ಇವತ್ತು ಬೆಳ್ಳಂಬೆಳಗ್ಗೆ ಕೋಡೀಹಳ್ಳಿ ಮಾಷ್ಟ್ರು ದರ್ಶನಾ ಆಗಿದ್ದೇ ತಡ ನಾನು ಯಾರಾದ್ರೂ ಸತ್‌ಗಿತ್ತ್ ಹೋದ್ರೇನೋ ಅಂತ ಒಂದ್ ನಿಮಿಷಾ ಒದ್ದಾಡಿ ನೋಡಿದ್ರೆ ಅಂತಾ ಏನೂ ತಲೀ ಹೋಗೋ ವಿಚಾರ ಅಲ್ಲಾ ನಮ್ ಕುಸಾ ಸಾಹೇಬ್ರು ಮಗಾ ಹೋಗಿ ಯಾವ್ದೋ ಹೋಟ್ಲು ಮಾಣಿಗಳಿಂದ ಚೆನ್ನಾಗಿ ಒದೀ ತಿಂದಾನ ಅಂತ ಸುದ್ದಿ ಬಂತು.
ಏನ್ಸಾರ್ 'ಏನೋ ಸಣ್ ಹುಡುಗ್ರು ತಿಳೀಲಾರ್ದು ಮಾಡಿರ್‌ಬೇಕ್ ಬಿಡ್ರಿ' ಅಂದಿದ್ದಕ್ಕೆ,
'ಏನ್ರೀ ಸಣ್ ಹುಡುಗ್ರು ಅಂತೀರಲ್ರೀ, ನಿಮಗೇನಾರ ಬುದ್ದೀ ಐತೋ ಹೆಂಗೆ?' ಅಂತ ನನ್ನನ್ನೇ ತರಾಟೆಗೆ ತಗೊಂಡಿದ್ದೂ ಅಲ್ದೇ 'ಈ ಮಕ್ಳು ಬೆಳಗ್ಗಿನ್ ಜಾವಾ ಮೂರೂವರಿ ಹೊತ್ತಿಗೆ ಏನ್ ಮಾಡಾಕ್ ಹತ್ತಿದ್ರೂ?' ಅಂತ ಪ್ರಶ್ನೇ ಕೇಳೋದೇ.
'ನನಗ್ಗೊತ್ತಿದ್ರೆ ತಾನೇ, ಈಗಿನ್ನೂ ನೀವೇ ವಿಷ್ಯಾ ಹೇಳ್ದೋರು, ಅದು ಏನು ಅಂತ ನೆಟ್ಟಗೆ ಬಿಡಿಸಿ ಹೇಳಬಾರ್ದಾ?' ಅಂದೆ ಸ್ವಲ್ಪ ಸಿಟ್ಟು ಹಚ್ಚಿ.
'ಕುಸಾ ಮಗ, ಇನ್ನೂ ಇಪ್ಪತ್ತೂ ಮುಟ್ಟಿಲ್ಲ ಅಂತಾವಾ ಯಾವ್ದೋ ಹೋಟ್ಲಿಗೆ ಬೆಳಗ್ಗೆ ನಾಕು ಘಂಟೀ ಹೊತ್ತಿಗೆ ತನ್ನ ಸ್ನೇಹಿತ್ರು ಜೋಡಿ ಹೋಗಿ ಊಟಾ ಕೊಡ್ರಿ ಅಂತ ಗಲಾಟಿ ಎಬ್ಬಿಸ್ಯಾನಂತ, ಅಲ್ಲೀ ಜನ ಇಲ್ಲಾ ಅಂದಿದ್ದಕ್ಕ ಅವರಿಗೆ ಹೊಡ್ದು, ಗಲಾಟಿ ಎಬ್ಬಿಸಿ, ಹೊಡ್ತಾ ತಿಂದು, ಇತ್ಲಾಗ್ ಬಂದು ಕಂಪ್ಲೇಂಟ್ ಕೊಟ್ಟಾನಂತ' ಎಂದರು.
