Saturday, December 16, 2006

ತೃಣವೆಂದರೇನು?

ಕೋಡೀ ಹಳ್ಳಿ ಮಾಸ್ತರು ಅದ್ಯಾಕೋ ಮೂಡು ಸರಿ ಇಲ್ಲದ ಕಾರಣಕ್ಕೆ ನೆಚ್ಚಿನ ಪ್ರಜಾವಾಣಿ ಬಿಟ್ಟು ಕನ್ನಡ ಪ್ರಭ ಓದೋಕ್ ಹಿಡಿದಿದ್ದನ್ನು ನೋಡಿ ನನಗೆ ಚಾಮುಂಡೀ ಕ್ಷೇತ್ರದಲ್ಲಿ ಗೌಡರ ತಂಡದ ಸೋಲನ್ನು ಬಹು ಗಂಭೀರವಾಗಿ ಪರಿಗಣಿಸಿ ಒಂದು ಕೋನದಲ್ಲಿ ಮೇಷ್ಟ್ರು ಹೈರಾಣದಂತೆ ಕಂಡು ಬರತೊಡಗಿದರು. ಮೂಗಿನ ಮೇಲಿನ ಕನ್ನಡಕವನ್ನು ಏರೇರಿಸಿ ಓದೋ ಗತ್ತನ್ನ ನೋಡಿ ಅಂಥಾ ಘನಂದಾರಿ ವಿಷ್ಯಾ ಏನಪಾ ನೋಡೋಣ ಅಂತಂದು ನಾನು ಮೆದುವಾಗಿ 'ಮೇಷ್ಟ್ರೇ...' ಅಂದೆ, ಯಾವ ಉತ್ತರವೂ ಬಂದಂತೆ ಕಾಣಲಿಲ್ಲ.

ಮೆದುವಾಗಿ ಮಾತಾಡಿದ್ರ ಮಂದಿ ಉತ್ರ ಕೊಡೋದಿಲ್ಲ ಅಂತ ಈ ಮೇಷ್ಟ್ರೇ ಶಾಲೀ ಒಳಗ ಹೇಳಿದ್ದು ಗ್ಯಾಪ್ಕ ಬಂತು, 'ಮೇಷ್ಟ್ರೆ...ಏನ್ ಸ್ವಾಮಿ ಕರೆದ್ರೂ ಕೇಳದ ಸಿದ್ಧರಾಮಿ ಹಂಗ್ ಆಗೋದ್ರಲ್ಲಪ್ಪ್ಲಾ...' ಎಂದು ಸ್ವಲ್ಪ ಧ್ವನಿ ಎತ್ತರಿಸಿ ಹೇಳಿದ್ದಕ್ಕೆ ಪೇಪರಿನ ಅಂಚಿಂದ ಮೇಷ್ಟ್ರು ತೂರುಕಣ್ಣು ತೋರಿಬಂದವು.

'ಚಾಮುಂಡೇಶ್ವರಿ ಸೋಲು ತೃಣಕ್ಕೆ ಸಮಾನ ಅಂತ್ ನೋಡು...ಹಂಗಿದ್ರೆ ಇದೆ ಈ ನನ್ ಮಕ್ಳು ಅಲ್ಲಿ ಗೆಲ್ಲಬಕು ಅಂತಾ ಮಂದೀಗೆ ಹೆಂಡಾ ಹಂಚೋಕ್ಯಾಕ್ ಹೋಗ್‌ತಿದ್ರೂ ಅಂತೀನಿ...' ಎಂದು ಸಾಕ್ಷಾತ್ ದೇವೇಗೌಡರೇ ಬಂದಂತೆ ಕೆಂಡಕಾರುತ್ತ ಎದ್ದು ನಿಂತರು. 'ಎನಾಯ್ತು ಈಗ ಮೇಷ್ಟ್ರೇ, ಸೋಲುಗೆಲುವೂ ಅನ್ನೋದ್ ಇರೋದೇ ಅಲ್ವಾ...ಅದೂ ಸೀಜನ್ಡ್ ರಾಜಕಾರಣಿಗಳಿಗೆ...' ಎನ್ನುವಾಗ ಒತ್ತರಿಸಿ ಗಂಟಲೇರಿಸಿಕೊಂಡು ನನ್ನ ಮಾತನ್ನ ಮಧ್ಯದಲ್ಲೇ ನಿಲ್ಲಿಸಿ 'ಅಲ್ಲಾ, ತೃಣಕ್ಕೆ ಸಮಾನ ಅಂದ್ರೆ, ತೃಣ ಅಂದ್ರೆ ಈ ನನ್ ಮಕ್ಳು ಮನಿ ಬಚ್ಚಲ್ ಕಲ್ಲು ಸಮಾನ ಅಂತ ಅರ್ಥನೇನು? ಯಾವಾನಾರಾ ಗೆಲ್ಲಲಿ, ಸೋಲಲಿ, ಅದಕ್ಕೆ ಕಾರಣ ಅಲ್ಲಿನ ಮತದಾರರು, ಅಂಥಾ ಮತದಾರರ ಮಾತು-ಕಥೆಗಳನ್ನೇನೋ ಮೂಲೆಗೆ ತಳ್ಳಿದ್ದಾತು, ಅವರು ಹಾಕೋ ಒಂದ್ ವೋಟ್‌ ಅನ್ನೂ 'ತೃಣ' ಅಂತಾರಲ್ಲ... ಇಷ್ಟು ವರ್ಷ ಗೇದ್ರೂ ಮುಂಡೇಗಂಡ್ರಿಗೆ ಒಂದ್ ಸ್ಪೋರ್ಟ್ಸ್‌ಮ್ಯಾನ್‌ಶಿಪ್ಪಾಗ್ಲೀ, ಸೋಲನ್ನ ಒಪ್ಪಿಕೊಳ್ಳೋ ಸ್ಪಿರಿಟ್ಟಾಗ್ಲೀ ಬರಲಿಲ್ಲವಲ್ಲ...' ಎಂದು ಉದ್ದುದ್ದವಾಗಿ ಅಲವತ್ತಿಕೊಂಡರು.

