Thursday, July 05, 2007

ಕಾಂಗ್ರೇಸ್‌ನವ್ರಿಗೆ ಕಾಮಾಲೆ ರೋಗ ಬಂದದೆ...

’ಎಲ್ಲಾ ಕೈ-ಕೈ ಜೋಡಿಸಿಕೊಂಡ ಮುಂಡೇಗಂಡರು ಈಗ ಒಬ್ಬೊಬ್ಬರಾಗೇ ರಾಗ ತೆಕ್ಕಂತ ಕುಂತವರೆ...’ ಎಂದು ನಂಜನ ಬಾಯಲ್ಲಿ ಬೆಳ್ಳಂಬೆಳಗ್ಗೆ ಯಾವಾಗ ಈ ರೀತಿಯ ಸ್ವರಗಳು ಹೊರಡಲು ಶುರುಮಾಡಿಕೊಂಡವೋ ಆಗ ಏನೋ ಆಗಬಾರದ್ದು ಆಗಿ ಹೋಗಿದೆ ಎಂದುಕೊಂಡು ಅವನ ಹೆಗಲಿನ ಮೇಲಿನಿಂದ ಅವನು ಓದುತ್ತಿದ್ದ ಸುದ್ದಿಯ ಪುಟವನ್ನು ನೋಡಿದರೆ ಕಾಂಗ್ರೇಸ್‌ನವ್ರಿಗೆ ಕಾಮಾಲೆ ರೋಗ ಬಂದದೆ...ಎಂದು ಯಡ್ಡಿ ಸಾಹೇಬ್ರು ಕೊಟ್ಟ ಹೇಳಿಕೇನಾ ಎರಡೆರಡು ಸಾರಿ ಓದುತ್ತಿದ್ದುದು ಕಂಡು ಬಂತು.

’ಏನಾಯ್ತೋ ಈಗ...’ ಎಂದ ನನ್ನ ಮಾತನ್ನೂ ಕೇಳದೇ, ಅವನ ತಲೆಯಲ್ಲಿರೋ ವಿಚಾರಗಳೆಲ್ಲ ನನಗೆ ಗೊತ್ತು ಅನ್ನೋ ನಂಬಿಕೆಯಿಂದ, ’ಮತ್ತೇನ್ರಿ, ಕಾಮಾಲೆ ಬಂದೋರಿಗೆ ಕಣ್ಣಾ ಟೆಸ್ಟ್ ಮಾಡ್ತಾರಾ? ಹಂಗಂದೋರ್ ತಲೆ ಮೊದ್ಲು ಟೆಸ್ಟ್ ಮಾಡಿಸ್‌ಬೇಕು...’ ಎಂದು ಪೇಪರನ್ನು ಯಡ್ಡಿ ತಲೆಯ ಮೇಲೆಯೇ ಕುಕ್ಕುತ್ತಿದ್ದೇನೇನೋ ಎನ್ನೋ ಭ್ರಮೆಯಲ್ಲಿ ಜಗಲಿಯ ಕಟ್ಟೆಗೆ ಕುಕ್ಕಿದ.

’ಏನಿವತ್ತು ಮೇಷ್ಟ್ರು ಇಲ್ಲಾ ಅಂತ ಬಾಯಿಗೆ ಬಂದಂಗ್ ಮಾತಾಡಕ್ ಹತ್ತೀಯಲ್ಲ...’ ಎಂದು ಒಳಗಿಂದಲೇ ತಿಮ್ಮಕ್ಕ ನಂಜನಿಗೆ ಅತಿಯಾಗಿ ಮಾತನಾಡುತ್ತಿದ್ದುದಕೆ ತಿವಿದಳು.

’ಸುಮ್ಕಿರಬೇ, ಈ ಐವತ್ತು ವರ್ಷದಿಂದ ಕಾಂಗ್ರೇಸ್‌ನೋರು ಮಾಡ್ದಿರದ ಈ ವಯ್ಯಾ ಏನ್ ಕಿಸದವ್ನೇ..., ಜೀವ್‌ಮಾನಾನೆಲ್ಲ ತೆಯ್ದರೂ ಈ ಎಪ್ಪಗೆ ಇನ್ನೂ ಡೆಪ್ಯೂಟೀ ಆಗಿ ನೆಟ್ಟಗೆ ನಿಂದ್ರಕ್ ಬರಂಗಿಲ್ಲ, ಮತ್ತ್ ಅವ್ರಿವ್ರ ಕಡಿ ಬ್ಯೆಟ್ ಮಾಡಿ ತೋರುಸ್ತಾರೇಕೆ?’

