Wednesday, April 18, 2007

ಆ ಎರಡೂ ಪದಗಳು ಒಂದೇ ಸೆಂಟೆನ್ಸ್‌ನಲ್ಲಿ ಬರಂಗಿಲ್ಲೋ ತಮ್ಮಾ...

ನಂಜ ಬೆಳಗಾಯ್ತು ಅನ್ನೋ ಕುರುಹಿಗೆ ದೊಡ್ಡದಾಗಿ ಕನ್ನಡಪ್ರಭಾ ಓದ್ತಾ ಕುಂತಿದ್ದ, ನಾನೆಂದೆ, 'ಏನಲೆ, ಘನಶ್ಯಾಮ, ಯಾವ ಮುಕುಂಡ್ರುದ್ದು ಏನೇನ್ ನಡೆದೈತಲೇ?' ಎಂದು ಸಹಜವಾಗಿ ಹಾಕಿದ ಪ್ರಶ್ನೆಗೆ ಒಬ್ಬ ಆಸ್ಟ್ರೋ ಫಿಸಿಸಿಸ್ಟ್ ಥರ ಮುಖ ಮಾಡಿಕೊಂಡು ತಲೆ ಎತ್ತಿ ಒಮ್ಮೆ ನನ್ನ ಕಡೆಗೆ ನೋಡಿ, ಬಾಯಾರು ಹೀರುವ ಜಾನುವಾರಿನ ಹಾಗೆ ಮತ್ತೆ ಪೇಪರಿನಲ್ಲಿ ಮುಖ ಹುದುಗಿಸಿದ.

ಎಲಾ ಇವನಾ ಅಂಥಾದ್ದೇನ್ ಹಾರಿ ಹೋಗ್ತಾ ಇರಬೋದಪ್ಪಾ ಎಂದು ಅವನ ಬಲ ಭುಜದ ಮಗ್ಗುಲಿನಿಂದ ಇಣುಕಿ ನೋಡಲಾಗಿ ಡಿ.ವಿ ಸದಾನಂದ ಗೌಡ್ರು ಹೇಳಿಕೆಕೊಟ್ಟ ಹಾಗೆ 'ರಾಜ್ಯ ಕಾಂಗ್ರೇಸ್ ಮುಖಂಡರು ಸ್ವಯಂ ನಿವೃತ್ತಿ ಹೊಂದಲಿ' ಎಂಬ ಹೇಳಿಕೆಯನ್ನು ಕುತೂಹಲದಿಂದ ಓದುತ್ತಿದ್ದ - ಕಾಂಗ್ರೇಸ್ ಮುಖಂಡರಿಗೆ ಕನಿಷ್ಠ ಜ್ಞಾನವೂ ಇಲ್ಲ! ಎಂಬ ಹೇಳಿಕೆ ನನ್ನನ್ನು ಆಕರ್ಷಿಸಿತು.

ನಾನೆಂದೆ, 'ನಂಜಾ, ಬಿಡೋ ಈ ಕಾಂಗ್ರೇಸ್ಸು, ಬಿಜೆಪಿ, ದಳದವರು ಒಬ್ರೊನ್ನೊಬ್ರು ಆಡಿಕೊಂಡು, ದೂಡಿಕೊಂಡು ಮುಂದೆ ಬರೋ ಕಾಲ ಯಾವತ್ತಿದ್ರೂ ಇದ್ದೇ ಇರತ್ತೆ, ನಿನ್ನ ತಲೆ ಯಾಕೆ ಕೆಡಿಸಿಕ್ಯಂತಿ?'.

ಈಗ ನಂಜನ ಸಹನೆಯ ಕಟ್ಟೆಯೊಡೆಯಿತು ಅಂತ ಕಾಣ್ಸುತ್ತೆ, 'ಹ್ಞೂ, ಹಂಗಾದ್ರೆ, ಸದಾನಂದ್ ಗೌಡ್ರು ತಲೆ ಸಮ ಐತೋ? ಧರಂ, ಖರ್ಗೆ ಅಂತೋರ್ ಇರೋದ್ರಿಂದ್ಲೇ ನಮ್ ರಾಜಕೀಯ ಅನ್ನೋದ್ ಸ್ವಲುಪ ನೆಟ್ಟುಗೈತೆ, ಎಲ್ಲಾ ಸದಾನಂದ್ ಗೌಡ್ರು ಅಂತೋರ್ ತುಂಬಿಕ್ಯಂಡಿದ್ರೆ ಇಷ್ಟೊತ್ತಿಗೆ ಸಿಂಹದ ಮರಿ ಸೈನ್ಯವಾಗಿರೋದು!'.

