’ಪದ್ಮಪ್ರಿಯ ಅಮ್ಮೋರು ಸಿಕ್ಕೋರಂತೆ!’ ಎಂದು ತಿಮ್ಮಕ್ಕ ಜಗುಲಿ ಗುಡಿಸುತ್ತ ಆಶ್ಚರ್ಯ ತೋರಿಸಿದ್ದನ್ನು ನಾನು ಅದೊಂದು ಪ್ರಶ್ನೆಯೋ ಅಥವಾ ವಿಶ್ಲೇಷಣೆಯೋ ಎಂದು ಆಲೋಚಿಸುತ್ತಾ ಏನು ಉತ್ತರ ಹೇಳಲಿ ಎಂದು ಗೊಂದಲದಲ್ಲಿದ್ದಾಗ ನನ್ನ ಸಹಾಯಕ್ಕೆ ಬಂದವನು ನಂಜ.
’ತಾಯೀ, ಕೆಲ್ಸಾ ನೋಡು. ಆವಮ್ಮಾ ಯಾರ್ನೋ ಕೂಡಿಕ್ಯಂಡ್ ಗುಳೇ ಬಿದ್ದು ಹೋಗ್ಯಾಳೆ, ಅವಳು ಸಿಕ್ರೆಷ್ಟು ಬಿಟ್ರೆಷ್ಟು!’ ಎಂದು ನಂಜ ಹಂಗಿಸಿದ್ದನ್ನು ಕೇಳಿ ತನ್ನ ಕೈಲಿದ್ದ ಪೊರಕೆಯನ್ನು ಅಲ್ಲೇ ಬಿಸಾಡಿ ಸೆರಗಿನ ತುದಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಜಗಳಕ್ಕೆ ಬಂದವಳಂತೆ ಕೈ ಬಾಯಿ ಮುಂದೆ ಮಾಡಿಕೊಂಡು ಬಂದ ತಿಮ್ಮಕ್ಕ,
’ಲೇ, ಯಾವನಿಗ್ ಹೇಳ್ತಿ...ಈ ವಯ್ಯಾ ಅದ್ಯಾರ್ನೋ ಇಟ್‌ಕಂಡಿದ್ನಲಾ ಅದು ತಪ್ಪಲ್ವಾ, ಈ ಹಾಳ್ ಸಮಾಜಕ್ಕೆ ಬರೀ ಹೆಂಗುಸ್ರುದ್ದೇ ಕಾಣ್ಸುತ್ತೇ’ ಎಂದು ಹೇಳುತ್ತಾ ಕೈ ನಟಿಕೆ ಮುರಿದಳು. ತಿಮ್ಮಕ್ಕನ ಆರ್ಭಟವನು ನೋಡಿದ ನಂಜ, ಇದೇನ್ ಇವ್ಳು ಇದ್ದಕ್ಕಿದ್ದಂಗೇ ರಾಂಗ್ ಆಗವಳೇ, ಒಳ್ಳೇ ಪದ್ಮಪ್ರಿಯನ ಅವ್ವ ಆಡಿದಂಗೆ ಆಡ್ತವಳಲ್ಲಾ ಎಂದು ಮೂಗಿನ ಮೇಲೆ ಬೆಟ್ಟಿಡುತ್ತಾ ನನ್ನ ಕಡೆ ನೋಡಿದ, ನಾನು
’ನಂಜಾ, ಸುಮ್ನಿರು, ನಿನಗೊತ್ತಿರದ ವಿಷ್ಯಕ್ಯಾಕೆ ಕೈ ಹಾಕ್ತಿ?’ ಎಂದು ಇಬ್ಬರನ್ನೂ ಸಂತೈಸುವ ಹಾಗೆ ನೋಡಿದೆ, ಅದೇ ಟೈಮಿಗೆ ಕೋಡೀಹಳ್ಳಿ ಮೇಷ್ಟ್ರು ದರ್ಶನವಾಯ್ತು. ಒಂದು ಆಂಗಲ್ಲಿನಿಂದ ನೋಡಿದ್ರೆ ಸೂಟುಧಾರಿಗಳ ನಡುವೆ ಬಿಳಿಪಂಚೆ-ಅಂಗಿ ತೊಟ್ಟ ಸೆಂಟ್ರಲ್ ಮಿನಿಷ್ಟ್ರು ಚಿದಂಬರಂ ಕಂಡಂಗೆ ಕಾಣ್ತ ಇದ್ರು.
