Friday, August 17, 2007

ಆ ಬೋಳ್‌ತಲಿ ಭೀಷ್ಮ ಇರೋಗಂಟಾ...ಅಷ್ಟೇಯಾ!

'ಅಲಾಲಲಾಲಾ, ನನ್ ಮಗ ಧರಮ್ಯಾ ಹೋಗೀ ಹೋಗೀ ದೊಡ್ಡ ಗೌಡ್ರುನ್ನ ಅದ್ಯಾವ್ದೋ ದ್ಯಾವಸ್ಥನದಲ್ಲಿ ಭೆಟ್ಟಿಯಾಗೋನಂತೆ ಗುರುವೇ!' ಎಂದು ನಂಜ ಗಿಡದ ಕಾಂಡಕ್ಕೆ ಒರಗಿಕೊಳ್ಳೋ ಕಂಬಳಿ ಹುಳುವಿನಂತೆ ನನಗೆ ತಗುಲಿಕೊಂಡ.

'ಅಲ್ಲಲೇ, ಭೇಟ್ಟಿ ಆಗಿಲ್ಲ, ಅವೆಲ್ಲ ಮೊದಲೇ ಹೊಂಚುಹಾಕಿದ ಅವತರಣಿಕೆ ಅಂತಾ ಇಬ್ರೂ ಹೇಳ್ಕೋ ಕೊಟ್ಟೋರಲಾ, ಅದಕ್ ಏನಂತಿ?' ಎಂದು ಎಲೆ ತಿಂದು ಅದರ ದಂಟನ್ನೂ ತಿನ್ನೋ ಕಂಬಳಿಹುಳುವಿನ ಪ್ರೇರಣೆಯಲ್ಲೇ ವಾಪಾಸು ತಿವಿದೆ.

'ಏ, ನೀವೊಂದು. ಒಳ್ಳೇ ಇಸ್ಕೂಲ್ ಹುಡ್ರು ಹೇಳ್ದಂಗ್ ಹೇಳ್ತೀರಲ್ಲಣಾ. ನಿಮಗ್ಗೊತ್ತಿಲ್ಲ ದೊಡ್ಡಗೌಡ್ರು ವಿಷ್ಯಾ, ಏನ್ ತಿಳಕಂಡೀರಿ ಅವ್ರು ಅಂದ್ರೆ?' ಎಂದು ನನ್ನನ್ನೇ ಭಂಡತನದಿಂದ ಪ್ರಶ್ನಿಸೋದೇ, ಇವನ್ದೇನಿದೆ ನೋಡೇ ಬಿಡೋಣ ಎಂದು ಮತ್ತೆ ಅವಲತ್ತಿಕೊಂಡೆ,

'ನಂಜಾ, ನಿನ್ ಬುದ್ಧೀ ಮಾತ್ರ ಬಲೀಲಿಲ್ಲ ಕಂಡ್ಲಾ. ಇಡೀ ದೇಶಕ್ಕೇ ಗೊತ್ತಲೇ ಅವ್ರು ಯಾರೂ ಅಂತ, ಆದ್ರೆ ಏನ್ ಮಾಡಗಿಂದಾರೋ? ಕನ್ನಡಪ್ರಭ, ಪ್ರಜಾವಾಣೀನ್ಯಾಗೆ ಬಂತಲ್ಲ, ಗೌಡ್ರೂ-ಧರಮ್ಮೂ ಮಾತಾಡಿಲ್ಲ ಅಂತ, ಇನ್ನೇನ್ ಮಾಡಂಗಿದಿ ಅದನ್ನ ತಗಂಡು?'

ನಂಜ ಒಂದ್ಸರ್ತಿ ಯೋಚ್ನೇ ಮಾಡೋನ್ ಹಾಗೆ ಒಂದು ಭಂಗಿಯಲ್ಲಿ ನಿಂತವನು ಮುನಿಯನ ಮಾದರಿ ಸಿನಿಮಾದ ಶಂಕರ್‌ನಾಗ್ ಕಂಡಂಗೆ ಕಂಡುಬಂದ, ಅಷ್ಟೊತ್ತಿಗೆ ತಿಮ್ಮಕ್ಕನೂ ನಮ್ಮ ಜೊತೆ ಸೇರಿಕೊಂಡಳು.

