'ಅಲಾಲಲಾಲಾ, ನನ್ ಮಗ ಧರಮ್ಯಾ ಹೋಗೀ ಹೋಗೀ ದೊಡ್ಡ ಗೌಡ್ರುನ್ನ ಅದ್ಯಾವ್ದೋ ದ್ಯಾವಸ್ಥನದಲ್ಲಿ ಭೆಟ್ಟಿಯಾಗೋನಂತೆ ಗುರುವೇ!' ಎಂದು ನಂಜ ಗಿಡದ ಕಾಂಡಕ್ಕೆ ಒರಗಿಕೊಳ್ಳೋ ಕಂಬಳಿ ಹುಳುವಿನಂತೆ ನನಗೆ ತಗುಲಿಕೊಂಡ.
'ಅಲ್ಲಲೇ, ಭೇಟ್ಟಿ ಆಗಿಲ್ಲ, ಅವೆಲ್ಲ ಮೊದಲೇ ಹೊಂಚುಹಾಕಿದ ಅವತರಣಿಕೆ ಅಂತಾ ಇಬ್ರೂ ಹೇಳ್ಕೋ ಕೊಟ್ಟೋರಲಾ, ಅದಕ್ ಏನಂತಿ?' ಎಂದು ಎಲೆ ತಿಂದು ಅದರ ದಂಟನ್ನೂ ತಿನ್ನೋ ಕಂಬಳಿಹುಳುವಿನ ಪ್ರೇರಣೆಯಲ್ಲೇ ವಾಪಾಸು ತಿವಿದೆ.
'ಏ, ನೀವೊಂದು. ಒಳ್ಳೇ ಇಸ್ಕೂಲ್ ಹುಡ್ರು ಹೇಳ್ದಂಗ್ ಹೇಳ್ತೀರಲ್ಲಣಾ. ನಿಮಗ್ಗೊತ್ತಿಲ್ಲ ದೊಡ್ಡಗೌಡ್ರು ವಿಷ್ಯಾ, ಏನ್ ತಿಳಕಂಡೀರಿ ಅವ್ರು ಅಂದ್ರೆ?' ಎಂದು ನನ್ನನ್ನೇ ಭಂಡತನದಿಂದ ಪ್ರಶ್ನಿಸೋದೇ, ಇವನ್ದೇನಿದೆ ನೋಡೇ ಬಿಡೋಣ ಎಂದು ಮತ್ತೆ ಅವಲತ್ತಿಕೊಂಡೆ,
'ನಂಜಾ, ನಿನ್ ಬುದ್ಧೀ ಮಾತ್ರ ಬಲೀಲಿಲ್ಲ ಕಂಡ್ಲಾ. ಇಡೀ ದೇಶಕ್ಕೇ ಗೊತ್ತಲೇ ಅವ್ರು ಯಾರೂ ಅಂತ, ಆದ್ರೆ ಏನ್ ಮಾಡಗಿಂದಾರೋ? ಕನ್ನಡಪ್ರಭ, ಪ್ರಜಾವಾಣೀನ್ಯಾಗೆ ಬಂತಲ್ಲ, ಗೌಡ್ರೂ-ಧರಮ್ಮೂ ಮಾತಾಡಿಲ್ಲ ಅಂತ, ಇನ್ನೇನ್ ಮಾಡಂಗಿದಿ ಅದನ್ನ ತಗಂಡು?'
ನಂಜ ಒಂದ್ಸರ್ತಿ ಯೋಚ್ನೇ ಮಾಡೋನ್ ಹಾಗೆ ಒಂದು ಭಂಗಿಯಲ್ಲಿ ನಿಂತವನು ಮುನಿಯನ ಮಾದರಿ ಸಿನಿಮಾದ ಶಂಕರ್‌ನಾಗ್ ಕಂಡಂಗೆ ಕಂಡುಬಂದ, ಅಷ್ಟೊತ್ತಿಗೆ ತಿಮ್ಮಕ್ಕನೂ ನಮ್ಮ ಜೊತೆ ಸೇರಿಕೊಂಡಳು.
ನಾನೆಂದೆ, 'ಏನ್ ತಿಮ್ಮಕ್ಕಾ, ಎತ್ಲಾಗ್ ಹೊಂಟೀ?'
