ಕಾಲಚಕ್ರದ ಐವತ್ತನೇ ಬರಹ!’ಎಂಥಾ ಬಂಗಾರ್ದಂತಾ ಮನುಷ್ಯಾ!...’ ಎಂದು ಮೇಷ್ಟ್ರು ಉದ್ಗಾರ ತೆಗೀತಾ ಇದ್ದ ಹಾಗೆ ಯಾರ ಬಗ್ಗೆ ಹೇಳ್ತಾ ಇರಬೋದು ಈ ಮಾತ್ನಾ ಎಂದು ನಾನೂ-ನಂಜನೂ ಮುಖ ಮುಖ ನೋಡಿಕೊಂಡೆವು. ರಾಜ್ಕುಮಾರ್ ಬಗ್ಗೆ ಇರಬಹುದೇನೋ ಅನ್ನೋದು ನನ್ನ ಊಹೆ ಆಗಿದ್ರೆ ಆ ನಂಜನ ತಲೆಯಲ್ಲಿ ಅದ್ಯಾವ್ ಲೆಕ್ಕಾ ಓಡ್ತಿತ್ತೋ ಆ ದೇವನೇ ಬಲ್ಲ.
ಮೇಷ್ಟ್ರು ಬಂಗಾರದ ಮನುಷ್ಯನ ಕಥೆಯನ್ನು ಮುಂದುವರಿಸುತ್ತಾರೇನೋ ಎಂದು ಬಕಪಕ್ಷಿಗಳಂತೆ ಬಾಯಿ ಬಿಟ್ಟುಕೊಂಡು ಕಾಯ್ತಾ ಇದ್ದ ನನಗೂ-ನಂಜನಿಗೂ ನಿರಾಶೆಯಾಗುವಂತೆ, ಅತ್ಲಾಗೂ ಇಲ್ಲಾ ಇತ್ಲಾಗೂ ಇಲ್ಲ ಅಂತಾರಲ್ಲ ಹಂಗೆ ಮತ್ತೊಂದು ಸ್ಟೇಟ್ಮೆಂಟ್ ಕೊಟ್ಟರು, ’ಇನ್ಯಾಕ್ ತಡಾ ಮತ್ತೆ? ನಮ್ ದೇಶದ ಬಡವರ ಸಮಸ್ಯೆಗಳು ಪರಿಹಾರವಾದಂತೆಯೇ!’
ಈಗಷ್ಟೇ ಪ್ರಜಾವಾಣೀ ಓದ್ತಾ ಇರೋ ಮೇಷ್ಟ್ರಿಗೇನಾದ್ರೂ ಅರಳೂ-ಮರುಳೂ ಶುರುವಾಯ್ತೇನೋ ಅಂತ ನನ್ನ ದಿಗಿಲಾದ್ರೆ, ನನಗಿಂತ ಒಂದು ಹೆಜ್ಜೆ ಮುಂದೆ ಇರೋ ನಂಜ, ಮೇಷ್ಟ್ರು ತಾವ್ ಯಾವ ಸುದ್ದೀ ಓದ್ತಾ ಇರೋಬೋದು ಅನ್ನೋ ಕುತೂಹಲದಿಂದ ಗೋಣನ್ನು ಎತ್ತಿ ನೋಡಿದ್ರೂ ಉದ್ದವಾದ ಆಳು ಮೇಷ್ಟ್ರು ಕೈಯಿನ ಪೇಪರಿನ ತುಣುಕು ಕುಳಿತ ಕುಬ್ಜ ನಂಜನಿಗೆ ಆಕಾಶದ ಬೆಳ್ಳಿ ಮೋಡದಂತಾಗಿತ್ತು, ಬರೀ ಹಿಂದಿನಿಂದ ಕಾಣುತ್ತಿದ್ದ ಮುಖಪುಟ ಹಾಗೂ ಕ್ರೀಡಾಪುಟ ಕಾಣುತ್ತಿತ್ತೇ ವಿನಾ ಮತ್ತೇನೂ ಕಾಣಿಸದೇ ಕತ್ತಲಲ್ಲಿ ಚಿಮಣಿ ಬುಡ್ಡಿ ಹುಡುಕುವಂತಾಗಿತ್ತು ನಮ್ಮ ಸ್ಥಿತಿ.
