ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಕೇಳಿ ನಂಜನಂತೂ ತಂಬಾಕು ತಿಂದ ಮಂಗ್ಯಾನಂತಾಗಿದ್ದ. ಎಡಿಯೂರಪ್ಪನಿಗೆ ಮುಖ್ಯಮಂತ್ರಿ ಪಟ್ಟ ಸಿಗಲಾರದು ಎಂದು ಭವಿಷ್ಯ ನುಡಿದ ಕೋಡೀಹಳ್ಳಿ ಮೇಷ್ಟ್ರು ಬೆರಳು ಕಚ್ಚಿಕೊಳ್ಳುವಂತಾಗಿದ್ದನ್ನು ಕಂಡು ನಂಜನ ಜೊತೆಗೂಡಿದ ನಾನೂ ತಿಮ್ಮಕ್ಕನೂ ಪೇಪರಿನಲ್ಲಿ ಅದೇನು ಬರೆದಿದ್ದಾರು ಎಂದು ಕುತೂಹಲಿತರಾಗಿ ಪೇಪರಿನ ದಾರಿಯನ್ನೇ ನೋಡುತ್ತಿರುವಾಗ ನಮ್ಮನೆಗೆ ಪೇಪರ್ ಹಾಕುವ ಹುಡುಗ ಬಾರದಿದ್ದರೂ ಮೇಷ್ಟ್ರೋ ನಂಜನೋ ಯಾರೋ ಒಬ್ಬರೂ ಅದೆಲ್ಲಿಂದಲೋ ಪ್ರಜಾವಾಣಿಯ ಒಂದು ಪ್ರತಿಯನ್ನು ಕಾತರದಿಂದ ತರಿಸಿಕೊಂಡಿದ್ದರು. ಸದ್ಯಕ್ಕೆ ಪೇಪರಿನ ಎಲ್ಲಾ ಪುಟಗಳೂ ಮೇಷ್ಟ್ರು ಕೈಯಲ್ಲಿದ್ದುದರಿಂದ ನಾವು ಕಾಳನ್ನರಸುವ ಕೋಳಿಗಳಿಗಳಂತೆ ಮೇಲೊಮ್ಮೆ ಕೆಳಗೊಮ್ಮೆ ನೋಡುತ್ತಾ ಮೇಷ್ಟ್ರು ಪ್ರತಿಕ್ರಿಯೆಯನ್ನು ಕಾದುಕೊಂಡಿರಬೇಕಾದರೆ ಕೊನೆಗೂ ಗುಹೆಯ ಬಾಗಿಲಿನಂತೆ ಮೇಷ್ಟ್ರು ಬಾಯಿ ತೆರೆದುಕೊಂಡಿತು.
’ಏನ್ ಹೇಳಾಣ, ಈ ಮುಖಂಡರೆಲ್ಲ ದಿನಕ್ಕೊಂದು ಹೇಳ್ಕೆ ಕೊಟ್ಟು ಯಾರ್ ಯಾರ್ದೋ ಕೈ ಕುಲುಕಿ ಖುರ್ಚೀ ಹಿಡಕೊಂಡಿರಬೇಕಾದ್ರೆ? ನಾನೇನೋ ಎಂಪಿ ಪ್ರಕಾಶ್ ಬರ್ತಾರೆ ಅಂದ್ಕೊಂಡಿದ್ರೆ ಈಗಾಗಿರೋ ಕಥೇನೇ ಬೇರೆ!’ ಎಂದರು.
ಎಲ್ಲರಿಗಿಂತ ಹುರುಪಿನಲ್ಲಿದ್ದ ನಂಜ ಬಾಯಿ ತೆರೆಯುತ್ತಿರುವುದನ್ನು ನೋಡಿಯೂ ನಾನೆಂದೆ, ’ಅಲ್ಲಾ ಮೆಷ್ಟ್ರೇ, ನಿಮಗನಿಸಿತ್ತಾ ಈ ಜನ ಮತ್ತೆ ಬಂದ್ ಸೇರ್ಕೋತಾರೆ ಅಂತ?’
ಮೇಷ್ಟ್ರು, ’ಇಲ್ಲಪ್ಪಾ, ಕನಸು ಮನಸಿನ್ಯಾಗೂ ಕಂಡಿದ್ದಿಲ್ಲಾ, ಯಾರನ್ನು ನಂಬ್‌ಬಕೋ ಬಿಡ್‌ಬಕೋ ಗೊತ್ತಾಗಲ್ಲ ನೋಡ್ರಿ’ ಎನ್ನುತ್ತಾ ಉಸ್ ಎಂದು ಉಸಿರು ಬಿಟ್ಟರು.
