ಸುಮ್ನೇ ನನ್ನಷ್ಟಕ್ಕೆ ನಾನು ಕಾಫಿ ಕುಡೀತಾ ಕೂತಿರೊ ಒಂದು ಒಳ್ಳೇ ಸಂಜೇ ಹೊತ್ನಲ್ಲಿ ತಮ್ ತಮ್ಮೊಳಗೆ ಜಗಳಾ ಆಡಿಕೊಂಡು ಯಾವುದೇ ಒಪ್ಪಂದಕ್ಕೆ ಬರದ ಕಾಲೇಜು ಹುಡುಗ್ರ ಹಾಗೆ ಮಾತಿಗೆ ಮಾತ್ ಬೆಳಸ್ಕೊಂಡು ನನ್ನಿಂದ ಸ್ವಲ್ಪ ದೂರದಲ್ಲೇ ಕೂತಿರೋ ನಂಜಾ-ಕೋಡೀಹಳ್ಳಿ ಮೆಷ್ಟ್ರು ಕಾಂಬಿನೇಷನ್ನ್ ನನ್ನ ಗಮನಾ ಸೆಳೀತು.
’ನಮ್ ಯಡಿಯೂರಪ್ನೋರು ಮಠದ್ ಸ್ವಾಮಿಗಳಾಗ್ತರಂತೆ!’ ಎಂದು ಕಟ್ಟಿದ ಮೂಗನ್ನು ಒಳಕ್ಕೇರಿಸಿಕೊಂಡು ನಂಜಾ ಮೆಷ್ಟ್ರು ಕಡೆ ನೋಡಿದಾಗಲೇ ಏನೋ ಉಡಾಫೆ ನಡೆದುಹೋಗುತ್ತಿರುವುದನ್ನು ಗಮನಿಸಿದ ಮೇಷ್ಟ್ರು ಇನ್ನು ಸುಮ್ಮನ್ನಿದ್ದರೆ ಎಲ್ಲಿ ಒಪ್ಪಿಕೊಂಡಂತಾಗುತ್ತದೆಯೋ ಎಂದು,
’ಸುಮ್ನಿರೋ, ಕತ್ಲ್ ಆಗ್ತಾ ಇದ್ದಂಗೆ ಜಾಸ್ತಿ ನಗಸ್ಬೇಡ!’ ಎನ್ನಲು, ನಂಜ ಇದ್ದೋನು,
’ನಾನ್ ಹೇಳೋದು ಸುಳ್ಳಲ್ಲಾ ಸ್ವಾಮೀ, ನೀವೇ ಬನ್ನಿ ಇಲ್ಲಿ ಕೇ ಆರ್ ಪ್ಯಾಟಿನಾಗೆ ಅವ್ರೇ ಕೊಟ್ಟಿರೋ ಹೇಳ್ಕೆ ಕೇಳ್ಕಳ್ಳಿ...’ ಎನ್ನುವ ಆಹ್ವಾನವನ್ನು ತಿರಸ್ಕರಿಸುವ ಮಾತೇ ಇಲ್ಲದ ಮೇಷ್ಟ್ರು ಆಗಲೇ ನಂಜನ ಬೆನ್ನ ಮೇಲಿನಿಂದ ಕಪ (ಕನ್ನಡಪ್ರಭ)ವನ್ನು ನೋಡಲು ಶುರುಮಾಡಿ ಆಗಿತ್ತು.
’ಒಂದ್ ವಿಷ್ಯಾ ಗೊತ್ತಾ ನಿಂಗೆ, ಯಡಿಯೂರಪ್ಪ ಅಧಿಕಾರ ಶಾಶ್ವತಾ ಅಲ್ಲ ಅನ್ನೋ ಮಾತನ್ನು ಹೇಳ್ಬೇಕಾದ್ರೆ ಏನೋ ಬಲವಾದ ಕಾರ್ಣ ಇರ್ಲೇ ಬೇಕು, ಶುಕ್ರವಾರದ್ ದಿನ ಅವರ ಬಾಸಿನ್ ಜೊತೆ ಏನ್ ಜಗಳ ಮಾಡ್ಕ್ಯಂಡಾರೋ ಯಾರಿಗೆ ಗೊತ್ತು?’
