Saturday, November 10, 2007

ಕೊನೆಗೂ ಆದ್ಯಲ್ಲಪ್ಪಾ ನಾಯ್ಕಾ...

’ಅಬ್ಬಾ ಬಡ್ಡೀ ಹೈದ್ನೇ, ಕೊನೆಗೂ ಆದ್ಯಲ್ಲಪ್ಪಾ ನಾಯ್ಕಾ’ ಎಂದು ನಂಜ ಉಸಿರು ಬಿಡೋ ಹೊತ್ನಲ್ಲೇ ನಮ್ಮ್ ಮನೇ ಮುಂದೆ ದೇವ್ರು ಬಂದ ಹಾಗೆ ಕೋಡೀ ಹಳ್ಳೀ ಮೇಷ್ಟ್ರು ಪ್ರತ್ಯಕ್ಷಾ ಆಗೋದೇ! ಅದೂ ದೀಪಾವಳಿಯ ವಿಶೇಷಾ ಅನ್ನೋ ಹಾಗೆ ಬೆಳ್ಳಂಬೆಳಗ್ಗೇನೇ ಅಭ್ಯಂಜನ ಮಾಡಿ ಮೇಲಿಂದ ಕೆಳಗ್ಗಿನವರೆಗೆ ಬಿಳೀಬಟ್ಟೆಯನ್ನು ಧರಿಸಿ ಇನ್ನೂ ಮುಖ್ಯಮಂತ್ರೀ ಆಗಿ ಪ್ರಮಾಣವಚನ ಸ್ವೀಕರಿಸದಿದ್ರೂ ಆಗ್ಲೇ ಯಡಿಯೂರಪ್ಪನ ಶಿಷ್ಯರಾದಂಗೆ ಕಾಣ್ತಾ ಇದ್ದರು, ಅಲ್ಲಲ್ಲ ಕಂಗೊಳಿಸುತ್ತಾ ಇದ್ದರು.

ಮೇಷ್ಟ್ರು ಒಳ್ಳೇ ಮೂಡಿನಲ್ಲಿದ್ದಂಗಿತ್ತು, ಸದ್ಯ ನಂಜ ಬಚಾವಾದಾ - ಮೇಷ್ಟ್ರು, ’ಲೇ, ಮೆತ್ತಗ್ ಹೇಳಲೇ, ಗೌಡ್ರು ತಂಡ ಕೇಳ್ಕ್ಯಂಡ್ ಹೊಟ್ಟೇಗಿಟ್ಟೇ ಉರಿಸ್ಕ್ಯಂಡು ಮತ್ತೇ ಯಡ್ಡೀ ಕೆಳಗಿನ ಜಮಖಾನಕ್ಕೇನಾದ್ರೂ ಕೈ-ಗಿಯ್ ಹಾಕಿದ್ರೆ ಕಷ್ಟಾ...’ಎಂದು ಒಂದು ಉಸಿರು ಒಳಗೆಳಕ್ಕೊಳ್ಳಬೇಕು ಎನ್ನುವಷ್ಟರಲ್ಲಿ ನಡುವೆ ಬಾಯ್ ಹಾಕಿ, ’ಅಲ್ಲಾ ಸಾರ್...’ ಎನ್ನುವ ನಂಜನನ್ನೂ ಕೈ ಬಾಯ್ ಸನ್ನೇ ಮಾಡ್ತಾ ನಡುವೆ ನಿಲ್ಲಿಸಿ ಮತ್ತೆ ಮುಂದುವರಿಸಿದರು,

’ನೋಡ್ಲೇ ನಂಜಾ, ಇನ್ನ್ ಮ್ಯಾಲೆ ಶಿಕಾರಿಪುರದ್ ತಾವ ಹೋಗೋ ಹೊತ್ಗೇ ಉಷಾರು ಕಣ್ಲಾ, ಹೇಳೀ ಕೇಳೀ ಸೀ ಎಮ್ ಇರೋ ಊರು, ಈಗಾಗ್ಲೇ ಕುಣೀಯೋ ಹಂಗ್ ಕಾಣಿಸ್ತಿಲ್ಲಾ ನಿನ್ನ್ ಕಣ್ಣಿಗೆ? ಮತ್ತೆ ಯಡ್ಡೀ ಸಾಹೇಬ್ರೂ ನಮ್ಮ್ ಜಿಲ್ಲೇಯೋರು ಕಣ್ಲಾ, ನಾವ್ ಫುಲ್ ಸಪೋರ್ಟು ಕೊಡ್ಬೇಕು ಏನು...’ ಎನ್ನುವಷ್ಟರಲ್ಲಿ ನಂಜನೂ ಅತ್ತ ಕಡೆ ಇದ್ದ ತಿಮ್ಮಕ್ಕನೂ ಒಟ್ಟಿಗೆ ಬಾಯಿ ಹಾಕಿದ್ರು ಅಂತ ಮೇಷ್ಟ್ರು ಒಂದ್ಸರ್ತಿ ಸುಮ್ಮನಾದ ಹಾಗೆ ಕಾಣಿಸ್ತು.

