ಮೇಷ್ಟ್ರು ಮುಖ ಇತ್ತ ಚುನಾವಣೆಯಲ್ಲಿ ಹೆಚ್ಚು ಅಂತರದಿಂದ ಸೋತ ಭೈರೋನ್‌ಸಿಂಗ್ ಶೆಖಾವತ್ತ್‌ನ ಹಾಗಾಗಿತ್ತು, ಮೇಷ್ಟ್ರಿಗೆ ಆಘಾತವಾಗೋ ಇಂಥಾ ಸನ್ನಿವೇಶಗಳನ್ನ ನಂಜ ಒಳಗೊಳಗೇ ಅನುಭವಿಸಿಕೊಂಡು ಒಂದೇ ಕಣ್ಣಿನ ರೆಪ್ಪೆಯಡಿಯಲ್ಲಿ ನಗುತ್ತಿದ್ದರೆ ನಾನೂ, ತಿಮ್ಮಕ್ಕನೂ ನಮ್ಮ ಪಾಡಿಗೆ ನಾವು - ಯಾರು ದೇಶ ಆಳಿದರಂತೆ ಎಂದುಕೊಂಡು ಸುಮ್ಮನಿದ್ದೆವು.
ಮೇಷ್ಟ್ರು ಕನ್ನಡಪ್ರಭವನ್ನು ತಿರುವಿ ಹಾಕಿದ್ದೇ ಹಾಕಿದ್ದು, ಎಲ್ಲಿ ಯಾವ ಪುಟವನ್ನು ಓದಿದ್ರೂ ಅವರಿಗೆ ಶಾಂತಿ ಸಮಾಧಾನ ಎಂಬುದೇ ಇಲ್ಲ!
ಕೊನೆಗೂ ಉಸಿರನ್ನು ಹೊರಬಿಟ್ಟರು ಬಹಳ ಹೊತ್ತಿನ ನಂತರ ಶಿಳ್ಳೆ ಹೊಡೆಯಲು ಪ್ರಯತ್ನಿಸಿದ ಉಗಿಬಂಡಿಯಂತೆ ಅವರ ಉಸಿರಿನಲ್ಲಿ ಬಿಸಿ ಇರುವುದು ಎದ್ದು ಕಾಣುತ್ತಿತ್ತು, 'ಆ ವಮ್ಮಾ ಅಧಿಕಾರಕ್ಕ್ ಬಂದ್ಲು, ಈ ಭಂಡ್ ನನ್ ಮಕ್ಳು ಅಕಿ ಸೆರಗ ಹಿಡಿಯಕ್ ಹೊಂಟವರೆ...'
ನಮಿಗ್ಯಾಕೆ ದೊಡ್ಡೋರ್ ವಿಷ್ಯಾ ಎಂದು ಯಾವುದೋ ಕರಾರು ಪತ್ರಕ್ಕೆ ಸಹಿ ಹಾಕಿಕೊಟ್ಟವರಂತೆ ನಂಜನೂ, ತಿಮ್ಮಕ್ಕನೂ ಏನನ್ನು ಹೇಳಲು ಹೊರಡಲಿಲ್ಲ, ನಾನು ಮುಖವನ್ನು ಎತ್ತಿ ಮೇಲೆ ಹಿಡಿದೆ - ಮೊದಲು ಬರುವ ಮಳೆಯ ಹನಿಗಳನ್ನು ಬಿಸಿಲಿಗೆ ಬಸವಳಿದ ಹುಡುಗ ಕಾದು ನೋಡುವ ಹಾಗೆ...
'ನಮ್ಮ್ ದೇಶಾ ಏನೂ ಎತ್ತಾ ಅಂತ ಪ್ರಜ್ಞೆ ಇಲ್ಲದ್ ಜನ...ನಾಳೆ ಅಮೇರಿಕಾ ಇಂಗ್ಲೆಂಡಿಗೆ ಈ ವಮ್ಮಾ ಸೀರೆ ಸುತ್ತಿಕ್ಯಂಡು ಹೋಗ್ಲಿ ತಲೀ ಮ್ಯಾಲಾ, ಎಲ್ಲರೂ ನಗತಾರೆ...'
ಹ್ಞೂ, ನನಗೆ ಈಗ ಪೀಕಲಾಟಕ್ಕಿಟ್ಟುಕೊಂಡಿತು...ಹಲವಾರು ಆದರ್ಶಗಳನ್ನು ನಂಬಿಕೊಂಡಿರುವ ನಮ್ ಕೋಡೀ ಹಳ್ಳೀ ಮೇಷ್ಟ್ರು ಬಾಯಿಂದ ಬರುವ ಮಾತುಗಳೇ ಅವು? ಅವರ ಅಂತರಾಳಕ್ಕೆ ಇಳಿದವರಿಗೆ ಗೊತ್ತು...ಅವರ ಅಸಮಧಾನವಿರೋದು ಕಾಂಗ್ರೇಸ್ಸಿನ ಮೇಲೇ ಎಂದು..., ನನಗಿನ್ನು ಸುಮ್ಮನಿರಲಾಗಲಿಲ್ಲ,
'ಅಲ್ಲಾ ಮೇಷ್ಟ್ರೇ, ಏನಾರ ಹಾಳು ಬಡಿಸಿಕ್ಯಂಡ್ ಹೋಗ್ಲಿ, ಆ ವಮ್ಮಾ ಸೀರೆ ತೊಟ್ಟರೆಷ್ಟು, ಬಿಟ್ಟರೆಷ್ಟು!' ಎಂದು ಪರಿಸ್ಥಿತಿಯನ್ನು ತಿಳಿ ಮಾಡಲು ನೋಡಿದೆ, ತಿಮ್ಮಕ್ಕ, ನಂಜ ಸ್ವಲ್ಪ ನಕ್ಕಂತೆ ಮುಖ ಮಾಡಿದರು.
