’ಏನ್ ಮೇಷ್ಟ್ರೇ ಇತ್ಲಾಗೆ ಯಡಿಯೂರಪ್ಪ ಅಧಿಕಾರ ಹಿಡ್ದಿದ್ದೇ ತಡಾ ನೀವು ಟ್ರಂಕಿನ್ಯಾಗ್ ಇದ್ದ ಹಳೇ ರೇಷ್ಮೆ ಜುಬ್ಬಾ ತೆಕ್ಕೊಂಡು ಹಾಕ್ಕೊಂಡಿರೋ ಹಾಗಿದೆಯೆಲ್ಲಾ?’ ಎಂದು ತಮಾಷೆ ಮಾಡ್ದೋರು ಯಾರು ಅಂತ ನೋಡಿದ್ರೆ ನಂಜ ಹಲ್ಲು ಗಿಂಜಿಕೊಂಡು ಜಗಲಿ ಮೇಲಿನ ಕಂಭಕ್ಕೊರಗಿಕೊಂಡು ಕುಂತಿದ್ದ.
ನಮ್ಮನೆ ಕಟ್ಟೆ ಮೇಲೆ ಮಧ್ಯಾಹ್ನ ಎರಡೂವರೆ ಎಜೆ ಬಸ್ಸು ಕಾಯೋ ಗಡಿಬಿಡಿಲಿದ್ದ ಮೇಷ್ಟ್ರು ಗಂಭೀರರಾಗೇ ಇನ್ನೂ ಕನ್ನಡಪ್ರಭದೊಳಗೆ ತಮ್ಮ ಮುಖವನ್ನು ಹೂತುಕೊಂಡಿರೋದು ಎಲೆಕ್ಷನ್ನಿನ್ನಲ್ಲಿ ಸೋತ ಗೌಡರ ಬಳಗ ದಿವ್ಯಮೌನವನ್ನು ಧರಿಸಿಕೊಂಡಷ್ಟೇ ಸಹಜವಾಗಿತ್ತು.
’ಏ ನಿಂದೊಳ್ಳೇ, ಯಾವ್ದೋ ಮದ್ವುಗಿ ಹೊಂಟೀನಿ, ಸುಮ್ನಿರು’ ಎಂದು ಮೇಷ್ಟ್ರು ನಂಜನ್ನ ನೋಡಿ ಗದರಿಕೊಂಡ್ರು.
’ನಿಮ್ದೇ ಮಜಾ ಬಿಡ್ರಿ. ಅದ್ಸರಿ, ನೋಡುದ್ರಾ ಇನ್ನೂ ನನ್ ಮಕ್ಳು ಅಧಿಕಾರಕ್ಕ್ ಸೇರಿ ಎಲ್ಡ್ ದಿನ ಆಗಿಲ್ಲ, ಆಗ್ಲೇ ಅವರೊಳಗಿದ್ದ ವಿಷಾ ಎಲ್ಲಾ ಕಾರ್‌ಕೊಂಡ್ ಸಾಯೋಕ್ ಹತ್ತವ್ರೆ, ಇಂಥೋರಿಗೆಲ್ಲ ನಮ್ ದೊಡ್ಡ್ ಗೌಡ್ರು ಥರ ಒಬ್ರು ದೊಣ್ಣೆ ಆಡಿಸ್ಕೊಂಡೇ ಇದ್ದಿದ್ರೆ ಸರಿ ಆಗ್ತಿತ್ತು, ಅಂತೋರ್ ಯಾರಿದಾರ್ ರ್ರೀ, ಯಡಿಯೂರಪ್ಪನ್ ಜೊತೆ?’
’ಇದೆಲ್ಲ ಮಾಮೂಲೀ ಕಣ್ಲಾ, ಅವ್ರು-ಇವ್ರು ಅಧಿಕಾರಕ್ಕೆ ಬಂದ್ರೆ ಎಲ್ರೂ ತಾವ್ ಮಂತ್ರೀ ಮಾಗಧರಾಗ್ ಬೇಕು ಅನ್ನೋದೇ ಕನ್ಸು ಅವ್ರುಗಳ್ದು. ಅವ್ರು ಎಲೆಕ್ಷನ್ನಿಗೆ ಸುರ್ದಿರೋ ದುಡ್ಡು ವಾಪಾಸ್ ಬರಬಕು ಅಂತಂದ್ರೆ ಮಂತ್ರೀನೇ ಆಗ್ಬಕು. ಸುಮ್ಕೆ ಎಮ್ಮೆಲ್ಲೆ ಆಗಿ ವಿಧಾನ ಸೌದ್ದಾಗೆ ಧೂಳ್ ತಿನಕೊಂಡ್ ಬಿದ್ದಿದ್ರೆ ಏನ್ ಪ್ರಯೋಜನ್ ಹೇಳು?’
