Thursday, September 27, 2007

ಹತ್ತ್ ಸಾವ್ರ ಕೋಟಿ ರುಪಾಯಲ್ಲಿ ನೀಗೋ ದೇಶದ ಬಡತನ...

ಕಾಲಚಕ್ರದ ಐವತ್ತನೇ ಬರಹ!

’ಎಂಥಾ ಬಂಗಾರ್‌ದಂತಾ ಮನುಷ್ಯಾ!...’ ಎಂದು ಮೇಷ್ಟ್ರು ಉದ್ಗಾರ ತೆಗೀತಾ ಇದ್ದ ಹಾಗೆ ಯಾರ ಬಗ್ಗೆ ಹೇಳ್ತಾ ಇರಬೋದು ಈ ಮಾತ್ನಾ ಎಂದು ನಾನೂ-ನಂಜನೂ ಮುಖ ಮುಖ ನೋಡಿಕೊಂಡೆವು. ರಾಜ್‌ಕುಮಾರ್ ಬಗ್ಗೆ ಇರಬಹುದೇನೋ ಅನ್ನೋದು ನನ್ನ ಊಹೆ ಆಗಿದ್ರೆ ಆ ನಂಜನ ತಲೆಯಲ್ಲಿ ಅದ್ಯಾವ್ ಲೆಕ್ಕಾ ಓಡ್ತಿತ್ತೋ ಆ ದೇವನೇ ಬಲ್ಲ.

ಮೇಷ್ಟ್ರು ಬಂಗಾರದ ಮನುಷ್ಯನ ಕಥೆಯನ್ನು ಮುಂದುವರಿಸುತ್ತಾರೇನೋ ಎಂದು ಬಕಪಕ್ಷಿಗಳಂತೆ ಬಾಯಿ ಬಿಟ್ಟುಕೊಂಡು ಕಾಯ್ತಾ ಇದ್ದ ನನಗೂ-ನಂಜನಿಗೂ ನಿರಾಶೆಯಾಗುವಂತೆ, ಅತ್ಲಾಗೂ ಇಲ್ಲಾ ಇತ್ಲಾಗೂ ಇಲ್ಲ ಅಂತಾರಲ್ಲ ಹಂಗೆ ಮತ್ತೊಂದು ಸ್ಟೇಟ್‌ಮೆಂಟ್ ಕೊಟ್ಟರು, ’ಇನ್ಯಾಕ್ ತಡಾ ಮತ್ತೆ? ನಮ್ ದೇಶದ ಬಡವರ ಸಮಸ್ಯೆಗಳು ಪರಿಹಾರವಾದಂತೆಯೇ!’

ಈಗಷ್ಟೇ ಪ್ರಜಾವಾಣೀ ಓದ್ತಾ ಇರೋ ಮೇಷ್ಟ್ರಿಗೇನಾದ್ರೂ ಅರಳೂ-ಮರುಳೂ ಶುರುವಾಯ್ತೇನೋ ಅಂತ ನನ್ನ ದಿಗಿಲಾದ್ರೆ, ನನಗಿಂತ ಒಂದು ಹೆಜ್ಜೆ ಮುಂದೆ ಇರೋ ನಂಜ, ಮೇಷ್ಟ್ರು ತಾವ್ ಯಾವ ಸುದ್ದೀ ಓದ್ತಾ ಇರೋಬೋದು ಅನ್ನೋ ಕುತೂಹಲದಿಂದ ಗೋಣನ್ನು ಎತ್ತಿ ನೋಡಿದ್ರೂ ಉದ್ದವಾದ ಆಳು ಮೇಷ್ಟ್ರು ಕೈಯಿನ ಪೇಪರಿನ ತುಣುಕು ಕುಳಿತ ಕುಬ್ಜ ನಂಜನಿಗೆ ಆಕಾಶದ ಬೆಳ್ಳಿ ಮೋಡದಂತಾಗಿತ್ತು, ಬರೀ ಹಿಂದಿನಿಂದ ಕಾಣುತ್ತಿದ್ದ ಮುಖಪುಟ ಹಾಗೂ ಕ್ರೀಡಾಪುಟ ಕಾಣುತ್ತಿತ್ತೇ ವಿನಾ ಮತ್ತೇನೂ ಕಾಣಿಸದೇ ಕತ್ತಲಲ್ಲಿ ಚಿಮಣಿ ಬುಡ್ಡಿ ಹುಡುಕುವಂತಾಗಿತ್ತು ನಮ್ಮ ಸ್ಥಿತಿ.

