Monday, May 14, 2007

ಕರ್ಲಾನ್ ಹಾಸ್ಗೆ ಮೇಲ್ ಮಲಗೋವಯ್ಯಾ ಹಳ್ಳೀ ತಿರುಗಿದನಂತೆ!

'ಓಹ್, ಸಾವ್‌ಕಾರ್ರು ಇವತ್ತು ಎದ್ದಂಗಿದೆ...' ಎಂದು ಇಷ್ಟೊತ್ತು ನನ್ನ ಪಕ್ಕ ಕೂತುಗೊಂಡು ಒಂದೂ ಮಾತನಾಡದ ಕೋಡೀ ಹಳ್ಳಿ ಮೇಷ್ಟ್ರು ಇದ್ದಕ್ಕಿದ್ದ ಹಾಗೆ ಹೀಗಂದಿದ್ದನ್ನು ನೋಡಿ ಯಾರನ್ನು ಕುರಿತು ಹೇಳಿದರೋ ಎಂದು ಎಷ್ಟು ತಲೆ ತುರಿಸಿಕೊಂಡರೂ ಗೊತ್ತಾಗದಿದ್ದರಿಂದ ಅವರನ್ನೇ ಕೇಳಿದೆ, 'ಏನ್ ಮೇಷ್ಟ್ರೇ ಸ್ವಲ್ಪ ಬಿಡಿಸಿ ಹೇಳ್ರಲ್ಲಾ' ಎನ್ನಲು,

'ಅದೇ ನಮ್ ಕುಸಾ ಬಗ್ಗೆ...', ಎಂದು ಉಸಿರನ್ನು ಸ್ವಲ್ಪ ಜೋರಾಗೇ ಎನ್ನುವಂತೆ ಒಳಗೆಳೆದುಕೊಂಡು, ಒಂದು ಕೈಯಲ್ಲಿ ಪೇಪರನ್ನು ಮಡೆಚುತ್ತಾ ಮತ್ತೊಂದು ಕೈಯನ್ನು ಮೀಸೆ ಮೇಲೆ ಆಡಿಸಿಕೊಂಡು 'ಈ ವಯ್ಯಾ ಕಳೆದ ಹದಿನೈದು ತಿಂಗಳಿನಿಂದ ಹಳ್ಳೀ-ಪಳ್ಳೀ ತಿರುಗ್ಯಾನಂತೆ ಜನರ ಕಷ್ಟಾನ ಅವರ ಮನೆ ಬಾಗಿಲ್ಗೇ ಹೋಗಿ ತಿಳುದುಕಂಡ್ಯಾನಂತೆ...ಅಂದ್ರೆ ಬ್ಯಾರೇ ಯಾರೂ ಮಾಡ್ದೇ ಇರೋ ಘನಕಾರ್ಯಾನಪ್ಪಾ, ಅದು!' ಎಂದು ಸುಮ್ಮನಾದರು.

ನನಗೆ ಸ್ವಲ್ಪ ಕಷ್ಟಕ್ಕೆ ಬಂತು, ಈಗ ಮೇಷ್ಟ್ರು ಕುಸಾ ನನ್ನು ಹೊಗಳುತ್ತಿದ್ದಾರೋ, ತೆಗಳುತ್ತಿದ್ದಾರೋ ಒಂದು ಕ್ಷಣ ಗೊತ್ತಾಗದೇ ಸ್ವಲ್ಪ ತಡವರಿಸಿದನಂತೆ ಮಾಡಿ, 'ಪರವಾಗಿಲ್ಲ ಮನ್ಷ್ಯಾ, ಬೇರೇ ಯಾರೂ ಮಾಡ್ದೇ ಇರೋ ಘನಕಾರ್ಯಾನೇ ತಾನೆ ಅದು, ಅದರಿಂದೇನಾಯ್ತು?' ಎಂದೆನೋ, ಮೇಷ್ಟ್ರು ಜ್ವಾಲಾಮುಖಿ ಸಿನಿಮಾದಲ್ಲಿನ ರಾಜ್‌ಕುಮಾರ್ ನಂತೆ ಮುಖಮಾಡಿಕೊಂಡು,