'ಹಂಗಲ್ಲಾ ನಂಜಾ, ಬೈಯೋದು ಇದ್ದೇ ಇದೆ, ಆದ್ರೆ ಆವಪ್ಪಾ ಕಾರಣಕೊಟ್ಟು ಬೈದಿರೋದು ಸರಿಯಾಗೇ ಇಲ್ಲವಾ? ನೀನೇ ಹೇಳು' ಎಂದು ಸಮಜಾಯಿಸಲು ನೋಡಿದೆ.

ನಂಜ ಹಿಡಿದ ಪಟ್ಟು ಬಿಡಲಿಲ್ಲ, 'ಬಿಜಿಪಿ ನೋರ್ದು ಏನಿದ್ರು ಕೈಲಾಗದ ಕಾಂಗ್ರೇಸ್‌ನೋರ್ ಮೇಲೆ, ಧಮ್ ಇದ್ರೆ ನಮ್ ದೊಡ್ಡ್ ಗೌಡ್ರು ಕುರಿತು ಹಂಗ್ ಆಡ್‌ಬ್ಯಾಕಾಗಿತ್ತು!'.

ಅಷ್ಟೊತ್ತಿಗೆ ಕೋಡೀಹಳ್ಳಿ ಮೇಷ್ಟ್ರು ಎಲ್ಲಿಂದಲೋ ಬಂದೋರು, ನಂಜನ ಎಡ ಬದಿಯಿಂದ ಪೇಪರಿನಲ್ಲಿ ಇಣುಕಿ, 'ಅಯ್ಯೋ, ಅದಾ...' ಎಂದು ಉಸಿರೆಳೆದು, 'ರಾಜಕೀಯ ಮತ್ತೂ ಸ್ವಯಂ ನಿವೃತ್ತಿ ಅನ್ನೋ ಪದಗಳು ಒಂದೇ ಸೆಂಟೆನ್ಸ್‌ನಲ್ಲಿ ಬರಂಗಿಲ್ಲೋ ತಮ್ಮಾ, ಅವೇನಿದ್ರೂ ಒಂದು ಜೋಕ್ ಅಂತಂದುಕೊಂಡು ಓದಿ ಮುಂದೆ ಹೋಗ್, ಆ ನನ್ ಮುಕ್ಳಿಗೆ ಬುದ್ಧಿ ಇಲ್ಲಾ ಅಂತಂದ್ರೆ ನಿನಗೂ ಸ್ವಲ್ಪ ಅನ್ನೋದ್ ಬ್ಯಾಡ್ವಾ!' ಎಂದು ತಮ್ಮ ವಿಶ್ವತಂತ್ರವನ್ನು ಮಂಡಿಸಿ ಬಂದಷ್ಟೇ ವೇಗದಲ್ಲಿ ಮಾಯವಾದರು.

ನಾನೂ ನಂಜನೂ ಸುಮ್ಮನೇ ಮುಂದಿನ ಪುಟಕ್ಕೆ ಪೇಪರನ್ನು ಬದಲಿಸಿದೆವು.

# posted by Satish : 6:58 am  2 comments

Tuesday, April 10, 2007

ನಮ್ ಲೀಡರುಗಳು ಯಾವಾಗ್ಲೂ ತಮ್ ಕೈ ಮುಂದೆ ತೋರೋದ್ ಯಾಕೋ?

'ಆ ವಾಟಾಳ್ ಕಥೆ ಕಲ್ ಹಾಕ್ತು, ಹೋಗ್ರಿ ನಿಮಗ್ ಮಾಡಕ್ ಬ್ಯಾರೆ ಕೆಲ್ಸಿಲ್ಲ!' ಎಂದು ಯಾವಾಗ ನಂಜ ಕೋಡೀಹಳ್ಳಿ ಮಾಷ್ಟ್ರಿಗೆ ಅಂದನೋ ಆವಾಗ್ಲೇ ನಾನು ಅಂದ್‌ಕೊಂಡಿದ್ದು ಏನೋ ಆಗಬಾರ್ದು ಘನಂದಾರಿ ಕೆಲ್ಸ ಆಗ್ ಹೋಗಿದೇ ಅಂತ.

ಮೇಷ್ಟ್ರು ಅಂದ್ರು 'ಹೋಗಲೇ, ಕನ್ನಡಕ್ಕೊಬ್ಬನೇ ವಾಟಾಳ್ ನಾಗರಾಜ್ ಅನ್ನೋ ಮಾತು ಸುಳ್ಳೂ ಅನ್ನ್‌ಕಂಡಿಯೇನು? ಈ ಮನುಷ್ಯ ಜೀವಂತ ಇರೋದ್ರಿಂದ್ಲೇ ಬೆಂಗ್ಳೂರ್‌ನ್ಯಾಗೆ ಇನ್ನೂ ಕನ್ನಡ ಅನ್ನೋದು ಉಳಕಂಡೈತಿ, ಇಲ್ಲಾ ಅಂದ್ರಿದ್ರೆ ಇಷ್ಟೊತ್ತಿಗೆ ಅಧೋಗತಿಯಾಗ್ ಹೋಗಿರೋದು...'