ಎಲ್ಲವನ್ನೂ ಬಲ್ಲ ಉದ್ದಾಮ ಕೋಡೀಹಳ್ಳೀ ಮೇಷ್ಟ್ರಿಗೆ ನಮ್ ಪರಿಸ್ಥಿತೀನೂ ತಿಳೀಲಿಲ್ಲ ಅಂದ್ರೆ ಹೆಂಗೆ, ಅವರೇ ತಮ್ಮ ಈ ಹಿಂದಿನ ವಾಕ್ಯಗಳಿಗೆ ಸಮಜಾಯಿಷಿ ನೀಡಿದರು, ’ಅಲ್‌ರಲೇ, ದೊಡ್ಡ್ ಗೌಡ್ರು ಸ್ಟೇಟ್‌ಮೆಂಟ್ ಕೊಟ್ಟೋರೆ ನೋಡ್ರಿಲ್ಲಿ, ನನ್ ತಾವ ಹತ್ತ್ ಸಾವಿರ ಕೋಟೀ ರುಪಾಯ್ ಏನಾದ್ರೂ ಇದ್ರೆ ಅದನ್ನ ಸರಕಾರ ಮುಟ್ಟುಗೋಲು ಹಾಕ್ಕೋಂಡು ಬಡವ್ರನ್ನ ಉದ್ದಾರ ಮಾಡ್ಲೀ ಅಂತ...ನೋಡ್ರಿಲ್ಲಿ’, ಎಂದು ಪೇಪರಿನ ಒಂದು ಬದಿಯನ್ನು ನಮ್ಮ ಮುಂದೆ ಹಿಡಿದಂತೆ ಮಾಡಿ ಹಿಂದೆ ತೆಗೆದುಕೊಂಡರು.

ನಂಜ, ’ಆಞ, ಮೇಷ್ಟ್ರೆ ಅವ್ರೂ-ಇವ್ರೂ ಅಧಿಕಾರಕ್ಕೋಸ್ಕರ ಹೊಡಕಳೋ ಸಂದರ್ಭದಾಗ ಇದೆಂತ ಮಾತ್ರೀ ಅವ್ರುದ್ದೂ ಅಂತೀನಿ?’ ಎಂದು ಸಮಜಾಯಿಷಿ ಕೇಳಿದ್ದು ಮೇಷ್ಟ್ರಿಗೆ ಕ್ಲಾಸು ತೆಗೆದುಕೊಂಡು ಕೊರೆಯಲು ಒಳ್ಳೇ ಅನುಕೂಲ ಮಾಡಿಕೊಟ್ಟಂತಾಯ್ತು.

ಮೇಷ್ಟ್ರು, ’ನಂಜಾ, ನಿನಗ್ಗೊತ್ತಿಲ್ಲ. ಮಕ್ಳೂ ಮರಿ ವಿಷ್ಯದಾಗ ಮಾತ್ರ ಆ ವಯ್ಯಾ ಸಿಂಹಿಣೀ ಕಣೋ, ತನ್ ಮಗನ ಮ್ಯಾಲೆ ಯಾರೋ ಆರೋಪ ಹೊರಿಸಿ ಗೂಬೆ ಕೂರಿಸ್ತಾರೆ ಅಂತ ಗೊತ್ತಾದ ತಕ್ಷಣ ಕಾರ್ಯಾಚರಣೆಗೆ ಶುರು ಹಚ್ಚಿಕೊಂಡೋರೆ, ಅದೂ ಅಂತಿಂಥಾ ಆರೋಪ ಅಲ್ಲಪ್ಪಾ, ಕೊಲೇ, ಕೋಲೇ ಮಾಡಿರೋದು...ಅಲ್ಲೀ ಇಲ್ಲೀ ಗಣಿಗಾರಿಕೆ ಮಾಡೀ ಮಾಡೀ ದುಡ್ಡು ಸೇರಿಸಿದ್ದು ಸಾಲ್ದು ಅಂತ ಈಗ ದೊಡ್ಡ ಆರೋಪದ ಹೊರೀನೇ ಹೊರಿಸ್ಯಾರ್ ನೋಡು...’ ಎಂದು ಇನ್ನೂ ರಾಗ ಎಳೆಯುತ್ತಿದ್ದರೇನೋ, ಅಷ್ಟರಲ್ಲಿ ನಾನು ಮಧ್ಯೆ ಬಾಯಿ ಹಾಕಿದೆ,

