Monday, May 12, 2008

ಮಾದೇಶ್ವರಗೆ ಶರಣು ಮಾದೇಶ್ವರ...

”ಹರಿ ಹಯ್ದನೆಂಬೋನು ಮಾದೇಶ್ವರ
ಮಾದೇಶ್ವರಗೆ ಶರಣು ಮಾದೇಶ್ವರ..."


ಎಂಬ ಆರ್ತನಾದ ಹಾಡಿನ ರೂಪದಲ್ಲಿ ನಮ್ಮನೆ ಮುಂದಿನ ಜಗುಲಿ ಮೇಲೆ ಕೇಳಿಬರುತ್ತಿದ್ದುದು ನೋಡಿ ಯಾರೋ ಭಿಕ್ಷುಕರು ಬಂದಿರಬೇಕೆಂದುಕೊಂಡು ಮುಂಬಾಗಿಲು ತೆಗೆದು ನೋಡಿದರೆ ನನ್ನ ಆಶ್ಚರ್ಯಕ್ಕೆ ನಂಜ ಮಧ್ಯದ ಕಂಬಕ್ಕೆ ಒರಗಿಕೊಂಡು ತನ್ನ ಪಾಡಿಗೆ ತಾನು ಹಾಡಿಕೊಳ್ಳುತ್ತಿದ್ದ. ಸ್ವಲ್ಪ ದೂರದಲ್ಲಿ ಕೊಟ್ಟಿಗೆಯಲ್ಲಿ ಕಸ ಹೊಡೆಯುತ್ತಿದ್ದ ತಿಮ್ಮಕ್ಕ ತನಗೇನೂ ಆಗೇ ಇಲ್ಲವೆನ್ನುವಂತೆ ತನ್ನ ಪಾಡಿಗೆ ತಾನಿದ್ದರೆ ಮತ್ತೊಂದು ಕಡೆ ಕೋಡೀಹಳ್ಳಿ ಮೇಷ್ಟ್ರು ಎಲೆಕ್ಷನ್ ಸಂಬಂಧಿ ವಿಷಯಗಳನ್ನು ಪ್ರಜಾವಾಣಿಯಲ್ಲಿ ಬಹಳ ಮುತುವರ್ಜಿಯಿಂದ ಓದಿಕೊಳ್ಳುತ್ತಿದ್ದರು.

’ಏನೋ ನಂಜಾ, ಯಾಕೆ ತಿಂಡೀ ತಿಂದಿಲ್ಲೇನು ಬೆಳಗ್ಗೇ?’ ಎಂದು ಕೇಳಿದ್ದಕ್ಕೆ,
’ಏ, ಸುಮ್ಕಿರ್ರಿ ಸವಕಾರ್ರೇ. ಈಗೆಲ್ಲ ಮಾದೇಶ್ವರನ ದಯೇನೇ ನಮ್ಮ ಪಾಲಿಗೆ ಉಳಿದಿರೋದು, ಅವನ ದಯೆ ಇತ್ತು ಅಂತಂದ್ರೆ ಎಂಥಾ ಬಿರು ಬೇಸಿಗೆಯಲ್ಲೂ ಮಳೆ ಬಂದೀತು!’ ಎಂದು ಯಾವುದೋ ಭ್ರಮಾ ಲೋಕದ ಸಂಭಾಷಣೆಯನ್ನು ಒಪ್ಪಿಸಿದ.
’ಅಲ್ಲಲೇ, ಇನ್ನೂ ಎಲೆಕ್ಷನ್ನಿನ ಮೂರನೇ ಒಂದು ಭಾಗ ಮತ ಚಲಾವಣೆ ನಡೆದಿರೋದಕ್ಕೇ ನೀನು ಇಷ್ಟು ದೊಡ್ಡದಾಗಿ ಹಾಡ್ತಿ, ಇನ್ನೇನಾರಾ ಪುಲ್ ಚುನಾವಣೇನೇ ಮುಗಿದು ನಿನಗೆ ಬೇಕಾದೋರೇ ಗೆದ್ದು ಬಂದ್ರೂ ಅಂತ ತಿಳಕಾ, ಅವಾಗೇನ್ ಮಾಡ್ತೀ?’ ಎಂದು ಪೇಪರಿನ ಹಿಂದೆಯೇ ತಮ್ಮ ತಲೆಯನ್ನಿಟ್ಟುಕೊಂಡೇ ಟೀಕೆ ಮಾಡಿದ ಮೇಷ್ಟ್ರು ಧ್ವನಿ ಅಶರೀರವಾಣಿಯಂತೆ ಕೇಳಿಸಿತು.

