Thursday, September 06, 2007

ದೊಡ್ಡಬಳ್ಳಾಪುರ ರಸ್ತೆಯಲ್ಲಿರೋ ರಿಸಾರ್ಟೇ ಬೆಷ್ಟು!

’ಈ ತಿಂಗಳಿನ್ಯಾಗೆ ಯಾವ್ ರಿಸಾರ್ಟ್ ಚೆನ್ನಾಗಿರ್ತತಿ?’ ಎಂದು ಮೇಷ್ಟ್ರು ದೊಡ್ಡದೊಂದು ಪ್ರಶ್ನೆಯನ್ನು ಗಾಳಿಯನ್ನು ಕುರಿತು ಕೇಳಿದ್ದು ಎನ್ನುವಷ್ಟೇ ಸಹಜವಾಗಿ ಮುಖವನ್ನು ಮೇಲೆ ಮಾಡಿಕೊಂಡು ನೋಡುತ್ತಾ ಕೇಳಿದರೋ ನಾನೂ-ನಂಜನೂ ಒಬ್ಬೊರಿಗೊಬ್ಬರು ಮುಖ ನೋಡಿಕೊಂಡೆವು. ಮೇಷ್ಟ್ರು ತಮ್ಮ ಮೂಗಿನಿಂದಿಳಿಯುತ್ತಿದ್ದ ಕಪ್ಪು ಕಟ್ಟಿನ ಕನ್ನಡಕವನ್ನ ಮೇಲೇರಿಸಿಕೊಂಡು ಮತ್ತೆ ಇವತ್ತಿನ ಪ್ರಜಾವಾಣಿಯನ್ನು ಓದುವುದರಲ್ಲಿ ತಲ್ಲೀನರಾದರು.

ಸ್ವಲ್ಪ ಹೊತ್ತು ಬಿಟ್ಟು ಮೇಷ್ಟ್ರು ಮತ್ತೇನೋ ಹೊಳೆದವರಂತೆ ’ದೊಡ್ಡಬಳ್ಳಾಪುರ ರಸ್ತೆಯಲ್ಲಿರೋ ರಿಸಾರ್ಟೇ ಬೆಷ್ಟು!’ ಎಂದು ಯಾವುದೋ ಮುಖ್ಯ ಕಾಗದ ಪತ್ರಗಳಿಗೆ ಮೊಹರು ಒತ್ತುವ ತಹಶೀಲ್ದಾರರ ಧ್ವನಿಯಲ್ಲಿ ಹೇಳಿಕೆ ಹೊರಡಿಸಿದರೋ ನಂಜ ತಲೆ ತುರಿಸಿಕೊಳ್ಳುತ್ತಲೇ ಉರಿದುಕೊಂಡ,

’ಏ, ಏನ್ರೀ ಸರ್ರಾ ನೀವು? ನೆಟ್ಟಗೆ ಅದೇನೈತಿ ಅಂತ ಹೇಳ್ ಬಾರ್ದಾ...ನೀವೆಲ್ಲಿಗ್ ಹೊಂಟೀರ್ರೀ ರಿಸಾರ್ಟೂ-ಪಸಾರ್ಟೂ ಕಟ್ಟಿಕ್ಯಂಡೂ, ಅದೂ ಈ ವಯಸ್ಸಿನ್ಯಾಗಾs...' ಎಂದು ಬರುತ್ತಿದ್ದ ನಗುವನ್ನು ತಡೆದುಕೊಳ್ಳಲು ಪ್ರಯತ್ನಿಸಿದರೂ ತುಟಿ ಅಂಚಿನಲ್ಲಿ ಮುಸುಮುಸು ನಕ್ಕೇ ಬಿಟ್ಟ. ’ತಗಳಪ್ಪಾ, ಇವರ್ದು ಶುರುವಾಯ್ತಲ್ಲಾ ಬೆಳಬೆಳಗ್ಗೆ...’ ಎಂದು ನನ್ನ ಮನಸ್ಸಿಗೆ ಅನ್ನಿಸಿದರೂ ಐಸ್ ಕ್ಯಾಂಡಿಯನ್ನು ನೆಕ್ಕೋ ಹುಡುಗನ ಹಾಗೆ ಬಾಯಿ ತೆರೆದುಕೊಂಡು ಮುಂದೇನಾದೀತೂ ಎಂದು ಕಾಯತೊಡಗಿದೆ.

ಮೇಷ್ಟ್ರು ನಂಜನನ್ನು ಕುರಿತು, ’ಲೇ, ಮಂಗ್ಯಾನಂಗ್ ಆಡ್ ಬ್ಯಾಡಾ...ರಿಸಾರ್ಟಿನೊಳಗ ಏನೇನಾಕತಿ ಅಂತ ಗೊತ್ತನು? ಹಿಂದ ಈ ಕುಸಾ ಪಡೆ, ಸಿದ್ದೂ ಪಡೇ ಇವ್ರೆಲ್ಲಾ ರಿಸಾರ್ಟಿನೊಳಗ ಹೊಕ್ಕಂಡಾ ರಾಜಕೀಯ ಮಾಡಿದ್ದು ನೆನಪೈತೋ ಇಲ್ಲೋ, ಅದಕ್ಕೇ ಈ ಸರ್ತಿ ಯಾವ್ ರಿಸಾರ್ಟಿನೊಳಗೆ ಹೊಕ್ಕಂತಾರಾ ಅಂತ ಯೋಚ್ನೆ ಅಷ್ಟೇ, ಇನ್ನೇನಿಲ್ಲಾ’.