’ಓ, ಇಲ್ ನೋಡಿ ಮೇಷ್ಟ್ರೇ, ಅನ್ಯ ಸಂಸ್ಕೃತಿ ಪ್ರೀತ್ಸೋದೇ ಅವರ ಬದುಕಿನ ಮಂತ್ರವಂತೇ, ಅದೂ ಮೂಲಮಂತ್ರವಂತೇ...ಇವರಿಗೂ ಏನಾರೂ ನಮ್ ಎನ್ನಾರೈ ಸಂಸ್ಕೃತಿ ಗಾಳಿ ಬೀಸ್ತೋ ಏನೋ ಯಾವನಿಗ್ ಗೊತ್ತು?’ ಎಂದು ನಂಜ ಹೌಹಾರಿದ್ದನ್ನು ನೋಡಿ ನಾನು ನಿಜವೇನೋ ಎಂದು ಅಂದುಕೊಳ್ಳಬೇಕು ಅಷ್ಟರಲ್ಲಿ ಮೇಷ್ಟ್ರು ನನ್ನ ರಕ್ಷಣೆಗೆ ಬಂದರು,
’ತತ್ತಾರ್ಲೇ, ಸ್ವಾಮಿಗೋಳ್ ಮುಂದ್ ಕೂತಗೊಂಡು ಈ ನನ್ ಮಕ್ಳೂ ಹಂಗ್ ಮಾಡ್ರಿ, ಹಿಂಗ್ ಮಾಡ್ರಿ ಅಂತಾರೇ ವಿನಾ ಇಂತೋರ್ ಉದ್ದಾರ ಮಾಡಿದ್ದಕ್ಕೇ ಅಲ್ವಾ ಮಳೇ ಬೆಳೇ ಅಗ್ತಾ ಇರೋದಲ್ವಾ ಜಗತ್ತಿನಲ್ಲಿ!’ ಎಂದು ಮೇಷ್ಟ್ರು ತಮ್ ವಿಸ್ಮಯವನ್ನು ವ್ಯಕ್ತಪಡಿಸಿದರು.
’ಮೇಷ್ಟ್ರೇ ನಿಮಗೊಂದ್ ವಿಷ್ಯಾ ಗೊತ್ತಾ...’ ಎಂದು ನಂಜ ಬಾಯ್ ತೆರೆಯುತ್ತಿದ್ದಂತೆಯೇ ಅವನು ಏನ್ ಹೇಳೊಕ್ ಹೊರಟಿದ್ದಾನೆ ಎಂದು ನನಗೆ ಆಗ್ಲೇ ಗೊತ್ತಾಗ್ ಹೋಯ್ತು, ಮೇಷ್ಟು ಮಾತ್ರ ಒಂದ್ ದೊಡ್ಡ ಸೊಳ್ಳೇ ಹೋಗೋ ಅಷ್ಟು ಬಾಯ್ ತೆರೆದುಕೊಂಡಿದ್ದು ನೋಡಿ ನನಗೂ ಆಶ್ಚರ್ಯವಾಯ್ತು, ನಂಜ ಇದ್ದೋನು ತನಗೇನೂ ಆಗೇ ಇಲ್ಲವೆನ್ನುವಂತೆ, ’ಮುಂದಿನ ವಾರ ಯಡ್ಡಿ ಸಾಹೇಬ್ರು ಧರ್ಮ ಧೀಕ್ಷೆ ತೊಗೋತಾರಂತೆ ಗೊತ್ತಾ!’ ಎನ್ನಲು, ಮೆಷ್ಟ್ರು ’ನೀನೊಂದು ಕೆಲ್ಸಿಲ್ಲ ಸುಮಿರು’ ಎಂದು ಅವಾಜ್ ಹಾಕಿ ಸುಮ್ಮನಾದರು.
’ಮತ್ತಿನ್ನೇನು ಈ ಪಾಠಿ ಭವಿಷ್ಯ ನುಡಿಯೋ ಗತ್ತು ಇನ್ಯಾರಿಗೆ ತಾನೇ ಬಂದೀತು?’ ಎಂದು ನಂಜ ಹೇಳಿದ್ದು ಎಲ್ಲರಿಗೂ ಕೇಳಿದ್ದು ಯಾರಿಗೂ ಕೇಳಿಸದಂತಾಗಿ ಹೋಯಿತು.
# posted by Satish : 7:23 pm