ತಿಮ್ಮಕ್ಕ, 'ಸುಮ್ಕಿರಣ್ಣಾ, ನಮ್ದೇನೈತಿ ದೇಶಾ ಆಳೋ ವಿಷ್ಯಾ? ಎಲ್ಲಾನೂ ದೊಡ್ಡೋರ್ದೇ ನಡೀತಾ ಇರೋವಾಗ?' ಎಂದು ಅಡ್ಡಗೋಡೆ ಮೇಲೆ ದೀಪಾ ಇಟ್ಟಳು. ಈ ಮೇಷ್ಟ್ರು ಸವಾಸ ಜಾಸ್ತಿ ಆಯ್ತು ಈ ನನ್ ಮಕ್ಳಿಗೆ ಯಾವ್ದುನ್ ಹೇಳಿದ್ರೂ ಬಿಡಿಸಿ ಹೇಳಲ್ಲ...ಅವಳು ದೊಡ್ಡೋರ್ದು ಅಂದಿದ್ದು ದೊಡ್ಡಗೌಡ್ರ ವಿಷ್ಯಾನೇನೋ ಅಂತ ಒಂದ್ಸರ್ತಿ ಅನುಮಾನ ಬಂತು, ಆದ್ರೂ ನಾನ್ಯಾಕೆ ಹೇಳ್ಲಿ ಅಂತ ಸುಮ್ಮನಿದ್ದ್ರೆ, ಆದ್ರೂ ಕಷ್ಟಪಟ್ಟು,
'ನೋಡ್ ತಿಮ್ಮಕ್ಕಾ, ಈ ಕಮಲ್ದ್ ಹೂನೋರು ಮತ್ತೆ ಎಲೆಕ್ಷನ್ನಿಗ್ ತಯಾರಾಗ್ತಾ ಇದಾರಂತೆ!' ಎಂದು ಅವಳ ಪ್ರತಿಕ್ರಿಯೆಗೆ ಕಾದೆ. ಅವಳೋ ತಂಬಾಕು ಜಗಿದೂ ಜಗಿದೂ ಕರಿಗಟ್ಟಿದ ಹಲ್ಲುಗಳನ್ನು ಒಮ್ಮೆ ತೋರಿಸಿ ನಕ್ಕಳೋ ವಿನಾ ಮತ್ತೇನೂ ಹೇಳೋಳ ಹಾಗೆ ಕಾಣಲಿಲ್ಲ ಅಂತ ಯೋಚಿಸ್ತಾ ಇರೋ ಹೊತ್ತಿಗೆ, ಒಂದ್ ಸರ್ತಿ ಬಾಯಲ್ಲಿನ ಜೊಲ್ಲನ್ನು ಪಿಚಕ್ಕನೆ ಉಗಿದು, ತುಟಿಯ ಬದಿಗೆ ಸೆರಗಿನ ತುದಿಯಿಂದ ಒರೆಸಿಕೊಳ್ಳುತ್ತಾ,
'ಆ ಬೋಳ್ ತಲಿ ಭೀಷ್ಮ ಇರೋಗಂಟಾ ಅಷ್ಟೇಯಾ...!' ಎಂದು ಎಲಡಿಕೆ ಚೀಲದೊಳಗೆ ಕೈ ಹಾಕಿ ಅದೆಲ್ಲೋ ಮೂಲೆ ಸೇರಿದ ಅಡಿಕೆಯ ತುಣುಕೊಂದನ್ನು ಹುಡುಕುತ್ತಿರುವವಳಂತೆ ಕಂಡುಬಂದಳು.
ನಾನು 'ಆಞ...' ಎಂದೆ.