ನಂಜ,’ಆಗ್ ಬಕ್ರಿ, ಹಂಗಾs ಆಗ್‌ಬಕು...ಕೊನಿಗೂ ಆ ದೊಡ್ಡ ಗೌಡ್ರು ಮಾತು ನಡೀಲಿಲ್ಲ ಹೊದಿಲ್ಲೋ!’ ಎಂದು ಒಮ್ಮೆ ಕೇಕೆ ಹಾಕಿದಂತೆ ಕಂಡುಬಂದ.
ಮೇಷ್ಟ್ರು, ’ಲೇ ನಂಜಾ, ಕುಂತಲ್ಲೇ ಕೊಸರಾಡ್‌ಬ್ಯಾಡಾ, ಇವೆಲ್ಲ ದೊಡ್ಡ ಸಾಹೇಬ್ರೂ ಪಿತೂರಿ ಇದ್ರೂ ಇರಬಕು...ಯಾವಾಗ್ ತಮ್ಮ ದಳಾನೇ ಬಳಾಬಳಾ ಒಡ್ಯಕ್ ಶುರು ಹಚ್ಚಿಕೊಂತೋ ಆಗ ತಾಗಿರ್‍ಬಕು ಬಿಸಿ ನಿದ್ದೀ ಹೊಡ್ಯಾಕ್ ಕುಂತಿರೋ ಜನಗಳಿಗೆ’
ನಾನೆಂದೆ, ’ನಂಜಾ, ನಿನಗೇನ್ ಗೊತ್ತು ದೊಡ್ಡ ಗೌಡ್ರ ಮರ್ಮಾ, ಈಗ ಕೈ ಕೂಡಿಸ್ತಾರ ಇನ್ನೊಂದು ಸ್ವಲ್ಪ ದಿನದೊಳಗ ಕೈ ಎತ್ತ್‌ತಾರ ನೋಡ್ಕ್ಯಂತಿರು’
ನಂಜ, ’ಇಲ್ರೀ, ಈ ಸರ್ತಿ ಬಾಳಾ ವ್ಯತ್ಯಾಸ್ ಐತಿ... ನಮ್ ರಾಜ್ಯದೊಳಗ ಅಧಿಕಾರ ಸ್ಥಾಪಿಸ್‌ಬಕು ಅಂತ ಕಾಂಗ್ರೇಸ್ ಸಡ್ಡು ಹೊಡೆದು ಕುಂತೈತಂತೆ. ಅದನ್ನ ದೂರಾ ಇಡೋದೇ ಗೌಡ್ರ ಗದ್ಲ. ಯಾವಾನಾರ ಬರ್ಲಿ, ಅದೂ ಎಲೆಕ್ಷನ್ನಿನೊಳಗ ಆಡಳಿತ ಸರ್ಕಾರವಾದ್ರೂ ಬಹುಮತ ಬಾರದ ಕಾಂಗ್ರೆಸ್ಸಿಂದು ಇಂದು ಕೊನೇ ಪ್ರಯತ್ನಾ ನೋಡ್ರಿ’ ಎಂದು ಬೊಬ್ಬೆ ಹೊಡೆದ. ನನಗೂ ನಂಜನ ಥಿಯರಿ ಸರಿ ಎಂದು ತೋರಿತು.
ತಿಮ್ಮಕ್ಕ ಇದುವರೆಗೂ ಯಾವುದೇ ಮಾತನಾಡದೇ ಅಟಲಬಿಹಾರಿ ವಾಜಿಪೇಯಿ ಕಟ್‌ಔಟಿನ ಮುಖ ಹಾಕಿ ಕುಂತಿದ್ದಳು, ಅವಳ ತಲೆಯಲ್ಲಿ ಏನು ಓಡ್ತಾ ಇದೆಯೋ ನೋಡೋಣವೆಂದು, ’ಏನಬೇ ತಿಮ್ಮಕ್ಕಾ ನೀನೇನಂತಿ?’ಎಂದು ಪ್ರಶ್ನೆ ಹಾಕಿ ತಿವಿದೆ.