’ಮೇಷ್ಟ್ರೇ, ಈ ವಿಷ್ಯಾನ ನಾನು ನಿಮ್ಹತ್ರ ಕೇಳ್‌ಬೇಕು ಅಂದುಕೊಂಡಿದ್ದೆ - ದೊಡ್ಡಗೌಡ್ರು ಕುಸಾಗೆ ಬಹಳ ತಾಳ್ಮೆ ಇದೇ ಅಂತ ಅಂದ್ರಂತಲ್ಲ, ನಿಜವೇ?’

’ಹೋಗ್ರೀ ನೀವೊಂದು, ಧರಮ್ ಸಿಂಗ್ ಸರ್ಕಾರ ಇನ್ನೂ ನೆಟ್ಟಗೆ ಕಣ್ಣ್ ಬಿಡೋ ಮೊದ್ಲೇ ರಿಸಾರ್ಟಿನೊಳಗೆ ಸೇರ್ಕೊಂಡು ಕುದುರೀ ವ್ಯಾಪಾರ ಕುದುರ್ಸಿ ಅದ್ಯಾವ್ದೋ ಅರ್ಜೆಂಟಿನೊಳಗ ಸರ್ಕಾರ ರಚಿಸಿರೋ ಮಂದೀಗೆ ಭಾಳಾ ತಾಳ್ಮೆ ಇದೇ ಅಂತ ಯಾವನ್ ಅಂತಾನ್ರೀ?’ ಎಂದು ನನ್ನನ್ನೇ ಮರು ಪ್ರಶ್ನೆ ಹಾಕಿದ್ರು, ನಂಜ ರಕ್ಷಣೆಗೆ ಬಂದ,

’ನಿಮಗ್ಗೊತ್ತಾಗಲ್ಲಣ್ಣೋ, ದೊಡ್ಡ್ ಗೌಡ್ರು ತಾವೇ ಅಧಿಕಾರ ಹಸ್ತಾಂತರ ಮಾಡೋ ಅಥಾರಿಟಿ ಮನ್ಷಾ ಅಂತ ತಮ್ಮಷ್ಟಕ್ ತಾವೇ ಸ್ವಯಂಘೋಷ್ಣೇ ಮಾಡ್ಕೊಂಡು ಕೂತಿರೋ ಹೊತ್ಗೆ ಕುಸಾಗಷ್ಟೇ ಅಲ್ಲಾ ಯಡ್ಡೀ ಸಾವ್‌ಕಾರ್ರಿಗೂ ತಾಳ್ಮೆ ಅನ್ನೋ ಮುಗಿದು ಹೋಗೈತಂತೆ!’

ಮೇಷ್ಟ್ರು, ’ಹಂಗಲ್ಲ, ಮಗಾ ಚೆಂದಾಗಿರ್‌ಬೇಕು, ಅನ್ನೋ ಆಸೆ ದೊಡ್ಡ್ ಗೌಡ್ರುದ್ದು ಯಾವನ್ ಬ್ಯಾಡಾ ಅಂದ...ಹೇಳಿದ್ ಮಾತಿಗ್ ತಕ್ಕಂತೆ ಅಧಿಕಾರ ಹಸ್ತಾಂತರ ಮಾಡಿ ಕೊಡಗಿದ್ದಿದ್ರೆ ಯಾವ ಆರೋಪಾನೂ ಬರ್ತಿರ್ಲಿಲ್ಲಾ, ಈಗ ನೋಡ್ರಿ ಹೆಂಗಾತು’.

ನಾನೆಂದೆ, ’ಮೇಷ್ಟ್ರೇ, ನಿಮಗನ್ಸತ್ತಾ ಅಧಿಕಾರ ಬಿಟ್ಟ್ ಕೊಡ್ತಾರೇ ಅಂತ?’