ನಂಜ ಇದ್ದೋನು, ’ಮೇಷ್ಟ್ರೇ, ನಿಮಿಗ್ಗೊತ್ತಿಲ್ಲ! ನಮ್ ದೊಡ್ಡ್ ಗೌಡ್ರು ಪರ್‌ಮಾಣಾ ಮಾಡವ್ರೆ, ಅದ್ಯಾರ್ ಯಾರ್ದೋ ಹುಟ್ಟುಡಗಿಸಿ‌ಬಿಟ್ತೀನಿ ಅಂದವರೆ, ಸುಮ್ಮೇ ಬಿಟ್ಟಾರೇನು?’ ಎಂದು ಅವರಿಬ್ಬರ ನಡುವೆ ನಡುಯುತ್ತಿದ್ದ ಶೀತಲ ಸಮರದ ತುಣುಕೊಂದನ್ನು ಹೊರಗೊಗೆದನು. ಮೇಷ್ಟ್ರಿಗೆ ಅಷ್ಟೇ ಸಾಕಾಯಿತೆಂದು ಕಾಣ್ಸುತ್ತೆ, ಪೇಪರನ್ನು ಬದಿಗೆ ಸರಿಸಿ,
’ಯಾವನ್ಲೇ ಇವಾ, ಊರು ಹೋಗೂ ಕಾಡ್ ಬಾ ಅನ್ನೋ ಸಮಯದಾಗ ಊರ ಮಂದೀನ್ ಎದುರ್ ಹಾಕ್ಕ್ಯಬಾರ್ದು ತಿಳಕಾ...ತಮ್ಮ ಕಾಲ ಮುಗೀತು ಅಂತ ಮುಚ್ಚಿಕ್ಯಂಡ್ ಇರಬಕು, ಅದನ್ನ ಬಿಟ್ಟು ಎಲ್ಲಾ ಕಡೀ ತಮ್ಮ ದೊಡ್ಡಸ್ತಿಕೇನ್ ನಡೀಬಕು ಅಂದ್ರ ಹೆಂಗಲೇ?’ ಎಂದು ದೊಡ್ಡ ಪ್ರಶ್ನೆಯೊಂದು ಹಾಕಿದವರ ಹಾಗೆ ನಂಜನ ಮುಖವನ್ನೇ ದುರುಗುಟ್ಟಿ ನೋಡಿದರು.

