Sunday, June 01, 2008

ನೂರಾ ಹತ್ತು ಜನ ನೂರಾ ಹತ್ತು ಮಂತ್ರಿಗಳು!

’ಏನ್ ಮೇಷ್ಟ್ರೇ ಇತ್ಲಾಗೆ ಯಡಿಯೂರಪ್ಪ ಅಧಿಕಾರ ಹಿಡ್ದಿದ್ದೇ ತಡಾ ನೀವು ಟ್ರಂಕಿನ್ಯಾಗ್ ಇದ್ದ ಹಳೇ ರೇಷ್ಮೆ ಜುಬ್ಬಾ ತೆಕ್ಕೊಂಡು ಹಾಕ್ಕೊಂಡಿರೋ ಹಾಗಿದೆಯೆಲ್ಲಾ?’ ಎಂದು ತಮಾಷೆ ಮಾಡ್ದೋರು ಯಾರು ಅಂತ ನೋಡಿದ್ರೆ ನಂಜ ಹಲ್ಲು ಗಿಂಜಿಕೊಂಡು ಜಗಲಿ ಮೇಲಿನ ಕಂಭಕ್ಕೊರಗಿಕೊಂಡು ಕುಂತಿದ್ದ.

ನಮ್ಮನೆ ಕಟ್ಟೆ ಮೇಲೆ ಮಧ್ಯಾಹ್ನ ಎರಡೂವರೆ ಎಜೆ ಬಸ್ಸು ಕಾಯೋ ಗಡಿಬಿಡಿಲಿದ್ದ ಮೇಷ್ಟ್ರು ಗಂಭೀರರಾಗೇ ಇನ್ನೂ ಕನ್ನಡಪ್ರಭದೊಳಗೆ ತಮ್ಮ ಮುಖವನ್ನು ಹೂತುಕೊಂಡಿರೋದು ಎಲೆಕ್ಷನ್ನಿನ್ನಲ್ಲಿ ಸೋತ ಗೌಡರ ಬಳಗ ದಿವ್ಯಮೌನವನ್ನು ಧರಿಸಿಕೊಂಡಷ್ಟೇ ಸಹಜವಾಗಿತ್ತು.

’ಏ ನಿಂದೊಳ್ಳೇ, ಯಾವ್ದೋ ಮದ್ವುಗಿ ಹೊಂಟೀನಿ, ಸುಮ್ನಿರು’ ಎಂದು ಮೇಷ್ಟ್ರು ನಂಜನ್ನ ನೋಡಿ ಗದರಿಕೊಂಡ್ರು.

’ನಿಮ್ದೇ ಮಜಾ ಬಿಡ್ರಿ. ಅದ್ಸರಿ, ನೋಡುದ್ರಾ ಇನ್ನೂ ನನ್ ಮಕ್ಳು ಅಧಿಕಾರಕ್ಕ್ ಸೇರಿ ಎಲ್ಡ್ ದಿನ ಆಗಿಲ್ಲ, ಆಗ್ಲೇ ಅವರೊಳಗಿದ್ದ ವಿಷಾ ಎಲ್ಲಾ ಕಾರ್‌ಕೊಂಡ್ ಸಾಯೋಕ್ ಹತ್ತವ್ರೆ, ಇಂಥೋರಿಗೆಲ್ಲ ನಮ್ ದೊಡ್ಡ್ ಗೌಡ್ರು ಥರ ಒಬ್ರು ದೊಣ್ಣೆ ಆಡಿಸ್ಕೊಂಡೇ ಇದ್ದಿದ್ರೆ ಸರಿ ಆಗ್ತಿತ್ತು, ಅಂತೋರ್ ಯಾರಿದಾರ್ ರ್ರೀ, ಯಡಿಯೂರಪ್ಪನ್ ಜೊತೆ?’

’ಇದೆಲ್ಲ ಮಾಮೂಲೀ ಕಣ್ಲಾ, ಅವ್ರು-ಇವ್ರು ಅಧಿಕಾರಕ್ಕೆ ಬಂದ್ರೆ ಎಲ್ರೂ ತಾವ್ ಮಂತ್ರೀ ಮಾಗಧರಾಗ್ ಬೇಕು ಅನ್ನೋದೇ ಕನ್ಸು ಅವ್ರುಗಳ್ದು. ಅವ್ರು ಎಲೆಕ್ಷನ್ನಿಗೆ ಸುರ್ದಿರೋ ದುಡ್ಡು ವಾಪಾಸ್ ಬರಬಕು ಅಂತಂದ್ರೆ ಮಂತ್ರೀನೇ ಆಗ್ಬಕು. ಸುಮ್ಕೆ ಎಮ್ಮೆಲ್ಲೆ ಆಗಿ ವಿಧಾನ ಸೌದ್ದಾಗೆ ಧೂಳ್ ತಿನಕೊಂಡ್ ಬಿದ್ದಿದ್ರೆ ಏನ್ ಪ್ರಯೋಜನ್ ಹೇಳು?’