’ಅಲ್ಲಾ ಸಾರ್, ಹಿಂದೆಲ್ಲಾ ಮಂತ್ರಿಗೊಳು ಅಂದ್ರೆ ಒಂದು ಐದ್ ಸಾರ್ತಿ ನಾದ್ರೂ ಗೆದ್ದು ಬಂದಿರತಿದ್ರು, ಈ ಸರ್ತಿ ಎಲ್ಡೂ-ಮೂರನೇ ಸರ್ತಿ ಗೆದ್ದೋರೂ ಉರಕೊಂಡು ನಿಂತಾರಂತೆ ನಿಜವೇ?’
’ಹೌದಪಾ, ಹೌದು. ಎಲ್ಲವನಿಗೂ ಮಂತ್ರೀ ಪದವಿ ಬೇಕು, ಎಲ್ಲಿಂದಾ ತರಾಣ?’
’ನಾನೊಂದು ಐಡಿಯಾ ಹೇಳ್ಲಾ...’
’...’
’ಇವ್ರು ಗೆದ್ದೋರು ನೂರಾಹತ್ತು ಜನ, ಜೊತಿಗೆ ಸೇರ್ ಕಂಡೋರು ಐದು ಮಂದಿ, ಎಲ್ಲರೂ ಸೇರ್ಕಂಡೇ ಮಂತ್ರಿ ಮಂಡಲ ತುಂಬ್‌ಕ್ಯಂಡ್ರೆ ಹೆಂಗೆ? ಗೆದ್ದೋರೆಲ್ಲ ಮಂತ್ರಿಗಳು, ಯಾವ್ದುರದ್ದು ಎಲ್ಲೀದೂ ಅಂತ ಕೇಳ್ ಬ್ಯಾಡ್ರಿ ಮತ್ತ!’
’ಏ ನಿಂದ್ಯಾವಾಗ್ಲೂ ತಮಾಷೆ ಬಿಡ್ಲೆ’
’ಹಂಗಲ್ಲ ಸರ್ರ, ಕೊನಿಗೆ ನೂರಾ ಹತ್ತು ಜನಕ್ಕ ನೂರಾ ಹತ್ತು ಮಂತ್ರಿಗಳಾದ್ರೂ ಆದ್ರೆ ಆವಾಗ ಭಿನ್ನ ಮತಾನೇ ಇರಂಗಿಲ್ಲ ಏನಂತೀರಿ...’
ಅಷ್ಟೊತ್ತಿಗೆ ಎಜೆ ಬಸ್ಸು ಬಂತು ಅಂತ ಮೇಷ್ಟ್ರು ಪೇಪರ್ರನ್ನ ಪಕ್ಕಕ್ಕೆ ಎಸೆದು ಒಂದ್ ಕೈಯಲ್ಲಿ ಪಂಚೆ ಹಿಡಕೊಂಡು ಲಗುಬಗೆಯಿಂದ ನಡೆದಿದ್ದು, ಅರ್ಜೆಂಟಿಗೆ ಅಧಿಕಾರ ಸ್ಥಾಪನೆಗೆ ದೊಡ್ಡ ಗೌಡ್ರು ಸ್ಫೀಡಾಗಿ ಬಂದ್ರೇನೋ ಅನ್ನಿಸುವಂತಿತ್ತು. ಮೇಷ್ಟ್ರು ಹೋಗಿದ್ದೇ ಹೋಗಿದ್ದೇ ನಂಜಾ ಅವರು ಬಿಸಾಡಿದ ಪೇಪರನ್ನು ಮೂಸಿಕೊಂಡು ಕುಳಿತ, ನಾನು ಕೆಲಸ ನೋಡಲು ಒಳನಡೆದೆ.