'ಅಲ್ಲಾ ಮೇಷ್ಟ್ರೇ ಅಪ್ಪಾ ಹಳ್ಳಿ-ಹಳ್ಳಿ ತಿರುಗಿ ಯಾರ್ ಯಾರ್ದೋ ಮನ್ಯಾಗೆ ಮಲಗ್‌ತಾನಂತ, ಈ ಮಗನಿಗೆ ಏನಾಗಿತ್ತು? ಕಬ್ಬನ್‌ಪಾರ್ಕ್‌ನ್ಯಾಗ ನಿಂತು ಭಿಕ್ಷೆ ಬೇಡಿದ್ರೆ ಊಟ ಸಿಗತ್ತಿತ್ತಲ್ರೀ!' ಎಂದೆ.
ಮೇಷ್ಟ್ರು 'ನಿಮದೊಳ್ಳೆ ತಮಾಷೆ...ಈ ಅಪ್ರಾಪ್ತ ಹುಡುಗ್ರಿಗೆ ರಾತ್ರೋ-ರಾತ್ರಿ ಓಡಾಡೋಕೆ ಪರ್ಮಿಷನ್ ಕೊಟ್ಟೋರ್ ಯಾರು? ಅವರು ಕಾರು ಓಡ್ಸಿದ್ರೆ ಅದಕ್ಕೆ ಲೈಸನ್ಸ್ ಐತೋ ಇಲ್ಲೋ...ಅದಕ್ಕಿಂತ ಹೆಚ್ಚಿಗಿ ತನ್ ಅಪ್ಪ, ತನ್ ಮಕ್ಳುನ್ ನೆಟ್ಟಗೆ ಇಟ್‌ಕೊಳ್ಳೋಕ್ ಬರದಿರೋ ಮನ್ಷಾ ಇಡೀ ರಾಜ್ಯಾನಾ ನೆಟ್ಟಾಗೆ ಇಟಗಂತಾನೆ ಅಂತ ಏನ್ ಗ್ಯಾರಂಟೀ...ನಿಮಗ್ಗೊತ್ತಾಗಂಗಿಲ್ಲ ಬಿಡ್ರಿ ನಮ್ ತಲಿಬಿಸಿ...' ಅಂತ ಹೊರಟೇ ಹೋಗೋದೇ!
'ಮೇಷ್ಟ್ರೇ ನಿಲ್ರೀ...' ಅಂತ ಕೂಗಿದ್ರೂ ನಿಲ್ಲದೇ ಹೋದ ಗತಿ ನೋಡಿ ನಾನು ಏನೋ ದೊಡ್ಡ ಸಂಚಕಾರ ಕಾದೈತೆ ಕುಸಾ ಸರಕಾರಕ್ಕ ಮುಂದೆ ಎಂದುಕೊಂಡು ಸುಮ್ಮನಾದೆ.
ನೋಡಿದ್ರಾ, ಫಸ್ಟ್ ಟೈಮ್ ಈ ಅಂಕಣದಾಗೆ ನಮ್ ರಾಜಕಾರಣಿಗಳನ್ನು ಬಿಟ್ಟು ಯಾವ್ದೋ
ಬಸ್ಸಿನ ಬೆನ್ನು ಹಿಡಿದು ನಾನು ಹೊರಟಂತಿದೆ.
ಮತ್ತಿನ್ನೇನಾಗತ್ತೆ ಯಾರ್ ಯಾರು ಎಲ್ಲಿರಬೇಕೋ ಅಲ್ಲಿರಬೇಕಪ್ಪಾ - ಬಸ್ಸುಗಳು ರಸ್ತೆ ಮೇಲೆ, ಮಂತ್ರಿ ಮಾಗಧರು ವಿಧಾನ ಸೌಧದಲ್ಲಿ! ಅದನ್ನ ಬಿಟ್ಟು ಬಡವರ ಮನೆ ಊಟ ಹುಡಿಕ್ಕೊಂಡ್ ಹೋದ್ರೆ ಏನ್ ಬಂತು?