ತಿಮ್ಮಕ್ಕ ಇವನ ಮಾತ್‌ಕೇಳಿ ಸುಮ್ಕಿರಲಾರ್ದೇ ಹೊರಗೇ ಬಂದಳು, ಒಳಗೆ ಗುಡಿಸುತ್ತಿದ್ದಳೋ ಏನೋ, ಕೈಲಿನ ಪೊರಕೆಯನ್ನೂ ಜೊತೆಯಲ್ಲೇ ತಂದಿದ್ದನ್ನು ನೋಡಿ ನಂಜನ ಮುಖ ಹುಳ್ಳಗೆ ಆಗಿದ್ದೂ ಅಲ್ದೇ ತಿಮ್ಮಕ್ಕನನ್ನೂ ಅವಳ ಕೈನ ಪೊರಕೆಯನ್ನೂ ಎರಡೆರಡು ಬಾರಿ ನೋಡಿ ಕನ್‌ಫರ್ಮ್ ಮಾಡಿಕೊಂಡನು...ತಿಮ್ಮಕ್ಕ,

’ಅಲ್ಲಾ ತಮ್ಮಾ, ಈ ಗ್ರಾಮ ವಾಸ್ತವ್ಯಾನೇ ತಗಾ, ನಮ್ ಕುಸಾ ಸರ್ಕಾರ್‌ದೋರ್ ತಾನೇ ಮಾಡಿದ್ದು, ಇನ್ಯಾವನಾರ ಮಾಡಿದ್ನಾ? ಹೆಂಗರ ಮನಿಕ್ಕ್ಯಳ್ಳಿ, ಅತ್ಲಗ ಹಳ್ಳೀ ಕಡಿ ಮುಖ ಹಾಕಿ ಮಲಕ್ಕ್ಯಳದ ರಾಜ್‌ಕಾರ್ಣಿಗಳು ಈಗೀಗ ಹಳ್ಳೀ ಕಡಿ ತಿರುಗಿ ನೋಡಾಕ್ ಹತ್ಯಾರಲೇ ತಿಳಕಾ...’

ನಂಜನಿಗೆ ಉರಿಹತ್ತಿತೆಂದು ಕಾಣುತ್ತೆ, ತಿಮ್ಮಕ್ಕನ ಮಾತನ್ನು ಮಧ್ಯದಲ್ಲೇ ತಡೆದು, ’ಸುಮ್ಕಿರು ಅಂತ ಅನ್ಲಿಲ್ಲಾ ನಿನಗ ಒಂದ್ ಸಾರಿ, ಅವ್ರ ಹಕ್ಕೀಕತ್ತಲ್ಲ ನಿನಗ ಗೊತ್ತಾಗಂಗಿಲ್ಲ ಬಿಡು, ಇವ್ರು ಹೋದಲ್ಲಿ ಹುಲ್ಲೂ ಬೆಳಯಂಗಿಲ್ಲಾ, ಇನ್ನ್ ಹಳ್ಳೀ ಉದ್ದಾರಾಗೋ ಮಾತ್ ಹಂಗಿರಲಿ.’ ಎಂದು ಬಿಡಬೇಕೇ, ತಿಮ್ಮಕ್ಕ ತನ್ನ ಪಟ್ಟನ್ನೆಲ್ಲಿ ಬಿಟ್ಟಾಳು,

’ಈ ಪ್ರಪಂಚಾನೇ ಹಿಂಗ ಮಗಾ...ತಾವೂ ಮಾಡಂಗಿಲ್ಲ, ಮಾಡೋ ಮಂದಿಗೂ ಬಿಡಂಗಿಲ್ಲ...’ ಎಂದು ಸುಮ್ಮನಾದಳು.

ನಂಜ, ’ಇಲ್ಲಿ ಬಂದ್ ನೋಡು, ನೀನೇ ಕಣ್ಣಾರೆ ನೋಡಿ ತಿಳಕಾ...ಅಧಿಕಾರದ ಬಗ್ಗೆ ನಾವು ತಲೆಕೆಡಿಸಿಕೊಳ್ಳೋದಿಲ್ಲ ಅಂದವರಲ್ಲ ನಿಜವಾದ ಮಾತಾ ಅದು, ಮಾತ್ ಆಡಿದ್ರೆ ಅಪ್ಪಗುಟ್ಟಿದ ಮಾತಾಡ್‌ಬೇಕು, ಇಲ್ಲಾ ಅಂತಂದ್ರೆ ಅದನ್ನ್ ತಗಂಡ್ ಏನ್ ಮಾಡಾಕ್ ಬರ್ತತಿ?’

ತಿಮ್ಮಕ್ಕ, ’ಓ, ಸುಮ್ಕಿರ್ಲೇ, ನಿಮ್ ಗುರುಗಳ್ನೂ ಕಂಡೀನಿ, ಮೇಷ್ಟ್ರು ಬರ್ಲಿ ಸುಮ್ಕಿರು, ನಿನಗೊಂದು ಗತಿ ಕಾಣಿಸ್ಲಿಲ್ಲಾ ನೋಡ್ಕ್ಯಾ...’

ಇವರ ವಾದವಿವಾದಗಳು ಆಗ ತಾನೇ ಎದ್ದು ಶಾಂತವಾದ ಸುಂಟರಗಾಳಿಯಂತಾಗಲು ನಾನು ವಿತ್ತಪ್ರಭದ ಪುಟವನ್ನು ಬದಿಗೆಳದು ಪೇಟೆ-ಧಾರಣೆ ಬಗ್ಗೆ ಓದತೊಡಗಿದೆ.

# posted by Satish : 5:33 am
Comments: Post a Comment<< Home

This page is powered by Blogger. Isn't yours?

Links
Archives