ನಾನು ಮೈಮೇಲೆ ಬಂದ ಹಾಗೆ ಮಾತನಾಡುತ್ತಿದ್ದ ಮೇಷ್ಟ್ರು ಮಾತನ್ನು ಅರ್ಧದಲ್ಲೇ ತಡೆದು, 'ಸಾರ್, ಯಾವ್ದುರ ಬಗ್ಗೆ ಇಲ್ಲಿ ಮಹಾಸಭೆ ನಡೀತಾ ಇದೆ ಅಂತ ಹೇಳಿದ್ದಿದ್ದ್ರೆ ಎಷ್ಟೋ ಪುಣ್ಯಾ ಬಂದಿರೋದು!' ಎಂದು ಬೇಕಂತಲೇ ತಿವಿಯೋರ ಹಾಗೆ ಮೇಷ್ಟ್ರು ಪಕ್ಕೆಲುಬಿನ ಕಡೆ ಬೆರಳು ತೋರಿದೆ.

ನನ್ನ ಉಳಿವಿಗೆ ಬಂದವನು ನಂಜ, 'ಅದಾ, ಆ ನಾರಾಣ್ ಮೂರ್ತಿ ನಮ್ ರಾಷ್ಟ್ರಗೀತೆ ಬಗ್ಗೆ ಏನೋ ಅಂದೋರೆ ಅಂತ ಸದನದೊಳಗೆ ದೊಡ್ಡ ಕೋಲಾಹಲ ಮಾಡ್ತಾ ಇದಾರಂತ್ರಿ! ಈ ನನ್ ಮಕ್ಳಿಗೆ ಮಾಡಾಕ್ ಬ್ಯಾರೆ ಕೆಲಸಿಲ್ಲ ಅಂತ ತೋರ್ಸೋಕೆ ಇದಕ್ಕಿಂತ ದೊಡ್ಡ ಉದಾಹರ್ಣೆ ಬೇಕೇನೂ...'

ಮೇಷ್ಟ್ರು ಅಷ್ಟೊತ್ತಿಗಾಗಲೇ ಕಾದ ಹೆಂಚಿನಂತಾಗಿ ಹೋಗಿದ್ದರು, 'ದೊಡ್ಡ ಕಂಪ್ನಿ ಇಟ್‍ಕೊಂಡ ಮಾತ್ರಕ್ಕೆ ದೇಶಾನೆ ಕೊಂಡ್‌ಕೊಂಡ್ ಬಿಟ್ತಾರೇನ್ರಿ? ಅವ್ರು ಆಡ್ದಂಗೆ ಕುಣ್ದೂ-ಕುಣ್ದೂ ಎಲ್ರಿಗೂ ಸಾಕಾಗ್ ಹೋಗೈತೆ, ನಮ್ ದೇಶದಾಗೆ ಇರೋಗಂಟ ಎಲ್ರಿಗೂ ಸಲ್ಲಬೇಕಾದ ಗೌರವಾ ಕೊಡಂಗಿದ್ರೆ ಕೊಟ್‌ಗೊಳ್ಳಿ, ಇಲ್ಲಾಂದ್ರೆ ಒಂದಲ್ಲಾ ಒಂದ್ ದಿನ ಗಡೀಪಾರು ಮಾಡಬೇಕಾದೀತು - ಪ್ರಜಾಪ್ರಭುತ್ವ ಅನ್ನೋದೇನು ಇವರ ಬಚ್ಚಲುಮನೆ ಕಲ್ಲೂ ಅಂತ ತಿಳಕಂಡಾರೇನು?'

ನಾನಿದ್ದೋನು, 'ಮೇಷ್ಟ್ರೆ, ಈಗ ಆಗಬಾರ್ದೇನೂ ಆಗಿಲ್ಲವಲ್ಲ, ಮೂರ್ತಿ ಹೇಳ್ಕೆ ನಾನು ನೋಡ್ದೆ ಪೇಪರಿನಲ್ಲಿ ಸರಿಯಾಗೇ ಇದ್ದಂಗಿದೆಯೆಲ್ಲಾ...' ಎಂದೆ, ತನ್ನ ಮರಿಗಳ ಮೇಲೆ ಧಾಳಿ ನಡೆದಿದ್ದನ್ನು ಹತ್ತಿರದಿಂದ ಗಮನಿಸಿದ ಸಿಂಹಿಣಿಯಂತಾಗಿ ಹೋಗಿತ್ತು ಅವರ ಮನಸ್ಸು.