’ಏನಿಲ್ಲಣಾ, ನನಿಗೆ ಒಂದು ವಿಷ್ಯಾ ಹೊಳೀವಲ್ದೂ, ಆ ಡೆಲ್ಲೀ ವಮ್ಮಾ ಚೀನಾ ದೇಶಕ್ಕ್ ಯಾಕ್ ಹೋದ್ಲೂ, ಅದಕ್ಕೂ ನಮ್ ಧರಮ್ ಅಧಿಕಾರಕ್ಕೂ ಏನ್ ಸಂಬಂಧಾ ಅಂತೀನಿ...’ ಎಂದು ಹೇಳುತ್ತಿದ್ದ ತಿಮ್ಮಕ್ಕನನ್ನು ತಡೆದ ನಂಜ,
’ಅಲ್ಲಿ ಹೋಗಿ ಕಮ್ಮೂನಿಸಮ್ ಬಗ್ಗೇ ಟ್ರೈನಿಂಗ್ ತಗಳಕ್ ಹೋಗ್ಯಾಳಬೇ...’ ಎಂದು ನಕ್ಕ,
ಮೇಷ್ಟ್ರು ’ಅಕಿ ಚೀನಾಕ್ಕಾರೂ ಹೋಗ್ಲಿ, ಟಾಯ್ಲೆಟ್ಟಿಗಾರೂ ಹೋಗ್‌ಕ್ಯಳ್ಳಿ ನಿನಗೇನಾಕತಿ ಅದರಿಂದ?’ ಎಂದು ಗರಮ್ ಆಗಿ ತಿಮ್ಮಕ್ಕನ ಕಡಿ ನೋಡಿದ್ರೋ ನಾನೂ ನಂಜನೂ ಮೇಷ್ಟ್ರು ಮಾತು ಕೇಳಿ ಬಹಳ ಹೊತ್ತು ನಗುತ್ತಲೇ ಇದ್ದೆವು. ತಿಮ್ಮಕ್ಕ ಸುಮಾರಾಯ್ತು ಎಂದು ಎದ್ದು ಒಳಗಡೆ ಹೋದ್ರೆ ಮೇಷ್ಟ್ರು ಪತ್ರಿಕೆಯ ಪುಟಗಳನ್ನು ತಿರುತಿರುವಿ ಹಾಕುತ್ತಲೇ ಇದ್ದರು.
Labels: ದೋಸ್ತೀ
’ಅಲ್ಲಾಲಲ ನಮ್ ಮಕ್ಕಳ್‌ರ್ಯಾ...’ ಎಂದು ನಂಜ ಲೊಚಗುಟ್ಟುವುದನ್ನು ಜಗುಲಿ ಗುಡಿಸುತ್ತಿದ್ದ ತಿಮ್ಮಕ್ಕನಿಗೆ ನೋಡಿ ಸುಮ್ಮನಿರಲಾಗದೇ,
’ಏನ್ಲಾ ಒಳ್ಳೇ ಹಲ್ಲೀ ಲೊಚಗುಟ್‌ದಂಗೆ ಶುರು ಹಚ್‌ಕಂಡೀದಿಯಲ?’ ಎಂದು ಪ್ರಶ್ನೆ ಹಾಕಿದಳು.
ನಂಜ, ’ನೋಡ್‌ದೇನಬೇ, ಈ ಅಪ್ಪ-ಮಕ್ಕಳ್ ವ್ಯವಸ್ಥೇನಾ?’ ಎಂದು ತಿಮ್ಮಕ್ಕನ ತಲೇ ಮೇಲೆ ಹಾದು ಹೋಗುವ ಮಂದ ಮಾರುತದ ಗತಿಯಲ್ಲಿ ಮತ್ತೆ ತಿರುಗಿ ಪ್ರಶ್ನೆ ಹಾಕಿದ ಮೋಡಿಗೆ ತಿಮ್ಮಕ್ಕ ’ಅದೇನ್ಲೇ ಅಂತದ್ದೂ...’ ಎಂದು ಕಸಪೊರಕೆ-ಕೈ ಚೆಲ್ಲಿ ಸೆರಗಿನ ಚುಂಗಿನಲ್ಲಿ ಕೈ ಕೊಡವಿಕೊಂಡು ಅರ್ಧಘಂಟೆಯಿಂದ ಓದುತ್ತಿದ್ದರೂ ಇನ್ನೂ ಪ್ರಜಾವಾಣಿಯ ಮುಖಪುಟದಲ್ಲೇ ಹುದುಗಿ ಹೋಗಿದ್ದ ನಂಜನ ಬಳಿಧಾವಿಸಿದಳು.