ನಂಜ ಅದ್ಯಾವ್ದೋ ಭಟ್ರು ಮಂತ್ರ ಹೇಳೋ ಹಾಗೆ, ’ಅದಲ್ಲಾ ಸಾರ್, ನಾನು ಹೇಳ್ತಾ ಇರೋದೋ...’ ಎನ್ನುವಷ್ಟ್ರಲ್ಲಿ,
ತಿಮ್ಮಕ್ಕ, ’ಏ ಮೇಷ್ಟ್ರೇ, ಯಡಿಯೂರಪ್ಪನೂ ಮಂಡ್ಯದ ಗಂಡೇ, ಇಲ್ಲಿ ಶಿಕಾರಿಪುರದಾಗ ಮನೇ ಆಳ್ಯಾ ಆಗೋಗಿರೋ ವಿಷ್ಯಾ ಎಲ್ಲಾ ಮರತ್ರಾ?’ ಎಂದು ಮೇಷ್ಟ್ರು ಬಡ ಪಕ್ಕೆಲುಬಿಗೇ ತಿವಿದು ಬಿಡೋದೇ...ಮೇಷ್ಟ್ರು ಮುಖ ಇತ್ತೀಚೆಗಷ್ಟೇ ಪಕ್ಷಾಂತರ ಮಾಡಿ ಕಾಂಗ್ರೇಸಿಗೆ ಹೋಗಿ ಅಲ್ಲಿ ಒಣಗ್ತಾ ಇರೋ ಸಿದ್ದರಾಮಯ್ಯನ ಮುಖವಾದಂತಾಗಿ ಹೋಯ್ತು.

ಮೇಷ್ಟ್ರು ಎಲ್ಲಿ ಬಗ್ತಾರೆ ಬಡಪೆಟ್ಟಿಗೆ, ಮತ್ತೆ ಮುಂದುವರೆಸಿದರು ತಮ್ಮ ಗೆದ್ದೆತ್ತಿನ ಬಾಲವನ್ನು ಹಿಡಿಯೋ ಕಾಯಕ, ’ತಿಮ್ಮಕ್ಕಾ, ಅವ್ರು ನಮ್ಮ್ ಕ್ಷೇತ್ರದಾಗ ಗೆದ್ದಮ್ಯಾಗೆ ಮುಗೀತ್, ಅವ್ರು ನಮ್ಮ್ ಜಿಲ್ಲೇ ಮನುಷ್ಯಾನೇ...ನಮ್ಮ್ ಜಿಲ್ಲೇ ಅಂದ್ರೆ ಏನ್ ಅಂತ ತಿಳಕಂಡೀ ಇವ್ರು ಎಷ್ಟ್ನೇ ಮುಖ್ಯಮಂತ್ರಿ?’

ತಿಮ್ಮಕ್ಕ, ’ಏ ಸುಮ್ಕಿರ್ರೀ, ಎಷ್ಣೇ ಮುಖ್ಯಮಂತ್ರಿ ಆದ್ರೆ ನಮಗೇನು ಸಿಗ್ತತಿ, ಆ ಹಾಳ್ ರಸ್ತೇ ಹೊಂಡಗಳನ್ನ ಯಾವನಾದ್ರೂ ಮುಚ್ಚಿಸ್ತಾನಾ, ಇಲ್ಲಿರೋ ಕೆರೆಕಟ್ಟೇ ಹೂಳನ್ನ ಯಾವನಾದ್ರೂ ತೆಗೆಸ್ತಾನಾ? ಎಲ್ಲಾ ತಮ್ ತಮ್ ಗುಂಡೀ ಮುಚ್ಚೋಷ್ಟು ರೊಕ್ಕಾ ಮಾಡ್ಕಂಡ್ರು - ಈಗಿನ್ ಕಾಲದ್ ತಿಂಗಳ ಲೆಕ್ಕ ದೋಸ್ತೀ ಸರ್ಕಾರಾನಾ ಯಾವಾನಾದ್ರೂ ನ್ಯಂಬಿಕ್ಯಂಡ್ ಬಾಳ್ವೇ ಮಾಡ್ದಂಗೇ ಸೈ!’

