Tuesday, September 12, 2006

ಎಲ್ಲಾರ ಮಲಗ್ಲಿ ವಿಧಾನ ಸೌಧ ಒಂದ್ ಬಿಟ್ಟು

ನಮ್ ಕೋಡೀ ಹಳ್ಳಿ ಮೇಷ್ಟ್ರು ಮನಸ್ಥಿತಿ ಒಂಥರಾ ಮಾನ್‌ಸೂನ್ ಮಾರುತ ಇದ್ದಂಗ ಕೆಲವೊಮ್ಮೆ ಇರಚಲ ಹೊಡಿಯಾಕ್ ಹಿಡೀತೂ ಅಂದ್ರ ಆ ವರುಣ ದೇವನ ಅಪ್ಪನಾ ಬಂದ್ ಆಜ್ಞೆ ಕೊಟ್ರೂ ನಿಂದರವಲ್ತು, ಅಂಥದ್ದು. ಕೆಲವೊಮ್ಮೆ ಕುಸಾ ಸರ್ಕಾರದ ಸಾಧನಿ ನೋಡೀ ಹೊಗಳಿದ್ದೇ ಹೊಗಳಿದ್ದು, ಇನ್ನು ಕೆಲವು ಸರ್ತಿ ತೆಗಳೋದು ಅಂದ್ರ ಬೈಗಳಿಗೂ ನಾಚಿಗ್ಯಾಕಬೇಕು ಹಂಗ.

