Sunday, August 05, 2007

...ಧರ್ಮಸಿಂಗನ್ನೂ ಕೊಚ್ಚಿ ಬಿರಿಯಾನಿ ಮಾಡಿ ತಿಂದ ಜನ

'ಹೋಗೀ ಹೋಗಿ ಎಲ್ಲ್ ಮುಗಿಯುತ್ತೋ ನಿನ್ ಹಾದಿ ಅಂತಂದ್ರೆ ತಿಪ್ಪೇಗುಂಡೀ ತಾವ ಅಂದಿದ್ನಂತೆ...' ಎಂದು ನಂಜ ಕತ್ತಲೆಯಲ್ಲಿ ಕತ್ತಿಯಾಡಿಸೋ ಎತ್ತಿನಬಾಲದ ಥರ ಒಂದು ಹೇಳಿಕೆ ಒಗೆದನೋ, ಬಳಿಯಲ್ಲೇ ಪೇಪರ್ ಓದುತ್ತಾ ನಿಂತಿದ್ದ ನನಗೆ ಯಾವ ಕಾನ್ಟೆಕ್ಸ್ಟ್‌ನಲ್ಲಿ ಇವನು ಈ ಮಾತನ್ನು ಹೇಳಿರಬೋದು ಎಂದು ಒಮ್ಮೆ ಯೋಚಿಸಿಕೊಳ್ಳುವಂತಾಯಿತು. ಸುತ್ಲೂ ಧೋಧೋ ಮಳೆ ಹೊಡೆದೂ ಹೊಡೆದೂ ಒಂಥರಾ ಎಲ್ಲಾ ಕಡೆ ಗಿಚಿಪಿಚಿ ಕೆಸರು ತುಂಬಿಕೊಂಡು ಮುಂದಿನವಾರ ಬರೋ ಶ್ರಾವಣ ಒಂದು ವಾರ ಮುಂಚೇನೇ ಬಂದ ಅನುಭವವಾಗತೊಡಗಿತ್ತು. ಕತ್ತು ತಿರುಗಿಸಿ ನೋಡಿದರೆ, ಶ್ರಾವಣಕ್ಕೆ ಒಪ್ಪುವ ಮುಖ ಮಾಡಿಕೊಂಡು ತವರಿನ ಹಾದಿ ಕಾದುಕೊಂಡು ಮನಸಿಲ್ಲದಿದ್ದರೂ ಮನಸಿದ್ದವರಂತೆ ಕೆಲಸದಲ್ಲಿ ಮಗ್ನಳಾಗಿದ್ದಳು ತಿಮ್ಮಕ್ಕ.

'ನಂಜಾ, ಬೆಳ್‌ಬೆಳಗ್ಗೆ ತಲೇ ತಿನ್ನಬ್ಯಾಡ...ಒಂಚೂರು ಬಿಡಿಸಿ ಹೇಳುವಂತವನಾಗು ಶಿವಾ...' ಎಂದು ನಾಟಕೀಯವಾಗಿ ಬೇಡಿಕೊಂಡೆನೋ, ಲಿಂಗನಮಕ್ಕಿ ಡ್ಯಾಮ್ ತುಂಬಿ ಕ್ರೆಸ್ಟ್ ಗೇಟ್ ಎತ್ತಿದಾಗ ಹೊರಡುವ ನೀರಿನ ರಭಸದಂತೆ ನಂಜನ ನುಡಿಮುತ್ತುಗಳು ಬಿದ್ದು ಓಡತೊಡಗಿದವು.

