Friday, July 13, 2007

ಅದೇನ್ ಅವ್ರಪ್ಪನ್ ಮನೇ ಮರಳು...

'ತೆಗಿ ಇವ್ನಾ, ಈ ಅನ್ಸಾರಿ ಸುಮ್ಕಿರ್‍ಬಾರ್ದಾ? ಯಡಿಯೂರಪ್ಪಾ ಮುಖ್ಯಮಂತ್ರಿ ಆಗಲ್ಲ ಅಂತ ಎಲ್ಲವನಿಗೂ ಗೊತ್ತಿದೆ, ಅದನ್ನ ಜಗಜ್ಜಾಹೀರ್ ಮಾಡೋದೇನೈತಿ?' ಎಂದು ನಂಜ ತಲೆಕೆರೆದುಕೊಳ್ಳುತಿದ್ದುದನ್ನು ನೋಡಿ ಮೇಷ್ಟ್ರು ತಡೀಲಾರ್ದೆ ಉತ್ತರ ಕೊಡ್ಲೋ ಬ್ಯಾಡೋ ಎಂದು ಯೋಚಿಸಿಕೊಳ್ಳುತ್ತಿದ್ದಂತೆ ತೋರುತ್ತಿತ್ತು. ಆವಾಗವಾಗ ಕನ್ನಡಕವನ್ನು ಮೂಗಿನ ಮೇಲೇರಿಸಿಕೊಂಡು ನಂಜನಿಗೆ ಒಂದು ಲುಕ್ ಕೊಡುತ್ತಿದ್ದುದನ್ನು ಬಿಟ್ರೆ ಅವರಿನ್ನೇನು ಹೇಳದಿದ್ದುದನ್ನು ನೋಡಿ ನನಗೆ ಆಶ್ಚರ್ಯವಾದರೂ, ಕುರಿ ಕೊಬ್ಬಿದಷ್ಟೂ ಕುರುಬನಿಗೇ ಆದಾಯವೆಂದು ಕಾಯುತ್ತಿದ್ದಂತೆ ಕಂಡುಬಂತು.

ನಂಜನಿಗೂ ಗೊತ್ತು ಯಾವ ಬಟನ್ ಒತ್ತಿದ್ರೆ ಮೇಷ್ಟ್ರು ದರ್ಪದಿಂದ ಹೊರಗೆ ಬಂದು ಒಂದೆರಡು ಮಾತುಗಳನ್ನಾದರೂ ಉದುರಿಸ್ತಾರೆ ಅನ್ನೋ ಹೂಟಿ. ನಾನೂ ತಿಮ್ಮಕ್ಕನೂ ನಮ್ಮ ಪಾಡಿಗೆ ನಾವಿದ್ವಾ, ನಂಜ ಮತ್ತೆ ತನ್ನ ಎಲುಬಿಲ್ಲದ ನಾಲಿಗೆಯನ್ನ ಮತ್ತೆ ಹರಿಬಿಟ್ಟ,

'ಎಲ್ಲಾ ಫಾರಂ ಹೌಸ್ ತುಂಬಿಕ್ಯಂಡ್ ಕುತಗಂತಾರೆ ಕಳ್‌ನನ್ ಮಕ್ಳು, ಅದೇನೋ ಕೋಳೀ ಸಾಕ್ತಾರೋ ಅಲ್ಲಿ, ಇಲ್ಲಾ ಕಾವ್ ಕೊಡ್ತಾರೋ...'.