ನಾನೇನೋ ಪಾಪದ ಪ್ರಶ್ನೆ ಕೇಳ್ದೆ ಅಂತ ಮೇಷ್ಟೃ ನೇರವಾಗಿ ಉತ್ರಾ ಕೊಡ್ತಾರೇ ಅಂತ ಯೋಚಿಸ್ತಾ ಇದ್ರೆ, ’ಥೂ ನಿಮ್ಮಾ ಅಷ್ಟೂ ಗೊತ್ತಾಗಂಗಿಲ್ಲೇನ್ರಿ ನಿಮಗೆ, ಅಲ್ಲೀ-ಇಲ್ಲೀ ಇಷ್ಟೊಂದ್ ಓದ್ತಾ ಇರ್ತೀರಿ!’ ಎಂದು ಅಡ್ಡಗೋಡೇ ಮೇಲೆ ದೀಪಾ ಇಟ್ರೋ, ನಾನೂ-ನಂಜನೂ ಆ ಮಾತಿನ ಗೂಢಾರ್ಥ ಹುಡುಕ್ಕೊಂಡು ನಮ್ಮ ನಮ್ಮಲ್ಲೇ ಮುಳುಗಿ ಹೋದೆವು.

Labels:

# posted by Satish : 10:51 am  2 comments

Friday, September 07, 2007

ದೊಡ್ಡಬಳ್ಳಾಪುರ ರಸ್ತೆಯಲ್ಲಿರೋ ರಿಸಾರ್ಟೇ ಬೆಷ್ಟು!

’ಈ ತಿಂಗಳಿನ್ಯಾಗೆ ಯಾವ್ ರಿಸಾರ್ಟ್ ಚೆನ್ನಾಗಿರ್ತತಿ?’ ಎಂದು ಮೇಷ್ಟ್ರು ದೊಡ್ಡದೊಂದು ಪ್ರಶ್ನೆಯನ್ನು ಗಾಳಿಯನ್ನು ಕುರಿತು ಕೇಳಿದ್ದು ಎನ್ನುವಷ್ಟೇ ಸಹಜವಾಗಿ ಮುಖವನ್ನು ಮೇಲೆ ಮಾಡಿಕೊಂಡು ನೋಡುತ್ತಾ ಕೇಳಿದರೋ ನಾನೂ-ನಂಜನೂ ಒಬ್ಬೊರಿಗೊಬ್ಬರು ಮುಖ ನೋಡಿಕೊಂಡೆವು. ಮೇಷ್ಟ್ರು ತಮ್ಮ ಮೂಗಿನಿಂದಿಳಿಯುತ್ತಿದ್ದ ಕಪ್ಪು ಕಟ್ಟಿನ ಕನ್ನಡಕವನ್ನ ಮೇಲೇರಿಸಿಕೊಂಡು ಮತ್ತೆ ಇವತ್ತಿನ ಪ್ರಜಾವಾಣಿಯನ್ನು ಓದುವುದರಲ್ಲಿ ತಲ್ಲೀನರಾದರು.

ಸ್ವಲ್ಪ ಹೊತ್ತು ಬಿಟ್ಟು ಮೇಷ್ಟ್ರು ಮತ್ತೇನೋ ಹೊಳೆದವರಂತೆ ’ದೊಡ್ಡಬಳ್ಳಾಪುರ ರಸ್ತೆಯಲ್ಲಿರೋ ರಿಸಾರ್ಟೇ ಬೆಷ್ಟು!’ ಎಂದು ಯಾವುದೋ ಮುಖ್ಯ ಕಾಗದ ಪತ್ರಗಳಿಗೆ ಮೊಹರು ಒತ್ತುವ ತಹಶೀಲ್ದಾರರ ಧ್ವನಿಯಲ್ಲಿ ಹೇಳಿಕೆ ಹೊರಡಿಸಿದರೋ ನಂಜ ತಲೆ ತುರಿಸಿಕೊಳ್ಳುತ್ತಲೇ ಉರಿದುಕೊಂಡ,

