ಇತ್ಲಾಗೆ ರೆಡ್ಡಿ ಬಾಂಬ್ ಠುಸ್ಸೋ ಅಲ್ವೋ ಅಂತ ಯಾರೂ ಕೆರಕೊಳಕೂ ಹೋಗದಿದ್ದಾಗ ಈ ದೇಶಪಾಂಡೆ ಅವ್ರಿಗೆ ರೆಡ್ಡಿ ಬಾಂಬ್ ಒಳಗ ಬಾಳ ಸತ್ಯ ಅದ ಅಂತ ಅನ್ಸೇತ್ ರೀ. ಫುಲ್ ಕುಸಾ ಕುಟುಂಬದ ಮ್ಯಾಲೇ ತೂಗು ಕತ್ತಿ ಐತಿ ಅಂತ ಹೇಳಿಕೆ ಕೊಟ್ಟ್ಯಾರಂತ್ ರೀ. ಎಲ್ಲಾರು ಸಮಗ್ರ ತನಿಖಿ ಆಗ್ ಬಕು, ಬಿಡಬಕು ಅಂತಾರಾ ಹೊರತೂ ಯಾವನೂ ಒಂದು ಹೆಜ್ಜೀನೂ ಮುಂದ್ ಇಟ್ಟಂಗಿಲ್ಲ. ಹೇಳಿ ಕೇಳಿ ಒಂದಾ ಎರಡಾ ರೂಪಾಯ್ ಆಗಿದ್ರೆ ಎಲ್ಲೋ ಕಳಕೊಂಡಾರ ಅನಬಹುದಿತ್ತು, ಆದರ, ನೂರಾ ಐವತ್ತು ಕೋಟೀನಾ ಯಾವ ಸ್ವಿಸ್ ಬ್ಯಾಂಕ್‌ನ್ಯಾಗ ಇಟ್ಟಾರ ಅಂತ ತಿಳಕೊಳ್ಳಾಕ ಇಷ್ಟ್ಯಾಕ ತಡಾ ಅಂತೀನಿ.
ಹೋಗ್ಲಿ ಬಿಡ್ರಪಾ, ಅನ್ನಂಗಿಲ್ಲ. ಯಾಕ್ ಗೊತ್ತೇನು, ಈ ರಾಜ್‌ಕಾರಣಿಗಳ ಹಣೇಬರವೇ ಇಷ್ಟಾ ಆದಂಗ, ನೋಡ್ರಿ ಈಗ ಅನಿತವ್ವಾರ್ ಪೆಟ್ರೋಲ್ ಬಂಕ್‌ನ್ಯಾಗ ಕಳಬೆರಕಿ ಅಂತ್ರೀ. ಅವನೌನ, ನ್ಯಾಯ ನೀಯತ್ತಿನಿಂದ ಯಾವನೂ ಬಾಳ್ವೇನೇ ಮಾಡ್ದಂಗ್ ಕಾಣಂಗಿಲ್ಲ!
ಅದಕ್ಕಾ ಅಂದಿದ್ದು, ಕಾಲ ಕೆಟ್ಟತೀ ಅಂತ. ದುಡ್ಡ್ ಮಾಡಿಕ್ಯಂಡ್ ಮ್ಯಾಡಿಕ್ಯಂಡ್ ರೂಢಿ ಆಗ್ಯತ್ ರೀ, ಆಸೀಗ್ ಒಂದ್ ಮಿತೀ ಅನ್ನಂಗಿಲ್ಲ, ಬಿಡಂಗಿಲ್ಲ...ಒಬ್ರುಗಿಂತ ಒಬ್ರು ಶಾಣ್ಯಾರದಾರಾ...ಏನ ಮ್ಯಾಡಿಕ್ಯಂತಾರ ಮಾಡಿಕ್ಯಳ್ಳಿ.
"ಕನ್ನಡವ್ವ ಬಡವಿಗ್ಯಾಳ, ದೇಶದಾಗ ನಮಿಗ್ ಒಂದು ಒಳ್ಳೇ ಹೆಸ್ರೂ ಇರದಂಗ್ ಮಾಡಿದ್ರು ಈ ನನ್ ಮಕ್ಳು" ಅಂತ ಮೊನ್ನೆ ಶಾಮೂ ಕಾಕಾ ಕೆಮ್ಮಿಕ್ಯಂಡ್ ಬಯ್ದಿದ್ದ್ ನಿಜಾನೇ ಇರಬಕು.
# posted by Satish : 6:24 am