Saturday, December 16, 2006

ತೃಣವೆಂದರೇನು?

ಕೋಡೀ ಹಳ್ಳಿ ಮಾಸ್ತರು ಅದ್ಯಾಕೋ ಮೂಡು ಸರಿ ಇಲ್ಲದ ಕಾರಣಕ್ಕೆ ನೆಚ್ಚಿನ ಪ್ರಜಾವಾಣಿ ಬಿಟ್ಟು ಕನ್ನಡ ಪ್ರಭ ಓದೋಕ್ ಹಿಡಿದಿದ್ದನ್ನು ನೋಡಿ ನನಗೆ ಚಾಮುಂಡೀ ಕ್ಷೇತ್ರದಲ್ಲಿ ಗೌಡರ ತಂಡದ ಸೋಲನ್ನು ಬಹು ಗಂಭೀರವಾಗಿ ಪರಿಗಣಿಸಿ ಒಂದು ಕೋನದಲ್ಲಿ ಮೇಷ್ಟ್ರು ಹೈರಾಣದಂತೆ ಕಂಡು ಬರತೊಡಗಿದರು. ಮೂಗಿನ ಮೇಲಿನ ಕನ್ನಡಕವನ್ನು ಏರೇರಿಸಿ ಓದೋ ಗತ್ತನ್ನ ನೋಡಿ ಅಂಥಾ ಘನಂದಾರಿ ವಿಷ್ಯಾ ಏನಪಾ ನೋಡೋಣ ಅಂತಂದು ನಾನು ಮೆದುವಾಗಿ 'ಮೇಷ್ಟ್ರೇ...' ಅಂದೆ, ಯಾವ ಉತ್ತರವೂ ಬಂದಂತೆ ಕಾಣಲಿಲ್ಲ.

ಮೆದುವಾಗಿ ಮಾತಾಡಿದ್ರ ಮಂದಿ ಉತ್ರ ಕೊಡೋದಿಲ್ಲ ಅಂತ ಈ ಮೇಷ್ಟ್ರೇ ಶಾಲೀ ಒಳಗ ಹೇಳಿದ್ದು ಗ್ಯಾಪ್ಕ ಬಂತು, 'ಮೇಷ್ಟ್ರೆ...ಏನ್ ಸ್ವಾಮಿ ಕರೆದ್ರೂ ಕೇಳದ ಸಿದ್ಧರಾಮಿ ಹಂಗ್ ಆಗೋದ್ರಲ್ಲಪ್ಪ್ಲಾ...' ಎಂದು ಸ್ವಲ್ಪ ಧ್ವನಿ ಎತ್ತರಿಸಿ ಹೇಳಿದ್ದಕ್ಕೆ ಪೇಪರಿನ ಅಂಚಿಂದ ಮೇಷ್ಟ್ರು ತೂರುಕಣ್ಣು ತೋರಿಬಂದವು.