'ಅಲ್ಲಣ, ಈ ನನ್‌ಮಕ್ಳು, ನಮ್ ಕರ್ನಾಟ್ಕ ರಾಜ್ಯದಾಗೆ ಅಧಿಕಾರದ ಬಗ್ಗೆ ಮಾತಾಡೋದು ನ್ಯಾಯಾ ತಾನೇ?...' ಎಂದು ಅತ್ಲಾಗೂ ಇಲ್ಲದ, ಇತ್ಲಾಗೂ ಅಲ್ಲದ ಗೋಡೇ ಮೇಲಿನ ದೀಪದ ಬೆಳಕಿನ ಕಿರಣದ ಹಾಗೆ ಒಂದು ಪ್ರಶ್ನೆಯಂತಿರುವ ಪ್ರಶ್ನೆಯನ್ನು ಎತ್ತಿ ನನ್ನ ಮೇಲೇ ಎತ್ತಿ ಬಿಸಾಕೋದೇ? ಹೇಳೀ ಕೇಳಿ ಗೋಡೇ ಮೇಲಿನ ದೀಪಾ ಹುಶಾರಾಗಿರಬೇಕು ಎಂದುಕೊಂಡು, 'ಸರಿ, ಏನೀಗ?' ಎಂದೆ.

'ಅದೇ ನಾನ್ ಹೇಳ್ತಾ ಇರೋದು, ಇವ್ರು ಹೊಡಕಣದು ಇರೋದೇಯಾ, ಹೋಗೀ ಹೋಗೀ ಆ ಡೆಲ್ಲಿವಮ್ಮಂಗ್ ಯಾಕ್ ಗಂಟ್ ಬಿಳ್ತಾರೇಂತಾ? ಆ ಸದಾನಂದ್ ಗೌಡ್ರು ಕೊಟ್ಟ ಹೇಳ್ಕೆ ಕೇಳ್ಳಿಲ್ಲಾ...ಈ ತಾಯ್‌ಗ್ಗಂಡ್ರು ನಮ್ ರಾಜ್ಯದಗೆ ಹೊಡೆದಾಕ್ಯಣೋ ಹೊತ್ಗೆ ಲೋಕಸಭೇ ಯಾಕ್ ವಿಸರ್ಜಿಸ್‌ಬಕು? ನಮ್ ರಾಜ್ಯದೊಳಗೆ ನುಸುಳ್ತಾ ಇರೋ ಕಮ್ಮ್ಯೂನಿಸಮ್ಮನ್ನ ಹಿಡಿತದಗೆ ಇಟ್ಟುಕೊಣಾಕ್ ಆಗ್ದವರು ದೇಶದಲ್ಲಿಂದ್ಲೇ ಕಮ್ಮ್ಯೂನಿಸಮ್ಮನ್ನ ಓಡುಸ್ತಾರಂತೆ...ಅದೇನೋ ಹೇಳ್ತಾರಲ್ಲ್ ತಮ್ಮ್ ಎಲೇಲಿ ಬಿದ್ದ ನೊಣಾ ಅಂತಾ...ಹಂಗಾಯ್ತು ಇವರುಗಳ ಕಥೆ...' ಎಂದು ಅವನು ಉಸಿರು ಬಿಟ್ಟು ಉಸಿರೆಳೆದುಕೊಂಡು ನನ್ನ ಕಡೆ ನೋಡುವಷ್ಟರಲ್ಲಿ, ನಾನು ಅವನ ಇಂಗಿತವನ್ನರಿತೂ ಏನು ಉತ್ತರಿಸಲಿ ಎಂದು ನೆಲ ನೋಡುತ್ತಲೇ ಮುಗಿಲನ್ನು ಕಾಣುವಷ್ಟರಲ್ಲಿ ಮೇಷ್ಟ್ರು ದರ್ಶನವಾಯಿತೋ, ಸದ್ಯ ಎಂದು ದೊಡ್ಡ ಉಸಿರೊಂದನ್ನು ಬಿಟ್ಟೆ.