’ಒಹೋ, ಅಪ್ಪಾ-ಮಕ್ಳೂ ಕಥೇನೋ...’ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ಕುಳಿತ ನಂಜನ ಭುಜನ ಮೇಲಿನಿಂದ ಪೇಪರಿನ ಮುಸುಡಿಯನ್ನು ಇಣುಕಿ ನೋಡುತ್ತಾ, ’...ಅವನ್ಯಾವನ್ಲೇ ಮಧ್ಯೆ ಕಪ್ ಚಸ್ಮಾ ಹಾಕ್ಕೋಂಡ್ ಕುಂತೋನು, ಒಳ್ಳೇ ಆ ತಮಿಳ್‌ನಾಡಿನ್ ಕರ್ಣಾನಿಧಿ ಕಂಡಂಗ್ ಕಾಣ್ತಾನ್ ನೋಡು ಒಂದು ದಿಕ್ಕಿನಿಂದ!’ ಎಂದು ಅಪ್ಪಾ ಮಗನ ನಡುವೆ ಗತ್ತಿನಲ್ಲಿ ಕುಳಿತ ಮೆರಾಜುದ್ದೀನ್ ಪಟೇಲ್‌ಗೆ ತರಾಟೆ ತೆಗೆದುಕೊಂಡಳು.
ನಂಜ, ’ಏನಂತಿ, ಅಧಿಕಾರ ಬಿಟ್ ಕೊಡತಾರ ಹೆಂಗೆ?’ ಎಂದು ಬಲುಸೂಕ್ಷ್ಮವಾಗಿ ತಿಮ್ಮಕ್ಕನಿಗೆ ನಂಜ ತಿವಿದರೂ ಅದೆಷ್ಟು ನೀರು ಕುಡಿದು ಪರಿಣತಿ ಪಡೆದವಳೋ ಎನ್ನುವಂತೆ ತಿಮ್ಮಕ್ಕ, ’ನಂಗೂ ಗೊತ್ತಲೇ, ಆ ಧರಮ್ ಸಿಂಗಂದು ಹಿಂದ್ ಗಡಿ ಬರದನ್ನ್ ಹಿಡಕಂಡ್ ತಿಂದಾರೋ ಹೊರತೂ ಅಪ್ಪಾ ಮಕ್ಳೂ ಆ ಯಡಿಯೂರಪ್ಪಂಗ್ ಅಧಿಕಾರ ಹತ್ರ ಸುಳೀದಂಗ್ ಮಾಡ್ತಾರ್ ನೋಡು...ಗೊತ್ತಲ, ಅವತ್ತ್ ದೇವಸ್ಥಾನದಾಗ ದೊಡ್ಡೋರು ಧರಂ ಅನ್ನು ಭೇಟಿ ಮಾಡಿದ್ದು?’
ನಂಜ, ಯಾವತ್ತಿದ್ರೂ ಕುಸಾ ಪರವೇ ನಾನು ಎನ್ನುವ ಧಾಟಿಯಲ್ಲಿ, ’ಏ ಸುಮ್ಕಿರು, ಕುಸಾ ದೇವ್ರು ವಚನ ಭ್ರಷ್ಟ ಆದ್ರೂ ಅಡ್ಡಿಲ್ಲ, ನಮ್ ರಾಜ್ಯದಾಗ ರಕ್ತದ ಓಕುಳಿ ಹರೀತತಿ, ಜೊತಿಗೆ ಪಕ್ಷಕ್ಕಾಗಿ, ಪಕ್ಷದ ಕಾರ್ಯಕರ್ತರಿಗಾಗಿ ಏನ್ ಬೇಕಾರೂ ಮಾಡ್ತೀನಿ, ಚಡ್ಡೀ-ಕೇಸರಿಗಳಿಗೆ ಅಧಿಕಾರ ಕೊಡಂಗಿಲ್ಲ ಅಂತ ಅನ್ನ ಬೇಕರೆ ಬಾಳಾ ಯೋಚ್ನೇ ಮಾಡೇ ಅಂದಿರಬಕು’.
ತಿಮ್ಮಕ್ಕನಿಗೆ ಸ್ವಲ್ಪ ಉರಿ ಹತ್ತಿಕೊಂಡಿತೆಂಬತೆ, ’ಸುಮ್ ಕುಂದುರ್ರಲೇ, ಅಪ್ಪ ರಸ್ತೀ ಮ್ಯಾಗ್ ಊಟಾ ಹಾಕಿದ್ರೆ ಅಲ್ಲೇ ಉಂಡ್ ನಿದ್ದೀ ಹೊಡೆಯೋ ಈ ಮಕ್ಳಿಗ್ ರಾಜ್ಯಭ್ರಷ್ಟ ಅನ್ನೋ ಮಾತೂ ದೊಡ್ಡದೇಯಾ! ಅಲ್ಲೇ ಕೆಳಗೆ ಬಾಬರಿ ಮಸೀದಿ ಬಿಜೇಪಿನೋರು ಒಡೆದೋರು ಅಂತ ಬರದೋರಲ, ಅವಾಗ ಆ ವಯ್ಯಾ ನರಸಿಂಗರಾವ್ ನರಸತ್ತ್ ಹೋಗಿತ್ತೇನು?’ ಎಂದು ಭಯಂಕರ ಪ್ರಶ್ನೆಯನ್ನು ಕೇಳತೊಡಗಿದಳು.