ನಾನೆಂದೆ, 'ಏನ್ ತಿಮ್ಮಕ್ಕಾ, ಎತ್ಲಾಗ್ ಹೊಂಟೀ?'

ತಿಮ್ಮಕ್ಕ, 'ಸುಮ್ಕಿರಣ್ಣಾ, ನಮ್ದೇನೈತಿ ದೇಶಾ ಆಳೋ ವಿಷ್ಯಾ? ಎಲ್ಲಾನೂ ದೊಡ್ಡೋರ್ದೇ ನಡೀತಾ ಇರೋವಾಗ?' ಎಂದು ಅಡ್ಡಗೋಡೆ ಮೇಲೆ ದೀಪಾ ಇಟ್ಟಳು. ಈ ಮೇಷ್ಟ್ರು ಸವಾಸ ಜಾಸ್ತಿ ಆಯ್ತು ಈ ನನ್ ಮಕ್ಳಿಗೆ ಯಾವ್ದುನ್ ಹೇಳಿದ್ರೂ ಬಿಡಿಸಿ ಹೇಳಲ್ಲ...ಅವಳು ದೊಡ್ಡೋರ್ದು ಅಂದಿದ್ದು ದೊಡ್ಡಗೌಡ್ರ ವಿಷ್ಯಾನೇನೋ ಅಂತ ಒಂದ್ಸರ್ತಿ ಅನುಮಾನ ಬಂತು, ಆದ್ರೂ ನಾನ್ಯಾಕೆ ಹೇಳ್ಲಿ ಅಂತ ಸುಮ್ಮನಿದ್ದ್ರೆ, ಆದ್ರೂ ಕಷ್ಟಪಟ್ಟು,

'ನೋಡ್ ತಿಮ್ಮಕ್ಕಾ, ಈ ಕಮಲ್ದ್ ಹೂನೋರು ಮತ್ತೆ ಎಲೆಕ್ಷನ್ನಿಗ್ ತಯಾರಾಗ್ತಾ ಇದಾರಂತೆ!' ಎಂದು ಅವಳ ಪ್ರತಿಕ್ರಿಯೆಗೆ ಕಾದೆ. ಅವಳೋ ತಂಬಾಕು ಜಗಿದೂ ಜಗಿದೂ ಕರಿಗಟ್ಟಿದ ಹಲ್ಲುಗಳನ್ನು ಒಮ್ಮೆ ತೋರಿಸಿ ನಕ್ಕಳೋ ವಿನಾ ಮತ್ತೇನೂ ಹೇಳೋಳ ಹಾಗೆ ಕಾಣಲಿಲ್ಲ ಅಂತ ಯೋಚಿಸ್ತಾ ಇರೋ ಹೊತ್ತಿಗೆ, ಒಂದ್ ಸರ್ತಿ ಬಾಯಲ್ಲಿನ ಜೊಲ್ಲನ್ನು ಪಿಚಕ್ಕನೆ ಉಗಿದು, ತುಟಿಯ ಬದಿಗೆ ಸೆರಗಿನ ತುದಿಯಿಂದ ಒರೆಸಿಕೊಳ್ಳುತ್ತಾ,

'ಆ ಬೋಳ್ ತಲಿ ಭೀಷ್ಮ ಇರೋಗಂಟಾ ಅಷ್ಟೇಯಾ...!' ಎಂದು ಎಲಡಿಕೆ ಚೀಲದೊಳಗೆ ಕೈ ಹಾಕಿ ಅದೆಲ್ಲೋ ಮೂಲೆ ಸೇರಿದ ಅಡಿಕೆಯ ತುಣುಕೊಂದನ್ನು ಹುಡುಕುತ್ತಿರುವವಳಂತೆ ಕಂಡುಬಂದಳು.

