Sunday, March 18, 2007

ಸಿರಿವಂತನಾದೊಡೆ...

ಸುಮ್ನೇ ಬೆಳಿಗೆ ವಾರಪತ್ರಿಕೆ ಓದ್ತಾ ಕುಂತಿದ್ದೆ, ಇನ್ನೇನು ಪ್ರದೇಶ್ ಸಮಾಚಾರ ಮುಗುದು ವಾರ್ತೆ ಶುರುವಾಗಬೇಕು ಅನ್ನೋ ಅಷ್ಟರಲ್ಲಿ ಕೋಡಿಹಳ್ಳಿ ಮೇಷ್ಟ್ರು ದರ್ಶನಾ ಆಯ್ತು...

'ಓ, ಏನ್ ಮೇಷ್ಟ್ರೇ ಬೆಳ್ಳಂಬೆಳಗ್ಗೆ ಒಳ್ಳೇ ಫ್ಯಾಕ್ಟರೀ ಕೆಲಸಗಾರ್ರ ಹಾಗೆ ದೂರವೆಲ್ಲೋ ಹೊರಟ ಹಾಗಿದೆ...' ಎಂದೆ.
ಮೇಷ್ಟ್ರು ಅದೆಲ್ಲಿಂದ ಓಡಿಕೊಂಡು ಬಂದ್ರೋ ಅನ್ನೋ ಹಾಗೆ ಉಸುರು ತೇಕುತ್ತಾ, 'ಏನಿಲ್ಲ, ಬೆಳಿಗ್ಗೆ ಬಸ್ಸಿಗೆ ಶಿಮೊಗಾಕ್ಕೋಗಿ ಸಾಹೇಬ್ರ ಹತ್ರ ಒಂದಿಷ್ಟು ಫಾರಂ ಸಹಿ ಮಾಡ್ಸಿಕೊಂಡು ಬರೋಣಾ ಅಂತ, ನಿಮ್ ಛತ್ರಿ ಕೊಟ್ಟಿರ್ರೀ, ನಾನು ಮನೇಯಿಂದ ತರೋದೇ ಮರ್ತೋದೆ, ಇನ್ನು ಹೋಗಿ ಬರೋ ಹೊತ್ತಿಗೆ ಈ ಹಾಳಾದ್ದು ಬಸ್ಸು ಬಂದ್ ಹೋದ್ರೆ...'

'ಅದಕ್ಕೇನಂತೆ...' ಎಂದು ಒಳಗಡೆ ಹೋಗಿ ಛತ್ರಿ ತಂದುಕೊಟ್ಟೆ, ಮೇಷ್ಟ್ರು ಛತ್ರಿಯನ್ನು ಬಿಡಿಸಿ, ಅಗಲಿಸಿ ಎಲ್ಲಾ ಸರಿಯಾಗೇ ಇದೆ ಎಂದು ವಿಜ್ಞಾನಿಯ ಥರ ನೋಡಿ ಕನ್‌ಫರ್ಮ್ ಮಾಡಿಕೊಂಡಿದ್ದು ನೋಡಿ ನಗುಬಂತು. ಇನ್ನೇನು ಏಳೂವರೆ ಬಸ್ಸು ಈಗ ಬರುತ್ತೆ ಆಗ ಬರುತ್ತೆ ಅಂತ ಹರಟೇ ಹೊಡಿಯುತ್ತಾ ಕೂತರೇ ಕನ್ನಡ ವಾರ್ತೇನೂ ಶುರುವಾಗಿ ಮುಗಿದು ಹೋಯ್ತು...ಮೇಷ್ಟ್ರು ಬಸ್ಸ್ ಬರೋ ಹಾದಿ ನೋಡಿ 'ಥೂ, ಈ ಹಾಳಾದ್ದು ನನ್ ಮಕ್ಳಿಗೆ ಟೈಮ್ ಸೆನ್ಸೇ ಇಲ್ಲ ಹೋಗ್!' ಎಂದು ತಮ್ಮಷ್ಟಕ್ಕೇ ತಾವೇ ಹಳಿದುಕೊಂಡರು.