’ಏ, ಏನ್ರೀ ಸರ್ರಾ ನೀವು? ನೆಟ್ಟಗೆ ಅದೇನೈತಿ ಅಂತ ಹೇಳ್ ಬಾರ್ದಾ...ನೀವೆಲ್ಲಿಗ್ ಹೊಂಟೀರ್ರೀ ರಿಸಾರ್ಟೂ-ಪಸಾರ್ಟೂ ಕಟ್ಟಿಕ್ಯಂಡೂ, ಅದೂ ಈ ವಯಸ್ಸಿನ್ಯಾಗಾs...' ಎಂದು ಬರುತ್ತಿದ್ದ ನಗುವನ್ನು ತಡೆದುಕೊಳ್ಳಲು ಪ್ರಯತ್ನಿಸಿದರೂ ತುಟಿ ಅಂಚಿನಲ್ಲಿ ಮುಸುಮುಸು ನಕ್ಕೇ ಬಿಟ್ಟ. ’ತಗಳಪ್ಪಾ, ಇವರ್ದು ಶುರುವಾಯ್ತಲ್ಲಾ ಬೆಳಬೆಳಗ್ಗೆ...’ ಎಂದು ನನ್ನ ಮನಸ್ಸಿಗೆ ಅನ್ನಿಸಿದರೂ ಐಸ್ ಕ್ಯಾಂಡಿಯನ್ನು ನೆಕ್ಕೋ ಹುಡುಗನ ಹಾಗೆ ಬಾಯಿ ತೆರೆದುಕೊಂಡು ಮುಂದೇನಾದೀತೂ ಎಂದು ಕಾಯತೊಡಗಿದೆ.

ಮೇಷ್ಟ್ರು ನಂಜನನ್ನು ಕುರಿತು, ’ಲೇ, ಮಂಗ್ಯಾನಂಗ್ ಆಡ್ ಬ್ಯಾಡಾ...ರಿಸಾರ್ಟಿನೊಳಗ ಏನೇನಾಕತಿ ಅಂತ ಗೊತ್ತನು? ಹಿಂದ ಈ ಕುಸಾ ಪಡೆ, ಸಿದ್ದೂ ಪಡೇ ಇವ್ರೆಲ್ಲಾ ರಿಸಾರ್ಟಿನೊಳಗ ಹೊಕ್ಕಂಡಾ ರಾಜಕೀಯ ಮಾಡಿದ್ದು ನೆನಪೈತೋ ಇಲ್ಲೋ, ಅದಕ್ಕೇ ಈ ಸರ್ತಿ ಯಾವ್ ರಿಸಾರ್ಟಿನೊಳಗೆ ಹೊಕ್ಕಂತಾರಾ ಅಂತ ಯೋಚ್ನೆ ಅಷ್ಟೇ, ಇನ್ನೇನಿಲ್ಲಾ’.

ಇನ್ನೇನು ಬಾಯಿ ತೆಗೆಯಬೇಕು ಎನ್ನುತ್ತಿದ್ದ ನಂಜನನ್ನ ತಡೆದು, ನನಗೆ ಸ್ವಲ್ಪ ನಿರಾಸೆಯಾದಂತೆನಿಸಿದರೂ ತೋರಿಸಿಕೊಳ್ಳದೇ, ’ಮೇಷ್ಟ್ರೇ, ನೀವೊಂದು ಆಗ ಧರಮ್ ಇಳಿಸೋ ಗರಂ ಇತ್ತು ಕುಸಾ ತಲೋ ಒಳಗೆ, ಅದಕ್ಕೇ ಆ ಷಡ್‌ಯಂತ್ರ ಕಟ್ಟಿದ್ರು, ಅಪ್ಪಾ-ಮಗ ಬ್ಯಾರೇ ಬ್ಯಾರೇ ಅಂತ ತೋರಿಸಿಕೊಟ್ಟಿದ್ರು, ಈಗ ಹಂಗೇನಿಲ್ಲಲ ಪರಿಸ್ಥಿತಿ, ಅವ್ರ ವಿರುದ್ಧ ಇರೋರ್ ಯಾರ್ರೀ, ಈ ಯಡ್ಡಿ ಮಕ್ಕಕ್ಕ ಮಂಗ್ಳಾರ್ತಿ ಬೆಳಗೋದು ಬಾಳಾ ದೊಡ್ಡ ವಿಷ್ಯಾ ಅಲ್ಲ ಬಿಡ್ರಿ’ ಎಂದೆ.

