Thursday, June 14, 2007

...ಸುಮ್ಕೆ ಹೊಡಕಂಡ್ ಸಾಯ್ತಾರ್ ನೋಡ್ರಿ

'ಸೂಳಾ ಮಕ್ಳು ಸುಮ್ಕೆ ಹೊಡಕಂಡ್ ಸಾಯ್ತಾರ್ ನೋಡ್ರಿ!' ಎಂದು ಅದೆಷ್ಟೋ ಆಳದ ಬಾವಿಯಿಂದ ಮೇಲೆದ್ದು ಬಂದ ಧ್ವನಿಯಂತೆ ನಂಜನ ಮಾತು ಕೇಳಿ ಬರಲು ಅಲ್ಲೇ ಸ್ವಲ್ಪ ದೂರದಲ್ಲಿ ಲೋಕಾಭಿರಾಮವಾಗಿ ಹರಟುತ್ತಿದ್ದ ಕೋಡೀಹಳ್ಳಿ ಮೇಷ್ಟ್ರೂ-ನಾನೂ ಮುಖ ಮುಖ ನೋಡಿಕೊಂಡೆವು.

'ಈ ರಾಜಕಾರಣಿಗಳ ಜಗಳ ನಿತ್ಯವೂ ಇದ್ದಿದ್ದೇ, ಅವರಿವರಿಗೆ ಬೈದುಕೊಳ್ದಿದ್ರೆ ಅವರಿಗೆ ಉಂಡ ಊಟ ರುಚಿಸೋದಾದ್ರೂ ಹೇಗೆ..' ಎಂದು ಮೇಷ್ಟ್ರು ಅದೇನನ್ನೋ ಹೇಳಲು ಬಾಯಿ ತೆರೆದರೋ, ನಂಜ ಅವರನ್ನು ಮಧ್ಯದಲ್ಲಿ ತಡೆಯೋ ದೈರ್ಯ ಮಾಡಿದವನೇ ತುಸು ಸಂಕೋಚದಿಂದ

'ಅದಲ್ಲಾ...ನಾನ್ ಹೇಳ್ತಾ ಇರೋದು...' ಎಂದು ಬಿಡಬೇಕೇ! ಈಗ ಮೇಷ್ಟ್ರು ತಮ್ಮ ಜನರಲ್ ನಾಲೇಜ್‌ಗೆ ಕೊಡಲಿ ಪೆಟ್ಟು ಬಿದ್ದಷ್ಟೇ ಗಂಭೀರವಾಗಿ, 'ಇನ್ನೇನ್ಲೇ ಮತ್ತೆ, ಅದೇ ನಿನ್ನೆ ದೊಡ್ಡ ಗೌಡ್ರು ಪಕ್ಷ ಕಟ್ಟಲು ಸಹಕರಿಸದೇ ಇರೋ ಶಾಸಕರನ್ನು ಬೈದಿದ್ರಲ್ಲಾ, ಅದಾ?' ಎಂದು ದೊಡ್ಡ ಸುರಂಗದ ಹಾಗೆ ಬಾಯಿ ತೆಗೆದರೋ, ಸುಮ್ಮನೇ ತೆಪ್ಪಗಿರಲಾರದ ನಂಜ

'ಊಹ್ಞೂ...' ಎಂದು ತಲೆಯನ್ನು ನಕಾರಾತ್ಮಾಕವಾಗಿ ಅಡ್ಡಡ್ಡ ಅಲ್ಲಾಡಿಸಿಬಿಡಬೇಕೇ...ತೊಗೊಳ್ಳಿ, ಮೇಷ್ಟ್ರಿಗೆ ಮೆಣಸಿನಕಾಯಿ ಅರಾತವನ್ನು ತಿನ್ನಿಸಿ ಜೊತೆಯಲ್ಲಿ ಸುಡ್ ಸುಡೋ ನೀರನ್ನು ಕುಡಿಸಿದಂತಾಯಿತು.

'ದೊಡ್ಡ ರಾಜ್‌ಕಾರ್ಣ ನೀನೇ ತಿಳಕಂಡೋನ್, ನಮ್ ಕರ್ನಾಟ್ಕದ ಇತಿಹಾಸದಲ್ಲಿ ಬಿಜೆಪಿ, ದಳ, ಕಾಂಗ್ರೇಸ್‌ನವ್ರು ಹೊಡಕಳ್ದೇ ಇದ್ರೆ ಇನ್ಯಾರ್ ಹೊಡಕಂತಾರ್ಲೇ? ನನ್ ಮುಂದೆ ಬಚ್ಚಾ ಥರ ಇದ್ದೋನು, ಈಗ ದೊಡ್ಡ ನಾಟ್ಕಾ ಆಡ್ತೀಯಾ, ತತ್ತಾರ್ಲೇ ಇಲ್ಲಿ ಅದ್ಯಾವ್ ಪೇಪರ್ ನೋಡ್ತಿದಿಯೋ ನೋಡೋಣ' ಎಂದು ನಂಜನಿಗೆ ಹೊಡೆಯೋರ ಥರ ಮುಂದೆ ಬಂದು ಕೈ-ಕಾಲು ಆಡಿಸಿಕೊಂಡು.