ಎಲ್ಲವನ್ನೂ ಬಲ್ಲ ಉದ್ದಾಮ ಕೋಡೀಹಳ್ಳೀ ಮೇಷ್ಟ್ರಿಗೆ ನಮ್ ಪರಿಸ್ಥಿತೀನೂ ತಿಳೀಲಿಲ್ಲ ಅಂದ್ರೆ ಹೆಂಗೆ, ಅವರೇ ತಮ್ಮ ಈ ಹಿಂದಿನ ವಾಕ್ಯಗಳಿಗೆ ಸಮಜಾಯಿಷಿ ನೀಡಿದರು, ’ಅಲ್ರಲೇ, ದೊಡ್ಡ್ ಗೌಡ್ರು ಸ್ಟೇಟ್ಮೆಂಟ್ ಕೊಟ್ಟೋರೆ ನೋಡ್ರಿಲ್ಲಿ, ನನ್ ತಾವ ಹತ್ತ್ ಸಾವಿರ ಕೋಟೀ ರುಪಾಯ್ ಏನಾದ್ರೂ ಇದ್ರೆ ಅದನ್ನ ಸರಕಾರ ಮುಟ್ಟುಗೋಲು ಹಾಕ್ಕೋಂಡು ಬಡವ್ರನ್ನ ಉದ್ದಾರ ಮಾಡ್ಲೀ ಅಂತ...ನೋಡ್ರಿಲ್ಲಿ’, ಎಂದು ಪೇಪರಿನ ಒಂದು ಬದಿಯನ್ನು ನಮ್ಮ ಮುಂದೆ ಹಿಡಿದಂತೆ ಮಾಡಿ ಹಿಂದೆ ತೆಗೆದುಕೊಂಡರು.
ನಂಜ, ’ಆಞ, ಮೇಷ್ಟ್ರೆ ಅವ್ರೂ-ಇವ್ರೂ ಅಧಿಕಾರಕ್ಕೋಸ್ಕರ ಹೊಡಕಳೋ ಸಂದರ್ಭದಾಗ ಇದೆಂತ ಮಾತ್ರೀ ಅವ್ರುದ್ದೂ ಅಂತೀನಿ?’ ಎಂದು ಸಮಜಾಯಿಷಿ ಕೇಳಿದ್ದು ಮೇಷ್ಟ್ರಿಗೆ ಕ್ಲಾಸು ತೆಗೆದುಕೊಂಡು ಕೊರೆಯಲು ಒಳ್ಳೇ ಅನುಕೂಲ ಮಾಡಿಕೊಟ್ಟಂತಾಯ್ತು.
ಮೇಷ್ಟ್ರು, ’ನಂಜಾ, ನಿನಗ್ಗೊತ್ತಿಲ್ಲ. ಮಕ್ಳೂ ಮರಿ ವಿಷ್ಯದಾಗ ಮಾತ್ರ ಆ ವಯ್ಯಾ ಸಿಂಹಿಣೀ ಕಣೋ, ತನ್ ಮಗನ ಮ್ಯಾಲೆ ಯಾರೋ ಆರೋಪ ಹೊರಿಸಿ ಗೂಬೆ ಕೂರಿಸ್ತಾರೆ ಅಂತ ಗೊತ್ತಾದ ತಕ್ಷಣ ಕಾರ್ಯಾಚರಣೆಗೆ ಶುರು ಹಚ್ಚಿಕೊಂಡೋರೆ, ಅದೂ ಅಂತಿಂಥಾ ಆರೋಪ ಅಲ್ಲಪ್ಪಾ, ಕೊಲೇ, ಕೋಲೇ ಮಾಡಿರೋದು...ಅಲ್ಲೀ ಇಲ್ಲೀ ಗಣಿಗಾರಿಕೆ ಮಾಡೀ ಮಾಡೀ ದುಡ್ಡು ಸೇರಿಸಿದ್ದು ಸಾಲ್ದು ಅಂತ ಈಗ ದೊಡ್ಡ ಆರೋಪದ ಹೊರೀನೇ ಹೊರಿಸ್ಯಾರ್ ನೋಡು...’ ಎಂದು ಇನ್ನೂ ರಾಗ ಎಳೆಯುತ್ತಿದ್ದರೇನೋ, ಅಷ್ಟರಲ್ಲಿ ನಾನು ಮಧ್ಯೆ ಬಾಯಿ ಹಾಕಿದೆ,
’ಮೇಷ್ಟ್ರೇ, ಈ ವಿಷ್ಯಾನ ನಾನು ನಿಮ್ಹತ್ರ ಕೇಳ್ಬೇಕು ಅಂದುಕೊಂಡಿದ್ದೆ - ದೊಡ್ಡಗೌಡ್ರು ಕುಸಾಗೆ ಬಹಳ ತಾಳ್ಮೆ ಇದೇ ಅಂತ ಅಂದ್ರಂತಲ್ಲ, ನಿಜವೇ?’