ನಾನು 'ಆಞ...' ಎಂದೆ.

ಮತ್ತೆ ಅವಳೇ ಮುಂದುವರೆಸಿ, '...ಏನಿಲ್ಲಾ, ನೀವೆಲ್ಲಾ ಶಾಲೆಗ್ ಹೋಗಿ ಓದಿರದು ದಂಡವೇ ಸೈ...ಆ ವಯ್ಯಾ ಯಾವತ್ತಾದ್ರೂ ತನ್ ಮಕ್ಳೂ-ಮರಿ ಅಂತ ಒಂದ್ ದಿನಾನಾದ್ರೂ ಯೋಚಿಸ್ದೇ ಇರೋ ದಿನಾ ಐತಾ...ಹಂಗಿದ್ ಮ್ಯಾಗೆ ಇವತ್ತು ದ್ಯಾವಸ್ಥಾನ್‌ದಾಗ್ ನಿಂತು ಅಧಿಕಾರ ಹಸ್ತಾಂತರದ ಬಗ್ಗೆ ನಾನು ತಲಿ ಕೆಡಿಸಿಕೊಂಡಿಲ್ಲಾ, ಯಾರ್ ಬಗ್ಗೇನೂ ಆಸಕ್ತೀ ಇಲ್ಲಾ ಅಂದ್ನಲಾ...ಅಷ್ಟರಾಗೆ ಗೊತ್ತಾಗಂಗಿಲ್ಲಾ ಏನೋ ದೊಡ್ಡ ಸಂಚು ನಡೆಸ್ಯಾನೇ ಅಂತ?' ಎಂದು ಏಕ್‌ದಂ ಉಮಾಶ್ರೀ ಡೈಲಾಗ್ ಎಸೆದು ಮೌನಿಯಾದಳು.

ನಾನು, 'ಅಲ್ಲಾ ತಿಮ್ಮಕ್ಕಾ...' ಎಂದು ಏನೋ ಹೇಳುವವನನ್ನು ತಡೆದು, '...ಹ್ಞಾ, ಅಲ್ಲಾನೂ ಇಲ್ಲಾ, ಬೆಲ್ಲಾನೂ ಇಲ್ಲಾ, ಧರಮ್ ಸಿಂಗನ್ನೇ ಕೇಳಿಕ್ಯಾ ಹೋಗ್ರೀ...' ಎಂದು ಹಿಂತಿರುಗಿ ನೋಡದೇ ಹೋಗೇ ಬಿಟ್ಟಳು. ನಾನೂ ನಂಜನೂ ಬಿಟ್ಟಬಾಯಿ ಬಿಟ್ಟು ಹಾಗೇ ಒಂದು ಕ್ಷಣ ನಿಂತು ಬಿಟ್ಟೆವು, ಸದ್ಯ ಮೇಷ್ಟ್ರು ಈ ಮಾತನ್ನು ಕೇಳಲಿಲ್ಲಾ ಅನ್ನೋ ಸಮಾಧಾನದ ಛಾಯೆ ನಂಜನ ಮುಖದ ಮೇಲೆ ಹರಿದಾಡಿದ ಹಾಗನ್ನಿಸಿತು.

Labels:


# posted by Satish : 12:42 pm
Comments:
ಕಾಳಣ್ಣ,

ಓ ಬೋಳ್ ತಲಿ ಭೀಷ್ಮ ಗೌಡ್ರು ಯಾವ ದ್ಯಾವಸ್ಥನದಲ್ಲಿ ಆ ಧರಮ್ ಭೆಟ್ಟಿಯಾಗಿದ್ದಂತೆ ? ಪಾಪ ಯಡ್ಡಿಗೆ ಶಾನೇ ಜ್ವರ ಬಂದಿರಬೇಕು
 
Post a Comment



<< Home

This page is powered by Blogger. Isn't yours?

Links
Archives