ಅದ್ಸರಿ ವಾಲ್ವೋ ಬಸ್ಸು ಜನ್ರ ಮೇಲೆ, ಫುಟ್‌ಪಾಥ್ ಮೇಲೇನೋ ಹರೀತು, ಅಮಾಯಕರ ಪ್ರಾಣಾನೂ ತೆಗೊಳ್ತು, ಕೊನೆಗೆ ಜನಗಳ ರೋಷಕ್ಕೆ ತನ್ನ ಪ್ರಾಣಾನೇ ಬಿಡ್ತು. ನಲವತ್ತ್ ಐವತ್ತ್ ಲಕ್ಷ ರುಪಾಯ್ ಅನಾವಶ್ಯಕವಾಗಿ ಹಾಳ್ ಮಾಡಿದ್ದೂ ಅಲ್ದೇ ಈಗ ಈ ಸತ್ತೋರ್‌ಗೆಲ್ಲಾ ಸರ್ಕಾರ್‌ದೋರ್ ರೊಕ್ಕಾ ಕೊಡಬೇಕಾಗಿ ಬಂತು ನೋಡ್ರಿ. ಅಂದ್ರ, ಒಬ್ಬ ಡ್ರೈವರ್ ಬ್ರೇಕ್ ಫೇಲ್ ಆತು ಅಂತ ಅಂದಿದ್ದಕ್ಕೆ ಅಥವಾ ಅವನ ಮಿಷ್ಟೇಕ್ ಏನಿದ್ರೂ ಆಮ್ ಜನತಾ ಯಾಕ್ ಅದಕ್ಕ್ ದುಡ್ಡ್ ಕೊಡಬೇಕು? ಎಲ್ಲದಕ್ಕೂ ಸರ್ಕಾರದೋರ್ ಕೊಡಲಿ ಅಂದ್ರ ಅದೇನ್ ಧರ್ಮ ಚತ್ರಾನಾ?
ನಮ್ ಜನಗೊಳಿಗೆ ತಿಳುವಳಿಕೆ ಅನ್ನೋದ್ ಬ್ಯಾಡಾ? ಈ ಕಾರ್ಮಿಕರು ರೋಷಾ ಅನ್ನೋದು ಬಾಳಷ್ಟು ಸಮಸ್ಯೆ ಹುಟ್ಟಿಸಿದ್ರೂ ಯಾರೂ ಯಾಕ್ ಇಂತೋರಿಗೆ ಬುದ್ದಿ ಹೇಳೋಲ್ವೋ? ಇಂಥಾ ಜನಗಳನ್ನ್ ಕಟ್ಟಿಕೊಂಡ್ ಯಾವ್ ಸರಕಾರ ತಾನ್ ಏನ್ ಮಾಡೋಕ್ ಸಾಧ್ಯ? ಮೊದಲು ಜನಗಳು ಬದಲಾಗ್ ಬೇಕ್, ಇಲ್ಲಾ ಇಲ್ಲಾ ಜನಗಳ್ ಮನಸ್ಥಿತಿ ಬದಲಾಗ್ ಬೇಕ್ - ಅಂದ್ರ ಗಾಂಧಿ, ಬುದ್ಧ, ಬಸವಣ್ಣನಂತೋರ್ ಮತ್ತೆ ಹುಟ್ಟಿ ಬರಬೇಕು, ಅವಾಗ್ಲೇ ನೋಡ್ರಿ ನಿಜವಾದ್ ಬದಲಾವಣೆ ಅನ್ನೋದೇನಾದ್ರೂ ಆಗೋಕ್ ಸಾಧ್ಯ.
ಇತ್ಲಾಗೆ ದೊಡ್ಡ ಗೌಡರಿಗೆ ಎರಡೆರಡು ಮಿದುಳು ನಾಲಿಗೆ ಇದ್ರೂ ಅವೆಲ್ಲ ಕೆಲ್ಸಾ ಮಾಡಿದ್ದು ಸಾಕಾಗ್ಲಿಲ್ಲ ಅನ್ನೋ ದೃಷ್ಟೀನಲ್ಲಿ ಇದ್ದ ತಲೇ ಮೇಲಿನ ಕೂದ್ಲೂ ಕೆರೆದೂ ಕೆರೆದೂ ಎಲ್ಲಾ ಉದುರಿ ಬಿದ್ದೋದ್ವು! ಅತ್ಲಾಗೆ ಮಗ ಬೆಂಗಳೂರಿಂದ ಬೆಳಗಾವಿವರೆಗೆ ಕಂಡ್ ಕಂಡೋರ್ ಮನ್ಯಾಗೆ ತಾವೇ ತರಿಸಿದ ಕುರ್ಲಾನ್ ಹಾಸಿಗೆ ಮೇಲೆ ವಿರಮಿಸಿ ಅವರಿವರ ಮನೆ ಊಟಾ ತಿಂಡೀ ತಿಂದು ಮೈ ಬೆಳಸಿಕೊಂಡ್ರು.