ಮತ್ತೆ ಅವಳೇ ಮುಂದುವರೆಸಿ, '...ಏನಿಲ್ಲಾ, ನೀವೆಲ್ಲಾ ಶಾಲೆಗ್ ಹೋಗಿ ಓದಿರದು ದಂಡವೇ ಸೈ...ಆ ವಯ್ಯಾ ಯಾವತ್ತಾದ್ರೂ ತನ್ ಮಕ್ಳೂ-ಮರಿ ಅಂತ ಒಂದ್ ದಿನಾನಾದ್ರೂ ಯೋಚಿಸ್ದೇ ಇರೋ ದಿನಾ ಐತಾ...ಹಂಗಿದ್ ಮ್ಯಾಗೆ ಇವತ್ತು ದ್ಯಾವಸ್ಥಾನ್‌ದಾಗ್ ನಿಂತು ಅಧಿಕಾರ ಹಸ್ತಾಂತರದ ಬಗ್ಗೆ ನಾನು ತಲಿ ಕೆಡಿಸಿಕೊಂಡಿಲ್ಲಾ, ಯಾರ್ ಬಗ್ಗೇನೂ ಆಸಕ್ತೀ ಇಲ್ಲಾ ಅಂದ್ನಲಾ...ಅಷ್ಟರಾಗೆ ಗೊತ್ತಾಗಂಗಿಲ್ಲಾ ಏನೋ ದೊಡ್ಡ ಸಂಚು ನಡೆಸ್ಯಾನೇ ಅಂತ?' ಎಂದು ಏಕ್‌ದಂ ಉಮಾಶ್ರೀ ಡೈಲಾಗ್ ಎಸೆದು ಮೌನಿಯಾದಳು.
ನಾನು, 'ಅಲ್ಲಾ ತಿಮ್ಮಕ್ಕಾ...' ಎಂದು ಏನೋ ಹೇಳುವವನನ್ನು ತಡೆದು, '...ಹ್ಞಾ, ಅಲ್ಲಾನೂ ಇಲ್ಲಾ, ಬೆಲ್ಲಾನೂ ಇಲ್ಲಾ, ಧರಮ್ ಸಿಂಗನ್ನೇ ಕೇಳಿಕ್ಯಾ ಹೋಗ್ರೀ...' ಎಂದು ಹಿಂತಿರುಗಿ ನೋಡದೇ ಹೋಗೇ ಬಿಟ್ಟಳು. ನಾನೂ ನಂಜನೂ ಬಿಟ್ಟಬಾಯಿ ಬಿಟ್ಟು ಹಾಗೇ ಒಂದು ಕ್ಷಣ ನಿಂತು ಬಿಟ್ಟೆವು, ಸದ್ಯ ಮೇಷ್ಟ್ರು ಈ ಮಾತನ್ನು ಕೇಳಲಿಲ್ಲಾ ಅನ್ನೋ ಸಮಾಧಾನದ ಛಾಯೆ ನಂಜನ ಮುಖದ ಮೇಲೆ ಹರಿದಾಡಿದ ಹಾಗನ್ನಿಸಿತು.
Labels: ಧರಮ್
'ಹೋಗೀ ಹೋಗಿ ಎಲ್ಲ್ ಮುಗಿಯುತ್ತೋ ನಿನ್ ಹಾದಿ ಅಂತಂದ್ರೆ ತಿಪ್ಪೇಗುಂಡೀ ತಾವ ಅಂದಿದ್ನಂತೆ...' ಎಂದು ನಂಜ ಕತ್ತಲೆಯಲ್ಲಿ ಕತ್ತಿಯಾಡಿಸೋ ಎತ್ತಿನಬಾಲದ ಥರ ಒಂದು ಹೇಳಿಕೆ ಒಗೆದನೋ, ಬಳಿಯಲ್ಲೇ ಪೇಪರ್ ಓದುತ್ತಾ ನಿಂತಿದ್ದ ನನಗೆ ಯಾವ ಕಾನ್ಟೆಕ್ಸ್ಟ್‌ನಲ್ಲಿ ಇವನು ಈ ಮಾತನ್ನು ಹೇಳಿರಬೋದು ಎಂದು ಒಮ್ಮೆ ಯೋಚಿಸಿಕೊಳ್ಳುವಂತಾಯಿತು. ಸುತ್ಲೂ ಧೋಧೋ ಮಳೆ ಹೊಡೆದೂ ಹೊಡೆದೂ ಒಂಥರಾ ಎಲ್ಲಾ ಕಡೆ ಗಿಚಿಪಿಚಿ ಕೆಸರು ತುಂಬಿಕೊಂಡು ಮುಂದಿನವಾರ ಬರೋ ಶ್ರಾವಣ ಒಂದು ವಾರ ಮುಂಚೇನೇ ಬಂದ ಅನುಭವವಾಗತೊಡಗಿತ್ತು. ಕತ್ತು ತಿರುಗಿಸಿ ನೋಡಿದರೆ, ಶ್ರಾವಣಕ್ಕೆ ಒಪ್ಪುವ ಮುಖ ಮಾಡಿಕೊಂಡು ತವರಿನ ಹಾದಿ ಕಾದುಕೊಂಡು ಮನಸಿಲ್ಲದಿದ್ದರೂ ಮನಸಿದ್ದವರಂತೆ ಕೆಲಸದಲ್ಲಿ ಮಗ್ನಳಾಗಿದ್ದಳು ತಿಮ್ಮಕ್ಕ.
