ಓ ಅದೆ ಹೇಳೋಕ್ ಕನ್ನಡಾ ನಾಡು, ದುಡಿಯೋಕ್ ತಮಿಳ್ ಜನ ಇರೋ ನಮ್ ಕೋಲಾರದಲ್ಲೇ ಚಿನ್ನದ್ ಗಣೀನ್ ಮತ್ತೆ ತೆರೀತಾರಂತೆ. ಈ ಸರ್ತಿ ವಿಶೇಷಾ ಏನ್ ಗೊತ್ತಾ, ಗಣಿ ಕಂಪನಿ, ಅದೇ ಭಾರತ ಸರ್ಕಾರದ್ದು ೧೦೩೭ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರಂತೆ ಗುರುವೇ. ಅಲ್ಲಾ ಬಡವಾ ಬಗ್ಗರೂ ಮಾಡಿರೋ ಸಾವ್ರಾರು ರೂಪಾಯ್ ಮನ್ನಾ ಮಾಡ್ರಿ ಅಂದ್ರೆ ಅದಕ್ಕೊಂದ್ ದೊಡ್ಡ ನೆಪಾ ಹೇಳೋ ಮಂದಿ ಸರ್ಕಾರ್‌ದೋರ್ ಮಾಡಿರೋ ಸಾಲಾನಾ ಸರ್ಕಾರ್‌ದೋರೇ ಅದ್ ಹೆಂಗೆ ಮನ್ನಾ ಮಾಡ್ತಾರೇ ಅಂತ? ಬಿತ್ತಾ ನಮ್ ತಲೀ ಮೇಲೆ ಮತ್ತಿಷ್ಟು ಸಾಲದ ಹೊರೆ!
ನಂಗೇನ್ ಬೇಜಾರ್ ಇಲ್ಲ, ಅವರು ಚಿನ್ನದ್ ಗಣಿ ತೆರ್ ಕೊಳ್ಲಿ. ಆದ್ರೆ ಹಿಂದೆ ಲುಕ್ಸಾನ್‌ದಾಗ್ ನಡಿತಿತ್ತಲ್ಲ, ಅದನ್ನ ಎಲ್ಲ ಸರಿ ಮಾಡ್ಯಾರೋ ಹೆಂಗೆ? ಅಲ್ಲಿರೋ ಸಮಸ್ಯೆ ಸರೀ ಮಾಡ್ದೇ, ಇರೋ ಸಾಲ ಮನ್ನಾ ಮಾಡ್ಕೊಂಡು ಮತ್ತೆ ಫ್ಯಾಕ್ಟರಿ ಓಪನ್ ಮಾಡ್ಕೊಂಡ್ ಕುತಗೊಂಡ್ರೆ ಎಲ್ಲ ಬಗೆ ಹರದಂಗಾತೇನು?
ನಮ್ ಚಿನ್ನದ್ ನಾಡಲ್ಲಿ ಇನ್ನೂ ಹದಿನೈದ್ ಟನ್ ಚಿನ್ನಾ ಇದೆಯಂತೆ, ಒಂದೊಂದ್ ಟನ್ ಮಣ್ಣಿಗೆ ೩-೫ ಗ್ರಾಮ್ ಚಿನ್ನ ಸಿಗುತ್ತಂತೆ. ಇಲ್ಲಿ ಕುಸಾ ಸರ್ಕಾರ ಗಣಿ ವಿವಾದಕ್ಕೆ ಸಿಕ್ಕಿರೋ ಹಿನ್ನೆಲೆನಲ್ಲೇ ಮಮೋಸಿ ಸರ್ಕಾರ ಮತ್ತೂ ಭೂಮಿ ಅಗೆಯೋಕ್ ಪರ್ಮಿಷನ್ ಕೊಟ್ಟಿರೋದು ಒಂಥರಾ ಕಾನ್‌ಸ್ಪಿರಸಿ ಅನ್ಸಲ್ಲಾ! ಇರ್ಲಿ, ನಮ್ ಭೂಮೀನ್ ತಾನೆ ಕೊರಕಳ್ಲಿ ಬಿಡಿ. ಚಿನ್ನಾ ತೆಗೆದ್ ತೆಗೆದ್ ಪಿರಂಗಿಯೋರಿಗೆ ಕೊಟ್ಟು ಬೆಂಡೋಲೆ ಮಾಡಿಸ್‌ಕೊಳ್‌ದಿದ್ರೆ ಸಾಕು.