Labels: ಅಧಿಕಾರ, ಪ್ರಮಾಣವಚನ, ಮಂತ್ರಿಗಳು
’ಏನ್ ಸಾರ್, ಅಪರೂಪವಾಗೋಯ್ತು ನಿಮ್ಮ ದರುಶನಾ ಇತ್ತೀಚೆಗೆ?’ ಎಂದು ಪ್ರಶ್ನೆ ಕೇಳಿದ್ದು ನಮ್ಮ ಕೋಡೀಹಳ್ಳಿ ಮೇಷ್ಟ್ರುನ್ನ ಕುರಿತೇ. ಒಂದು ಟೈರ್‌ನಲ್ಲಿ ಕಡಿಮೇ ಗಾಳಿ ಇದ್ದೂ ಭರ್ತಿ ಜನರನ್ನು ತುಂಬಿಕೊಂಡ ಲಕ್ಷ್ಮೀ ಬಸ್ಸಿನಂತೆ ಉಸಿರೆಳುದುಕೊಂಡು ನಮ್ಮನೇ ಜಗುಲಿ ಮೆಟ್ಟಿಲನ್ನು ಹತ್ತುತ್ತಿದ್ದ ಮೇಷ್ಟ್ರು ಮುಖದಲ್ಲಿ ಅದ್ಯಾವ ನಗುವೂ ಇರಲಿಲ್ಲ ಅದರ ಬದಲಿಗೆ ದೇವೇಗೌಡರ ಮುಖದ ಅದಮ್ಯ ಶಾಂತಿಯ ಕಳೆ ಇದ್ದ ಹಾಗೆ ಕಂಡು ಬಂತು.
’ಏನಿಲ್ಲ, ಸ್ವಲ್ಪ ಊರ್ ಕಡಿ ಕೆಲ್ಸಿತ್ತು ಹಂಗಾಗಿ ಬರಲಿಲ್ಲ ನೋಡ್ರಿ, ಮತ್ತೆ ಏನ್ ಸಮಾಚಾರಾ, ಎಲ್ಲಾ ಅರಾಮಾ?’ ಎಂದರು.
ಊರುಕಡೆಯ ವಾತಾವರಣ ನಿಜವಾಗಿಯೂ ಮೇಷ್ಟ್ರನ್ನ ಹಣ್ಣು ಮಾಡಿದ್ದು ಹೌದು, ಇಲ್ಲವೆಂದರೆ ಅವರ ಇಳಿ ವಯಸ್ಸಿನಲ್ಲಿಯೂ ಯುವಕರ ಹಾಗೆ ಸದಾ ಕೈಯಲ್ಲಿ ಪ್ರಜಾವಾಣಿಯನ್ನು ಝಳಪಿಸಿಕೊಂಡು ಕುಣಿಯುತ್ತಿರಲಿಲ್ಲವೇ? ಅವರನ್ನು ಮಾತಿಗೆ ಎಳೆಯುತ್ತಾ ನಾನು, ’ನೋಡ್ರಿ, ನಮ್ಮ ರಾಜ್ಯದ ಪರಿಸ್ಥಿತಿ ಎಲ್ಲೀವರೆಗೆ ಬಂದಿದೆ, ಹಿಮಾಚಲ ಪ್ರದೇಶದವರಿಗಿಂತ ಕಡೇ ಅದ್ವಾ ನಾವು?’ ಎಂದು ತಿವಿಯುವಂತೆ ಪ್ರಶ್ನೆಯನ್ನು ಎಸೆದೆ.
ನನ್ನ ಮಾತಿನಿಂದ ಉತ್ತೇಜನಗೊಂಡ ಮೇಷ್ಟ್ರು ರಾಜಕಾರಣದ ಬಗ್ಗೆ ಒಂದಿಷ್ಟು ಮಾತನಾಡುತ್ತಾರೆ ಎಂದುಕೊಂಡರೆ ಠಾಕೂರರ ಆಡಳಿತದಲ್ಲಿ ಸುಭಿಕ್ಷವಾಗಿರುವ ಜನತೆಯ ಪ್ರತಿನಿಧಿಯಂತೆ ಮೇಷ್ಟ್ರು ಠಸ್ಸೂ-ಠುಸ್ಸೂ ಎನ್ನದೇ ಉರಿಯದೇ ಆರಿ ಹೋದ ಸುರುಸುರು ಬತ್ತಿಯಂತಾಗಿದ್ದು ನನಗೆ ನಿಜವಾಗಿಯೂ ಕಳಕಳಿಯನ್ನುಂಟು ಮಾಡಿತ್ತು. ಜೊತೆಗೆ ಇನ್ನೊಂದಿಷ್ಟು ಜನರನ್ನಾದರೂ ಕರೆಸಿ ಮಾತನಾಡಿ ವಿಚಾರಿಸಿಕೊಳ್ಳೋಣವೆಂದರೆ ಈ ಹಾಳಾದ್ ನಂಜನೂ-ತಿಮ್ಮಕ್ಕನೂ ಎಲ್ಲಿಯೂ ಕಾಣಲಿಲ್ಲ. ನಾನು ತಡಮಾಡಿದ್ದನ್ನು ನೋಡಿದ ಮೇಷ್ಟ್ರು, ’ಏನಿಲ್ಲ, ಎಲ್ಲ ಸರಿ ಹೋಗುತ್ತೆ, ಎಲೆಕ್ಷನ್ನ್ ಒಂದು ಬರ್ಲಿ ನೋಡ್ರಿ’ ಎಂದು ಅದೇನೋ ಸತ್ಯವನ್ನು ಬಚ್ಚಿಟ್ಟುಕೊಂಡ ಎಳೆಮಗುವಿನಂತೆ ಮುಖ ಮಾಡಿದರು.