'ಚಾಮುಂಡೇಶ್ವರಿ ಸೋಲು ತೃಣಕ್ಕೆ ಸಮಾನ ಅಂತ್ ನೋಡು...ಹಂಗಿದ್ರೆ ಇದೆ ಈ ನನ್ ಮಕ್ಳು ಅಲ್ಲಿ ಗೆಲ್ಲಬಕು ಅಂತಾ ಮಂದೀಗೆ ಹೆಂಡಾ ಹಂಚೋಕ್ಯಾಕ್ ಹೋಗ್‌ತಿದ್ರೂ ಅಂತೀನಿ...' ಎಂದು ಸಾಕ್ಷಾತ್ ದೇವೇಗೌಡರೇ ಬಂದಂತೆ ಕೆಂಡಕಾರುತ್ತ ಎದ್ದು ನಿಂತರು. 'ಎನಾಯ್ತು ಈಗ ಮೇಷ್ಟ್ರೇ, ಸೋಲುಗೆಲುವೂ ಅನ್ನೋದ್ ಇರೋದೇ ಅಲ್ವಾ...ಅದೂ ಸೀಜನ್ಡ್ ರಾಜಕಾರಣಿಗಳಿಗೆ...' ಎನ್ನುವಾಗ ಒತ್ತರಿಸಿ ಗಂಟಲೇರಿಸಿಕೊಂಡು ನನ್ನ ಮಾತನ್ನ ಮಧ್ಯದಲ್ಲೇ ನಿಲ್ಲಿಸಿ 'ಅಲ್ಲಾ, ತೃಣಕ್ಕೆ ಸಮಾನ ಅಂದ್ರೆ, ತೃಣ ಅಂದ್ರೆ ಈ ನನ್ ಮಕ್ಳು ಮನಿ ಬಚ್ಚಲ್ ಕಲ್ಲು ಸಮಾನ ಅಂತ ಅರ್ಥನೇನು? ಯಾವಾನಾರಾ ಗೆಲ್ಲಲಿ, ಸೋಲಲಿ, ಅದಕ್ಕೆ ಕಾರಣ ಅಲ್ಲಿನ ಮತದಾರರು, ಅಂಥಾ ಮತದಾರರ ಮಾತು-ಕಥೆಗಳನ್ನೇನೋ ಮೂಲೆಗೆ ತಳ್ಳಿದ್ದಾತು, ಅವರು ಹಾಕೋ ಒಂದ್ ವೋಟ್‌ ಅನ್ನೂ 'ತೃಣ' ಅಂತಾರಲ್ಲ... ಇಷ್ಟು ವರ್ಷ ಗೇದ್ರೂ ಮುಂಡೇಗಂಡ್ರಿಗೆ ಒಂದ್ ಸ್ಪೋರ್ಟ್ಸ್‌ಮ್ಯಾನ್‌ಶಿಪ್ಪಾಗ್ಲೀ, ಸೋಲನ್ನ ಒಪ್ಪಿಕೊಳ್ಳೋ ಸ್ಪಿರಿಟ್ಟಾಗ್ಲೀ ಬರಲಿಲ್ಲವಲ್ಲ...' ಎಂದು ಉದ್ದುದ್ದವಾಗಿ ಅಲವತ್ತಿಕೊಂಡರು.

ಮೊಟ್ಟ ಮೊದಲನೇ ಸಾರಿ ಮೇಷ್ಟ್ರು ಯಾವ್ದೋ ತರಾಸು ಕಾದಂಬರಿಯಿಂದ ಸ್ಪೂರ್ತಿ ಪಡೆದಂತೆ ಕಂಡು ಬಂದಿದ್ದೂ ಅಲ್ದೇ ಮನದಲ್ಲಿ ಅನ್ನಿಸಿದ್ದನ್ನ ದೊಡ್ಡದಾಗಿ ಹೇಳಿದ್ದನ್ನೂ ನೋಡಿ, ಇನ್ನು ಇಂತಹ ಮಾತನ್ನು ಆಡೋ ಹೊತ್ತಿಗೆ ಪಾರ್ಟಿ ಮೆಂಬರ್ರು ಯಾವನಾರ್ರೂ ಬಂದ್ ನನ್ನ್ ಮುಖಭಂಗ ಆಗದಿರಲಿ ಎಂದು ಮೇಷ್ಟ್ರನ್ನು ಸಮಾಧಾನ ಮಾಡಲು ನೋಡಿ ನಿಧಾನವಾಗಿ ಸಾಗಹಾಕ ತೊಡಗಿದೆ,