'ಸ್ವಲ್ಪ ಸುಮ್ನಿರ್ರೀ, ಈ ನನ್ ಮಕ್ಳು ಹಳ್ಳೀ-ಪಳ್ಳೀ ತಿರುಗಿಕ್ಯಂಡು ಅಲ್ಲೀಯೋರಿಗೆ ಕಷ್ಟ ತಂದೋರೇ ವಿನಾ, ಏನೂ ಉದ್ದಾರಾದಂಗಿಲ್ಲ ಇವರಿಂದ. ನಮ್ ನಿಜಲಿಂಗಪ್ಪ್ನೋರು ಮಾಡದೇ ಇರೋ ಘನಕಾರ್ಯಾನಾ ಅದು, ನಮ್ ಹೆಗಡೆಯೋರು ಮಾಡದೇ ಇರೋ ಸಿದ್ಧಾಂತಾನ ಅದು? ಈ ವಯ್ಯಾ ಹೋದಲ್ಲೆಲ್ಲಾ ಒಂದ್ ರೀತಿ ಬಿಳಿ ಆನೆ ಹೋದಂಗೆ ಹಿಂಬಾಲಕರು, ಸೇವೇ ಮಾಡೋರ್ ಸಂತೇನೇ ಹೋಗ್ತಿತ್ತಲ್ಲಾ ಅದ್ರ ಖರ್ಚೆಲ್ಲಾ ಯಾವನ್ ಕೊಡತಿದ್ದಾ? ಅಷ್ಟೂ ಮಾಡಿ ಅದೇನೋ ಬಾಳಾ ದೊಡ್ಡ ಘನಕಾರ್ಯ ಅಂದಂಗೆ ಇವತ್ತಿಗೆ ಉಳಿದವ್ರು ಮ್ಯಾಲೆ ತಾನ್ ಹಿಂಗ್ ಮಾಡ್ದೇ ಹಂಗ್ ಮಾಡ್ದೇ ಅಂತ ಕೊಚ್‌ಕೊಳ್ಳೋದ್ ಬ್ಯಾರೆ, ಥೂ' ಎಂದು ಯಾರದ್ದೋ ಮುಖದ ಮೇಲೆ ಉಗಿದಂಗೇ ಮಾಡಿದ್ರು.

ನಾನೆಂದೆ, 'ಅಲ್ಲಾ ಮೇಷ್ಟ್ರೇ, ಹದಿನೈದ್ ತಿಂಗ್ಳಿಂದಾ ಈವಯ್ಯಾ ನಿಜವಾಗಿ ಮಾಡಿರೋದಾದ್ರೂ ಏನೂ ಅಂತೀನಿ? ಬರೀ ಹದಿನೈದ್ ತಿಂಗ್ಳು, ವಾರ ಅಂತ ಎಣಿಸೋದನ್ನ ನೋಡಿದ್ರೆ ಹೋಗೋ ಕಾಲ ಬಂದಂಗ್ ಕಾಣಲ್ಲ ನಿಮಗೆ?'