ಮೊಟ್ಟ ಮೊದಲನೇ ಸಾರಿ ಮೇಷ್ಟ್ರು ಯಾವ್ದೋ ತರಾಸು ಕಾದಂಬರಿಯಿಂದ ಸ್ಪೂರ್ತಿ ಪಡೆದಂತೆ ಕಂಡು ಬಂದಿದ್ದೂ ಅಲ್ದೇ ಮನದಲ್ಲಿ ಅನ್ನಿಸಿದ್ದನ್ನ ದೊಡ್ಡದಾಗಿ ಹೇಳಿದ್ದನ್ನೂ ನೋಡಿ, ಇನ್ನು ಇಂತಹ ಮಾತನ್ನು ಆಡೋ ಹೊತ್ತಿಗೆ ಪಾರ್ಟಿ ಮೆಂಬರ್ರು ಯಾವನಾರ್ರೂ ಬಂದ್ ನನ್ನ್ ಮುಖಭಂಗ ಆಗದಿರಲಿ ಎಂದು ಮೇಷ್ಟ್ರನ್ನು ಸಮಾಧಾನ ಮಾಡಲು ನೋಡಿ ನಿಧಾನವಾಗಿ ಸಾಗಹಾಕ ತೊಡಗಿದೆ,

'ಮೇಷ್ಟ್ರೆ...ಇವರ ಬುದ್ಧಿ ನಿಮಗೆ ಗೊತ್ತಿರದೇ ಇರೋದೇನ್ರೀ? ಅದೆಲ್ಲ ರಾಜಕೀಯ ಆಟಪ, ಒಂದ್ ರೀತಿ ಮಾಯೆ ಇದ್ದಂಗ್ರೀ...ಗೌಡ್ರು ತಂಡ ಹ್ಞೂ ಅಂದ್ರ ಊರೇ ಸೇರ್ತತಿ, ಹಂಗಿರಬೇಕಾದ್ರೆ ಇನ್ನೇನಾರ ಬಾಯಿಗೆ ಬಂದದ್ದು ಅಂದು ಯಾವ್ದಾದ್ರೂ ನೀರಿಲ್ಲದ ಜಾಗಕ್ಕೆ ವರಗಾ ಆಗಿ ಒದ್ದಾಡಿ ಹೋದೀರಿ... ಸ್ವಲ್ಪ ಹುಷಾರಿರ್ರೀ...ಈಗ ನಾವೂ ನೀವೂ ಮಾತಾಡಿಕೊಂಡ ಮಾತ್ರಕ್ಕ ಏನಾತು, ಏನಾಗ್ತತಿ, ಹಂಗಿದ್ದ ಮೇಲೆ ನಮ್ ನಾಲಿಗಿ ಹೊಲಸು ಯಾಕ್ ಮಾಡಿಕ್ಯಬಕು?' ಎಂದಿದ್ದು ಮೇಷ್ಟ್ರಿಗೆ ಸುತಾರಾಂ ಇಷ್ಟವಾಗಲಿಲ್ಲ ಎಂದು ತೋರಿತು...

'ನೋಡ್ರೀ, ಮನಸಿಗೆ ಅನ್ನಿಸಿದ್ದನ್ನ ಆಡೋದನ್ನ ಸ್ವತಂತ್ರ-ಹಕ್ಕು ಅಂತಾ ಕರೀತಾರೆ...ನಿಮ್ ನಿಮ್ ಬುದ್ಧಿವಂತಿಕೆ ಏನಾರ ಇರಲಿ, ನಾಜೂಕ್ ಆಗಿ ಮಾತಾಡೀನೂ ಲೋಕದಾಗ ಏನೂ ಉದ್ಧಾರ ಆಗೋದಿಲ್ಲ ಅನ್ನೋದೂ ನಿಮ್ಮಂಥೋರಿಗೆ ಗೊತ್ತಿದ್ರು ಸಾಕು!' ಎಂದು ಇಷ್ಟರವರೆಗೆ ಏನೂ ಆಗೇ ಇಲ್ಲ ಎನ್ನುವಂತೆ ಮತ್ತೆ ಕನ್ನಡಪ್ರಭವನ್ನು ಮುಖದ ಮುಂದೆ ಹರವಿಕೊಂಡರು, ನಾನು ರೇಶಿಮೆಯಲ್ಲಿ ಸುತ್ತಿ ಹೊಡೆತ ತಿಂದವನಂತೆ ಹ್ಯಾಪ್ ಮುಸುಡಿ ಹಾಕಿಕೊಂಡು ಮನೆಯ ದಾರಿ ಹಿಡಿದೆ.