ಈ ನಂಜನೋ ಗಾಯದ ಮೇಲೆ ಉಪ್ಪು ಸವರೋ ಜಾಯಮಾನದವನು, ’ಮೇಷ್ಟ್ರೇ, ನಿಮಗೇನ್ ಗೊತ್ತು ಬಿಳಿ ಬಟ್ಟೇ ತೊಟ್ಟಗೊಂಡೋರೇಲ್ಲ ಶಾಂತಿಪ್ರಿಯರು ಅನ್ನೋ ಹಂಗ್ ಮಾತಾಡ್ತೀರಲಾ... ನಮ್ ಗೌಡ್ರು ಪ್ರಧಾನಿ ಮಂತ್ರಿ ಆಗಿ ಕೆಟ್ಟ್ರು ಇಲ್ಲಾ ಅಂತಿದ್ರೆ ಇಷ್ಟೊತ್ತಿಗೆ ವರ್ಷದ ಮೇಲ್ ವರ್ಷ ಮುಖ್ಯಮಂತ್ರಿ ಆಗಿ ನಮ್ ರಾಜ್ಯಾನಾ ಅದೆಷ್ಟು ಮುಂದ್ ತರತಿದ್ರೂ ಅಂತೀನಿ. ನಮ್ ರಾಜ್ಯದಾಗ ಯಾವನರ ಒಬ್ನು ದೊಡ್ಡ ಮಟ್ಟದ ರಾಜಕಾರಣಿ ಅನ್ನಂಗಿದ್ರೆ ಅವರೇ ಸೈ’ ಎಂದು ಬಿಡೋದೆ ಮೇಷ್ಟ್ರಿಗೆ ಉರಿ ಹತ್ತಿಕೊಂಡಿದ್ದು ಗ್ಯಾರಂಟಿ ಆಯಿತು, ಇನ್ನೇನು ನಂಜನಿಗೆ ಎದ್ದು ಬಂದು ಹೊಡದೇ ಬಿಡ್ತಾರೋ ಅನ್ನೋ ಅಷ್ಟರಲ್ಲಿ, ದೂರದಿಂದ ಇವರ ಮಾತನ್ನು ಕೇಳುತ್ತಿದ್ದ ತಿಮ್ಮಕ್ಕ ಮಧ್ಯ ಪ್ರವೇಶಿಸಿ,

’ತಮ್ಮಾ, ನಮ್ ರಾಜ್ಯಾನೂ-ದೇಶಾನೂ ಮುಂದು ಬರದು ಅಷ್ಟರಾಗೇ ಐತಿ, ಎದ್ದು ಸ್ವಲ್ಪ ಕರುಗಳ್ ಬಿಟ್ಟು ಕೊಟಿಗಿ ಸ್ವಚ್ಛ ಮಾಡುವಂತಿ ನಡಿ, ಕುಂತ್ರ ತಿಂದಿದ್ದು ಅರಗಂಗಿಲ್ಲ!’

’ನಾ ಬರಂಗಿಲ್ಲಬೇ, ಎಲೆಕ್ಷನ್ನ್ ಮುಗದು ಎಲ್ಲಾ ರಿಜಲ್ಟ್ ಬರಾತಂಕ ನಾ ಬರಂಗಿಲ್ಲ’

’ಹಂಗಂದ್ರ ಕುಂತಗ, ಇವತ್ತು ಎಲೆಕ್ಷನ್ನ್ ನಡೀತತಿ, ಎಲ್ಲಾ ನೆಟ್ಟಗಿದ್ರೂ ಇನ್ನೊಂದು ವರ್ಷದೊಳಗ ಮತ್ತ ಎಲೆಕ್ಷನ್ನ್ ಬರೋ ಪರಿಸ್ಥಿತಿ ಬರ್ತತಿ, ನೋಡ್ಕ್ಯಂತ ಕುತಗ’ ಎಂದು ಕಸಪೊರಿಕೆ ನಿವಾಳಿಸಿ ಮತ್ತೆ ಕೆಲಸದಲ್ಲಿ ತೊಡಗಿದಳು.

ಮೇಷ್ಟ್ರು, ’ತಾಯಿ, ಈ ಎಲೆಕ್ಷನ್ನಿನ ಭರಾಟೇನೇ ತಾಳದಷ್ಟ್ ಆಗ್ಯತಿ, ಮತ್ತೊಂದು ಎಲೆಕ್ಷನ್ ಬರದಂಗಿರ್ಲಪ್ಪಾ ಶಿವನೇ...’ ಎಂದು ಮುಗಿಲಿನ ಕಡೆಗೆ ಮಳೆಯನ್ನು ಯಾಚಿಸುವ ರೈತನಂತೆ ಮುಖ ಮಾಡಿದರು.

ನಂಜ ಮತ್ತೆ ಹಾಡತೊಡಗಿದ,
"ಮಾದೇಶ್ವರಗೆ ಶರಣು ಮಾದೇಶ್ವರ..."

Labels: ,


# posted by Satish : 5:42 am
Comments: Post a Comment



<< Home

This page is powered by Blogger. Isn't yours?

Links
Archives