ಇವತ್ತು ಬೆಳ್ಳಂಬೆಳಗ್ಗೆ ಕೋಡೀಹಳ್ಳಿ ಮಾಷ್ಟ್ರು ದರ್ಶನಾ ಆಗಿದ್ದೇ ತಡ ನಾನು ಯಾರಾದ್ರೂ ಸತ್‌ಗಿತ್ತ್ ಹೋದ್ರೇನೋ ಅಂತ ಒಂದ್ ನಿಮಿಷಾ ಒದ್ದಾಡಿ ನೋಡಿದ್ರೆ ಅಂತಾ ಏನೂ ತಲೀ ಹೋಗೋ ವಿಚಾರ ಅಲ್ಲಾ ನಮ್ ಕುಸಾ ಸಾಹೇಬ್ರು ಮಗಾ ಹೋಗಿ ಯಾವ್ದೋ ಹೋಟ್ಲು ಮಾಣಿಗಳಿಂದ ಚೆನ್ನಾಗಿ ಒದೀ ತಿಂದಾನ ಅಂತ ಸುದ್ದಿ ಬಂತು.
ಏನ್ಸಾರ್ 'ಏನೋ ಸಣ್ ಹುಡುಗ್ರು ತಿಳೀಲಾರ್ದು ಮಾಡಿರ್‌ಬೇಕ್ ಬಿಡ್ರಿ' ಅಂದಿದ್ದಕ್ಕೆ,
'ಏನ್ರೀ ಸಣ್ ಹುಡುಗ್ರು ಅಂತೀರಲ್ರೀ, ನಿಮಗೇನಾರ ಬುದ್ದೀ ಐತೋ ಹೆಂಗೆ?' ಅಂತ ನನ್ನನ್ನೇ ತರಾಟೆಗೆ ತಗೊಂಡಿದ್ದೂ ಅಲ್ದೇ 'ಈ ಮಕ್ಳು ಬೆಳಗ್ಗಿನ್ ಜಾವಾ ಮೂರೂವರಿ ಹೊತ್ತಿಗೆ ಏನ್ ಮಾಡಾಕ್ ಹತ್ತಿದ್ರೂ?' ಅಂತ ಪ್ರಶ್ನೇ ಕೇಳೋದೇ.
'ನನಗ್ಗೊತ್ತಿದ್ರೆ ತಾನೇ, ಈಗಿನ್ನೂ ನೀವೇ ವಿಷ್ಯಾ ಹೇಳ್ದೋರು, ಅದು ಏನು ಅಂತ ನೆಟ್ಟಗೆ ಬಿಡಿಸಿ ಹೇಳಬಾರ್ದಾ?' ಅಂದೆ ಸ್ವಲ್ಪ ಸಿಟ್ಟು ಹಚ್ಚಿ.
'ಕುಸಾ ಮಗ, ಇನ್ನೂ ಇಪ್ಪತ್ತೂ ಮುಟ್ಟಿಲ್ಲ ಅಂತಾವಾ ಯಾವ್ದೋ ಹೋಟ್ಲಿಗೆ ಬೆಳಗ್ಗೆ ನಾಕು ಘಂಟೀ ಹೊತ್ತಿಗೆ ತನ್ನ ಸ್ನೇಹಿತ್ರು ಜೋಡಿ ಹೋಗಿ ಊಟಾ ಕೊಡ್ರಿ ಅಂತ ಗಲಾಟಿ ಎಬ್ಬಿಸ್ಯಾನಂತ, ಅಲ್ಲೀ ಜನ ಇಲ್ಲಾ ಅಂದಿದ್ದಕ್ಕ ಅವರಿಗೆ ಹೊಡ್ದು, ಗಲಾಟಿ ಎಬ್ಬಿಸಿ, ಹೊಡ್ತಾ ತಿಂದು, ಇತ್ಲಾಗ್ ಬಂದು ಕಂಪ್ಲೇಂಟ್ ಕೊಟ್ಟಾನಂತ' ಎಂದರು.
'ಅಲ್ಲಾ ಮೇಷ್ಟ್ರೇ ಅಪ್ಪಾ ಹಳ್ಳಿ-ಹಳ್ಳಿ ತಿರುಗಿ ಯಾರ್ ಯಾರ್ದೋ ಮನ್ಯಾಗೆ ಮಲಗ್‌ತಾನಂತ, ಈ ಮಗನಿಗೆ ಏನಾಗಿತ್ತು? ಕಬ್ಬನ್‌ಪಾರ್ಕ್‌ನ್ಯಾಗ ನಿಂತು ಭಿಕ್ಷೆ ಬೇಡಿದ್ರೆ ಊಟ ಸಿಗತ್ತಿತ್ತಲ್ರೀ!' ಎಂದೆ.
ಮೇಷ್ಟ್ರು 'ನಿಮದೊಳ್ಳೆ ತಮಾಷೆ...ಈ ಅಪ್ರಾಪ್ತ ಹುಡುಗ್ರಿಗೆ ರಾತ್ರೋ-ರಾತ್ರಿ ಓಡಾಡೋಕೆ ಪರ್ಮಿಷನ್ ಕೊಟ್ಟೋರ್ ಯಾರು? ಅವರು ಕಾರು ಓಡ್ಸಿದ್ರೆ ಅದಕ್ಕೆ ಲೈಸನ್ಸ್ ಐತೋ ಇಲ್ಲೋ...ಅದಕ್ಕಿಂತ ಹೆಚ್ಚಿಗಿ ತನ್ ಅಪ್ಪ, ತನ್ ಮಕ್ಳುನ್ ನೆಟ್ಟಗೆ ಇಟ್‌ಕೊಳ್ಳೋಕ್ ಬರದಿರೋ ಮನ್ಷಾ ಇಡೀ ರಾಜ್ಯಾನಾ ನೆಟ್ಟಾಗೆ ಇಟಗಂತಾನೆ ಅಂತ ಏನ್ ಗ್ಯಾರಂಟೀ...ನಿಮಗ್ಗೊತ್ತಾಗಂಗಿಲ್ಲ ಬಿಡ್ರಿ ನಮ್ ತಲಿಬಿಸಿ...' ಅಂತ ಹೊರಟೇ ಹೋಗೋದೇ!
'ಮೇಷ್ಟ್ರೇ ನಿಲ್ರೀ...' ಅಂತ ಕೂಗಿದ್ರೂ ನಿಲ್ಲದೇ ಹೋದ ಗತಿ ನೋಡಿ ನಾನು ಏನೋ ದೊಡ್ಡ ಸಂಚಕಾರ ಕಾದೈತೆ ಕುಸಾ ಸರಕಾರಕ್ಕ ಮುಂದೆ ಎಂದುಕೊಂಡು ಸುಮ್ಮನಾದೆ.
# posted by Satish : 11:27 am