ಈ ಸಾರಿ ತಿಮ್ಮಕ್ಕನ ಪ್ರವೇಶ, ಅದೂ ದಿಢೀರನೆ...ಏನನ್ನೋ ಹೇಳಲು ಹೋದ ಮೇಷ್ಟ್ರು ಒಂದ್ನಿಮಿಷ ಕಾಯುವಂತೆ ಬೇರೆ ಮಾಡಿತ್ತು,

'ಅಲ್ಲಲ್ಲೇ, ಫಾರಂ ಹೌಸ್ ಹೊಕ್ಕಂಡು ಯಾವನಾರಾ ಕೊಳೀ ಸಾಕ್ತಾನಾ? ಇದ್ದ ಕೋಳೀನಾ ಉಪ್ಪೂ-ಕಾರಾ ಹಾಕಿ ಮುಗುಸ್ತಾರ್ ತಿಳಕಾ...ನೀನು ಇದ್ದೀ ನೋಡು, ಎತ್ಲಾಗರ ಹೋಗಿ ಪುಡಾರ್ಕೆ ಮಾಡಕ್ ಯೋಗ್ಯನಿದ್ದೀ ಅಷ್ಟೇ' ಎಂದು ದೂರದಿಂದ ಮುಖಕ್ಕೆ ಮಂಗ್ಳಾರ್ತಿ ಮಾಡಿದಳು.

ನಂಜ ತನ್ನ ಮಾತನ್ನು ಸಾಧಿಸಿಕೊಳ್ಳುವವನ ಹಾಗೆ, 'ಅಲ್ಲಬೇ, ಕುದುರೀ ಲೆಕ್ಕಾ, ಕುರಿ ಲೆಕ್ಕದ್ ಬಗ್ಗೇ ಕೇಳಿಲ್ಲಾ ನೀನು? ೪೫ ಜನ ಬಿಜೆಪಿ ಶಾಸಕ್ರೂ ಅಂದ್ರೆ ಅದೊರಳಗ ಹೆಚ್ಚು ಮಂದಿ ಕುರಿ-ಕೋಳಿ ತಿನ್ನೋ ಪೈಕಿ ಅಲ್ಲಾ ಅಂತ ಗೊತ್ತಿಲ್ಲನು? ನಿನಗೇನ್ ಗೊತ್ತಾಕತಿ ಬಿಡು.'

ಮೇಷ್ಟ್ರು ಇಷ್ಟೊತ್ತು ಸುಮ್ಮನಿದ್ದವರು ಸ್ಪೋಟಿಸತೊಡಗಿದರು, ನವರಸ ನಾಯಕ ಜಗ್ಗೇಶ್ ಸಿಟ್ಟು ಬಂದಾಗ ಕಷ್ಟ ಪಟ್ಟು ಕೊಡೋ ಪೋಸನ್ನು ಕಾಪಿ ಹೊಡೆಯೋ ಹಾಗೆ ಒಂದು ಆಂಗಲ್ಲಿನಿಂದ ಕಂಡು ಬಂದ ಅವರು, 'ಲೇ ನಂಜಾ, ಯಡ್ಡೀ ಸಾಹೇಬ್ರೂ ಮುಖ್ಯಮಂತ್ರಿ ಆಗ್ತಾರೇ ಬಾಜಿ ಕಟ್ಟು, ಅದೇನ್ ಕಟ್ತೀಯೋ ನಾನೂ ನೋಡೇ ಬಿಡ್ತೀನಿ!' ಎಂದು ಓಪನ್ ಸವಾಲ್ ಹಾಕಿದರೋ ನಂಜ ಏನಾದ್ರೂ ಹೇಳ್ಲೇ ಬೇಕು ಎಂದು ನನ್ನ ಕಡೆ ತಿರುಗಿ ನೋಡಿದ, ನಾನು ಕಣ್ಣು ಮಿಟುಕಿಸಿದೆ, ನಂಜನಿಗೆ ಈಗ ನನ್ನ ಸಪ್ಪೋರ್ಟ್ ಸಿಕ್ಕಿತೆಂಬ ಹುರುಪಿನಲ್ಲಿ,