'ಹಂಗಲ್ರೀ, ಇದು ದೊಡ್ಡ ಪ್ರಿನ್ಸಿಪಲ್ ವಿಷ್ಯಾ...ಇನ್ನ್ ಮ್ಯಾಲೆ ರಾಷ್ಟ್ರಪತಿ ಅಂತ ನಾವ್ ಯಾರನ್ನ್ ಕರಿಯಣ...ಹೆಂಗುಸ್ರುನ್ ಕಟ್‌ಕೊಂಡ ತಂಡದವ್ರು ರಾಷ್ಟ್ರಪತ್ನಿ ಅನ್ನೋ ಪದವನ್ನು ಹುಟ್ಟು ಹಾಕದೇ ಇದ್ರೆ ಸಾಕು!'
ನಾವೆಲ್ಲಾ ಸುಮ್ನೇ ಇರೋದನ್ನ ನೋಡಿ...
'ಒಬ್ಬ ನಾಯಕನಾಗೋದಕ್ಕೂ ಲಾಯಕ್ಕಿರಬೇಕು...ನಾಕೂವರೆ ಅಡಿ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲಾ ಅಲ್ಲ ಇದೂ, ಗ್ಲೋಬಲ್ ಎಕಾನಮಿ ಕಾಲ...ನಮ್ ದೇಶದ ನಾಯಕ್ರೂ ಅಂದ್ರೆ ಝೂ ನಲ್ಲಿರೋ ಪ್ರಾಣಿಗಳನ್ನ್ ನೋಡ್ದಂಗ್ ಆಡ್ತಾರ್ ಜನ'.
ಈಗ ನಂಜನ ವರಸೆ, 'ಮೇಷ್ಟ್ರೇ, ಹೋಗ್ಲಿ ಬಿಡ್ರಿ, ಬ್ಯಾರೆ ಯಾವ್ದೋ ದೇಶ್ದೋರಿಗೆ ಅಂತ ನಾವು ನಮ್ ತನ ಬಿಡಾಕಾಯ್ತದೇ?'
ತಿಮ್ಮಕ್ಕ ಇದ್ದೋಳು, 'ನಿಮಿಗೆಲ್ಲಾ ಒಂದ್ ವಿಷ್ಯಾ ಇನ್ನೂ ಗೊತ್ತಾದಂಗಿಲ್ಲಾ, ಆ ಭೈರೋನ್ ಸಿಂಗ್ ಬಿದ್ದೋದ್ರೂವೇ, ನಮ್ ರಾಷ್ಟ್ರಪತೀ ಶೆಕಾವತ್ತೇ, ಗೊತ್ತಾ?'
ನಾನು, 'ತಿಮ್ಮಕ್ಕಾ ಶೆಕಾವತ್ತ್ ಸೋತವನೇ, ಈಗ ಈ ಪ್ರತಿಭಾ ಪಾಟೀಲ್ ಗೆದ್ದಿರೋದು...'
ತಿಮ್ಮಕ್ಕಾ ನಮ್ಮ್ ಜೊತೇ ಸೇರಿದ್ ಮ್ಯಾಲೆ ತನ್ನ್ ಸೋಲನ್ನೆಲ್ಲಿ ಒಪ್ಕೋತಾಳೇ, 'ಗೊತ್ತೂ, ನಂಗೂ ಗೊತ್ತು, ಆ ವಮ್ಮಾ ಪ್ರತಿಭಾ ಗಂಡನ್ನ್ ಹೆಸ್ರೂ ಏನ್ ಹೇಳೂ? ನಮ್ ರಾಷ್ಟ್ರದ ಪ್ರಥಮ ಪ್ರಜೆಯ ಗಂಡ ಶೆಕಾವತ್ತ್, ಆದ್ರಿಂದ ಶೇಖಾವತ್ತೇ ನಿಜವಾದ ರಾಷ್ಟ್ರಪತಿ!' ಎನ್ನಲು ದಿಗ್ಬ್ರಮೆಗೊಂಡ ನಂಜನನ್ನು ನಾವೆಲ್ಲಾ ಸಮಾಧಾನ ಮಾಡಿದೆವು.
Labels: ರಾಷ್ಟ್ರಪತಿ
# posted by Satish : 12:18 pm