’ಹೋಗ್ರೀ ನೀವೊಂದು, ಧರಮ್ ಸಿಂಗ್ ಸರ್ಕಾರ ಇನ್ನೂ ನೆಟ್ಟಗೆ ಕಣ್ಣ್ ಬಿಡೋ ಮೊದ್ಲೇ ರಿಸಾರ್ಟಿನೊಳಗೆ ಸೇರ್ಕೊಂಡು ಕುದುರೀ ವ್ಯಾಪಾರ ಕುದುರ್ಸಿ ಅದ್ಯಾವ್ದೋ ಅರ್ಜೆಂಟಿನೊಳಗ ಸರ್ಕಾರ ರಚಿಸಿರೋ ಮಂದೀಗೆ ಭಾಳಾ ತಾಳ್ಮೆ ಇದೇ ಅಂತ ಯಾವನ್ ಅಂತಾನ್ರೀ?’ ಎಂದು ನನ್ನನ್ನೇ ಮರು ಪ್ರಶ್ನೆ ಹಾಕಿದ್ರು, ನಂಜ ರಕ್ಷಣೆಗೆ ಬಂದ,
’ನಿಮಗ್ಗೊತ್ತಾಗಲ್ಲಣ್ಣೋ, ದೊಡ್ಡ್ ಗೌಡ್ರು ತಾವೇ ಅಧಿಕಾರ ಹಸ್ತಾಂತರ ಮಾಡೋ ಅಥಾರಿಟಿ ಮನ್ಷಾ ಅಂತ ತಮ್ಮಷ್ಟಕ್ ತಾವೇ ಸ್ವಯಂಘೋಷ್ಣೇ ಮಾಡ್ಕೊಂಡು ಕೂತಿರೋ ಹೊತ್ಗೆ ಕುಸಾಗಷ್ಟೇ ಅಲ್ಲಾ ಯಡ್ಡೀ ಸಾವ್ಕಾರ್ರಿಗೂ ತಾಳ್ಮೆ ಅನ್ನೋ ಮುಗಿದು ಹೋಗೈತಂತೆ!’
ಮೇಷ್ಟ್ರು, ’ಹಂಗಲ್ಲ, ಮಗಾ ಚೆಂದಾಗಿರ್ಬೇಕು, ಅನ್ನೋ ಆಸೆ ದೊಡ್ಡ್ ಗೌಡ್ರುದ್ದು ಯಾವನ್ ಬ್ಯಾಡಾ ಅಂದ...ಹೇಳಿದ್ ಮಾತಿಗ್ ತಕ್ಕಂತೆ ಅಧಿಕಾರ ಹಸ್ತಾಂತರ ಮಾಡಿ ಕೊಡಗಿದ್ದಿದ್ರೆ ಯಾವ ಆರೋಪಾನೂ ಬರ್ತಿರ್ಲಿಲ್ಲಾ, ಈಗ ನೋಡ್ರಿ ಹೆಂಗಾತು’.
ನಾನೆಂದೆ, ’ಮೇಷ್ಟ್ರೇ, ನಿಮಗನ್ಸತ್ತಾ ಅಧಿಕಾರ ಬಿಟ್ಟ್ ಕೊಡ್ತಾರೇ ಅಂತ?’
ನಾನೇನೋ ಪಾಪದ ಪ್ರಶ್ನೆ ಕೇಳ್ದೆ ಅಂತ ಮೇಷ್ಟೃ ನೇರವಾಗಿ ಉತ್ರಾ ಕೊಡ್ತಾರೇ ಅಂತ ಯೋಚಿಸ್ತಾ ಇದ್ರೆ, ’ಥೂ ನಿಮ್ಮಾ ಅಷ್ಟೂ ಗೊತ್ತಾಗಂಗಿಲ್ಲೇನ್ರಿ ನಿಮಗೆ, ಅಲ್ಲೀ-ಇಲ್ಲೀ ಇಷ್ಟೊಂದ್ ಓದ್ತಾ ಇರ್ತೀರಿ!’ ಎಂದು ಅಡ್ಡಗೋಡೇ ಮೇಲೆ ದೀಪಾ ಇಟ್ರೋ, ನಾನೂ-ನಂಜನೂ ಆ ಮಾತಿನ ಗೂಢಾರ್ಥ ಹುಡುಕ್ಕೊಂಡು ನಮ್ಮ ನಮ್ಮಲ್ಲೇ ಮುಳುಗಿ ಹೋದೆವು.
Labels: ಬಡತನ
# posted by Satish : 10:51 am