'ಮೇಷ್ಟ್ರೆ, ಬ್ಯಾಡಾ ಮತ್ತೆ, ಸುಮ್ನೇ ಬೆಟ್ ಕಟ್ ಮತ್ತೆ ನನ್ನೇ ಬೈ ಬೇಡಿ ನೀವ್ ಸೋತ್ ಮ್ಯಾಗೆ...ಎಡ್ಡಿ ಉಪ ಮುಖ್ಯಮಂತ್ರೀ ಸ್ಥಾನ ಬಿಟ್ಟು ಎತ್ಲಾಗೂ ಹೋಗಲ್ಲ ಅಂತ ನಂದೊಂದು ಐನೂರ್ ಬರಕೊಳ್ಳೋಣ್ಣೋ...' ಎಂದು ನನ್ನ ಕಡೆ ಸನ್ನೆ ಮಾಡಿದ.

ನಾನಿದ್ದೋನು, 'ಲೇ, ನನ್ನನ್ನೇನು ಚಿತ್ರಗುಪ್ತಾ ಅಂತ ತಿಳಕಂಡಿಯೇನೋ ನಿನ್ನ ಲೆಕ್ತಾ ಎಲ್ಲಾ ಬರಕೊಳ್ಳೋಕೆ, ಯಾರು ಗೆದ್ರೂ ನನಗರ್ಧ ಕೊಡ್ತೀರಿ ಅನ್ನೋದಾದ್ರೆ, ನಾನು ಎಲ್ಲಾ ಲೆಕ್ಕಾನೂ ಬರಕಳಕ್ ರೆಡಿ ಇದೇನ್ ನೋಡ್ರಿ...' ಎಂದು ನಕ್ಕೆ.

ಮೇಷ್ಟ್ರಿಗೆ ಯಾರ ಮಾತಿನಿಂದ ಎಷ್ಟೊತ್ತಿಗೆ ಸಿಟ್ಟ್ ಬರುತ್ತೋ ಯಾರಿಗ್ ಗೊತ್ತು...ಶುರು ಹಚ್ಚಿಕೊಂಡರು...ಎದೆ ವೇಗವಾಗಿ ಉಸಿರಾಡಿಕೊಳ್ಳುತ್ತಿತ್ತು...'ಕೊಡ್ತಾರ್ ಕೊಡ್ತಾರ್...ಅದೇನ್ ಅವ್ರಪ್ಪನ್ ಮನೇ ಮರಳು, ಮಾಯಸಂದ್ರದ ಹತ್ರ ಗೋಚಿಕೊಂಡು ಎಲ್ಲವನೂ ಕಾಸು ಮಾಡಿಕೊಂತಾನಲ್ಲ ಹಂಗೆ! ಹಿಂದೆ ಗಣಿಗಾರಿಕೆಯಾಯ್ತು, ಈಗ ಮರಳುಗಾರಿಕೆ ಶುರು ಹಚ್ಚಿಕೊಂಡೋರೆ...ಇನ್ನೊಂದ್ ಸಲ ಯಾವನ್ನಾದ್ರೂ ಬೆಟ್ ಕಟ್ಟೋ ಮಾತಾಡ್ರಿ ಮಾಡ್ತೀನ್ ನಿಮಗೆ...' ಎಂದು ಎಲ್ಲರನ್ನೂ ಶನಿ ವಕ್ರ ದೃಷ್ಟಿಯಲ್ಲಿ ನೋಡೋ ಹಾಗೆ ನೋಡಿ ಮರೆಯಾದರು.

ನಾನೂ, ನಂಜ, ತಿಮ್ಮಕ್ಕ - ಈ ಮೇಷ್ಟ್ರಿಗ್ ಏನಾಯ್ತು ಎಂದು ಹೇಳಿಕೊಳ್ಳುವಂತೆ ಮುಖ-ಮುಖ ನೋಡಿಕೊಂಡೆವು.

# posted by Satish : 2:43 pm
Comments: Post a Comment



<< Home

This page is powered by Blogger. Isn't yours?

Links
Archives