಇತ್ತೀಚೆಗೆ?’ ಎಂದು ಪ್ರಶ್ನೆ ಕೇಳಿದ್ದು ನಮ್ಮ ಕೋಡೀಹಳ್ಳಿ ಮೇಷ್ಟ್ರುನ್ನ ಕುರಿತೇ. ಒಂದು ಟೈರ್‌ನಲ್ಲಿ ಕಡಿಮೇ ಗಾಳಿ ಇದ್ದೂ ಭರ್ತಿ ಜನರನ್ನು ತುಂಬಿಕೊಂಡ ಲಕ್ಷ್ಮೀ ಬಸ್ಸಿನಂತೆ ಉಸಿರೆಳುದುಕೊಂಡು ನಮ್ಮನೇ ಜಗುಲಿ ಮೆಟ್ಟಿಲನ್ನು ಹತ್ತುತ್ತಿದ್ದ ಮೇಷ್ಟ್ರು ಮುಖದಲ್ಲಿ ಅದ್ಯಾವ ನಗುವೂ ಇರಲಿಲ್ಲ ಅದರ ಬದಲಿಗೆ ದೇವೇಗೌಡರ ಮುಖದ ಅದಮ್ಯ ಶಾಂತಿಯ ಕಳೆ ಇದ್ದ ಹಾಗೆ ಕಂಡು ಬಂತು.

’ಏನಿಲ್ಲ, ಸ್ವಲ್ಪ ಊರ್ ಕಡಿ ಕೆಲ್ಸಿತ್ತು ಹಂಗಾಗಿ ಬರಲಿಲ್ಲ ನೋಡ್ರಿ, ಮತ್ತೆ ಏನ್ ಸಮಾಚಾರಾ, ಎಲ್ಲಾ ಅರಾಮಾ?’ ಎಂದರು.

ಊರುಕಡೆಯ ವಾತಾವರಣ ನಿಜವಾಗಿಯೂ ಮೇಷ್ಟ್ರನ್ನ ಹಣ್ಣು ಮಾಡಿದ್ದು ಹೌದು, ಇಲ್ಲವೆಂದರೆ ಅವರ ಇಳಿ ವಯಸ್ಸಿನಲ್ಲಿಯೂ ಯುವಕರ ಹಾಗೆ ಸದಾ ಕೈಯಲ್ಲಿ ಪ್ರಜಾವಾಣಿಯನ್ನು ಝಳಪಿಸಿಕೊಂಡು ಕುಣಿಯುತ್ತಿರಲಿಲ್ಲವೇ? ಅವರನ್ನು ಮಾತಿಗೆ ಎಳೆಯುತ್ತಾ ನಾನು, ’ನೋಡ್ರಿ, ನಮ್ಮ ರಾಜ್ಯದ ಪರಿಸ್ಥಿತಿ ಎಲ್ಲೀವರೆಗೆ ಬಂದಿದೆ, ಹಿಮಾಚಲ ಪ್ರದೇಶದವರಿಗಿಂತ ಕಡೇ ಅದ್ವಾ ನಾವು?’ ಎಂದು ತಿವಿಯುವಂತೆ ಪ್ರಶ್ನೆಯನ್ನು ಎಸೆದೆ.

ನನ್ನ ಮಾತಿನಿಂದ ಉತ್ತೇಜನಗೊಂಡ ಮೇಷ್ಟ್ರು ರಾಜಕಾರಣದ ಬಗ್ಗೆ ಒಂದಿಷ್ಟು ಮಾತನಾಡುತ್ತಾರೆ ಎಂದುಕೊಂಡರೆ ಠಾಕೂರರ ಆಡಳಿತದಲ್ಲಿ ಸುಭಿಕ್ಷವಾಗಿರುವ ಜನತೆಯ ಪ್ರತಿನಿಧಿಯಂತೆ ಮೇಷ್ಟ್ರು ಠಸ್ಸೂ-ಠುಸ್ಸೂ ಎನ್ನದೇ ಉರಿಯದೇ ಆರಿ ಹೋದ ಸುರುಸುರು ಬತ್ತಿಯಂತಾಗಿದ್ದು ನನಗೆ ನಿಜವಾಗಿಯೂ ಕಳಕಳಿಯನ್ನುಂಟು ಮಾಡಿತ್ತು. ಜೊತೆಗೆ ಇನ್ನೊಂದಿಷ್ಟು ಜನರನ್ನಾದರೂ ಕರೆಸಿ ಮಾತನಾಡಿ ವಿಚಾರಿಸಿಕೊಳ್ಳೋಣವೆಂದರೆ ಈ ಹಾಳಾದ್ ನಂಜನೂ-ತಿಮ್ಮಕ್ಕನೂ ಎಲ್ಲಿಯೂ ಕಾಣಲಿಲ್ಲ. ನಾನು ತಡಮಾಡಿದ್ದನ್ನು ನೋಡಿದ ಮೇಷ್ಟ್ರು, ’ಏನಿಲ್ಲ, ಎಲ್ಲ ಸರಿ ಹೋಗುತ್ತೆ, ಎಲೆಕ್ಷನ್ನ್ ಒಂದು ಬರ್ಲಿ ನೋಡ್ರಿ’ ಎಂದು ಅದೇನೋ ಸತ್ಯವನ್ನು ಬಚ್ಚಿಟ್ಟುಕೊಂಡ ಎಳೆಮಗುವಿನಂತೆ ಮುಖ ಮಾಡಿದರು.

