ಸೀತಕ್ಕ ತುಳಸೀಗಿಡಕ್ಕ ನೀರ್ ಹೊಯ್ಯತಾ ಇದ್ದಳಾ, ನಾನು ಹೋದೋನೇ 'ಏನ್ ಸಿತಕ್ಕಾ, ಹೆಂಗಿದ್ದೀ?' ಎಂದಿದ್ದಕ್ಕೆ 'ನಮಿಗೇನ್ ಆಕತೋ ತಮ್ಮಾ, ಅರವತ್ತು ಮುಗಿದ ಮ್ಯಾಕ ಎದ್ದರ ಒಂದ್ ಲೆಕ್ಕ, ಕುಂತರ ಇನ್ನೊಂದರ ಲೆಕ್ಕಾ' ಅಂದಳು. 'ಹಂಗಲ್ಲ ಸೀತಕ್ಕಾ ನಿನಗಾದಂಗ ಎಲ್ಲಾರಿಗೂ ವಯಸ್ಸಾಕತಿ, ಅದನ್ನ ಯಾರೂ ನಿಂದರ್‌ಸಾಕ ಆಗಂಗಿಲ್ಲ' ಎಂದೆ. 'ಸುಮ್ನಿರೋ ಮಾರಾಯಾ, ನಮ್ ಪರಿಪಾಟ್ಲೆ ನಮಿಗೆ, ನಿನಗೇನ್ ಗೊತ್ತಾಕತಿ!' ಅಂದಳು. ನಾನು 'ನೋಡಬೆ, ಈಗ ನಿನ್ ವಾರಿಗಿ ಜನ್ರುನ್ನೇ ತಗಾ ಎಷ್ಟೋ ಮಂದಿ ಇನ್ನೂ ಕಲ್ ಗುಂಡಿನ್ಯಂಗ್ ಹೆಂಗಿಲ್ಲ, ವಯಸ್ಸಾತು ಅನ್ನೋದು ಮನಸ್ನ್ಯಾಗಿಂದ ತೆಗೆದು, ನೆಟ್ಟಗೆ ಓಡಾಡೋದ್ ಕಲಿ' ಎಂದೆ.
ಸೀತಕ್ಕ ಗುರ್ರ್ ಅನಕೊಂಡೇ ಪಡಸಾಲೀ ಮೆಟ್ಟಿಲ ಹತ್ತಿ ಒಳಕ್ಕ್ ಹೋದ್ಲೋ, ಒಳಗಿಂದ ಒಳ್ಳೇ ಗೂಳಿ ನುಗ್ಗಿದಂಗೆ ಪರಮ್ಯಾ ಓಡಿಬಂದ, 'ಏನಣ್ಣೋ, ಎತ್ಲಾಗ್ ಹೊಂಟ್ತು ಸವಾರಿ' ಎಂದವನಿಗೆ, 'ನನ್ದು ಎತ್ಲಾಗೂ ಇಲ್ಲ, ನಿಂದ್ ಯಾವಕಡಿ' ಅಂದೆ. 'ಸುಮ್ನೇ ಟಿವಿ ನೋಡಿ ಬೋರಾತು ಅಂತ ಹೊರಗಡೆ ಹೊಂಟೆ, ಥೂ ಯಾವಾಗ್ ನೋಡಿದ್ರೂ ಈ ಹಾಳಾದ್ ದೊಡ್ಡ ಗೌಡ್ರು ಮಕ್ಳು ಮುಖಾ ತೋರುಸ್ತಾರ್ ನೋಡು!' ಎನ್ನಬೇಕೆ. 'ಅಂತಾದ್ದೇನ್ ನಡೆದೈತೋ ಟಿವಿ ಒಳಗ' ಅಂದಿದ್ದಕ್ಕೆ 'ದೊಡ್ಡ ಗೌಡ್ರಿಗೆ ಈಗ ಧ್ವನಿ ಬಂದದಂತೆ - ಕಾಂಗ್ರೇಸ್ ಮ್ಯಾಕ ಹತ್ತಾರು ಆಪಾದನೆಗೊಳ್ ಪಟ್ಟೀನೆ ತಯಾರ್‌ಸ್ಯಾರಂತೆ, ಒಳ್ಳೇ ಗೂಳಿ ಗುಟುರು ಹೊಡದಂಗ ಮಾತ್ ಮಾತಿಗೆ ಉಸುರು ಬಿಡಾಕ್ ಹತ್ಯಾರಂತೆ!' ಎಂದು ವರದಿ ಒಪ್ಪಿಸಿದ.
'ಏನಾರ ಮಾಡಿಕ್ಯಳ್ಳಿ ಬಿಡು, ನಡೀ ನಾನು ಬಂದೆ ಪೇಟೆ ಕಡೆ ಹೊಂಡೋಣ' ಎಂದು ಜಡವಾದವನನ್ನು ಹೊರಡಿಸಿದೆ. 'ಅಲ್ಲಾ, ಈ ದೊಡ್ಡ ಗೌಡ್ರಿಗೆ ಯಾಕ್ ತನ್ನ್ ಮಕ್ಳು ಉಸಿಸ್‌ಬೇಕು ಅನ್ನೋ ಛಲ?' ಎನ್ನೋ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡದವನಾದೆ.
# posted by Satish : 12:39 pm