'ನಂಜಾ, ಬೆಳ್‌ಬೆಳಗ್ಗೆ ತಲೇ ತಿನ್ನಬ್ಯಾಡ...ಒಂಚೂರು ಬಿಡಿಸಿ ಹೇಳುವಂತವನಾಗು ಶಿವಾ...' ಎಂದು ನಾಟಕೀಯವಾಗಿ ಬೇಡಿಕೊಂಡೆನೋ, ಲಿಂಗನಮಕ್ಕಿ ಡ್ಯಾಮ್ ತುಂಬಿ ಕ್ರೆಸ್ಟ್ ಗೇಟ್ ಎತ್ತಿದಾಗ ಹೊರಡುವ ನೀರಿನ ರಭಸದಂತೆ ನಂಜನ ನುಡಿಮುತ್ತುಗಳು ಬಿದ್ದು ಓಡತೊಡಗಿದವು.
'ಅಲ್ಲಣ, ಈ ನನ್‌ಮಕ್ಳು, ನಮ್ ಕರ್ನಾಟ್ಕ ರಾಜ್ಯದಾಗೆ ಅಧಿಕಾರದ ಬಗ್ಗೆ ಮಾತಾಡೋದು ನ್ಯಾಯಾ ತಾನೇ?...' ಎಂದು ಅತ್ಲಾಗೂ ಇಲ್ಲದ, ಇತ್ಲಾಗೂ ಅಲ್ಲದ ಗೋಡೇ ಮೇಲಿನ ದೀಪದ ಬೆಳಕಿನ ಕಿರಣದ ಹಾಗೆ ಒಂದು ಪ್ರಶ್ನೆಯಂತಿರುವ ಪ್ರಶ್ನೆಯನ್ನು ಎತ್ತಿ ನನ್ನ ಮೇಲೇ ಎತ್ತಿ ಬಿಸಾಕೋದೇ? ಹೇಳೀ ಕೇಳಿ ಗೋಡೇ ಮೇಲಿನ ದೀಪಾ ಹುಶಾರಾಗಿರಬೇಕು ಎಂದುಕೊಂಡು, 'ಸರಿ, ಏನೀಗ?' ಎಂದೆ.
'ಅದೇ ನಾನ್ ಹೇಳ್ತಾ ಇರೋದು, ಇವ್ರು ಹೊಡಕಣದು ಇರೋದೇಯಾ, ಹೋಗೀ ಹೋಗೀ ಆ ಡೆಲ್ಲಿವಮ್ಮಂಗ್ ಯಾಕ್ ಗಂಟ್ ಬಿಳ್ತಾರೇಂತಾ? ಆ ಸದಾನಂದ್ ಗೌಡ್ರು ಕೊಟ್ಟ ಹೇಳ್ಕೆ ಕೇಳ್ಳಿಲ್ಲಾ...ಈ ತಾಯ್‌ಗ್ಗಂಡ್ರು ನಮ್ ರಾಜ್ಯದಗೆ ಹೊಡೆದಾಕ್ಯಣೋ ಹೊತ್ಗೆ ಲೋಕಸಭೇ ಯಾಕ್ ವಿಸರ್ಜಿಸ್‌ಬಕು? ನಮ್ ರಾಜ್ಯದೊಳಗೆ ನುಸುಳ್ತಾ ಇರೋ ಕಮ್ಮ್ಯೂನಿಸಮ್ಮನ್ನ ಹಿಡಿತದಗೆ ಇಟ್ಟುಕೊಣಾಕ್ ಆಗ್ದವರು ದೇಶದಲ್ಲಿಂದ್ಲೇ ಕಮ್ಮ್ಯೂನಿಸಮ್ಮನ್ನ ಓಡುಸ್ತಾರಂತೆ...ಅದೇನೋ ಹೇಳ್ತಾರಲ್ಲ್ ತಮ್ಮ್ ಎಲೇಲಿ ಬಿದ್ದ ನೊಣಾ ಅಂತಾ...ಹಂಗಾಯ್ತು ಇವರುಗಳ ಕಥೆ...' ಎಂದು ಅವನು ಉಸಿರು ಬಿಟ್ಟು ಉಸಿರೆಳೆದುಕೊಂಡು ನನ್ನ ಕಡೆ ನೋಡುವಷ್ಟರಲ್ಲಿ, ನಾನು ಅವನ ಇಂಗಿತವನ್ನರಿತೂ ಏನು ಉತ್ತರಿಸಲಿ ಎಂದು ನೆಲ ನೋಡುತ್ತಲೇ ಮುಗಿಲನ್ನು ಕಾಣುವಷ್ಟರಲ್ಲಿ ಮೇಷ್ಟ್ರು ದರ್ಶನವಾಯಿತೋ, ಸದ್ಯ ಎಂದು ದೊಡ್ಡ ಉಸಿರೊಂದನ್ನು ಬಿಟ್ಟೆ.