ನಾನು, ’ಅಲ್ಲಾ ಸಾರ್, ಎಂ.ಪಿ.ಪ್ರಕಾಶ್ ದಳ ಬಿಟ್ಟು ಬಿಜೆಪಿ ಸೇರ್ತಾರಂತೆ? ಅದರಿಂದೇನಾದ್ರೂ ಆಗುತ್ತೇನು?

ಮೇಷ್ಟ್ರು, ’ಏ, ಅದರಿಂದ ಏನಾಗ್ತತಿ? ಹೆಗಡೆ, ಸಿದ್ಧರಾಮಯ್ಯ ಮುಂತಾದೋರು ಹೋದ ದಾರಿಗೆ ಪ್ರಕಾಶ್ ಹೋಗ್ತಾರೇ ಅನ್ನೋದನ್ನ ಬಿಟ್ರೆ ನಮ್ಮ ಪದ್ಮನಾಭ ನಗರ ಸಾಹೇಬ್ರನ್ನ ಅಲ್ಲಾಡ್ಸಕೂ ಯಾವನ್ನ್ ಕೈಯಲ್ಲಿ ಆಗಲ್ಲ ಬಿಡ್ರಿ!’ ಎಂದು ದೊಡ್ಡ ಬಾಂಬನ್ನೇ ಸಿಡಿಸಿದರು.

ನಾನು, ’ಅಲ್ಲಾ ಮೇಷ್ಟ್ರೇ, ಗುಜರಾತ್ ಹಿಮಾಚಲ ಪ್ರದೇಶದಾಗ್ ಗೆದ್ದ ಮೇಲೆ ಬಿಜೇಪಿ ನಂಬರ್ ಮ್ಯಾಲಕ್ಕ್ ಹೋಗೈತಂತಲ್ಲಾ...’ ಎನ್ನುವ ವಾಕ್ಯವನ್ನು ಅರ್ಧದಲ್ಲೇ ತುಂಡು ಮಾಡಿ,

’ಏ, ಬಿಡ್ರಿ ನೀವೊಂದು, ಮೊದ್ಲು ಆ ಯಡಿಯೂರಪ್ಪನ್ ಬಂಡಾಯದೋರಿಗೆ ಉತ್ರಾ ಹೇಳಿ ಸುಮ್ನ ಕೂರಸ್ಲಿ ಆಮೇಲ್ ನೋಡೋಣಂತೆ...’ ಎಂದು ಧೀರ್ಘವಾಗಿ ಉಸಿರೆಳೆದುಕೊಂಡು ಮಾತನ್ನು ನಿಲ್ಲಿಸಿದರು.

ನಾನು, ’ಹಂಗಾರೆ ಬಿಜೆಪಿ ಗೆಲ್ಲಂಗಿಲ್ಲಾ ಮುಂದೆ...’ ಎಂದರೆ,

ಮೇಷ್ಟ್ರು, ’ಕುಂತೀ ಮಕ್ಕಳಿಗೆ ಎಂದಾರ ಅಧಿಕಾರ ಸಿಕ್ಕತೇನು?’ ಎಂದು ಅದ್ಯಾವುದೋ ಮಹಾಭಾರತದ ಮೋಡಿಯನ್ನೆರಚಿ ಹೊರಟೇ ಹೋಗಿ ಬಿಟ್ಟರು, ನಾನು ಬಿಟ್ಟು ಕಣ್ಣು ಬಿಟ್ಟು ಅವರು ಹೋದ ದಾರಿಯನ್ನೇ ಯಡಿಯೂರಪ್ಪ ಮುಖ್ಯಮಂತ್ರಿ ಖುರ್ಚಿ ನೋಡುತ್ತಿದ್ದ ಹಾಗೆ ನೋಡುತ್ತಾ ನಿಂತೆ.