ಕುಸಾ ಈ ವಿಷ್ಯಾ ಕೇಳಿ ಇನ್ನೂ ಕುಸಿದಿದ್ದಾರೇಂತ ಸುದ್ದಿ, ನಿಮಗೇನಾದ್ರೂ ಗೊತ್ತಾ?
'ಅದೆಲ್ಲಿ ಶಿವಾ ಭೂಮೀನ ದೊಡ್ಡದಾಗಿ ಕೊರದಾರಂತಾs' ಎಂದು ಎಲ್ಲಿಂದಲೋ ಧ್ವನಿಯೊಂದು ಅಶರೀರವಾಣಿಯಾಗಿ ಕೇಳಿಸಿದ ಹೊತ್ತಿಗೆ ನೋಡಪ್ಪಾ ಗೌಡರ ಪಾಳ್ಯದಾಗ ನಿಜವಾಗೂ ಗದ್ದಲ ಶುರುವಾಗಿದ್ದು. ಈಗೇನ್ ಮಾಡ್ತಾನಂತ ಅಪ್ಪ, ಯಾರಪ್ಪಾ? ಅದೇ ಅವರಪ್ಪ, ಕುಮಾರಪ್ಪನ ಅಪ್ಪ!
ಅಯ್ಯೋ ಅಯ್ಯೋ ಅಯ್ಯೋ ಒಂದಾ ಎರಡಾ ನೂರಾ ಐವತ್ತು ಕೋಟಿ ವಸೂಲಿ ಮಾಡ್ಯಾರಂತs, ಅತ್ಲಾಗ ಚತುರ್ವೇದಿ ಸಾಹೇಬರಿಗೆ ಅದರಾಗ ಒಂದಿಷ್ಟು ಕೊಟ್ಟು ಕುಂದಿರಿಸಿದ್ದರೆ ಚೆನ್ನಾಗಿತ್ತು ನೋಡ್.
ಕೆಟ್ಟಕಾಲ ಬಂತು ಶಿವಾ, ಇನ್ನೇನು ಮತ್ತೆ ಈ ವರ್ಷದ ಕೊನಿ ಒಳಗೆ ಕುಸಾ ಸರ್ಕಾರ ಬೀಳ್ಲಿಲ್ಲ ನೋಡ್ಯಕ್ಯಂತಿರು, ಭೂಮೀನ ಕೊರೆದಿದ್ದಾತು, ಅತ್ಲಾಗ್ ಚಂದ್ರಲೋಕಕ್ಕೂ ಇಟ್ರೂ ಇಡಬೋದು ಬೆಂಕೀನ, ಇವರ ದೊಡ್ಡಾಟನೆಲ್ಲ ಯಾರು ಕಂಡೋರು ಶಿವಾ.
ಸರ್ಕಾರ ಬಿತ್ತು ಅಂದ್ರೆ, ಮತ್ತ ಎಲೆಕ್ಷನ್ನೂ ಅಂತ ಬರತಾರಪಾ. ಮತ್ತ ಸರ್ಕಾರ ಬೀಳ್ತದಪಾ. ಇದು ಒಂದು ರೀತಿ ಚಕ್ರದ್ ಗತಿ ಆತು ಅಂದೆ!
ನ್ಯಾಯದ ಮೇಲೆ ರಾಜಕಾರಣಿಗಳು ನಂಬ್ಕೆ ಇಟ್‌ಗೊಂತಾರ ಅಂತ ಕೇಳಿದ್ರೆ, ಯಾಕಿಲ್ಲ ಅಂತಾರೆ ನಮ್ ಜಾರಕೀ ಹೊಳಿ ಸಾಹೇಬ್ರು! ಅದ್ಯಾಕ್ ಅಂತೀರಿ, ಕೋಮುವಾದಿ ಶಕ್ತಿ ಇರೋ ಪಕ್ಷದ್ ಸವಾಸ ಯಾವನಿಗ್ರೀ ಬೇಕು, ನ್ಯಾಯ, ನೀತಿ, ನಂಬ್ಕೆ ಇರೋಂಥ ಪಕ್ಷ, ಅದೂ ಲಾಲಾ ನೆಹ್ರೂ ಕಟ್ಟಿರೋಂಥ ಕಾಂಗ್ರೇಸ್ ಇರಬೇಕಾದ್ರೆ?