ರೆಡಿಯೋದಲ್ಲಿ ಕನ್ನಡ ಚಿತ್ರಗೀತೆ ಆರಂಭವಾಯ್ತು, ಮೊದಲಿಗೆ ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ ಹಾಡಿರೋ 'ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ, ಭಿಕ್ಷುಕನಾದರೂ ಕನ್ನಡ ನಾಡಲ್ಲಿ ಮಡಿವೆ' ಹಾಡು ಬರಲು ಮೊದಲು ಮಾಡಿತು. ಮೊದಲೇ ಪಿತ್ತ ಕೆರಳಿದ್ದ ಮೇಷ್ಟ್ರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿ, 'ಈ ದೇಶ್ದಲ್ಲಿ ಯಾವನಿರ್ತಾನ್ರಿ? ಅದೂ ಈ ರಾಜ್ಯದಲ್ಲಿ ಯಾವನಿರ್ತಾನೆ? ಇಲ್ಲಿ ಎಷ್ಟಿದ್ರೂ ಅಷ್ಟೇಯಾ...' ಎಂದು ಉಗುಳು ನುಂಗಿಕೊಂಡರು.

'ಯಾಕ್ ಮೇಷ್ಟ್ರೇ!' ಅಂದೆ, ಮೇಷ್ಟ್ರು 'ಏನಿಲ್ಲ, ಈ ಮುಂಡೇಗಂಡರು ಹೊಡಕೊಂತೋರಲ್ಲ, ಸಿರಿವಂತನಾದ್ರೂ ಇಲ್ಲೆ ಹುಟ್ತೀನಿ ಅಂತ, ಅವೆಲ್ಲ ನಿಜವೇ?' ಎಂದು ದೊಡ್ಡ ಸನ್ಯಾಸಿಯ ಮುಖ ತೋರಿದರು, ನಾನು ಸುಮ್ನೇ ಇದ್ದದ್ದನ್ನು ನೋಡಿ, 'ಬಡವರಾಗಿ ಹುಟ್ಟಿದ್ರೆ ತಮಿಳುನಾಡಿನಲ್ಲಿ ಹುಟ್ಟಬೇಕು, ಅಲ್ಲಿ ಒಂದಿಷ್ಟು ನೀರಾದ್ರೂ ಸಿಗುತ್ತೆ, ಸಾಯ್ತೀವಿ ಅಂತಂದ್ರೆ, ಇಲ್ಲಿ ಅದೂ ಸಿಗಂಗಿಲ್ಲ!' ಎಂದು ನಿಡುಸುಯ್ದರು.

'ಓ, ಕಾವೇರಿ ನೀರ್ ಬಗ್ಗೆನಾ ನೀವ್ ಹೇಳ್ತಾ ಇರೋದು?' ಎಂದು ನಾನು ರಾಗ ಎಳೆದಿದ್ದಕ್ಕೆ 'ನಿನಗೇನು ಗೊತ್ತು, ಸುಮ್ಕಿರು...' ಎನ್ನುವ ನೋಟವನ್ನು ಬೀರಿ ಬಸ್ ಬಂದ ಶಬ್ದ ಕೇಳಿ ಪಂಚೆ ಸರಿ ಮಾಡಿಕೊಂಡು 'ಆಮೇಲೆ ಛತ್ರಿ ನಮ್ ಹುಡುಗುನ್ ಹತ್ರ ಕಳಿಸ್ಕೊಡ್ತೀನಿ!' ಎಂದು ಹೊರಟೇ ಹೋದರು!

# posted by Satish : 11:28 am
Comments: Post a Comment



<< Home

This page is powered by Blogger. Isn't yours?

Links
Archives