'ಅದೇನೋ ಎಲೇಲಿ ಬಿದ್ದ ನೊಣಾ ಅಂತ ಕೇಳುಸ್ತು, ಏನ್ಲೇ ನಂಜ ಬೆಳ್ಳಂಬೆಳಗ್ಗೆ ಶುರು ಹಚ್ಚಿಕೊಂಡಿದಿಯಾ, ತೀರ್ಥ ತಗೊಂಡಿದಿಯೋ ಹೆಂಗೆ?' ಎಂದು ಅವನ ಹತ್ತಿರ ಹೋಗಿ ಮೂಸಿ ನೋಡುವರಂತೆ ಕಂಡುಬಂದರು. ಭಾನುವಾರ ಬೆಳಗ್ಗೆ ಬಿಳೀ ಬಣ್ಣದ ಕುರ್ತಾ ಪಾಯಜಾಮ ತೊಟ್ಟುಕೊಂಡು ಯಾವಾಗ್ಲೂ ಬಿಳಿ ಅಂಗೀ ಹಾಕ್ಕೊಂಡಿರೋ ಎಡಿಯೂರಪ್ಪನವರ ತಮ್ಮನ ಹಾಗೆ ಕಂಡುಬಂದರು.
ನಾನೆಂದೆ, 'ಏನಿಲ್ಲ, ಮೇಷ್ಟ್ರೆ. ಇವ್ನು ಆ ಸದಾನಂದಗೌಡ್ರ ಹೇಳ್ಕೆ ನೋಡ್ಕ್ಯಂಡು ಆ ಡೆಲ್ಲೀವಮ್ಮನ ಪರವಹಿಸಿ ಮಾತಾಡ್ತಿದ್ದ...' ಎಂದು ಉರಿಯೋ ಬೆಂಕಿಗೆ ದರಲೆ ಹಾಕಿದಂತೆ ಮಾಡಿ ಹಿಂದೆ ಸರಿದೆ. ಇತ್ತೀಚೆಗೆ ಡೆಲ್ಲೀನಲ್ಲಿ ಎರಡೆರಡು ಅಮ್ಮಂದಿರು ಸೇರಿಕೊಂಡು ಅದೇನೇನ್ ಕಿತಾಪತಿ ನಡೆಸ್ಯಾರೋ ಅಂತ ಮೇಷ್ಟ್ರು ಜ್ಯೂನಿಯರ್ ರಿಸರ್ಚ್ ಫೆಲ್ಲೋ ಥರ ಅಬ್ಸ್‌ಟ್ರ್ಯಾಕ್ಟ್‌ಗಳಲ್ಲಿ ಮೈಮರೆತು ತಲೆಕೆಡಿಸಿಕೊಂಡಿರೋ ವಿಷ್ಯಾ ಹೊಸತೇನೂ ಅಲ್ಲ.