ಮೇಷ್ಟ್ರು, 'ನಿಮಗ್ಗೊತ್ತಾಗಲ್ಲ ಬಿಡ್ರಿ, ಯಾವನ್ ನಂಬಿದ್ರೂ ಈ ಸಮ್ಮಿಶ್ರ ಸರಕಾರದವರನ್ನ್ ಮಾತ್ರ ನಂಬಬಾರ್ದು. ತಿಂಗಳು, ವಾರಗಟ್ಟಲೇ ನಡೆಯೋ ಪಕ್ಷ, ಅವರ ಕಾರುಬಾರ ಎಲ್ಲೀವರೆಗೆ ಬರ್ತತಿ ನೀವೇ ಹೇಳ್ರಿ? ಅಷ್ಟೂ ಮಾಡಿ, ತಾನ್ ಹೋದಲ್ಲೆಲ್ಲ ತನ್ನ ಪರಿಸರ ತಗೊಂಡ್ ಹೋಗೋ ಮನ್ಷ್ಯಾ, ಕರ್ಲಾನ್ ಹಾಸಿಗೆ ಮ್ಯಾಲೆ ಮಲಗಿಕೊಂಡೇ ಹಳ್ಳೀ ಹಳ್ಳೀ ತಿರುಗಿನಂತೆ ಎಂದು ನಮ್ಮ ಕರ್ನಾಟಕದ ಜನ ಬಾಳ್ ದಿನ ನೆನಪಿನ್ಯಾಗೆ ಇಟ್ಟುಕೊಳ್ಳಂಗೆ ಮಾಡಿದ್ದನ್ನುಉ ಬಿಟ್ರೆ ಇನ್ನೇನೂ ನನ್ನ ಕಣ್ಣಿಗೆ ಕಾಣಂಗಿಲ್ಲ, ನೋಡ್ರಿ' ಎಂದರು, ನಾನು ಸುಮ್ಮಿನ್ನಿದ್ದನ್ನು ಗಮನಿಸಿ, 'ಇನ್ನು ಇಂತೋರು ಇದ್ರೆಷ್ಟು, ಬಿಟ್ರೆಷ್ಟು?' ಎಂದು ದೊಡ್ಡ ಪ್ರಶ್ನೆಯನ್ನು ಎಸೆದು ನನ್ನ್ ಕಡೆ ನೋಡಿದ್ರು, ನಾನು ಮತ್ತೆಲ್ಲೋ ನೋಡಿಕೊಂಡು ಅವರಿಗೆ ಉತ್ತರಕೊಡುವ ಕಷ್ಟದಿಂದ ತಪ್ಪಿಸಿಕೊಂಡೆ.

ಮೇಷ್ಟ್ರು ಇನ್ನೂ ಒಂದ್ ಹೆಜ್ಜೆ ಮುಂದ್ ಹೋಗಿ, 'ಅಪ್ಪಾ ಹೋದಲ್ಲೆಲ್ಲಾ ಕುತಗಂಡೇ ಅಫಿಷಿಯಲ್ಲಾಗಿ ನಿದ್ದೀ ಮಾಡತಿದ್ದ, ಮಗ ಹಾಸಿಗೀ ಮ್ಯಾಗ ಅಡ್ಡಲಾಗಿ ಬಿದ್ದ್‌ಕೋತಾನೇ ಅನ್ನೋದ್ ಬಿಟ್ರೇ ಮತ್ತೇನೂ ಕಾಣಂಗಿಲ್ಲಪ್ಪಾ ನನ್ನ್ ಕಣ್ಣೀಗೆ' ಎಂದು ಪುನಃ ದೊಡ್ಡ ಮೌನದ ಮೊರೆಗೆ ಹೋದರು.

# posted by Satish : 8:23 pm
Comments:
ಕಾಲಣ್ಣ,

ಸಕ್ಕತ್ತಾಗಿ ಬರಿದಿದ್ದೀರ. ಆದರ ಅಪ್ಪನಿಗಿಂತ ಮಗ ಸ್ವಲ್ಪ ಉತ್ತಮ. ಅಂದ ಹಾಗೆ ಇವತ್ತು ಅಪ್ಪನ ಹುಟ್ಟಿದಹಬ್ಬ, ಪೇಪರ್ ನ ಯಾವ ಕಡೆ ತಿರಿಗಿಸಿದ್ರು ಅವರ ಅಭಿಮಾನಿಗಳ(?) ಫೋಟೋ.. ನಿಮ್ಮ "ಮಂಗ್ಯಾನ್ ಮಕ್ಳು ಎಲ್ಲ್ ನೋಡಿದ್ರೂ ಫೋಟೋ ಹಾಕ್ಕ್ಯಂತಾರ್ರೀ..." ನೆನಪಾಯ್ತು. ಪೇಪರನ್ನು ಬೀಡೋದಿಲ್ಲ ಇವ್ರು.