# posted by Satish : 3:35 pm  3 comments

Saturday, December 09, 2006

ನೀತಿ-ಹೊಣೆ ಇವೆಲ್ಲಾ ಇದ್ದಿದ್ರೆ ರಾಜಕಾರಣಿಗಳ್ಯಾಕ್ ಆಗ್ತಿದ್ರು?

ಪ್ರಜಾವಾಣಿ: ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯ್ಲಲಿ ಜನತಾದಳ (ಎಸ್) ಅಭ್ಯರ್ಥಿಯು ಅನುಭವಿಸಿರುವ ಸೋಲಿನ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ವಿವಿಧ ಸಂಘಟನೆ, ರಾಜಕೀಯ ಪಕ್ಷಗಳು ಆಗ್ರಹಿಸಿವೆ.

ಮೈಗಂಟಿರೋ ಎಂತೆಂಥಾ ಸಗಣೀನೇ ಕೊಡಗಿಕೊಂಡೇಳೋ ಈ ರಾಜಕಾರಣಿಗಳಿಗೆ ಈ ಸೋಲು-ಗೆಲುವು ಅನ್ನೋದೆಲ್ಲಾ ಎಷ್ಟರ ಮಟ್ಟಿಂದು? ನೀತಿ ಅನ್ನೋದೇನಾದ್ರೂ ಇದ್ರೆ ನೈತಿಕತೆ ಇರುತ್ತೆ, ನೈತಿಕತೆ ಇದ್ದಮೇಲೂ ಹೊಣೆ ಅಥವಾ ಜವಾಬ್ದಾರಿ ಇರುತ್ತೇ ಅಂತಾ ಯಾರ್ ಗ್ಯಾರಂಟೀ ಕೊಡೋಕಾಗುತ್ತೆ?

ಅದ್ ಸರಿ, ಈ ಸೋಲಿಗೂ ಹಾಗೂ ಅಪ್ಪಾ-ಮಕ್ಳು ತಮ್ಮ-ತಮ್ಮ ಕೆಲ್ಸಕ್ಕೆ ರಾಜೀನಾಮೆ ಕೊಡಬೇಕು ಅನ್ನೋದು ಯಾವ ನ್ಯಾಯ. ಅವನು ಯಾವನೋ ಸೋತ, ಅದಕ್ಕ್ಯಾಕ್ ಇವರು ಸರ್ಕಾರ ಬದಲಾಯಿಸಬೇಕು ಅಂತೀನಿ.

ಮೊದ್ಲು ಈ ಕಾಲೆಳೆಯೋರಿಗೆ ನೀತಿ-ಹೊಣೆ ಅನ್ನೋದಿರಬೇಕು, ಏನೋ ಚಾಮುಂಡೇಶ್ವರಿ ದಯೆಯಿಂದ ಯಾರೋ ಸೋತ್ರು, ಯಾರೋ ಗೆದ್ರು ಅಂದಾಕ್ಷಣ ಅದನ್ನ ಇವರು ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳೋದಕ್ಕೆ ಬಳಸ್ತಾರ್ ನೋಡಿ ಅದಕ್ಕೇನ್ ಅನ್ನೋಣ. ಹಂಗಂತ ಸಿದ್ದರಾಮಿ ಏನಾದ್ರೂ ಸೋತಿದ್ರೆ ಅದರ ಕಥೀನೇ ಬೇರೆ ಇರತಿತ್ತು. ಗೌಡರ ಪಾಳ್ಯ ಕುರುಬರನ್ನ ಜೀವಂತ ಮಸಾಲೆ ಹಾಕಿ ಬೇಯಿಸಿಕೊಂಡು ತಿಂದಿರೋದು.

ನಿಮಗನ್ಸಲ್ಲಾ, ನೀತಿ-ಹೊಣೆ ಇವೆಲ್ಲಾ ಇದ್ದಿದ್ರೆ, ರಾಜಕಾರಣಿಗಳ್ಯಾಕ್ ಆಗ್ತಿದ್ರು? ಅವ್ವಾ ಚಾಮುಂಡೇಶ್ವರಿ, ನೀ ದೊಡ್ಡೋಳ್ ತಾಯಿ!

# posted by Satish : 8:25 pm  2 comments

This page is powered by Blogger. Isn't yours?

Links
Archives