Friday, September 22, 2006

ಶುದ್ಧ ತರಲೆ ನನ್ ಮಕ್ಳು ನೋಡ್‌ಪಾ

ಸೀತಕ್ಕ ಇನ್ನೆನು ರೊಟ್ಟಿ ತಟ್ಟಿ ಉಣ್ಣಾಕ್ ಕುಂಡ್ರ ಬೇಕೋ ಅನ್ನೋ ಹೊತ್ತಿಗೆ ಹೊರಗಿಂದ್ ನಾಯಿ ಬಗುಳಿದ್ದು ಶಬ್ದಾ ಕೇಳಿ ಬಗ್ಗಿದ ಮೈಯನ್ನು ಇನ್ನಷ್ಟು ಬಗ್ಗಿಸಿ 'ಯಾರೋ ಅದು' ಅಂತ ಕೋಲೂರುತ್ತ ಬಂದಳು, 'ನಾನ್ ಕಣಬೆ' ಎಂದೆ, ನನ್ ಧ್ವನಿಯಿಂದಾದ್ರೂ ಗೊತ್ತ್ ಹಿಡೀಲೀ ಎಂದು, ಗೊತ್ತಾಗೋದೇನು ಎಲ್ಲಾನು ತಿಳಿತತಿ ಈ ಮುದುಕಿಗೆ ಎಂದು ನಾನು ಮನಸ್ಸಿನಲ್ಲಿ ಅಂದ್‌ಕೊಳೋ ಹೊತ್ತಿಗೆ 'ರೊಟ್ಟಿ ತಿನ್ನು ಬಾ' ಅಂದಳು, 'ನಾನೊಲ್ಲೆ, ನೀ ನಡಿ ತಿನ್ ಹೋಗು' ಎಂದು ಒತ್ತಾಯ ಮಾಡಿದ ಮ್ಯಾಗೆ ನನ್ ಮುಂದಾಸಿನೇ ಒಲೆ ಪಕ್ಕ ಕುಂತಗಂಡ್ ಅಷ್ಟಿಷ್ಟು ಹಲ್ಲಿರೋ ಬಾಯಲ್ಲಿ ರೊಟ್ಟಿ ಮುಕ್ಕ ತೊಡಗಿದಳು. ಮಧ್ಯೆ ಅವಳ್ದೂ ಜಿಜ್ಞಾಸೆ ಅಂತ ಕಾಣ್ಸುತ್ತೆ, 'ಅಲ್ಲಾ ತಮ್ಮಾ, ಈ ಟಿವಿನ್ಯಾಗ ಸಿಡಿ-ಪಡಿ ಅಂತ ತೋರುಸ್ತಾರೆ ಅಂತಾರಲ್ಲ, ಹಂಗಂದ್ರೇನು?' ಅಂದಳು. ನಾನು ಎಲ್ಲಿಂದ ಶುರು ಮಾಡ್‌ಬೇಕು ಅಂತಾ ಗೊತ್ತಾಗ್ದೇ ಕಣ್-ಕಣ್ ಬಿಡ್ತಾ ಇದ್ದಾಗ, ಅವಳೇ ಸಹಾಯ ಮಾಡಿದಳು - 'ಅದೇ, ರೆಡ್ಡಿಯಿಂದ ಶುರುವಾಗಿತ್ತಲ್ಲ, ಅದು - ಗೌಡ್ರುದ್ದು ಮಗನ್ನ ಕುರುಚೀಯಿಂದ ಕೆಳಾಕ್ ಇಳಿಸ್ಬೇಕು ಅಂತ ಏನೋ ಆಟ ಕಟ್ಟ್ಯಾರಂತೆ!' ಎನ್ನುವಷ್ಟರಲ್ಲಿ ನಾನು 'ಅದೇನಿಲ್ಲ ಸೀತಕ್ಕಾ, ಈ ನಮ್ ಮುಖ್ಯಮಂತ್ರಿಗೋಳ್ ತಂಡಾ ಗಣಿಗಾರಿಕೆ ಮಾಡೋಕ್ ಹೋಗಿ ಅದೇನೋ ಬಾಳಾ ಪ್ರಮಾಣ್‌ದಾಗ ಲಂಚಾ ತಗಂಡಾರಂತ, ಅದನ್ನ ಸಾಕ್ಷೀ ಸಮೇತಾ ಜನ್ರು ಮುಂದ್ ತಂದ್ ನಿಲ್ಲುಸ್ತವಿ ಅಂತ ಜನರೆದುರು ನಾಟ್ಕಾ ಮಾಡಾಕ್ ಹತ್ಯಾರ, ಅದ್ರ ಸುದ್ದೀನೇ ಈ ಟಿವಿನ್ಯಾಗ ರೆಡಿಯೋದಾಗ ಹಚ್ಚ್ಯಾರ - ಯಾವನಾರ ಲಂಚ ತಗಂಡಿದ್ದು ವಿಡಿಯೋ ತೆಗೆಯೋಕ್ ಆಕತೇನು, ಆದ್ರೆ ಈ ವಿರೋಧ ಪಕ್ಷದೋರ್ ಕಟ್ಟಿರೋ ಕುತಂತ್ರಾ ಅಂತ ಎಲ್ರೂ ಹೇಳ್ತಾರ್ ನೋಡು...' ಎನ್ನುವಷ್ಟರಲ್ಲಿ, 'ಅದು ಸ್ವಲ್ಪ್ ಗೊತ್ತು, ಆದ್ರೆ ಈ ಸಿಡಿ ಅಂದ್ರೇನು ಅಂತ ಗೊತ್ತಿಲ್ಲ ನೋಡು' ಎಂದಳು, 'ಅದಾ, ಏನಿಲ್ಲ, ನಮ್ ಕಾಲದಾಗ ಈ ಕ್ಯಾಸೆಟ್ಟು ಬರತಿದ್ವು ಗೊತ್ತತೋ ಇಲ್ಲೋ, ಅದ್ರ ಬದಲಿಗೆ ಈಗಿನ್ ಕಾಲದಾಗ ತಟ್ಟೀ ಬರತಾವ, ಅದರಾಗ ಎಲ್ಲಾ ಇರತಾವ' ಅನ್ನುವಷ್ಟರಲ್ಲಿ 'ಓ, ಅವೇನು...ಅದ್ಯಾವುದೋ ಸಿನಿಮಾದಾಗ ಬಂದಿತ್ತು...ಸರಿ ಹೋಯ್ತು ಬಿಡು - ಯಾವನಿಗೂ ಕೆಲಸ ಬಗಸಾ ಒಂದೂ ಇಲ್ಲ, ಇಲ್ಲಾ ಅಂದ್ರ ಹಿಂಗ ಯಾವನರ ಮಾಡತಿದ್ನಾ? ಶುದ್ಧ ತರಲೆ ನನ್ ಮಕ್ಳು ನೋಡ್‌ಪಾ...' ಎಂದು ತಲೆ ಬಗ್ಗಿಸಿ ರೊಟ್ಟಿ ಮುರಿಯೋಕ್ ಶುರು ಮಾಡಿದ್ಲು.