ಛೇ, ದೇವೇ ಗೌಡ್ರು ಮಗ ಕುಮಾರಸ್ವಾಮಿ ಎಲ್ಲಾರೂ ಲಂಚ ತಗೊಳ್ಳೋದ್ ಉಂಟೇ, ಅವರಪ್ಪ ತಗೊಂಡ್ ತಗೊಂಡ್ ಹಾಕಿದ್ದೇ ಕೊಳ್ತು ಬಿದ್ದಿರೋವಾಗ! ಅದೂ ಒಂದಲ್ಲ, ಎರಡಲ್ಲ ನೂರಾ ಐವತ್ತು ಕೋಟಿಯಂತೆ - ಎಂಥಾ ಕಾಲ ಬಂತಪ್ಪಾ ಶಿವನೇ.
ನ್ಯಾಯ ನೀತಿ ಇರೋ ಎಲ್ಲಾ ರಾಜಕಾರಣಿಗಳೂ ರಾಜೀನಾಮೆ ಕೊಟ್‌ಗಳ್ಲಿ, ಹಂಗೇ ಕಾಂಗ್ರೇಸ್ ಸೇರಿಕ್ಯಳ್ಳಿ, ಇತ್ಲಾಗ್ ವಿರೋಧ್ ಪಕ್ಷದಾಗ್ ಇರೋರ್ ಯಾರು?
ಹೂ, ಜಾರಕೀಹೊಳಿ ಅನ್ನೋದನ್ನ ಇಂಗ್ಲೀಷಿಗೆ ತರ್ಜುಮೆ ಮಾಡಿದ್ರೆ ಏನ್ ಬರ್ತದಪ್ಪಾ, ಅವರ ಮಾತು, ನೀತಿ ಹಾಗೆ slippery ಇರೋದಂತೂ ಖರೆ!
ತಾವು ಕಾಂಗ್ರೇಸೋದರ ಜೊತೆ ಸಿದ್ದು ಸನ್ಯಾಸಿಯಲ್ಲ ಅಂತ ಹೇಳಿಕೆ ಕೊಟ್ಟಿದ್ದಾರಂತೆ! 'ನೀವು ಮುಖ್ಯಮಂತ್ರಿಯಾಗಲು ಬಯಸುತ್ತೀರಾ?' ಅನ್ನೋ ಪ್ರಶ್ನೆಗೆ 'ನಾನು ಬೇಷರತ್ತಾಗಿ ಕಾಂಗ್ರೇಸ್ ಸೇರಿದ್ದೇನೆ, ಎಲ್ಲಾ ನಾಯಕರೂ ರಾಜಕೀಯದಲ್ಲಿ ಏನಾದರೊಂದು ಆಗಬೇಕೆಂದುಕೊಳ್ಳುತ್ತಾರೆ, ನಾವು ಸನ್ಯಾಸಿಗಳಲ್ಲ...' ಎಂದು ಉತ್ತರಿಸಿದ್ದಾರಂತೆ, ಆದರೆ ಈ ರಾಜಕಾರಣಿಗಳನ್ನು ನಾಯಕರು ಎಂದವರು ಯಾರು? ಯಾವ ಮುಂದಾಳತ್ವವನ್ನು ಇವರು ವಹಿಸಿದ್ದಾರೆ ಎಂದು ಪ್ರಶ್ನೆ ಕೇಳಿದ ಎಲ್ಲರನ್ನೂ ಹಣಕೊಟ್ಟು ಸುಮ್ಮನಿರಿಸಲಾಗುತ್ತಿದೆಯಂತೆ! ಸೋ, ನಿಮ್ಮಲ್ಲಿ ಇಂತಹ ಹಣ ಗೆಲ್ಲಬಹುದಾದ ಪ್ರಶ್ನೆಗಳೇನಾದರೂ ಇದ್ದರೆ ಒಂದೇ ಗೌಡರ ಪಾಳ್ಯ, ಇಲ್ಲಾ ಸಿದ್ದರ ತಂಡವನ್ನು approach ಮಾಡುವಂತೆ ಕೇಳಿಕೊಳ್ಳಲಾಗಿದೆ.
ಇಟಲಿಯ ಫುಟ್‌ಬಾಲ್ ತಂಡವೂ, ಕುರುಬರ ಕುರಿ ಮಂದೆಯೂ ಸೇರಿ ಗೌಡರ ಮುದ್ದೇ ಬಾಲ್ ನಲ್ಲಿ ಆಡುವ ಆಟದಲ್ಲಿ ಗೋಲ್ ಹೊಡೆಯುತ್ತಾರೋ ಇಲ್ಲಾ ಹಾಗೇ ನಿರ್ಗಮಿಸುತ್ತಾರೋ ನೋಡೋಣ.