ದೊಡ್ಡ ಗೌಡ್ರು ಮಿದುಳು ತಿನ್ನೋ ಪ್ರಶ್ನೆ ಏನೂ ಅನ್ನೋದು ನನಗೂ ಗೊತ್ತಾತ್ ನೋಡ್ರಿ - ಅವರ ಅಸಲೀ ಸಮಸ್ಯಾ ಅಂದ್ರೆ ಬಿಜೆಪಿ, ಇಂಥಾ ಪಕ್ಷದ್ ಜೊತಿ ಹೆಂಗ್ ಸಂಬಂಧ ಮಾಡ್‌ಬಕು, ಬಿಡ್‌ಬಕು ಅನ್ನೋದೇ ದೊಡ್ಡ ಪ್ರಶ್ನೆ, ದೊಡ್ಡ ಗೌಡ್ರಿಗೆ ದೊಡ್ಡ ದೊಡ್ಡ ಪ್ರಶ್ನೆ ಅಂತ ಸುಮ್ನಿರೋ ವಿಷ್ಯಾ ಇದಲ್ಲ. ಮೂರು ಮೂರು ತಿಂಗಳಿಗೆ ಒಂದೊಂದು ಥರ ಮಾತಾಡೋ ಅಪ್ಪನ್ ಕಂಡ್ರೆ ಮಕ್ಳಿಗೂ ಬೇಜಾರು, ಆದ್ರೆ ಆ ಕೋಟ್ಯಾಂತರ ರೂಪಾಯಿ ಆದಾಯನೆಲ್ಲ ಎಲ್ಲೆಲ್ಲಿ ಮಡಗೌರೆ ಅನ್ನೋದೆ ಇನ್ನೂ ತಿಳೀಲಾರ್ದ ರಹಸ್ಯ. ಬರೇ ಹತ್ತೇ ಹತ್ತು ವರ್ಷದೊಳಗೆ ಅಪ್ಪ ಮುಖ್ಯಮಂತ್ರಿ, ಪ್ರಧಾನಿ (ಪರದಾನಿ ಅಲ್ಲ) ಆಗಿದ್ದು ಅಲ್ದೇ, ಇತ್ಲಾಗೆ ಮಗಾನೂ ಮುಖ್ಯಮಂತ್ರಿ ಆಗಿ ಎರಡು ವರ್ಷ ಕಳೆಯೋ ಹಂಗ್ ಮಾಡಿದ್ದು ಏನ್ ಸಾಮಾನ್ಯ ಅಂತ ತಿಳಕಂಡೀರೇನು? ಯಾವ ನೆಹರೂ ಕುಟುಬದೋರು ಹಿಂಗ ಮಾಡಿಲ್ಲ ತಿಳೀರಿ.
ಈ ರಾಜ್‌ಕಾರಣಿಗಳಿಗೆ ಎಷ್ಟೆಷ್ಟು ನಾಲಿಗೆ ಇರತಾವ ಅನ್ನೋದಕ್ಕೆ ನಮ್ ಸಂವಿಧಾನದೊಳಗೆ ಯಾವ ಕಲಮ್ಮಿನ್ಯಾಗೆ ಏನೇನು ಬರದಾರ ಅಂತ ತಿಳಕೊಳುವಷ್ಟು ಬುದ್ಧಿ ಅಂತೂ ನನಗಿಲ್ಲ, ನಿಮಗೇನಾರೂ ಗೊತ್ತಿದ್ದ್ರ ತಿಳಸ್ರಿ ಸ್ವಲ್ಪ.