Labels: , ,


# posted by Satish : 12:23 pm  3 comments

Wednesday, December 12, 2007

ಆ ವಯ್ಯಾ ಒಂಥರಾ ಸುಟ್ಟಬದನೇ ಕಾಯಿ ಇದ್ದ ಹಾಗೆ...

ಮೇಷ್ಟ್ರು, ತಿಮ್ಮಕ್ಕ, ನಂಜ ಹಾಗೂ ನಾನು ಎಲ್ಲರೂ ಛಳಿಗಾಲದ ರಜೆಗೆ ಗೂಡು ಸೇರಿಕೊಂಡಿದ್ದೇವೆ - ಯಡಿಯೂರಪ್ಪ, ಪಾಪ ಒಂದೇ ವಾರ ಖುರ್ಚಿ ಮೇಲೆ ಕೂತಿದ್ರು ಅಂತ ತಿಮ್ಮಕ್ಕ ಒಂದೇ ಒಂದು ಕಣ್ಣಿನಿಂದ ಅತ್ತಂತೆ ಮಾಡಿದಳು ಎನ್ನುವುದನ್ನು ಬಿಟ್ಟರೆ ಉಳಿದ ನಾವ್ಯಾರು ಅಷ್ಟೊಂದು ತಲೆಕೆಡಿಸಿಕೊಂಡಂತಿಲ್ಲ.

ಮುಂದಿನ ವರ್ಷ ಬರೋ ಚುನಾವಣೆ ಹೊತ್ತಿಗೆಲ್ಲಾ ಛಳಿ ಕಳೆದುಕೊಂಡ ಕರಡೀ ಹಾಗೆ ನಾವೆಲ್ಲ ಮತ್ತೆ ಬರ್ತೀವಿ ನಮ್ಮ ನಮ್ಮ ವರಸೆಗಳನ್ನ ಬಳಸಿಕೊಂಡು ಮಾತನಾಡಲಿಕ್ಕೆ. ಈ ರಾಜ್ಯಪಾಲ ರಾಮೇಶ್ವರ ಠಾಕೂರ್ ಬಗ್ಗೆ ಏನ್ ಬರೆಯೋದು ಆವಯ್ಯಾ ಒಂಥರಾ ಸುಟ್ಟ ಬದನೇಕಾಯಿ ಇದ್ದ ಹಾಗೆ ಅಂತ ನಂಜ ಹೇಳೋದನ್ನ ಕೇಳಿ ನನಗೇ ನಗು ಬಂತು.

ಇನ್ನು ದೊಡ್ಡ ಗೌಡ್ರು ವಿಷ್ಯಾ ಏನ್ ಹೇಳೋಣ ದಿನೇದಿನೇ ಅವರ ನುಣ್ಣನೇ ತಲೆಯ ಹೊಳಪೂ ಹೆಚ್ತಾ ಇರೋದೂ, ದೊಡ್ಡದಾಗಿ ಬೆಳೀತಾ ಇರೋ ಮೂಗಿಗೂ ಹಾಗೂ ಪ್ರಸಕ್ತ ರಾಜಕೀಯ ಸ್ಥಿತಿಗತಿಗೂ ಏನೂ ಸಂಬಂಧವಿಲ್ಲ ಅಂತ ನಾನ್ ಎಷ್ಟು ಸರ್ತಿ ಹೇಳಿದ್ರೂ ಯಾರೂ ನನ್ನ ಮಾತನ್ನ ಕೇಳ್ತಾನೇ ಇಲ್ಲ...

ನೋಡ್ತಾ ಇರಿ, ಮುಂದೇನಾಗುತ್ತೇ ಅಂತ...ಮೇಷ್ಟ್ರು ಎಂದಿನಂತೆ ತಮ್ಮ ಪ್ರಿಡಿಕ್ಷನ್ನ್ ಹುರುಪಿನಲ್ಲಿದ್ರೆ, ನಂಜ ಬಚ್ಚಲು ಮನೆ ಒಲೆಯಲ್ಲಿ ಕಾಲು ಸುಟ್ಟ ಬೆಕ್ಕಿನ ಹಾಗೆ ಕೂತು ಬೀಡಿ ಸೇದ್ತಾ ಇರೋದು ನಿಜವೇ ಹೌದು.

Labels:


# posted by Satish : 12:37 pm  0 comments

This page is powered by Blogger. Isn't yours?

Links
Archives