'ನಿಮಗೊತ್ತಿಲ್ಲ ಬಿಡ್ರಿ, ಈ ಪೇಪರಿನೋರು ಬರೆಯೋದೆಲ್ಲ ಸರಿಯಾಗೇ ಇರುತ್ತೇ ಅಂತ ಯಾವ ನನ್ ಮಗ ಹೇಳ್ದ ನಿಮಗೆ?, ಅವರ್ ಪಾಡಿಗೆ ಅವರು ಬರಕಂತಾರೆ...' ಎಂದು ದೊಡ್ಡದೊಂದು ಉಸಿರು ಬಿಟ್ಟರು.

ನಾನು ಮೇಷ್ಟ್ರು ಮೂಡ್ ಇವತ್ತ್ ಯಾಕೋ ಸರಿ ಇಲ್ಲ ಅಂದುಕೊಂಡು, ನಂಜನ ಕಡೆ ತಿರುಗಿ, 'ನಿನಗೆ ವಾಟಾಳ್ ಕಂಡ್ರೆ ಆಗಲ್ಲ ಅಂತ ಗೊತ್ತು, ಆದ್ರೂ ನಮ್ ರಾಷ್ಟ್ರಗೀತೇ ಮೇಲೆ ಅವಮಾನ ಮಾಡ್ದೋರ್ನ ಸುಮ್ನೆ ಬಿಡಕಾಗತ್ತಾ ಅನ್ನೋದು ಮೇಷ್ಟ್ರು ಪ್ರಶ್ನೆ' ಎಂದು ತಿಳಿಹೇಳಲು ನೋಡಿದೆ.

ನಂಜ ಇಷ್ಟೊತ್ತಿನವರೆಗೆ ಸುಮ್ಮನಿದ್ದೋನು, 'ಇವರ್ದೆಲ್ಲಾ ಅಜೆಂಡಾ ಸಾರ್, ನಮ್ ನಿಮ್ಮಂತೋರಿಗೆ ಗೊತ್ತಾಗದಷ್ಟು ಕುತಂತ್ರ ಬುದ್ಧಿ! ನಮ್ ದೇಶದಾಗೆ ನಾರಾಣ್ ಮೂರ್ತಿ ಅಂತೋರ್ ಹೆಚ್ಚಿಗ್ ಆಗಬೇಕು, ಅಂತಾ ಮಹಾನ್ ಲೀಡರುಗಳು ಜಾಸ್ತಿ ಆದ್ರೆನೇ ನೋಡ್ರಿ ಅವಾಗ್ ನಾವ್ ಉದ್ದಾರ ಅಂತ ಆಗದು, ಇಷ್ಟಕ್ಕೂ ಈ ಲೀಡರುಗಳೆಲ್ಲ ತಮ್ ತಮ್ ಕೈ ಮುಂದ್ ಮಾಡಿ ಯಾವಾಗ್ಲೂ ಯಾಕ್ ಮಾತಾಡ್ತಾರೆ ಅಂತ ತಿಳಕಂಡೀರಿ?...'

ಒಂದು ಕ್ಷಣ ಮೌನವನ್ನು ಸಹಿಸಲಾರದವನಂತೆ ಮುಖ ಮಾಡಿ, ನಮ್ಮ ಉತ್ತರಕ್ಕೂ ಕಾಯದೇ...'ಅವರ್ದೆಲ್ಲಾ ಕೈಕಾಲುಗಳು ಮಾತ್ರ ಮುಂದೆ, ಬ್ಯಾರೇರಿಗೆ ಬೆಟ್ ಮಾಡಿ ತೋರಿಸ್ಬಾರ್ದು ಅನ್ನೋದು ಅದರ ಮರ್ಮ, ಯಾವ್ ಮನುಷ್ಯನ ಕೈ ಬಾಯ್ ಮುಂದಿರ್ತತೋ ಅಂತೋರಿಗೆ ಯಾವತ್ತೂ ಸಾವಿಲ್ಲ!' ಎಂದು ತನ್ನದೇ ಆದ ತತ್ವವೊಂದನ್ನು ಮಂಡಿಸಿ ವಾಟಾಳ್ ನಗೆ ಬೀರಿದ, ನಾನೂ ಮೇಷ್ಟ್ರೂ ಅದನ್ನು ಕೇಳಿದರೂ ಕೇಳಿಸದ ಹಾಗೆ ಇದ್ದು ಬಿಟ್ಟೆವು.

# posted by Satish : 5:46 pm  3 comments

This page is powered by Blogger. Isn't yours?

Links
Archives