'ಮೇಷ್ಟ್ರೆ...ಇವರ ಬುದ್ಧಿ ನಿಮಗೆ ಗೊತ್ತಿರದೇ ಇರೋದೇನ್ರೀ? ಅದೆಲ್ಲ ರಾಜಕೀಯ ಆಟಪ, ಒಂದ್ ರೀತಿ ಮಾಯೆ ಇದ್ದಂಗ್ರೀ...ಗೌಡ್ರು ತಂಡ ಹ್ಞೂ ಅಂದ್ರ ಊರೇ ಸೇರ್ತತಿ, ಹಂಗಿರಬೇಕಾದ್ರೆ ಇನ್ನೇನಾರ ಬಾಯಿಗೆ ಬಂದದ್ದು ಅಂದು ಯಾವ್ದಾದ್ರೂ ನೀರಿಲ್ಲದ ಜಾಗಕ್ಕೆ ವರಗಾ ಆಗಿ ಒದ್ದಾಡಿ ಹೋದೀರಿ... ಸ್ವಲ್ಪ ಹುಷಾರಿರ್ರೀ...ಈಗ ನಾವೂ ನೀವೂ ಮಾತಾಡಿಕೊಂಡ ಮಾತ್ರಕ್ಕ ಏನಾತು, ಏನಾಗ್ತತಿ, ಹಂಗಿದ್ದ ಮೇಲೆ ನಮ್ ನಾಲಿಗಿ ಹೊಲಸು ಯಾಕ್ ಮಾಡಿಕ್ಯಬಕು?' ಎಂದಿದ್ದು ಮೇಷ್ಟ್ರಿಗೆ ಸುತಾರಾಂ ಇಷ್ಟವಾಗಲಿಲ್ಲ ಎಂದು ತೋರಿತು...

'ನೋಡ್ರೀ, ಮನಸಿಗೆ ಅನ್ನಿಸಿದ್ದನ್ನ ಆಡೋದನ್ನ ಸ್ವತಂತ್ರ-ಹಕ್ಕು ಅಂತಾ ಕರೀತಾರೆ...ನಿಮ್ ನಿಮ್ ಬುದ್ಧಿವಂತಿಕೆ ಏನಾರ ಇರಲಿ, ನಾಜೂಕ್ ಆಗಿ ಮಾತಾಡೀನೂ ಲೋಕದಾಗ ಏನೂ ಉದ್ಧಾರ ಆಗೋದಿಲ್ಲ ಅನ್ನೋದೂ ನಿಮ್ಮಂಥೋರಿಗೆ ಗೊತ್ತಿದ್ರು ಸಾಕು!' ಎಂದು ಇಷ್ಟರವರೆಗೆ ಏನೂ ಆಗೇ ಇಲ್ಲ ಎನ್ನುವಂತೆ ಮತ್ತೆ ಕನ್ನಡಪ್ರಭವನ್ನು ಮುಖದ ಮುಂದೆ ಹರವಿಕೊಂಡರು, ನಾನು ರೇಶಿಮೆಯಲ್ಲಿ ಸುತ್ತಿ ಹೊಡೆತ ತಿಂದವನಂತೆ ಹ್ಯಾಪ್ ಮುಸುಡಿ ಹಾಕಿಕೊಂಡು ಮನೆಯ ದಾರಿ ಹಿಡಿದೆ.

# posted by Satish : 3:35 pm
Comments:
ತೃಣಕ್ಕೆ ಸಮಾನ !!!

ಪಾಪ..ಚಾಮುಂಡೇಶ್ವರಿಯ ಮತದಾರರು ಹುಲ್ಲು ಅಲ್ಲದೆ ಇನ್ನೇನು? ಇಂತಹ ದನ-ಹೋರಿಗಳು ಮೇಯುತ್ತಿರೋದು ಈ ಜನರನ್ನೇ ಅಲ್ವಾ ..

>ರೇಶಿಮೆಯಲ್ಲಿ ಸುತ್ತಿ ಹೊಡೆತ
:)))
 
solu gelavugaLanna sportman spirit togollu hAgidre goudrerenu kusti paTuna? asTu oLLe buddi iddiddare kathina byare ittu bidri....
 
ಶಿವು, ಮಹಾಂತೇಶ್...
ಕ್ಷಮಿಸಿ ತಡವಾಗಿ ಉತ್ತರಿಸಿದ್ದಕ್ಕೆ, ನಿಮ್ಮ ಕಾಮೆಂಟಿಗೆ ಧನ್ಯವಾದಗಳು.
 
Post a Comment



<< Home

This page is powered by Blogger. Isn't yours?

Links
Archives