ಬೆಳಗ್ಗೆ ಕಾರಲ್ಲಿ ಬರ್ತಾಯಿರೋವಾಗ ನನ್ನ ಫ್ರೆಂಡ್ ಗೆ ಇವತ್ತು ದೇವೇಗೌಡರ ಹುಟ್ಟಿದ ಹಬ್ಬ ಅಂದೆ. ಅದಕ್ಕೆ ಅವನು "ಓ ನಮ್ಮ ನೆಲ್ಸನ್ ಮಂಡೇಲಾದಾ" ಅಂದ. ನಂಗೆ ಅರ್ಥ ಆಗ್ಲಿಲ್ಲ. ಅದಕ್ಕೆ ಅವನು ಹೇಳ್ದ..
"ನೆಲ+ಸನ್+ಮಂಡೆ+ಇಲ್ಲ" ಹಹಹ
 
ಹಿಹೀ..
ಮೇಷ್ಟ್ರು ಈ ಸರ್ತಿ ಸೂಪರ್ ಮೂಡ್‍ನಲ್ಲಿ ಇದ್ದಾರೆ...
ಕರ್ಲಾನ್ ಹಾಸ್ಗೆ..ಜ್ವಾಲಾಮುಖಿ ಸಿನಿಮಾ..ದೊಡ್ಡೇ ಗೌಡ್ರು..ಸಕತ್ ಆಗಿದೆ
 
ಯಜ್ಞೇಶ್,

ನೆಲ್ಸನ್ ಮಂಡೇಲಾ ರನ್ನು ನೆನಪಿಸಿಕೊಂಡು ಹೊಟ್ಟೆ ತುಂಬಾ ನಗುವಂತೆ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್!

ಇವರದ್ದೆಲ್ಲಾ ಫೋಟೋಗಳನ್ನು ನೋಡೀ ನೋಡಿ ಸಾಕಾಗಿರ್‌ಬೇಕಲ್ಲಾ ನಿಮಗೆಲ್ಲಾ?
 
ಶಿವಣ್ಣಾ,

ಎಲ್ಲಾ ಸವಕಾರ್ರುಗಳ ವಿಷ್ಯಾ ಸಕತ್ತಾಗಿರಲೇ ಬೇಕು ಎನಂತೀರಿ?
 
ಏನೋಪಾ...ಬಾಷೆ ಪ್ರಯೋಗವಂತು ಅದ್ಭುತವಾಗಿದೆ..ಆದರೆ ರಾಜಕಾರಣಿಗಳೆಲ್ಲ ಕೆಟ್ಟವರೂ ಅನ್ನೋದು ಯಾವತ್ತಿಂದಲೂ ಇದೆ ಮುಂದೇನು ಇರುತ್ತೆ..ಆದರೆ ಕುಮಾರ ಸ್ವಾಮಿಗಳ ಗ್ರಾಮವಾಸ್ತ್ಯವ್ಯದ ಬಗ್ಗೆ ಹೀಗೆ ಕಿಂಡಲ್ ಮಾಡಿದ್ದು ಕುಮಾರಸ್ವಾಮಿಗಳ ವಿರೋದಿಗಳಿಗೂ ಒಂತರ ನೋವಗೊ ವಿಷ್ಯಾನೆ ಬಿಡಿ...ಕಮಾಲೆ ರೋಗದ ಬಗ್ಗೆ ಏನೋ ಒಂತರ ಗಾದೆ ಇದೆ..ನನಗೆ ಗೊತ್ತಿಲ್ಲಪ್ಪ...

ಆದರೂ ನನಗೆ ನಿಮ್ಮ ಬರವಣಿಗೆ ತುಂಬಾ ಇಷ್ಟವಾಯಿತು ಗುರುಗಳೆ
nimma somu
www.navilagari.wordpress.com
www.bannadanavilu.wordpress.com
 
ಸೋಮು,

ಸುಮ್ನೇ ತಮಾಷೆಗೆ ಹಾಗೆ ಬರೆದೆ, ನಿಜವಾಗಿ ಗ್ರಾಮವಾಸ್ತವ್ಯದ ವಿವರಗಳನ್ನು ಬಲ್ಲೋರು ಯಾರು, ಅಲ್ಲಿ ಏನೇನ್ ನಡೆಯುತ್ತೋ, ಅದ್ರಿಂದ ಏನೇನ್ ಆಗುತ್ತೋ...

ಒಟ್ನಲ್ಲಿ ಜನಪರ ಕಾರ್ಯಕ್ರಮಗಳಾದರೆ ಆಯ್ತು!
 
Post a Comment



<< Home

This page is powered by Blogger. Isn't yours?

Links
Archives