ನಂಜ ತಿಮ್ಮಕ್ಕನಿಂದ ದೃಷ್ಟಿ ಸರಿಸಿ ಮೇಷ್ಟ್ರನ್ನು ಕುರಿತು, ’ಏನ್ಸಾರ್, ಒಳ್ಳೇ ಯಡಿಯೂರಪ್ಪನ ಗತ್ತ್ ಬಂದಂಗೆ ಕಾಣ್ತತಿ ನಿಮ್ಮ್ ಮುಖದ ಮ್ಯಾಲೆ, ಏನ್ ಸಮಾಚಾರ? ಎಲ್ಲೋ ಮದುವಿ-ಪದುವಿಗೆ ಹೊಂಟ್ ನಿಂತಂಗ್ ಕಾಣ್ತತಲ್ಲ!’ ಎಂದು ಛೇಡಿಸಿದ.
ಮೇಷ್ಟ್ರು, ’ಏನಿಲ್ಲ ಕಣ್ಲೇ, ಸುಮ್ಕೇ. ಅದಿರ್ಲಿ ನಾನು ನಾನಿದ್ದಂಗೆ ಕಂಡ್ರೆ ಸಾಕು, ಯಾರ್ ಬಾಳ್ವೇನಾದ್ರೂ ಬೇಕು ಆ ಯಡಿಯೂರಪ್ಪನ್ನ ಬಾಳ್ವೆ ಯಾವನಿಗೂ ಬ್ಯಾಡಪ್ಪಾ!’ ಎಂದು ನಿಟ್ಟುಸಿರುಬಿಟ್ಟರು.
’ಅದ್ಯಾಕ್ ಸಾರ್, ಇಷ್ಟು ದಿನಾ ಅವ್ನೇ ಮುಖ್ಯಮಂತ್ರಿ ಆಗ್ಲಿ ಅಂತ ವಾದಾ ಮಾಡ್ತಿದ್ರಿ, ಇವತ್ತು ಅಂತಾದೇನಾತೂ?’ ಎಂದು ನಂಜ ತನ್ನ ಮುಳ್ಳನ್ನು ಬಲವಾಗಿ ತಳ್ಳಲು ನೋಡಿದ,
’ವಿರೋಧ ಪಕ್ಷದವರು ಅಂದ್ರೆ ನಾಮರ್ದ್‌ರಾಗಿ ಹೋಗವ್ರೆ, ಮಾತ್ ಎತ್ತಿದ್ರೆ...ಎಲ್ಲದಕೂ ಈ ಯಡಿಯೂರಪ್ಪನೇ ಕಾರ್ಣಾ ಅಂತ ಕೈ ಬೊಟ್ಟು ಮಾಡಿ ತೋರಿಸ್ತವ್ರೆ, ಇತ್ಲಾಗೆ ಯಾವನರ ಸಾಯ್ಲಿ, ಅತ್ಲಾಗೆ ಯಾವಂದಾರ ಹೆಂಡ್ತಿ ಮನೆ ಬಿಟ್ಟು ಹೋಗ್ಲಿ, ಎಲ್ಲದ್ಕೂ ಯಡಿಯೂರಪ್ಪಂದೇ ಮಧ್ಯಸ್ತಿಕಿ ಬೇಕು ನೋಡು. ಈ ನನ್ ಮಕ್ಳಿಗೆ ಅವನನ್ನ ಕಾಲ್ ಹಿಡಿದು ಕೆಳಾಕ್ ತಳ್ಳೋತಂಕ ಸಮಾಧಾನ ಇಲ್ಲಾ ನೋಡು!’
ನಂಜ ಸುಮ್ನೇ ಬಿಡೋ ಹಾಗೆ ಕಾಣ್ಲಿಲ್ಲ, ’ಸುಮ್ನಿರ್ರೀ, ಮತ್ತೆ ಯಡಿಯೂರಪ್ಪಾ ಅಪೋಜಿಷನ್ನಿನ್ಯಾಗ್ ಇದ್ದಾಗ್ ಮಾಡಿದ್ದೇನ್ ಮತ್ತೆ, ಅವರ ಮಂತ್ರ ಇವತ್ತು ಅವರಿಗೇ ತಿರುಮಂತ್ರ ಆಗೋದ್ ನ್ಯಾಯಾ ಅಲ್‌ವ್ರಾ?’