ನಂಜ, ಕೈಯಲ್ಲಿದ್ದ ಪೇಪರನ್ನು ಕೊಟ್ಟಿದ್ದೂ ಅಲ್ದೇ ಪಾಪದ ಧ್ವನಿಯಲ್ಲಿ, 'ಮೇಷ್ಟ್ರೇ, ನಾನ್ ಹೇಳ್ತಾ ಇರೋದು ಈ ಇಸ್ರೇಲ್-ಪ್ಯಾಲಸ್ತೈನ್-ಸಿರಿಯಾ ಜನಗಳು ಹೊಡಕಂಡ್ ಸಾಯ್ತಿರೋ ವಿಷ್ಯಾ...' ಎಂದು ತಾನು ಸರಿ ಇದ್ದರೂ ಅದೇನೋ ತಪ್ಪು ಮಾಡಿದವನ ಹಾಗೆ ಸಬ್‌ಮಿಸ್ಸಿವ್ ಆಗಿ ಹೋದನು.

ಇನ್ನು ಅವನ ರಕ್ಷಣೆಗೆ ಬರದೇ ಹೋದ್ರೆ ಮತ್ತೇನೋ ಕಥೆಯಾದೀತೆಂದು ನಾನು, 'ಮೇಷ್ಟ್ರೆ, ಸುಮ್ನೆ ಹೊಡಕಂಡ್ ಸಾಯ್ತಾರ್ ನೋಡ್ರಿ, ಒಂದ್ಸರ್ತಿ ಪಾಪ ಅನ್ಸುತ್ತೆ, ಮತ್ತೊಂದ್ ಸರ್ತಿ ಸಾಯ್ಲಿ ಅನ್ಸುತ್ತೆ, ನೀವೇನಂತೀರಿ' ಎಂದು ನಂಜನ ಮೇಲಿನ ಮೇಷ್ಟ್ರು ವಕ್ರ ದೃಷ್ಟಿಯನ್ನು ಹಾದಿಯಲ್ಲಿ ಹೋಗಿ ಮಾರಿಯನ್ನು ಮನೆಗೆ ಆಮಂತ್ರಿಸಿದ ಹಾಗೆ ನನ್ನ ಮೇಲೆ ಹಾಯಿಸಿಕೊಂಡೆ.

ಮೇಷ್ಟ್ರು 'ಈ ಯಹೂದಿಗಳು ಸಾಬ್ರು ಇಗರ್ಜಿ ಮಂದಿ ಹೊಡಕೊಳ್ತಾ ಇರೋದ್ ನೋಡಿದ್ರೆ, ಒಂದ್ ರೀತಿ ಮೂರ್ನೇ ವಿಶ್ವ ಸಮರ ಅನ್ನೋ ರೀತಿ ಕಾಣ್ಸುತ್ ನೋಡ್ರಿ. ಸಾಯೋರ್ ಸಾಯ್ಲಿ, ಅವರಿಗ್ಯಾರ್ ಬ್ಯಾಡಾ ಅನ್ನಕ್ ಆಗುತ್ತೆ - ಈ ನನ್ ಮಕ್ಳು ಹೊಡಕೊಳ್ಳೋದ್‌ರಿಂದ ಪ್ರಪಂಚಕ್ಕೇನಾದ್ರೂ ಒಳ್ಳೇದಾಗಂಗ್ ಇದ್ರೆ ಎಷ್ಟೋ ಚೆನ್ನಾಗಿತ್ತು! ನಮ್ ಹಣೇಬರಾ ಎಲ್ಲ್ ನೋಡಿದ್ರೂ ಬರೀ ಹೊಡಕೊಳ್ಳೋ ಸುದ್ದೀನೇ ಕಾಣ್ಸುತ್ತೆ, ದಿನಾ ಸಾಯೋರಿಗೆ ಆಳೋರ್ಯಾರು...' ಎಂದು ಹೆಗಲ ಮೇಲಿನ ಶಲ್ಯವನ್ನು ಕೊಡವಿ ಮತ್ತೆ ಹಾಕಿಕೊಂಡರು.

# posted by Satish : 2:12 am
Comments: Post a Comment



<< Home

This page is powered by Blogger. Isn't yours?

Links
Archives