ಮೇಷ್ಟ್ರು ಎಲ್ಲಿ ಬಿಡ್ತಾರೆ, ’ಅಲಾಲಾ, ಇಷ್ಟು ದಿನಾ, ಪಾಪ ಯಡ್ಯೂರಪ್ಪಾ ಅಂತಿದ್ದ ನೀನು, ಅದೇನ್ ಇವತ್ತು ನಿನ್ನ ರಾಗಾ ಬದಲಾಯಿಸ್ತಿರೋದು?’ ಎಂದು ಪ್ರಶ್ನೆ ಹಾಕಿ ತಾವು ತೋಡಿದ ಗುಂಡಿಗೆ ತಾವೇ ಬಿದ್ದ ಎಲ್ಲ ಲಕ್ಷಣಗಳನ್ನೂ ತಮ್ಮ ಮುಖದಲ್ಲಿ ಬಿಂಬಿಸತೊಡಗಿದರು.

ತಿಮ್ಮಕ್ಕ, ’ಮತ್ತಿನ್ನೇನು, ಇಷ್ಟು ದಿನಾ ಅವರಿಗೆ ಬಯ್ಯೋ ಜನಗಳು ಇವತ್ತು ಅವರಿಗೇ ಮಣೇ ಹಾಕೋದನ್ನ ನೋಡಿಕ್ಯಂಡ್ ಹೆಂಗ್ ಸುಮ್ನಿರ್ಲೀ!’ಎಂದ ಕೂಡಲೇ ಒಂದು ಮಹಾ ಮೌನ ನೆಲೆಸಿ, ಇಷ್ಟು ಹೊತ್ತು ಅದೇನೋ ಹೇಳಲು ಹಾತೊರೆಯುತ್ತಿದ್ದ ನಂಜನ ಕಡೆಗೆ ನಾವೆಲ್ಲರೂ ಒಟ್ಟಿಗೆ ನೋಡಿದ ಕೂಡಲು ಅವನು ಜೀವ ಬಂದ ಬೊಂಬೆಯಂತಾಗಿ,

’ನಾನು ಹೇಳ್ತಾ ಇದ್ದದ್ದು ಅನಿಲ್ ಕುಂಬ್ಳೇ ಟೆಸ್ಟ್ ಕ್ರಿಕೇಟ್ ಕ್ಯಾಪ್ಟನ್ ಆದ ಬಗ್ಗೆ...’ ಎಂದು ನಿಧಾನವಾಗಿ ರಾಗ ಹೊರಡಿಸಿದ.

ಮೇಷ್ಟ್ರು, ’ಏನೋ, ಅವನೂ ಕನ್ನಡೋನು ತಾನೆ, ಅಷ್ಟು ಸಾಕು ಬಿಡು!’ ಎಂದು ಪೂರ್ಣವಿರಾಮವನ್ನು ಘೋಷಿಸಿ ತಾವು ಧರಿಸಿದ ಬಿಳಿ ಬಟ್ಟೆಗಳ ಒತ್ತಾಯಕ್ಕೆ ಮಣಿದು ಶಾಂತಿಯನ್ನು ಘೋಷಿಸಿದರು. ತಿಮ್ಮಕ್ಕ ಸೆರಗನ್ನು ಕಟ್ಟಿ ಒಳಕ್ಕೆ ನಡೆದಳು.

Labels: ,


# posted by Satish : 2:35 pm
Comments:
ಕಾಳಣ್ಣ,

ಹೆಂಗಿದಿಯಣ್ಣಾ...ನಿನ್ನ ಮಾತು ಕೇಳಿ ಭಾಳ ದಿನ ಆಗಿತ್ತು ನೋಡು..

ಯಡ್ಡಿ ಕೊನೆಗೂ ಮು.ಮಂ ಆಗಿ, ಅದೇ ವೇಗದಲ್ಲಿ ಮಾಜಿ ಮು.ಮಂ ಆಗಿದ್ದು..ಎಲ್ಲಾ ಎಷ್ಟು ಬೇಗ ಆಗಿಬಿಟ್ಟಿತ್ತು.

ಇದರ ಬಗ್ಗೆ ಮೇಷ್ಟ್ರು ಅಭಿಪ್ರಾಯ ತಿಳಿಯಲಿಲ್ಲ..
 
ಶಿವಣ್ಣೋ,

ಏನ್ ಸಮಾಚಾರ, ಸುದ್ದೀ ಸಕಾರ್ ಇಲ್ಲಲ್ಲಣ್ಣೋ!
ಹೆಂಗಿದೆ ಬದುಕು, ಹೆಂಗಿದೆ ಕ್ಯಾಲಿಫೋರ್ನಿಯಾ?! :-)

ಮೇಷ್ಟ್ರು ಛಳಿಗೆ ಸಪ್ಪಗಾಗಿ ಹೋಗಿದ್ದಾರೆ ಅವರಿಗೂ ಪಾಪ ವಯಸ್ಸಾಯ್ತು ನೋಡಿ!
 
Post a Comment



<< Home

This page is powered by Blogger. Isn't yours?

Links
Archives