'ಲೇ ನಂಜ, ರಾಜ್ಯ ರಾಜ್‌ಕಾರ್ಣಾನೇ ಅರಿದಿರೋ ನೀನು ಇನ್ನು ಡೆಲ್ಲೀ ವಿಷ್ಯಾ ಮಾತಾಡ್ತಿಯೇನಲೇ...' ಎಂದು ನಂಜನ ರೂಪದಲ್ಲಿ ಸದಾನಂದ ಗೌಡ್ರುನ್ನೇ ಹೆದರ್ಸೋರ ಹಾಗೆ ಮೇಷ್ಟ್ರು ಒಂದು ಧಮಕಿ ಹಾಕಿದ್ರೋ, ನಂಜನ ಮುಖ ಮ್ಲಾನವಾಯಿತು, '...ನೋಡೋ, ಆ ಸದಾನಂದ್ ಗೌಡ್ರುಗೆ ಹೋಗ್ ಹೇಳು... ಈ ಯಡಿಯೂರಪ್ಪಾ ಸಿಎಮ್ ಆಗಂಗಿಲ್ಲಾ, ಅದೇನ್ ಮಾಡಕಂತೀರೋ ಮಾಡಿಕಳ್ಳೀ ಅಂತ...ಅದೂ ಹೋಗೀ ಹೋಗೀ ಗೌಡ್ರು ಸವಾಸ...ಆ ಹೆಗ್ಡೆಗೇ ನೀರ್ ಕುಡಿಸಿದ ದೊಡ್ಡ ಮನುಷ್ಯರ ಸವಾಸ, ಧರ್ಮಸಿಂಗನ್ನೂ ಕೊಚ್ಚಿ ಬಿರಿಯಾನಿ ಮಾಡಿ ತಿಂದ ಜನ, ಇನ್ನು ಈ ಬಚ್ಚಾ ಯಡಿಯೂರಪ್ಪನ್ ಬಿಡ್ತಾರೇನೂ?'
ನಾನೋ, ನಂಜನೋ ಉತ್ತರಕೊಡಬೇಕು ಎಂದು ಬಾಯಿ ತೆರೀಬೇಕು, ಅಷ್ಟರಲ್ಲಿ ತಿಮ್ಮಕ್ಕ, 'ಮೇಷ್ಟ್ರೇ, ದೊಡ್ಡಗೌಡ್ರು ವಿಷ್ಯಾ ಯಾಕ್ರೀ ತರತೀರಿ ಈ ನಂಜನ ಮಿದುಳು ಇಲ್ಲದ ಮಾತಿನ ಮಧ್ಯೆ? ನಮ್ ಗೌಡ್ರು ವಿಷ್ಯಾ ಮಾತಾಡಕ್ ಬಂದ್ರೋ ನೋಡ್ರಿ ನಿಮ್ ಕಥಿ ಏನಾಕತಿ ಅಂತ?' ಎಂದು ಮೊನ್ನೆ ಮೊನ್ನೆ ಉದಯಾ ಟಿವಿಯಲ್ಲಿ ನಿರೂಪಕಿಯಾಗಿ ಕೆಲಸಕ್ಕೆ ಸೇರಿದ ಹುಡುಗಿಯಂತೆ ಬಳುಕಿ ಕತ್ತುಕೊಂಕಿಸಿ ನಂಜಕ್ಕ ಗೌಡರ ಪರವಹಿಸಿದಳು.
'ಏ ಸುಮ್ಕಿರಬೇ...ಹೋಗೀ ಹೋಗೀ ನಾನ್ ನಿಮ್ಮತ್ರ ಮಾತಾಡಕ್ ಹತ್ತೇನಲ್ಲ ಕೆಲ್ಸಾ ಬಗಸಾ ಬಿಟ್ಟು...' ಎಂದು ಹಣೆಯನ್ನು ನವಿರಾಗಿ ಹೊಡೆದುಕೊಂಡು ನಮ್ಮ ಉತ್ತರಕ್ಕೆ ಕಾಯದಂತೆ ಅದೇ ಬಂದ ಸಿಟಿಬಸ್ಸು ಜನರನ್ನು ತುಂಬಿಸಿಕೊಂಡು ಹೊರಟೋಗೋ ಹಾಗೇ ಹೊರಟೇ ಹೋದರು, ನಂಜನೂ-ನಾನೂ ಮುಖಮುಖ ನೋಡಿಕೊಂಡೆವು.