ನಾನು, ’ಅಲ್ಲಾ ಸಾರ್, ಎಂ.ಪಿ.ಪ್ರಕಾಶ್ ದಳ ಬಿಟ್ಟು ಬಿಜೆಪಿ ಸೇರ್ತಾರಂತೆ? ಅದರಿಂದೇನಾದ್ರೂ ಆಗುತ್ತೇನು?
ಮೇಷ್ಟ್ರು, ’ಏ, ಅದರಿಂದ ಏನಾಗ್ತತಿ? ಹೆಗಡೆ, ಸಿದ್ಧರಾಮಯ್ಯ ಮುಂತಾದೋರು ಹೋದ ದಾರಿಗೆ ಪ್ರಕಾಶ್ ಹೋಗ್ತಾರೇ ಅನ್ನೋದನ್ನ ಬಿಟ್ರೆ ನಮ್ಮ ಪದ್ಮನಾಭ ನಗರ ಸಾಹೇಬ್ರನ್ನ ಅಲ್ಲಾಡ್ಸಕೂ ಯಾವನ್ನ್ ಕೈಯಲ್ಲಿ ಆಗಲ್ಲ ಬಿಡ್ರಿ!’ ಎಂದು ದೊಡ್ಡ ಬಾಂಬನ್ನೇ ಸಿಡಿಸಿದರು.
ನಾನು, ’ಅಲ್ಲಾ ಮೇಷ್ಟ್ರೇ, ಗುಜರಾತ್ ಹಿಮಾಚಲ ಪ್ರದೇಶದಾಗ್ ಗೆದ್ದ ಮೇಲೆ ಬಿಜೇಪಿ ನಂಬರ್ ಮ್ಯಾಲಕ್ಕ್ ಹೋಗೈತಂತಲ್ಲಾ...’ ಎನ್ನುವ ವಾಕ್ಯವನ್ನು ಅರ್ಧದಲ್ಲೇ ತುಂಡು ಮಾಡಿ,
’ಏ, ಬಿಡ್ರಿ ನೀವೊಂದು, ಮೊದ್ಲು ಆ ಯಡಿಯೂರಪ್ಪನ್ ಬಂಡಾಯದೋರಿಗೆ ಉತ್ರಾ ಹೇಳಿ ಸುಮ್ನ ಕೂರಸ್ಲಿ ಆಮೇಲ್ ನೋಡೋಣಂತೆ...’ ಎಂದು ಧೀರ್ಘವಾಗಿ ಉಸಿರೆಳೆದುಕೊಂಡು ಮಾತನ್ನು ನಿಲ್ಲಿಸಿದರು.
ನಾನು, ’ಹಂಗಾರೆ ಬಿಜೆಪಿ ಗೆಲ್ಲಂಗಿಲ್ಲಾ ಮುಂದೆ...’ ಎಂದರೆ,
ಮೇಷ್ಟ್ರು, ’ಕುಂತೀ ಮಕ್ಕಳಿಗೆ ಎಂದಾರ ಅಧಿಕಾರ ಸಿಕ್ಕತೇನು?’ ಎಂದು ಅದ್ಯಾವುದೋ ಮಹಾಭಾರತದ ಮೋಡಿಯನ್ನೆರಚಿ ಹೊರಟೇ ಹೋಗಿ ಬಿಟ್ಟರು, ನಾನು ಬಿಟ್ಟು ಕಣ್ಣು ಬಿಟ್ಟು ಅವರು ಹೋದ ದಾರಿಯನ್ನೇ ಯಡಿಯೂರಪ್ಪ ಮುಖ್ಯಮಂತ್ರಿ ಖುರ್ಚಿ ನೋಡುತ್ತಿದ್ದ ಹಾಗೆ ನೋಡುತ್ತಾ ನಿಂತೆ.
Labels: ಅಧಿಕಾರ, ಚುನಾವಣೆ, ಪ್ರಕಾಶ್