ನಾನು 'ಪರಮೇಸಿ ಇದಾನೇನೋ ಅಂತ ಬಂದೆ...' ಎಂದು ಏಳಲು ಹೊರಟೆ, 'ಅವನಾ ಮನಿಗ್ ಬಂದ ಮ್ಯಾಗೇ ಗ್ಯಾರಂಟಿ!' ಎಂದು ತನ್ನ ಕಾಯಕದಲ್ಲಿ ತೊಡಗಿದಳು, ನಾನು ಎಲ್ಲ್ ಹೋದ್ರು ಕುಸಾ ಬೆನ್ನು ಬಿಡದ ಸಿಡಿಗಳ ಬಗ್ಗೇನೇ ಯೋಚಿಸ್ಕಂಡ್ ಮನೀಕಡೆ ಬರತಾ ಇರಬೇಕಾದ್ರೆ - ಈ ಜ್ಯೋತಿಷ್ಯದಲ್ಲಿ ಬಾಳಾ ನಂಬಿಕೆ ಇರೋ ಕುಸಾಗೆ ಹರಿಜನರ ಮನ್ಯಾಗ ಮನಿಗಿದ್ರೆ ಗ್ರಾಚಾರ ಕಡಿಮ್ಯಾಕತಿ ಅಂತ ಯಾವನಾರಾ ಜ್ಯೋತಿಷ್ಯ ಹೇಳಿರ್‍ಬೋದೇನೋ ಅಂತ ಅನುಮಾನ ಬಂತು!

# posted by Satish : 10:20 am
Comments: Post a Comment



<< Home

This page is powered by Blogger. Isn't yours?

Links
Archives