Tuesday, June 26, 2007

ನಮ್ ರಾಷ್ಟ್ರಪತಿ ಹುದ್ದೇ ಅಂತಂದ್ರೆ...

’ಯಾವನ್ ರೀ ಹೇಳ್ದೋನ್ ನಿಮಗೆ ನಮ್ ರಾಷ್ಟ್ರಪತಿ ಹುದ್ದೆ ಅಂತಂದ್ರೆ ರಬ್ಬರ್ ಸ್ಟಾಂಪ್ ಇದ್ದಂಗೆ ಅಂತ?’ ಎಂದು ಕೋಡೀಹಳ್ಳಿ ಮೇಷ್ಟ್ರು ದೊಡ್ಡದಾಗಿ ಆವಾಜ್ ಹಾಕಿದ್ರೋ ಆಗ ನಾನು ಬೇರೆ ನಿರ್ವಾ ಇಲ್ದೇ ನನ್ನ್ ಹೇಳ್ಕೇನಾ ಮತ್ತೊಮ್ಮೆ ಪರಿಶೀಲನೆ ಮಾಡೋ ಹಂಗಾಯ್ತು - ಕುಸಾ ಸಾಹೇಬ್ರೂ ಇಂಗ್ಲೀಷ್‌ನಲ್ಲಿ ಅಪರೂಪಕ್ಕೆ ಮಾತಾಡೋ ಹಾಗೆ ನಾನು ತೊದಲಿದಂತೆ ಮಾಡಿದ್ರೂ ಮೇಷ್ಟ್ರು ಗರ್ಜನೆ ನನ್ನನ್ನೇನೂ ಮಾಡಲ್ಲ ಅನ್ನೋ ಧೈರ್ಯಾ ಬೇರೆ ಅದೆಲ್ಲಿಂದ ಬಂತೋ,
’ಮತ್ತಿನ್ನೇನ್ರಿ ಸರ್ರ, ಅತ್ಲಾಗಿತ್ಲಾಗೆ ಶಿಲಾನ್ಯಾಸ ಪಲಾನ್ಯಾಸ ಮಾಡಿಕ್ಯಂಡ್ಡ್ ಬಿದ್ದಿರೋದ್ ಬಿಟ್ರೆ ನಮ್ ರಾಷ್ಟ್ರಪತಿಗಳು ಅಂತಾ ಘನಂದಾರಿ ಕೆಲ್ಸಾನೇನ್ ಮಾಡಿ ಕಡದವ್ರೆ?’ ಎಂದಿದ್ದು ಮೆಷ್ಟ್ರ ಪಕ್ಕೆಗೆ ತಿವಿದಂತಾಯ್ತು. ಪಕ್ಕದಲ್ಲಿದ್ದ ನಂಜ, ದೂರದಲ್ಲಿ ಕಸಗುಡಿಸುತ್ತಿದ್ದ ತಿಮ್ಮಕ್ಕ ಅದ್ಯಾವುದೋ ಕ್ರಿಕೇಟ್ ಮ್ಯಾಚ್ ನೋಡೋ ಕಾಲೇಜ್ ಹುಡ್ರು ಥರ ತಮ್ಮ ಕುತ್ತಿಗೆಯನ್ನು ಸ್ವಲ್ಪ ಎತ್ತರಿಸಿ ಕಣ್ಣು-ಕಿವಿಯನ್ನೆಲ್ಲ ನಮ್ಮಕಡೆಗೆ ತಿರುಗಿಸಿದರು.

’ಬಾಬೂ ರಾಜೇಂದ್ರ ಪ್ರಸಾದ್ ಹತ್ತಿ ಕೂತಿರೋ ಖುರ್ಚೀರೀ ಅದೂ, ಏನಂತ ತಿಳಕಂಡೀರಿ? ಅವ್ನೂ ಇವ್ನೂ ಹತ್ತಿ ಕೂರೋದಕ್ಕೆ ಅದೇನ್ ಅವರವ್ರು ಬಚ್ಚಲಮನೆ ಕಲ್ಲೇ?’