ನಂಜ ಇದ್ದೋನು, ’ಹಂಗಲ್ಲಣ್ಣೋ, ಮೇಷ್ಟ್ರು ಹೇಳೋದು ನಿಜ ಐತಿ, ಆದ್ರೆ ಮತ್ತ ರಿಸಾರ್ಟಿನೊಳಗೆ ಯಾಕ್ ಹೊಕ್ಕಂತಾರೂ? ಎಲ್ಲಾ ಎಮ್ಮೆಲ್ಲೇಗೊಳೂ ಒಪ್ಪಿಕ್ಯಂಡಾರಂತೆ, ಅಂದ್ರೆ ಯಡ್ಡಿ ಮುಖ್ಯಮಂತ್ರೀ ಆದಂಗೇಯಾ!’ ಕಣ್ಣರಳಿಸಿ ಮಾತನಾಡಿದಾಗ ಒಂದು ಆಂಗಲ್ಲಿನಿಂದ ಅದೇ ತಾನೇ ಕುರುಚೀ ಕನಸು ಕಂಡ ಯಡ್ಡಿಯಂತೆ ಕಂಡುಬಂದ.

ಮೇಷ್ಟ್ರು ಯಾಕ್ ಬಿಟ್ಟು ಕೊಟ್ಟಾರು, ’ನೋಡ್ರೀ, ಅಧಿಕಾರ ಬಿಟ್ಟು ಕೊಡ್ತೇನೀ ಕೊಡ್ತೇನಿ ಅನಕಂತಾನೇ ಇನ್ನೇನರ ಒಂದು ತಂತ್ರಾ-ಮಂತ್ರಾ ಶುರು ಹಚ್ಚಿಕ್ಯಂತಾರ ನೋಡಿಕ್ಯಂತಿರ್ರಿ. ಕಳೆದ ಟೈಮ್ ರಿಸಾರ್ಟೂ ಅಂದೋರು ಈ ಸರ್ತಿ ಸ್ಲಮ್ಮಿನ್ಯಾಗ್ ಬೇಕಾದ್ರೂ ಹೋಗಿ ಮಕ್ಕಂತಾರೆ ಜನಗಳು ಅಷ್ಟರ ಮಟ್ಟಿಗ್ ಬದ್ಲಾಗ್‌ತಾರ್ ನೋಡ್ರಿ... ಏನಾರ ಹಾಳ್ ಬಡಿಸ್ಕ್ಯಳ್ಳೀ ನಮಿಗೇನಂತೆ?’ ಎಂದು ಸುಮ್ಮನಾದರು.

ನಂಜ, ಮೇಷ್ಟ್ರು ಮಾತಿನಿಂದ ಪ್ರೇರಿತನಾದವನಂತೆ ಕಂಡು ಬಂದು "ಆಕಾಶವೇ ಬೀಳಲಿ ಮೇಲೆ" ಹಾಡಿನ ಧಾಟಿಯಲ್ಲಿ, ’ಯಾರಾದ್ರೂ ಹಾಳಾಗ್ ಹೋಗ್ಲೀ ನಾನೆಂದು ಕುರ್ಚಿ ಬಿಡೆನು...’ ಎಂದು ದೊಡ್ಡದಾಗಿ ಹಾಡು ಹಾಡಿಕೊಂಡು ಹೊರಟುಹೋದ...ಮೇಷ್ಟ್ರು ಒಮ್ಮೆ ವಿಚಲಿತರಾದಂತೆ ಕಂಡು ಬಂದರೂ ಮತ್ತೆ ಪೇಪರಿನಲ್ಲಿ ಮುಖ ಹುದುಗಿಸಿಕೊಂಡರು.

ನಾನು ಮನದಲ್ಲೇ ಅಂದುಕೊಂಡೆ, ಕೊಳೆಗೇರಿಗೆ ಇವರು ಹೋಗ್ತಾರೋ, ಅಥವಾ ಇವರು ಹೋದಲೆಲ್ಲಾ ಕೊಳೆಗೇರಿ ಇವರನ್ನು ಬೆನ್ನಟ್ಟಿ ಬರುತ್ತೋ ಎಂದು.

Labels:

# posted by Satish : 11:37 am  0 comments

Thursday, September 06, 2007

This page is powered by Blogger. Isn't yours?

Links
Archives