Friday, January 26, 2007

ಮಂಗ್ಯಾನ್ ಮಕ್ಳು ಎಲ್ಲ್ ನೋಡಿದ್ರೂ ಫೋಟೋ ಹಾಕ್ಕ್ಯಂತಾರ್ರೀ...

ಸ್ವಲುಪ್ ದಿನದ್ ಹಿಂದೆ ಬೆಂಗ್ಳೂರಿಂದ ಕೆಜಿಎಫ್ ಕಡೆ ಹೊಂಟಿದ್ನಾ...ರಸ್ತೆ ಬದಿಯಲ್ಲೊಂದು ದೊಡ್ಡ ಬ್ಯಾನರ್ ಕಾಣ್ತು, ಅದರಲ್ಲಿ ಬಣ್ಣಬಣ್ಣದಲ್ಲಿ ಅವರಿವರ ಹೆಸ್ರು, ಫೋಟೋ ಎಲ್ಲಾ ಹಾಕ್ಕ್ಯಂಡಿದ್ರು...ಅದರಾಗೇನಪಾ ವಿಶೇಷ ಅಂದ್ರೆ ಅದರ ಮಧ್ಯದಾಗ ನಿಂತಿರೋ ಮನುಷ್ಯನ ಫೋಟೋದಾಗ ಅವನು ಮೊಬೈಲ್ ಫೋನಿನ್ಯಾಗ ಮಾತಾಡ್ತಾ ಇರೋ ಹಾಂಗs ಫೋಟೋ ತೆಗೆದು ಹಾಕಿದ್ರು.

ನನ್ ಪಕ್ಕಾ ಕುಂತಿರೋ ಕೋಡೀಹಳ್ಳೀ ಮೇಷ್ಟ್ರು ಕೇಳ್ದೆ, 'ಏನ್ಸಾರ್ ಈ ಮನುಷ್ಯ ಫೋಟೋದಾಗೂ ಮೊಬೈಲ್ ಫೋನ್ ಹಿಡಕಂಡು ನಿಂತಾನಲ್ಲ!'.
ಮೇಷ್ಟ್ರು 'ಅದಕ್ಕೆಲ್ಲಾ ತಲಿ ಕೆಡಿಸ್ಕ್ಯಂಬ್ಯಾಡ್ರೀ ಸರ್ರ, ಇತ್ತಿತ್ಲಾಗ ಅದಾ ಒಂಥರಾ ಶೋಕಿ ಅಗ್ಯಾದs' ಅಂದ್ರು.
ನಾನು ಸುಮ್ಕಿರಲಾರ್ದೆ 'ಅಲ್ಲಾ ಸಾರ್, ಇಷ್ಟೊಂದ್ ಜನಾ ನೋಡ್ತಾರೆ ಅನ್ನೋ ಪರಿಕಲ್ಪನೇನೂ ಬ್ಯಾಡ್ವಾ, ತಾನೇ ಏನೋ ದೊಡ್ಡ ಕೋಲೂ ಅನ್ನಂಗ್ ಆಡ್ತಾನಲ್ಲ!' ಎಂದಿದ್ದು ಮೇಷ್ಟ್ರು ಪಿತ್ತವನ್ನ ಕೆರಳಿಸ್ತು ಅಂತ ಕಾಣ್ಸುತ್ತೆ...
'ಇತ್ತಿತ್ಲಗ ಮಂಗ್ಯಾನ್ ಮಕ್ಳು ಎಲ್ಲ್ ನೋಡಿದ್ರೂ ಫೋಟೋ ಹಾಕ್ಯಂತಾರ್ರಿ, ಇನ್ ಸ್ವಲ್ಪ್ ದಿನಾ ಹೋದ್ರೆ ಅಂಡರ್‌ವೇರ್‌ನಾಗ್ ನಿಂತಿರೋ ಫೋಟೋ ಹಾಕಿದ್ರೂ ಹಾಕಿದ್ರೇ...ಯಾವಾಗ್ ನೋಡೂ ಬಾಳಾ ಬುಸಿ ಇರೋರ್ ನೋಡ್ರಿ ಇವರು...ಉಳಿದವ್ರೆಲ್ಲ ಗಡದ್ದಾಗಿ ಮುದ್ದೆ ಉಂಡು ಮಲಗೋರ್ ಹಂಗೆ...'

'ಮೊದಲೆಲ್ಲಾ ಆದ್ರೆ ಗೋಡೆಗಳಿಗೆ ಲಿತೋ ಪ್ರಿಂಟ್ ಅಂಟ್ಸೋರು, ಈಗೊಂಥರಾ ಹೊಸ ಇಂಡಸ್ಟ್ರಿ ಶುರುವಾದಂಗಿದೆ ನೋಡ್ರಿ, ಕೊನೇಪಕ್ಷ ಒಂದಿಷ್ಟ್ ಜನ ಇವ್ರ ಹೆಸ್ರು ಹೇಳ್ಕೊಂಡ್ ಜೀವ್ನಾ ಮಾಡಂಗಾಯ್ತಲ್ಲಾ...ಅಷ್ಟು ಸಾಕು' ಎಂದು ಒಂದು ಉಸಿರು ಒಳಗೆಳದುಕೊಂಡೆ...

ಮೇಷ್ಟ್ರು, 'ಪ್ರತಿ ಊರಿನ್ಯಾಗೂ ದೊಡ್ಡ ಮನುಷ್ಯರು ಅಲ್ಲಲ್ಲ, ದೊಡ್ಡ ರೌಡಿಗಳದ್ದೆನಾದ್ರೂ ಲಿಸ್ಟ್ ಬೇಕು ಅಂದ್ರೆ ಇಂಥಾ ಬೋರ್ಡ್‌ಗಳನ್ನ ಹುಡುಕ್ಯಂಡ್ ಹೋಗ್‌ಬೇಕ್ ನೋಡ್ರಿ...' ಎಂದು ಮತ್ತೆಲ್ಲೋ ನೋಡತೊಡಗಿದರು.

# posted by Satish : 12:53 am  6 comments

This page is powered by Blogger. Isn't yours?

Links
Archives