ನಾನು ಪಟ್ಟು ಬಿಡಲಾರ್ದೆ, ’ಮೇಷ್ಟ್ರೇ ಬಾರಿ ನಗಸ್ತೀರಪ್ಪಾ ನೀವು...ನಮ್ ರಾಜೇಂದ್ರ ಪ್ರಸಾದ್ ಎಲ್ಲಿ, ಭೈರೋನ್‌ಸಿಂಗ್ ಶೆಖಾವತ್ ಎಲ್ಲಿ? ಇದೇ ನಮ್ನಿ ಓಪನ್ ಸೀಟ್ ಪಾಲಿಸಿ ಇಟ್ಟುಕೊಂಡ್ರೆ ನಮ್ ದೊಡ್ಡ ಗೌಡ್ರೂ ಇವತ್ತಲ್ಲಾ ನಾಳೆ ಆ ಖುರ್ಚಿ ನನಗೂ ಇರಲಿ ಅಂತಂತಾರೆ ನೋಡ್ಕ್ಯಂತಿರಿ...’

ಮೇಷ್ಟ್ರು ಮಧ್ಯ ಬಾಯ್ ಹಾಕ್ಕೋದ್ರಲ್ಲಿ ನಿಸ್ಸೀಮರಲ್ವೇ..., ’ಹಂಗಲ್ರೀ ಸವಕ್ಕಾರ್ರೇ, ನಮ್ ಪ್ರಜಾಪ್ರಭುತ್ವ ವ್ಯವಸ್ಥೆ ಅನ್ನೋದು ಬಾಳಾ ದೊಡ್ಡದದೆ, ಅಂತಾ ಸಿಸ್ಟಂನ್ಯಾಗೆ ಪ್ರಥಮ ಪ್ರಜೆ ಅಂತಂದ್ರೆ ಏನ್ ಗೌರವಾ ಏನ್ ಕಥೆ, ಅದರ ಬಗ್ಗೆ ಹಿಂಗs ಅಪಹಾಸ್ಯ ಮಾಡ್ತೀರಲ್ಲಾ, ನಿಮ್ಮನ್ನ ಟಾಡಾದ್ ಅಡಿ ಬಂಧಿಸಿ ಜೈಲ್‌ನ್ಯಾಗ್ ಸೇರಿಸ್ ಬೇಕ್ ನೋಡ್ರಿ, ಅವಾಗ್ ಗೊತ್ತಾಕತಿ’ ಎಂದು ತಮ್ಮ ಅಲ್ಟಿಮೇಟಮ್ ಅನ್ನು ಹೊರಹಾಕಿದ್ರು.

ನಾನು ಇನ್ನೇನ್ ಹೇಳ್ಲಿ, ಈ ಹಾಳಾದ್ ನಂಜಾ-ತಿಮ್ಮಕ್ಕನಾದ್ರೂ ಏನಾರ ಹೇಳ್ಲಿ ಅಂತಂದು ಒಂದು ಕ್ಷಣ ಸುಮ್ಮನಾದ್ರೆ, ಅವರ್ಯಾರೂ ತುಟಿ ಪಿಟಕ್ಕನ್ನಲ್ಲಿಲ್ಲ, ಕೊನೆಗೆ ನಾನೇ ಈ ವಾದ-ವಿವಾದಕ್ಕೆ ತಿಲಾಂಜಲಿ ಕೊಡೋನ ಹಾಗೆ, ’ಸುಮ್ನೇ ಅಂದೇ ಮೇಷ್ಟ್ರೆ - ಎಲ್ಲವನಿಗೂ ಗೊತ್ತು, ರಾಷ್ಟ್ರಪತಿ ಹುದ್ದೆ ಅಂದ್ರೆ ಏನು ಅಂತ, ಅದೆಲ್ಲ ಬರೀ ಪುಸ್ತಕದ ಮಾತಾತು - ನೀವೇ ಹೇಳ್ರಿ, ಆಡಳಿತ ಪಕ್ಷ-ವಿರೋಧ ಪಕ್ಷದವ್ರು ಏನೇನ್ ತಂದ್ಕೊಡ್‌ತಾರೋ ಅದಕ್ಕೆಲ್ಲ ಬರೀ ಸೈನ್ ಹಾಕ್ಕೋದ್ ಬಿಟ್ರೆ ಇನ್ನೇನ್ ಮಹಾ ಆಗುತ್ತೇ ಆ ಹುದ್ದೆಯಿಂದ? ಎಲ್ಲ ಪಕ್ಷದೋರೂ ತಮ್-ತಮ್ ರೆಪ್ರೆಸೆಂಟೀವ್ ಇರ್ಲಿ ಅಂತಾ ಹಾತ್‌ ಹೊರೆಯೋದ್ ನೋಡಿದ್ರೆ ಗೊತ್ತಾಗಂಗಿಲ್ಲಾ... ಆ ಗಾಂಧೀ ಮಹಾತ್ಮ ಯಾಕ್ ನನಗ್ಯಾವ ಹುದ್ದೇನೂ ಬ್ಯಾಡಾ ಅಂತಂದಿದ್ದು?...’ ಎನ್ನಲು ಮೇಷ್ಟ್ರು ಒಮ್ಮೆ ಯೋಚಿಸೋರ ಹಾಗೆ ಮುಖ ಮಾಡಿಕೊಂಡರು.

