'ಅತ್ಲಾಗ್ ಜನಾರ್ಧನ್ ಪೂಜಾರಿ ಅದೇನೋ ಮಹಾ ಮಾಡ್ತೀನಿ ಅಂತಾ ಹೋಗಿ ಬರೀ ಮಾತಾಡವನಂತೆ, ಸಿಡಿ ತೋರಿಸ್ತೀನಿ ಅಂತ ಜನ್ರುನ್ನ ಕರ್ದು ಅದ್ಯಾವ್ದೋ ವಾರ್ ಪಿಚ್ಚರ್ ತೋರಿಸ್ ಕಳಿಸ್ಯಾನಂತೆ, ಮಾಡಕೇನ್ ಕೆಲ್ಸಾ ಬಗ್ಸಾ ಇದ್ದಂಗಿಲ್ಲ ಈ ನನ್ ಮಕ್ಳೀಗೆ...' ಅಂತ ಕೋಡೀಹಳ್ಳೀ ಮೇಷ್ಟ್ರು ಅಂದಿದ್ದೇ ತಡ ನನಗೂ ಹೌದಲ್ಲಾ ಅನ್ನಿಸ್ತು. ನನಗೆ ಉಸುರಾಡೋಕೂ ಬಿಡ್ದೆ, 'ಶುದ್ಧ ಆಡ್ನಾಡೀ ನನ್ಮಕ್ಳು...' ಅಂತ ಯಾರಿಗೋ ಶಾಪ ಹಾಕಿ ತೆಗ್ದದ್ದನ್ನ ನೋಡಿದ್ರೆ ಇವತ್ತು ಜನಾರ್ಧನ್ ಪೂಜಾರಿ ಕಾರು ಎಲ್ಲೋ ಆಕ್ಸಿಡೆಂಟ್ ಆಗಿ ಹೋಗೋ ಹಾಗೆ ಕಂಡ್ ಬಂತು.
ನಾನು 'ಮೇಷ್ಟ್ರೆ, ಬ್ಯಾಂಕ್ ಬ್ಯಾಲೆನ್ಸೂ, ಹೆಸರ್ನೂ ತೋರಿಸ್ಯಾರಂತ್ ರೀ...' ಅಂದಿದ್ದಕ್ಕೆ, 'ಥೂ, ಸುಮ್ಕಿರ್ರೀ, ಈ ಪೂಜಾರೀ ಆಟಾಟೋಪಾನ ನಾನು ಕಂಡೀನಿ!' ಅಂದು ಬಿಡೋದೆ. ನನಗ್ಯಾಕೆ ಈ ಮೇಷ್ಟ್ರು ಉಸಾಬರಿ ಅಂತ ಗಪ್ಚಿಪ್ ಆದೆ.
ಮೇಷ್ಟ್ರು 'ಅಲ್ರೀ, ಈ ಗೌಡರ ತಂಡಕ್ಕೆ ಏನಾಗೇತಿ ಈಗ? ಈವಯ್ಯಾ, ಸಿಡಿ ಹೊರಗೆ ತರತೀನಿ ಅಂದು ಎಲ್ಲರ್ ಟೈಮೂ ಹಾಳ್ ಮಾಡ್ಲಿಲ್ಲಾ? ಅದಕ್ಕ ಈ ಪೂಜಾರಿ ಮಗಂಗ ಮೊದ್ಲು ಹಿಡ್ದು ನಾಕ್ ಬಡೀ ಬಕು, ಆಮ್ಯಾಕ್ ಆ ಗೌಡ್ರ ತಂಡದಾಗ ಯಾವಯಾವನ್ ತಾಕ ಅದೆಷ್ಟು ದುಡ್ಡೈತಿ, ಅದೇನ್ ಕರೇನೋ, ಬಿಳೇನೋ ಎಲ್ಲಾ ತಿಳಕಂಬಕು, ಅಕಸ್ಮಾತ್ ತಪ್ಪ್ ಏನಾರ ಸಿಗ್ತು ಅಂದ್ರ, ಈ ಮಕ್ಳೀಗ್ ಸಾಯ ತಂಕ ಗಂಜೀ ಕುಡಿಯಂಗ್ ಮಾಡಬಕು, ಇಲ್ಲಾ ಪೂಜಾರಿ ತಲಿ ತೆಗೀಬಕು! ಏನಂತೀರಿ?' ಎಂದು ಹೊಸದಾಗಿ ಅತ್ತೆ ಕಾಟ ಶುರುವಾದ ಹೊತ್ತಿಗೆ ಗಂಡನ ಹತ್ರ ಅತ್ತೀ ಮ್ಯಾಗ ಕಂಪ್ಲೇಂಟ್ ಕೊಡೋ ಹೆಣ್ಮಗಳಂಗ ಕಂಡ್ ಬಂದ್ರು ಮೇಷ್ಟ್ರು.
ನಾನು 'ಅಲ್ಲಾ ಮೇಷ್ಟ್ರೇ, ನಾವ್ ಅಂದಂಗ್ ಎಲ್ಲಾರ್ ಆಕ್ತತೇನ್ರಿ?' ನಿಮಗ ಮೂರು ಕತ್ತಿ ವಯ್ಸಾತು ಇಷ್ಟೂ ಗೊತ್ತಾಗಿಂಲ್ಲಾ ಅನ್ನೋ ಧ್ವನಿಯೊಳಗ ಅಂದೆ...ಮೇಷ್ಟ್ರಿಗೆ ಉರಿ ಹತ್ತಿದ್ದು ಇನ್ನೂ ಆರಿಲ್ಲ ಅಂತ ನನಿಗೆ ಹೆಂಗ ತಿಳೀಬಕು! ಮೇಷ್ಟ್ರು 'ಸುಮ್ಕಿರ್ರಿ, ಎಲ್ಲಾ ತಿಳದೋರಂಗ ಆಡಬೇಡ್ರಿ, ಈ ಸರ್ತಿ ನೋಡ್ರಿ ಏನಾರ ಒಂದ ಆಗೇ ತೀರ್ತತಿ!' ಎಂದು ಶುಭ ನುಡಿಯೋ ಹಕ್ಕೀ ಹಂಗ ಕೊರಳು ಕೊಂಕಿದ್ರು.
ಈ ಪೂಜಾರಿ-ಕುಸಾ ಸವಾಸ ಅಲ್ಲ, ಈ ಹೊತ್ತಿನ್ಯಾಗ ಮೇಷ್ಟ್ರುದ್ದು ಅಂತೂ ತಲೀನೇ ಸರೀ ಇಲ್ಲ, ಅಂದು ನಾನು ಮನೀ ಕಡಿ ಹೊಂಟೆ.
# posted by Satish : 8:25 am