ತಿಮ್ಮಕ್ಕನ ಮಾತುಕೇಳಿ ನಂಜನಿಗೆ ಸ್ವಲ್ಪ ಹೆದರಿಕೆ ಆದಂತೆ ಕಂಡರೂ ಅದನ್ನು ತೋರಿಸಿಕೊಳ್ಳದೇ ಸಿನಿಮಾ ಹಾಡಿನ ಧಾಟಿಯಲ್ಲಿ, ’ಕೊಟ್ಟನೋ ಕೊಟ್ಟನಪ್ಪ ದೊಡ್ಡ ಕೈಯ ಕೊಟ್ಟನಪ್ಪ ಗೌಡರ ಮಗನು ಕಮಲದ ಹೂ ಗೆ... ಧರಮಣ್ಣಾ, ಭರಮಣ್ಣಾ, ಎಂಥಾ ಕೈ ಕೊಟ್ಟನೋ, ದೊಡ್ಡಾ ಕೈ ಕೊಟ್ಟನೋ...ಆಯಿತೋ...ಕೊಟ್ಟನೋ ಕೊಟ್ಟನಪ್ಪಾ ದೊಡ್ಡ ಕೈಯ ಕೊಟ್ಟನಪ್ಪ ಕಮಲದ ಹೂಗೆ, ಗೌಡರ ಮಗನು...’ ಎಂದು ಹಾಡು ಹಾಡಲು ತೊಡಗಿದನು.
ತಿಮ್ಮಕ್ಕ ಅವನ ಗಾನದ ಲಯವನ್ನು ತಾಳಲಾರದೇ ’ನಿಲ್ಸೋ ನಿಂದೊಂದ್ ರಾಗ, ಮುಂದೇನು ಬರದಾರೆ ಓದು...’ ಎಂದು ಆದೇಶ ಕೊಟ್ಟಳು....ನಂಜ ಅಷ್ಟೊತ್ತಿಗೆ ಆಗಲೇ ಎಲ್ಲವನ್ನೂ ಬಲ್ಲ ರಾಜ ಋಷಿಯ ಹಾಗೆ ಮುಖವನ್ನು ಏರಿಸಿಕೊಂಡು, ’ಬಿಜೆಪೀನೋರು ಅಪ್ಪಾ-ಮಕ್ಳು ತಿಥಿ ಮಾಡ್ತಾರಂತೆ, ೨೦ ತಿಂಗಳ ಕುಸಾ ಅಧಿಕಾರದಲ್ಲಿ ಒಂಚೂರೂ ಜಾತಿ ಸೋಕೇ ಇಲ್ಲವಂತೆ, ಜನ ಬ್ಯಾಡಾ ಅಂದ್ರು ಅಂತಂದ್ರೆ ಅಧಿಕಾರ ಕೊಡಂಗಿಲ್ಲಂತೆ...’ ಎಂದು ವರದಿಯನ್ನು ಪೂರ್ಣ ಓದಿ ಮುಗಿಸಿದನೋ, ಅಷ್ಟೊತ್ತಿಗೆ ಆಗಲೇ ತಿಮ್ಮಕ್ಕ ಪಿತ್ತ ನೆತ್ತಿಗೇರಿತ್ತೆಂದು ತೋರುತ್ತದೆ, ’ಹರುಕ ನನ್ ಮಕ್ಳು, ಇವರಿಗೆ ಗತಿ ಇಲ್ಲ, ಅವರಿಗೆ ಮತಿ ಇಲ್ಲ...ಸಾಯ್ಲಿ ಬಿಡು...’ ಎಂದು ಕೈ ಚೆಲ್ಲಿ ಅರ್ಧ ಹೊಡೆದು ಮುಗಿಸಿದ ಕಸವನ್ನು ಎತ್ತಲು ಜಗುಲಿಯ ಕಡೆಗೆ ನಡೆದಳು.
ನಂಜ ಪ್ರಜಾವಾಣಿಯ ಮುಖ್ಯಪುಟದಿಂದ ಒಂದೇ ಸಮನೆ ಭಡ್ತಿ ಪಡೆದವನ ಹಾಗೆ ಕೊನೇ ಪುಟವನ್ನು ತಿರುಗಿಸಿ ಓದಲು ತೊಡಗಿದನು.
Labels: ಕೊಟ್ಟ ಕೈ