ನಂಜ ಬೆಳಗಾಯ್ತು ಅನ್ನೋ ಕುರುಹಿಗೆ ದೊಡ್ಡದಾಗಿ ಕನ್ನಡಪ್ರಭಾ ಓದ್ತಾ ಕುಂತಿದ್ದ, ನಾನೆಂದೆ, 'ಏನಲೆ, ಘನಶ್ಯಾಮ, ಯಾವ ಮುಕುಂಡ್ರುದ್ದು ಏನೇನ್ ನಡೆದೈತಲೇ?' ಎಂದು ಸಹಜವಾಗಿ ಹಾಕಿದ ಪ್ರಶ್ನೆಗೆ ಒಬ್ಬ ಆಸ್ಟ್ರೋ ಫಿಸಿಸಿಸ್ಟ್ ಥರ ಮುಖ ಮಾಡಿಕೊಂಡು ತಲೆ ಎತ್ತಿ ಒಮ್ಮೆ ನನ್ನ ಕಡೆಗೆ ನೋಡಿ, ಬಾಯಾರು ಹೀರುವ ಜಾನುವಾರಿನ ಹಾಗೆ ಮತ್ತೆ ಪೇಪರಿನಲ್ಲಿ ಮುಖ ಹುದುಗಿಸಿದ.
ಎಲಾ ಇವನಾ ಅಂಥಾದ್ದೇನ್ ಹಾರಿ ಹೋಗ್ತಾ ಇರಬೋದಪ್ಪಾ ಎಂದು ಅವನ ಬಲ ಭುಜದ ಮಗ್ಗುಲಿನಿಂದ ಇಣುಕಿ ನೋಡಲಾಗಿ ಡಿ.ವಿ ಸದಾನಂದ ಗೌಡ್ರು ಹೇಳಿಕೆಕೊಟ್ಟ ಹಾಗೆ 'ರಾಜ್ಯ ಕಾಂಗ್ರೇಸ್ ಮುಖಂಡರು ಸ್ವಯಂ ನಿವೃತ್ತಿ ಹೊಂದಲಿ' ಎಂಬ ಹೇಳಿಕೆಯನ್ನು ಕುತೂಹಲದಿಂದ ಓದುತ್ತಿದ್ದ - ಕಾಂಗ್ರೇಸ್ ಮುಖಂಡರಿಗೆ ಕನಿಷ್ಠ ಜ್ಞಾನವೂ ಇಲ್ಲ! ಎಂಬ ಹೇಳಿಕೆ ನನ್ನನ್ನು ಆಕರ್ಷಿಸಿತು.
ನಾನೆಂದೆ, 'ನಂಜಾ, ಬಿಡೋ ಈ ಕಾಂಗ್ರೇಸ್ಸು, ಬಿಜೆಪಿ, ದಳದವರು ಒಬ್ರೊನ್ನೊಬ್ರು ಆಡಿಕೊಂಡು, ದೂಡಿಕೊಂಡು ಮುಂದೆ ಬರೋ ಕಾಲ ಯಾವತ್ತಿದ್ರೂ ಇದ್ದೇ ಇರತ್ತೆ, ನಿನ್ನ ತಲೆ ಯಾಕೆ ಕೆಡಿಸಿಕ್ಯಂತಿ?'.
ಈಗ ನಂಜನ ಸಹನೆಯ ಕಟ್ಟೆಯೊಡೆಯಿತು ಅಂತ ಕಾಣ್ಸುತ್ತೆ, 'ಹ್ಞೂ, ಹಂಗಾದ್ರೆ, ಸದಾನಂದ್ ಗೌಡ್ರು ತಲೆ ಸಮ ಐತೋ? ಧರಂ, ಖರ್ಗೆ ಅಂತೋರ್ ಇರೋದ್ರಿಂದ್ಲೇ ನಮ್ ರಾಜಕೀಯ ಅನ್ನೋದ್ ಸ್ವಲುಪ ನೆಟ್ಟುಗೈತೆ, ಎಲ್ಲಾ ಸದಾನಂದ್ ಗೌಡ್ರು ಅಂತೋರ್ ತುಂಬಿಕ್ಯಂಡಿದ್ರೆ ಇಷ್ಟೊತ್ತಿಗೆ ಸಿಂಹದ ಮರಿ ಸೈನ್ಯವಾಗಿರೋದು!'.
'ಹಂಗಲ್ಲಾ ನಂಜಾ, ಬೈಯೋದು ಇದ್ದೇ ಇದೆ, ಆದ್ರೆ ಆವಪ್ಪಾ ಕಾರಣಕೊಟ್ಟು ಬೈದಿರೋದು ಸರಿಯಾಗೇ ಇಲ್ಲವಾ? ನೀನೇ ಹೇಳು' ಎಂದು ಸಮಜಾಯಿಸಲು ನೋಡಿದೆ.
ನಂಜ ಹಿಡಿದ ಪಟ್ಟು ಬಿಡಲಿಲ್ಲ, 'ಬಿಜಿಪಿ ನೋರ್ದು ಏನಿದ್ರು ಕೈಲಾಗದ ಕಾಂಗ್ರೇಸ್ನೋರ್ ಮೇಲೆ, ಧಮ್ ಇದ್ರೆ ನಮ್ ದೊಡ್ಡ್ ಗೌಡ್ರು ಕುರಿತು ಹಂಗ್ ಆಡ್ಬ್ಯಾಕಾಗಿತ್ತು!'.
ಅಷ್ಟೊತ್ತಿಗೆ ಕೋಡೀಹಳ್ಳಿ ಮೇಷ್ಟ್ರು ಎಲ್ಲಿಂದಲೋ ಬಂದೋರು, ನಂಜನ ಎಡ ಬದಿಯಿಂದ ಪೇಪರಿನಲ್ಲಿ ಇಣುಕಿ, 'ಅಯ್ಯೋ, ಅದಾ...' ಎಂದು ಉಸಿರೆಳೆದು, 'ರಾಜಕೀಯ ಮತ್ತೂ ಸ್ವಯಂ ನಿವೃತ್ತಿ ಅನ್ನೋ ಪದಗಳು ಒಂದೇ ಸೆಂಟೆನ್ಸ್ನಲ್ಲಿ ಬರಂಗಿಲ್ಲೋ ತಮ್ಮಾ, ಅವೇನಿದ್ರೂ ಒಂದು ಜೋಕ್ ಅಂತಂದುಕೊಂಡು ಓದಿ ಮುಂದೆ ಹೋಗ್, ಆ ನನ್ ಮುಕ್ಳಿಗೆ ಬುದ್ಧಿ ಇಲ್ಲಾ ಅಂತಂದ್ರೆ ನಿನಗೂ ಸ್ವಲ್ಪ ಅನ್ನೋದ್ ಬ್ಯಾಡ್ವಾ!' ಎಂದು ತಮ್ಮ ವಿಶ್ವತಂತ್ರವನ್ನು ಮಂಡಿಸಿ ಬಂದಷ್ಟೇ ವೇಗದಲ್ಲಿ ಮಾಯವಾದರು.
ನಾನೂ ನಂಜನೂ ಸುಮ್ಮನೇ ಮುಂದಿನ ಪುಟಕ್ಕೆ ಪೇಪರನ್ನು ಬದಲಿಸಿದೆವು.
# posted by Satish : 6:58 am