ನಾವೂ-ಅವರೂ ಸುಮ್ನೇ ಕೂಡಿ ಹರಟೀ ಹೊಡಕೊಂತ ಕುಂತಿದ್‌ವ್ರಾ, ಅಷ್ಟೋತ್ತಿಗೇ ಮುಂಜಾನಿ ಪೇಪರ್ ಸ್ವಲ್ಪ ತಡಾ ಆತು ಅಂತ ಮಟಮಟ ಮಧ್ಯಾಹ್ನಕ್ಕೆ ಬರೋದೆ! ಅದೂ ಹೇಳೀ-ಕೇಳಿ ತನ್ನ ಮುಖದ ಮ್ಯಾಗೆ ಯಾರ್ ಯಾರು ಎಲ್ಲೆಲ್ಲಿ ಮಲಗ್ಯಾರ ಅನ್ನ ಲೆಕ್ಕ ಇಟಗೊಂಡು. ಅದನ್ನ ನೋಡತ್ತಿದ್ದಂಗ ಮೇಷ್ಟ್ರ ಬಿಪಿ ಸುರ್ ಅಂತ ರೈಸ್ ಆತ್ ನೋಡ್ರಿ, ಶುರು ಹಚ್ಚಿಗ್ಯಂಡ್ರು... 'ತಗಳಪ್ಪಾ ದೊಡ್ಡ ಗೌಡ್ರು ಮಗನ್ನ ಮನೀ ಇಂದ ಹೊರಗ ದಬ್ಬಿದರೂ ಅಂತ ಈ ಮನ್ಷಾ ಮುಖ್ಯಮಂತ್ರಿಗಾದ್ರೂ ಸ್ವಲುಪ ತಲೀ ಅನ್ನಾದ್ ಬ್ಯಾಡಾ, ಕಂಡ ಕಂಡಲಿ ಮನಗ್ಯಾರಂತ ಕುಸಾ ಸಾಹೇಬ್ರೂ - ಬರೀ ಮನಗಿದ್ರೆ ಸಾಕಾ, ಎಚ್ಚೆತ್ತು ದೇಶ ಉದ್ದಾರ ಮಾಡಬೇಕಲೇ, ಮಂಗ್ಯಾನ್ ಮಗನಾ...' ಅಂತ ಕುಸಾ ಹೆಸರಿನಾಗ ಅವರ ಅಪ್ಪನ್ನೂ ಮಂಗ್ಯಾ ಅಂತ ಬೈದಿದ್ದೂ ಅಲ್ದೇ, ಅಪ್ಪನ ಹಂಗಾ ನಿದ್ದೀ ಮಾಡೋ ಸಂತಾನ ಅಂತ ಒಳ್ಳೇ ಶ್ಯಾಲ್ಯಾಗ ಮಕ್ಕಳಿಗೆ ತಿವಿದಂಗ ತಿವಿದಿದ್ದನ್ನ ನೋಡಿ ನನಗಂತೂ ತಡೀಲಾರ್ದ ನಗೂ ಬಂತು. ಇನ್ನು ಜೋರಾಗಿ ನಕ್ರ ನನಗೂ ಒಂದಿಷ್ಟು ಬಿದ್ದೀತು ಬೈಗುಳ ಅಂತ ಸುಮ್ಮಕಿದ್ದೆ, ಮೇಷ್ಟ್ರು ಮತ್ತ ಶುರು ಹಚ್ಚಿಗಂಡ್ರು, 'ಯಾವ್ ಯಾವನು ಎಲ್ಲೆಲ್ಲಿ ಇರಬಕೋ ಅಲ್ಲೇ ಇದ್ರೇನೇ ಚೆಂದ, ಒಳ್ಳೇ ಮಣ್ಣಿನ್ ಮಕ್ಳು ಮಣ್ಣಿನ್ ಮಕ್ಳು ಅಂತ ಆಡಿಕ್ಯಂಡು ಹಳ್ಳೀ ಹಾಳ್ ಮಾಡ್ತಾರೇ ವಿನಾ ಇವರು ಕಾಲಿಟ್ಟ ಊರು ಉದ್ದಾರಾದಂಗಿಲ್ಲ, ಇಲ್ಲಾ ಅಂದ್ರೆ ಆ ಹಾಸ್ನ ಬಸ್‌ಸ್ಟ್ಯಾಂಡ್ ಯಾಕ್ ಹಂಗ್ ಹೊಲಸು ನಾರ್‍‌ತಿತ್ತೂ? ಮೊದ್ಲು ಮನಷಾ ಅಂತ ಆದವನು ಮನುಷ್ಯತ್ವಾ ಕಲಿಬಕು, ಅಮ್ಯಾಕ ರಾಜಕೀಯ ಮಾಡಬಕು...' ಎಂದು ಇನ್ನೇನನ್ನೋ ಹೇಳುವವರನ್ನು ತಡೆದು ಮೇಷ್ಟ್ರೇ, 'ಎಲ್ಲೆಲ್ಲಿಂದ ಎಲ್ಲಿಲ್ಲಿಗೋ ಹೋತು...' ಅಂತ ತಿವಿದಿದ್ದಕ್ಕೆ 'ನಮ್‌ಗ್ಯಾತಕ್ಕ ಈ ನನ್ ಮಕ್ಳು ಸವಾಸ, ಎಲ್ಲಾರ ಮಲಗ್ಲಿ ವಿಧಾನ ಸೌಧ ಒಂದ್ ಬಿಟ್ಟು...' ಎಂದು ಮೂಗಿನ ಮ್ಯಾಗಿನ ಕನ್ನಡಕ ಇನ್ನಷ್ಟು ಏರಿಸಿ, ಏನೂ ಆಗೇ ಇಲ್ಲ ಅನ್ನೋರಂಗೆ ಪೇಪರಿನ ಮುಂದಿನ ಪುಟ ತಿರುಗಿಸಿಕ್ಯಂಡು ಓದೋ ಮೇಷ್ಟ್ರಿಗೆ ಇನ್ನೂ ರಿಟೈರ್ ಯಾಕ್ ಆಗಿಲ್ಲ ಅಂತ್ ಯೋಚಿಸೋ ಹಂಗ್ ಆತ್ ನೋಡ್ರಿ.

# posted by Satish : 11:52 am
Comments: Post a Comment



<< Home

This page is powered by Blogger. Isn't yours?

Links
Archives