’ಅಪೋಜಿಷನ್ನಿನ್ಯಾಗ್ ನಿಂತು ನ್ಯಾಯಾನ್ಯಾಯಾ ಕೇಳ್ಲಿ ಯಾರ್ ಬ್ಯಾಡಾ ಅಂದೋರು, ಅದ್ಯಾವ್ದೋ ಉಡುಪಿ ಶಾಸಕನ ಹೆಂಡ್ತಿ ಎತ್ಲಗೋ ಹೋಗಿ ಸತ್ರೆ ಅದಕ್ಕೂ ಯಡಿಯೂರಪ್ಪ ನೈತಿಕ ಹೊಣೇ ಹೊತ್ಕಂಡ್ ರಾಜೀನಾಮೇ ಕೊಡೋಕೂ ಏನ್ ಸಂಬಂಧಾ ಅಂತೀನಿ...’
’ಅಲ್ಲೇ ವಿಶೇಷ ಇರೋದ್ ನೋಡ್ರಿ ಮೇಷ್ಟ್ರೆ, ಇದು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರೋ ಸರ್ಕಾರದ ವ್ಯವಸ್ಥೆ ಅಲ್ಲವ್ರಾ, ಅದರಾಗ ಜನಮನದಲ್ಲಿ ಏನೇ ಇದ್ರೂ ಅದಕ್ಕೆಲ್ಲ ಮುಖ್ಯಮಂತ್ರಿಗಳೇ ಹೊಣೇ, ಹಂಗಾಗಿ ಯಡಿಯೂರಪ್ಪ ರಾಜೀನಾಮೆ ಕೊಡಬೇಕು, ಮತ್ತೆ ಎಲೆಕ್ಷನ್ನ್ ನಡೀಬೇಕು, ದೊಡ್ಡಗೌಡ್ರ ಬಳಗದವ್ರೋ-ಖರ್ಗೇನೋ ಅಧಿಕಾರಕ್ಕೆ ಬರ್ಬಕು, ಅದೇ ರಾಮರಾಜ್ಯಾ ನೋಡ್ರಿ...’ ಎಂದು ಗಹಗಹಿಸಿ ನಗಲಾರಂಭಿಸಿದ್ದನ್ನು ನೋಡಿ, ಅದರಲ್ಲೂ ಯಡಿಯೂರಪ್ಪಾ ಮತ್ತು ರಾಜೀನಾಮೆ ಅನ್ನೋ ಪದಗಳನ್ನ ಒಂದೇ ವಾಕ್ಯದಲ್ಲಿ ಕೇಳಿ ಮೇಷ್ಟ್ರಿಗೆ ಬಹಳ ಉರಿದುಕೊಂಡು ಹೋಯ್ತು ಅಂತ ಕಾಣ್ಸುತ್ತೆ, ತಮ್ಮ ಕೈಲಿದ್ದ ಛತ್ರಿಯಿಂದಲೇ ನಂಜನನ್ನು ತಿವಿಯುವುದಕ್ಕೆ ಬಂದರೆ ಅವನು ಹೆದರಪುಕ್ಕಲನಂತೆ ಹಿಂದೆ ಸರಿದು ತಪ್ಪಿಸಿಕೊಳ್ಳುವ ಆಟ ಒಂದು ಕ್ಷಣದಲ್ಲಿ ನಡೆಯಿತು.
ನಾನೆಂದೆ, ’ಲೇ ನಂಜಾ, ಯಾಕೋ ನೀನು ಎದ್ದ ಘಳಿಗೆ ನೆಟ್ಟಗಿಲ್ಲ ಇವತ್ತು, ಸೀದಾ ಮನೀಗ್ ಹೋಗು ಇಲ್ಲಾ ಕಷ್ಟಾ ಐತಿ ನೋಡು’ ಎಂದು ನಗುತ್ತ ಗದರಿಸಿದ್ದನ್ನು ನಂಜ ಸೀರಿಯಸ್ಸಾಗಿ ಸ್ವೀಕರಿಸಿ ಮನೆಕಡಿಗೆ ಹೊರಟಾಗ ಬಿಗುವಿನ ವಾತಾವರಣ ತಿಳಿಗೊಂಡಿತು.