ಇದೇ ದೊಡ್ಡ ಅವಕಾಶ ಅನ್ನೋರ್ ಥರಾ ನಂಜ, ’ಹೌದು ಕಣಣ್ಣಾ, ನಾನು ಅದ್ನೇ ಯೋಚಿಸ್ತಾ ಇದ್ದೆ...’ ಎಂದಿದ್ದನ್ನು ನೋಡಿ, ಮೇಷ್ಟ್ರು ಇನ್ನು ಸುಮ್ನಿದ್ರೆ ಎಲ್ಲಿ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತೋ ಎಂದು,
’ದೇವ್ರೆ, ಅತ್ಲಾಗೆ ಒಂದ್ ಸಿಡ್ಲು-ಪಡ್ಲು ಹೊಡ್ದಾದ್ರು ನನ್ನ ಎತ್‌ಗಂಡ್ ಹೋಗ್‌ಬಾರ್ದಾ...ನಿನ್ನೇ ಇನ್ನೂ ನಮ್ ಕುಸಾ ಸರಕಾರ್‌ದೋರು ಮಳೆ ಹೊಡೆದು ಸತ್ರೆ ಒಂದ್ ಲಕ್ಷ ಅಂತಾ ಘೋಷ್ಣೆ ಮಾಡೋರಂತೆ...’ ಎಂದು ಪ್ರಲಾಪಿಸಿದರು.

ತಿಮ್ಮಕ್ಕ ದೂರದಲ್ಲಿದ್ದುಕೊಂಡೇ, ಎಲಾ ಇವ್ನಾ ಅನ್ನೋ ಥರ ಬಾಯಿ ಮೇಲೆ ಬೆರಳಿಟ್ಟುಕೊಂಡಳು.

# posted by Satish : 10:52 pm
Comments:
ಅವ್ನೂ ಇವ್ನೂ ಹತ್ತಿ ಕೂರೋದಕ್ಕೆ ಅದೇನ್ ಅವರವ್ರು ಬಚ್ಚಲಮನೆ ಕಲ್ಲೇ?’

adu ittichige bachchala mane kallu agta irodu thoumba khedada sangati.
 
ಸಂಗೊಳ್ಳಿ,

ಬಿಡುವು ಸಿಕ್ಕಾಗ ’ಏನ್‌ಗುರು’ವನ್ನು ನೋಡುತ್ತೇನೆ, ಧನ್ಯವಾದಗಳು.

ಮಹಾಂತೇಶ್,

ಅಲ್ವಾ ಸಾರ್ ಮತ್ತೆ? ಎಲ್ಲ ಪಕ್ಷಗಳದ್ದೂ ಒಂದೊಂದು ಅಜೆಂಡಾ ಆ ಹುದ್ದೆಯನ್ನು ತುಂಬಲು...
 
Post a Comment



<< Home

This page is powered by Blogger. Isn't yours?

Links
Archives