ಇನ್ನೇನು ಬಾಯಿ ತೆಗೆಯಬೇಕು ಎನ್ನುತ್ತಿದ್ದ ನಂಜನನ್ನ ತಡೆದು, ನನಗೆ ಸ್ವಲ್ಪ ನಿರಾಸೆಯಾದಂತೆನಿಸಿದರೂ ತೋರಿಸಿಕೊಳ್ಳದೇ, ’ಮೇಷ್ಟ್ರೇ, ನೀವೊಂದು ಆಗ ಧರಮ್ ಇಳಿಸೋ ಗರಂ ಇತ್ತು ಕುಸಾ ತಲೋ ಒಳಗೆ, ಅದಕ್ಕೇ ಆ ಷಡ್‌ಯಂತ್ರ ಕಟ್ಟಿದ್ರು, ಅಪ್ಪಾ-ಮಗ ಬ್ಯಾರೇ ಬ್ಯಾರೇ ಅಂತ ತೋರಿಸಿಕೊಟ್ಟಿದ್ರು, ಈಗ ಹಂಗೇನಿಲ್ಲಲ ಪರಿಸ್ಥಿತಿ, ಅವ್ರ ವಿರುದ್ಧ ಇರೋರ್ ಯಾರ್ರೀ, ಈ ಯಡ್ಡಿ ಮಕ್ಕಕ್ಕ ಮಂಗ್ಳಾರ್ತಿ ಬೆಳಗೋದು ಬಾಳಾ ದೊಡ್ಡ ವಿಷ್ಯಾ ಅಲ್ಲ ಬಿಡ್ರಿ’ ಎಂದೆ.

ನಂಜ ಇದ್ದೋನು, ’ಹಂಗಲ್ಲಣ್ಣೋ, ಮೇಷ್ಟ್ರು ಹೇಳೋದು ನಿಜ ಐತಿ, ಆದ್ರೆ ಮತ್ತ ರಿಸಾರ್ಟಿನೊಳಗೆ ಯಾಕ್ ಹೊಕ್ಕಂತಾರೂ? ಎಲ್ಲಾ ಎಮ್ಮೆಲ್ಲೇಗೊಳೂ ಒಪ್ಪಿಕ್ಯಂಡಾರಂತೆ, ಅಂದ್ರೆ ಯಡ್ಡಿ ಮುಖ್ಯಮಂತ್ರೀ ಆದಂಗೇಯಾ!’ ಕಣ್ಣರಳಿಸಿ ಮಾತನಾಡಿದಾಗ ಒಂದು ಆಂಗಲ್ಲಿನಿಂದ ಅದೇ ತಾನೇ ಕುರುಚೀ ಕನಸು ಕಂಡ ಯಡ್ಡಿಯಂತೆ ಕಂಡುಬಂದ.

ಮೇಷ್ಟ್ರು ಯಾಕ್ ಬಿಟ್ಟು ಕೊಟ್ಟಾರು, ’ನೋಡ್ರೀ, ಅಧಿಕಾರ ಬಿಟ್ಟು ಕೊಡ್ತೇನೀ ಕೊಡ್ತೇನಿ ಅನಕಂತಾನೇ ಇನ್ನೇನರ ಒಂದು ತಂತ್ರಾ-ಮಂತ್ರಾ ಶುರು ಹಚ್ಚಿಕ್ಯಂತಾರ ನೋಡಿಕ್ಯಂತಿರ್ರಿ. ಕಳೆದ ಟೈಮ್ ರಿಸಾರ್ಟೂ ಅಂದೋರು ಈ ಸರ್ತಿ ಸ್ಲಮ್ಮಿನ್ಯಾಗ್ ಬೇಕಾದ್ರೂ ಹೋಗಿ ಮಕ್ಕಂತಾರೆ ಜನಗಳು ಅಷ್ಟರ ಮಟ್ಟಿಗ್ ಬದ್ಲಾಗ್‌ತಾರ್ ನೋಡ್ರಿ... ಏನಾರ ಹಾಳ್ ಬಡಿಸ್ಕ್ಯಳ್ಳೀ ನಮಿಗೇನಂತೆ?’ ಎಂದು ಸುಮ್ಮನಾದರು.

ನಂಜ, ಮೇಷ್ಟ್ರು ಮಾತಿನಿಂದ ಪ್ರೇರಿತನಾದವನಂತೆ ಕಂಡು ಬಂದು "ಆಕಾಶವೇ ಬೀಳಲಿ ಮೇಲೆ" ಹಾಡಿನ ಧಾಟಿಯಲ್ಲಿ, ’ಯಾರಾದ್ರೂ ಹಾಳಾಗ್ ಹೋಗ್ಲೀ ನಾನೆಂದು ಕುರ್ಚಿ ಬಿಡೆನು...’ ಎಂದು ದೊಡ್ಡದಾಗಿ ಹಾಡು ಹಾಡಿಕೊಂಡು ಹೊರಟುಹೋದ...ಮೇಷ್ಟ್ರು ಒಮ್ಮೆ ವಿಚಲಿತರಾದಂತೆ ಕಂಡು ಬಂದರೂ ಮತ್ತೆ ಪೇಪರಿನಲ್ಲಿ ಮುಖ ಹುದುಗಿಸಿಕೊಂಡರು.

ನಾನು ಮನದಲ್ಲೇ ಅಂದುಕೊಂಡೆ, ಕೊಳೆಗೇರಿಗೆ ಇವರು ಹೋಗ್ತಾರೋ, ಅಥವಾ ಇವರು ಹೋದಲೆಲ್ಲಾ ಕೊಳೆಗೇರಿ ಇವರನ್ನು ಬೆನ್ನಟ್ಟಿ ಬರುತ್ತೋ ಎಂದು.

Labels:


# posted by Satish : 11:37 am
Comments: Post a Comment



<< Home

This page is powered by Blogger. Isn't yours?

Links
Archives