Labels: ಉಡುಪಿ ಶಾಸಕ, ಯಡಿಯೂರಪ್ಪ, ರಾಜೀನಾಮೆ
’ಏನ್ ಮೇಷ್ಟ್ರೇ ಇತ್ಲಾಗೆ ಯಡಿಯೂರಪ್ಪ ಅಧಿಕಾರ ಹಿಡ್ದಿದ್ದೇ ತಡಾ ನೀವು ಟ್ರಂಕಿನ್ಯಾಗ್ ಇದ್ದ ಹಳೇ ರೇಷ್ಮೆ ಜುಬ್ಬಾ ತೆಕ್ಕೊಂಡು ಹಾಕ್ಕೊಂಡಿರೋ ಹಾಗಿದೆಯೆಲ್ಲಾ?’ ಎಂದು ತಮಾಷೆ ಮಾಡ್ದೋರು ಯಾರು ಅಂತ ನೋಡಿದ್ರೆ ನಂಜ ಹಲ್ಲು ಗಿಂಜಿಕೊಂಡು ಜಗಲಿ ಮೇಲಿನ ಕಂಭಕ್ಕೊರಗಿಕೊಂಡು ಕುಂತಿದ್ದ.
ನಮ್ಮನೆ ಕಟ್ಟೆ ಮೇಲೆ ಮಧ್ಯಾಹ್ನ ಎರಡೂವರೆ ಎಜೆ ಬಸ್ಸು ಕಾಯೋ ಗಡಿಬಿಡಿಲಿದ್ದ ಮೇಷ್ಟ್ರು ಗಂಭೀರರಾಗೇ ಇನ್ನೂ ಕನ್ನಡಪ್ರಭದೊಳಗೆ ತಮ್ಮ ಮುಖವನ್ನು ಹೂತುಕೊಂಡಿರೋದು ಎಲೆಕ್ಷನ್ನಿನ್ನಲ್ಲಿ ಸೋತ ಗೌಡರ ಬಳಗ ದಿವ್ಯಮೌನವನ್ನು ಧರಿಸಿಕೊಂಡಷ್ಟೇ ಸಹಜವಾಗಿತ್ತು.
’ಏ ನಿಂದೊಳ್ಳೇ, ಯಾವ್ದೋ ಮದ್ವುಗಿ ಹೊಂಟೀನಿ, ಸುಮ್ನಿರು’ ಎಂದು ಮೇಷ್ಟ್ರು ನಂಜನ್ನ ನೋಡಿ ಗದರಿಕೊಂಡ್ರು.
’ನಿಮ್ದೇ ಮಜಾ ಬಿಡ್ರಿ. ಅದ್ಸರಿ, ನೋಡುದ್ರಾ ಇನ್ನೂ ನನ್ ಮಕ್ಳು ಅಧಿಕಾರಕ್ಕ್ ಸೇರಿ ಎಲ್ಡ್ ದಿನ ಆಗಿಲ್ಲ, ಆಗ್ಲೇ ಅವರೊಳಗಿದ್ದ ವಿಷಾ ಎಲ್ಲಾ ಕಾರ್‌ಕೊಂಡ್ ಸಾಯೋಕ್ ಹತ್ತವ್ರೆ, ಇಂಥೋರಿಗೆಲ್ಲ ನಮ್ ದೊಡ್ಡ್ ಗೌಡ್ರು ಥರ ಒಬ್ರು ದೊಣ್ಣೆ ಆಡಿಸ್ಕೊಂಡೇ ಇದ್ದಿದ್ರೆ ಸರಿ ಆಗ್ತಿತ್ತು, ಅಂತೋರ್ ಯಾರಿದಾರ್ ರ್ರೀ, ಯಡಿಯೂರಪ್ಪನ್ ಜೊತೆ?’
’ಇದೆಲ್ಲ ಮಾಮೂಲೀ ಕಣ್ಲಾ, ಅವ್ರು-ಇವ್ರು ಅಧಿಕಾರಕ್ಕೆ ಬಂದ್ರೆ ಎಲ್ರೂ ತಾವ್ ಮಂತ್ರೀ ಮಾಗಧರಾಗ್ ಬೇಕು ಅನ್ನೋದೇ ಕನ್ಸು ಅವ್ರುಗಳ್ದು. ಅವ್ರು ಎಲೆಕ್ಷನ್ನಿಗೆ ಸುರ್ದಿರೋ ದುಡ್ಡು ವಾಪಾಸ್ ಬರಬಕು ಅಂತಂದ್ರೆ ಮಂತ್ರೀನೇ ಆಗ್ಬಕು. ಸುಮ್ಕೆ ಎಮ್ಮೆಲ್ಲೆ ಆಗಿ ವಿಧಾನ ಸೌದ್ದಾಗೆ ಧೂಳ್ ತಿನಕೊಂಡ್ ಬಿದ್ದಿದ್ರೆ ಏನ್ ಪ್ರಯೋಜನ್ ಹೇಳು?’