’ಅಲ್ಲಾ ಸಾರ್, ಹಿಂದೆಲ್ಲಾ ಮಂತ್ರಿಗೊಳು ಅಂದ್ರೆ ಒಂದು ಐದ್ ಸಾರ್ತಿ ನಾದ್ರೂ ಗೆದ್ದು ಬಂದಿರತಿದ್ರು, ಈ ಸರ್ತಿ ಎಲ್ಡೂ-ಮೂರನೇ ಸರ್ತಿ ಗೆದ್ದೋರೂ ಉರಕೊಂಡು ನಿಂತಾರಂತೆ ನಿಜವೇ?’

’ಹೌದಪಾ, ಹೌದು. ಎಲ್ಲವನಿಗೂ ಮಂತ್ರೀ ಪದವಿ ಬೇಕು, ಎಲ್ಲಿಂದಾ ತರಾಣ?’

’ನಾನೊಂದು ಐಡಿಯಾ ಹೇಳ್ಲಾ...’

’...’

’ಇವ್ರು ಗೆದ್ದೋರು ನೂರಾಹತ್ತು ಜನ, ಜೊತಿಗೆ ಸೇರ್ ಕಂಡೋರು ಐದು ಮಂದಿ, ಎಲ್ಲರೂ ಸೇರ್ಕಂಡೇ ಮಂತ್ರಿ ಮಂಡಲ ತುಂಬ್‌ಕ್ಯಂಡ್ರೆ ಹೆಂಗೆ? ಗೆದ್ದೋರೆಲ್ಲ ಮಂತ್ರಿಗಳು, ಯಾವ್ದುರದ್ದು ಎಲ್ಲೀದೂ ಅಂತ ಕೇಳ್ ಬ್ಯಾಡ್ರಿ ಮತ್ತ!’

’ಏ ನಿಂದ್ಯಾವಾಗ್ಲೂ ತಮಾಷೆ ಬಿಡ್ಲೆ’

’ಹಂಗಲ್ಲ ಸರ್ರ, ಕೊನಿಗೆ ನೂರಾ ಹತ್ತು ಜನಕ್ಕ ನೂರಾ ಹತ್ತು ಮಂತ್ರಿಗಳಾದ್ರೂ ಆದ್ರೆ ಆವಾಗ ಭಿನ್ನ ಮತಾನೇ ಇರಂಗಿಲ್ಲ ಏನಂತೀರಿ...’

ಅಷ್ಟೊತ್ತಿಗೆ ಎಜೆ ಬಸ್ಸು ಬಂತು ಅಂತ ಮೇಷ್ಟ್ರು ಪೇಪರ್ರನ್ನ ಪಕ್ಕಕ್ಕೆ ಎಸೆದು ಒಂದ್ ಕೈಯಲ್ಲಿ ಪಂಚೆ ಹಿಡಕೊಂಡು ಲಗುಬಗೆಯಿಂದ ನಡೆದಿದ್ದು, ಅರ್ಜೆಂಟಿಗೆ ಅಧಿಕಾರ ಸ್ಥಾಪನೆಗೆ ದೊಡ್ಡ ಗೌಡ್ರು ಸ್ಫೀಡಾಗಿ ಬಂದ್ರೇನೋ ಅನ್ನಿಸುವಂತಿತ್ತು. ಮೇಷ್ಟ್ರು ಹೋಗಿದ್ದೇ ಹೋಗಿದ್ದೇ ನಂಜಾ ಅವರು ಬಿಸಾಡಿದ ಪೇಪರನ್ನು ಮೂಸಿಕೊಂಡು ಕುಳಿತ, ನಾನು ಕೆಲಸ ನೋಡಲು ಒಳನಡೆದೆ.

Labels: , ,


# posted by Satish : 12:45 pm
Comments:
BAllaary Janardhan reddy Party bagge Kaloo mama enanthaane? :)
 
ಶ್ರೀ,
ಇವತ್ತೂ ನಿನ್ನೆ ರಾಜಕೀಯಕ್ಕೆ ಬಂದೋರ್ನೆಲ್ಲಾ ಸ್ಟಡೀ ಮಾಡಕ್ಕೆ ಟೈಮ್ ಬೇಕಾಗುತ್ತೆ ಅಂತಿದ್ದ...
 
Post a Comment



<< Home

This page is powered by Blogger. Isn't yours?

Links
Archives