'ಅದೇನೋ ಎಲೇಲಿ ಬಿದ್ದ ನೊಣಾ ಅಂತ ಕೇಳುಸ್ತು, ಏನ್ಲೇ ನಂಜ ಬೆಳ್ಳಂಬೆಳಗ್ಗೆ ಶುರು ಹಚ್ಚಿಕೊಂಡಿದಿಯಾ, ತೀರ್ಥ ತಗೊಂಡಿದಿಯೋ ಹೆಂಗೆ?' ಎಂದು ಅವನ ಹತ್ತಿರ ಹೋಗಿ ಮೂಸಿ ನೋಡುವರಂತೆ ಕಂಡುಬಂದರು. ಭಾನುವಾರ ಬೆಳಗ್ಗೆ ಬಿಳೀ ಬಣ್ಣದ ಕುರ್ತಾ ಪಾಯಜಾಮ ತೊಟ್ಟುಕೊಂಡು ಯಾವಾಗ್ಲೂ ಬಿಳಿ ಅಂಗೀ ಹಾಕ್ಕೊಂಡಿರೋ ಎಡಿಯೂರಪ್ಪನವರ ತಮ್ಮನ ಹಾಗೆ ಕಂಡುಬಂದರು.

ನಾನೆಂದೆ, 'ಏನಿಲ್ಲ, ಮೇಷ್ಟ್ರೆ. ಇವ್ನು ಆ ಸದಾನಂದಗೌಡ್ರ ಹೇಳ್ಕೆ ನೋಡ್ಕ್ಯಂಡು ಆ ಡೆಲ್ಲೀವಮ್ಮನ ಪರವಹಿಸಿ ಮಾತಾಡ್ತಿದ್ದ...' ಎಂದು ಉರಿಯೋ ಬೆಂಕಿಗೆ ದರಲೆ ಹಾಕಿದಂತೆ ಮಾಡಿ ಹಿಂದೆ ಸರಿದೆ. ಇತ್ತೀಚೆಗೆ ಡೆಲ್ಲೀನಲ್ಲಿ ಎರಡೆರಡು ಅಮ್ಮಂದಿರು ಸೇರಿಕೊಂಡು ಅದೇನೇನ್ ಕಿತಾಪತಿ ನಡೆಸ್ಯಾರೋ ಅಂತ ಮೇಷ್ಟ್ರು ಜ್ಯೂನಿಯರ್ ರಿಸರ್ಚ್ ಫೆಲ್ಲೋ ಥರ ಅಬ್ಸ್‌ಟ್ರ್ಯಾಕ್ಟ್‌ಗಳಲ್ಲಿ ಮೈಮರೆತು ತಲೆಕೆಡಿಸಿಕೊಂಡಿರೋ ವಿಷ್ಯಾ ಹೊಸತೇನೂ ಅಲ್ಲ.

'ಲೇ ನಂಜ, ರಾಜ್ಯ ರಾಜ್‌ಕಾರ್ಣಾನೇ ಅರಿದಿರೋ ನೀನು ಇನ್ನು ಡೆಲ್ಲೀ ವಿಷ್ಯಾ ಮಾತಾಡ್ತಿಯೇನಲೇ...' ಎಂದು ನಂಜನ ರೂಪದಲ್ಲಿ ಸದಾನಂದ ಗೌಡ್ರುನ್ನೇ ಹೆದರ್ಸೋರ ಹಾಗೆ ಮೇಷ್ಟ್ರು ಒಂದು ಧಮಕಿ ಹಾಕಿದ್ರೋ, ನಂಜನ ಮುಖ ಮ್ಲಾನವಾಯಿತು, '...ನೋಡೋ, ಆ ಸದಾನಂದ್ ಗೌಡ್ರುಗೆ ಹೋಗ್ ಹೇಳು... ಈ ಯಡಿಯೂರಪ್ಪಾ ಸಿಎಮ್ ಆಗಂಗಿಲ್ಲಾ, ಅದೇನ್ ಮಾಡಕಂತೀರೋ ಮಾಡಿಕಳ್ಳೀ ಅಂತ...ಅದೂ ಹೋಗೀ ಹೋಗೀ ಗೌಡ್ರು ಸವಾಸ...ಆ ಹೆಗ್ಡೆಗೇ ನೀರ್ ಕುಡಿಸಿದ ದೊಡ್ಡ ಮನುಷ್ಯರ ಸವಾಸ, ಧರ್ಮಸಿಂಗನ್ನೂ ಕೊಚ್ಚಿ ಬಿರಿಯಾನಿ ಮಾಡಿ ತಿಂದ ಜನ, ಇನ್ನು ಈ ಬಚ್ಚಾ ಯಡಿಯೂರಪ್ಪನ್ ಬಿಡ್ತಾರೇನೂ?'