’ಅಲ್ಲಾ ಸಾರ್, ಹಿಂದೆಲ್ಲಾ ಮಂತ್ರಿಗೊಳು ಅಂದ್ರೆ ಒಂದು ಐದ್ ಸಾರ್ತಿ ನಾದ್ರೂ ಗೆದ್ದು ಬಂದಿರತಿದ್ರು, ಈ ಸರ್ತಿ ಎಲ್ಡೂ-ಮೂರನೇ ಸರ್ತಿ ಗೆದ್ದೋರೂ ಉರಕೊಂಡು ನಿಂತಾರಂತೆ ನಿಜವೇ?’
’ಹೌದಪಾ, ಹೌದು. ಎಲ್ಲವನಿಗೂ ಮಂತ್ರೀ ಪದವಿ ಬೇಕು, ಎಲ್ಲಿಂದಾ ತರಾಣ?’
’ನಾನೊಂದು ಐಡಿಯಾ ಹೇಳ್ಲಾ...’
’...’
’ಇವ್ರು ಗೆದ್ದೋರು ನೂರಾಹತ್ತು ಜನ, ಜೊತಿಗೆ ಸೇರ್ ಕಂಡೋರು ಐದು ಮಂದಿ, ಎಲ್ಲರೂ ಸೇರ್ಕಂಡೇ ಮಂತ್ರಿ ಮಂಡಲ ತುಂಬ್‌ಕ್ಯಂಡ್ರೆ ಹೆಂಗೆ? ಗೆದ್ದೋರೆಲ್ಲ ಮಂತ್ರಿಗಳು, ಯಾವ್ದುರದ್ದು ಎಲ್ಲೀದೂ ಅಂತ ಕೇಳ್ ಬ್ಯಾಡ್ರಿ ಮತ್ತ!’
’ಏ ನಿಂದ್ಯಾವಾಗ್ಲೂ ತಮಾಷೆ ಬಿಡ್ಲೆ’
’ಹಂಗಲ್ಲ ಸರ್ರ, ಕೊನಿಗೆ ನೂರಾ ಹತ್ತು ಜನಕ್ಕ ನೂರಾ ಹತ್ತು ಮಂತ್ರಿಗಳಾದ್ರೂ ಆದ್ರೆ ಆವಾಗ ಭಿನ್ನ ಮತಾನೇ ಇರಂಗಿಲ್ಲ ಏನಂತೀರಿ...’
ಅಷ್ಟೊತ್ತಿಗೆ ಎಜೆ ಬಸ್ಸು ಬಂತು ಅಂತ ಮೇಷ್ಟ್ರು ಪೇಪರ್ರನ್ನ ಪಕ್ಕಕ್ಕೆ ಎಸೆದು ಒಂದ್ ಕೈಯಲ್ಲಿ ಪಂಚೆ ಹಿಡಕೊಂಡು ಲಗುಬಗೆಯಿಂದ ನಡೆದಿದ್ದು, ಅರ್ಜೆಂಟಿಗೆ ಅಧಿಕಾರ ಸ್ಥಾಪನೆಗೆ ದೊಡ್ಡ ಗೌಡ್ರು ಸ್ಫೀಡಾಗಿ ಬಂದ್ರೇನೋ ಅನ್ನಿಸುವಂತಿತ್ತು. ಮೇಷ್ಟ್ರು ಹೋಗಿದ್ದೇ ಹೋಗಿದ್ದೇ ನಂಜಾ ಅವರು ಬಿಸಾಡಿದ ಪೇಪರನ್ನು ಮೂಸಿಕೊಂಡು ಕುಳಿತ, ನಾನು ಕೆಲಸ ನೋಡಲು ಒಳನಡೆದೆ.
Labels: ಅಧಿಕಾರ, ಪ್ರಮಾಣವಚನ, ಮಂತ್ರಿಗಳು