ನಾನೋ, ನಂಜನೋ ಉತ್ತರಕೊಡಬೇಕು ಎಂದು ಬಾಯಿ ತೆರೀಬೇಕು, ಅಷ್ಟರಲ್ಲಿ ತಿಮ್ಮಕ್ಕ, 'ಮೇಷ್ಟ್ರೇ, ದೊಡ್ಡಗೌಡ್ರು ವಿಷ್ಯಾ ಯಾಕ್ರೀ ತರತೀರಿ ಈ ನಂಜನ ಮಿದುಳು ಇಲ್ಲದ ಮಾತಿನ ಮಧ್ಯೆ? ನಮ್ ಗೌಡ್ರು ವಿಷ್ಯಾ ಮಾತಾಡಕ್ ಬಂದ್ರೋ ನೋಡ್ರಿ ನಿಮ್ ಕಥಿ ಏನಾಕತಿ ಅಂತ?' ಎಂದು ಮೊನ್ನೆ ಮೊನ್ನೆ ಉದಯಾ ಟಿವಿಯಲ್ಲಿ ನಿರೂಪಕಿಯಾಗಿ ಕೆಲಸಕ್ಕೆ ಸೇರಿದ ಹುಡುಗಿಯಂತೆ ಬಳುಕಿ ಕತ್ತುಕೊಂಕಿಸಿ ನಂಜಕ್ಕ ಗೌಡರ ಪರವಹಿಸಿದಳು.

'ಏ ಸುಮ್ಕಿರಬೇ...ಹೋಗೀ ಹೋಗೀ ನಾನ್ ನಿಮ್ಮತ್ರ ಮಾತಾಡಕ್ ಹತ್ತೇನಲ್ಲ ಕೆಲ್ಸಾ ಬಗಸಾ ಬಿಟ್ಟು...' ಎಂದು ಹಣೆಯನ್ನು ನವಿರಾಗಿ ಹೊಡೆದುಕೊಂಡು ನಮ್ಮ ಉತ್ತರಕ್ಕೆ ಕಾಯದಂತೆ ಅದೇ ಬಂದ ಸಿಟಿಬಸ್ಸು ಜನರನ್ನು ತುಂಬಿಸಿಕೊಂಡು ಹೊರಟೋಗೋ ಹಾಗೇ ಹೊರಟೇ ಹೋದರು, ನಂಜನೂ-ನಾನೂ ಮುಖಮುಖ ನೋಡಿಕೊಂಡೆವು.

# posted by Satish : 10:55 am
Comments:
ಕಾಲಣ್ಣ,

ನಮಸ್ಕಾರ ಕಣಣ್ಣೋ..
ಹೆಂಗಿದೀರಾ?

ಭಾಳ ದಿವ್ಸ ಆತು ನೋಡ್ರೀ ಈ ಕಡೆ ಬಂದು..
ಮೇಷ್ಟ್ರು,ನಂಜ,ತಿಮ್ಮಕ್ಕ ಹೆಂಗವರೇ?
 
ಶಿವಣ್ಣಾ, ಆವಾಗಾವಾಗ್ ಬರ್ತಾ ಇರಿ ಈ ಕಡೆ!
ನಾವೆಲ್ಲಾ ಚೆಂದಾಕಿದೀವಿ...ಏನ್ ಸಮಾಚಾರ...ನಿಮ್ ಕಡಿ ಬಾಳಾ ಮಳಿ ಅಂತೆ?
 
Post a Comment



<< Home

This page is powered by Blogger. Isn't yours?

Links
Archives