ಒಳ್ಳೇ ಅಡ್ನಾಡಿಗಳ ಹಾಗೆ ಅತ್ಲಾಗ್ ಇತ್ಲಾಗ್ ಆಡೋ ರಾಜಕಾರಣಿಗಳ ಬಗ್ಗೆ ಯಾಕಾದ್ರೂ ಬರೀ ಬೇಕು ಅನ್ನೋದು ಒಳ್ಳೇ ಪ್ರಶ್ನೆ, ಆದ್ರೂ ರಾಜ್ಯದ ರಾಜಕಾರಣದ ಬಗ್ಗೆ ನನಗನ್ನಿಸಿದ್ದನ್ನು ಬರೆದಿದ್ದೇನೆ, ಓದೋ ಖುಷಿ ನಿಮ್ದು!
Thursday, September 28, 2006
ನಮ್ ಜಾಗ ನಾವ್ ಮೊದ್ಲು ಉಳಿಸ್ಕ್ಯಂಡ್ ಹಸುರ್ ಮಾಡ್ಬಕು
ಯಾವಾಗ್ ನೋಡಿದ್ರೂ ಕುಸಾ ಸರಕಾರ ಮತ್ತ ರಾಜ್‌ಕಾರಣಿಗಳಿಗೆ ನಾನ್ ಬರೇ ಬಯ್ಯ್‌ತೀನಿ ಅಂತ ಅಂದ್‌ಕಂಡಿದ್ರೆ ಅದನ್ನ ನಿಮ್ಮ್ ಮನಸ್‌ನಿಂದ ತೆಗೆದ್ ಹಾಕ್ರಿ, ಯಾಕ್ ಈ ಮಾತ್ ಅಂತೀನಪಾ ಅಂದ್ರ, ಈ ಕುಸಾ ಸರಕಾರ ಮಾಡಿರೋ ಘನಂದಾರೀ ಕಾರ್ಯದೊಳಗೆ ಈ ಮರಾಠಿ ತೆಕ್ಕಿ ಒಳಗ ಬಿದ್ದಿರೋ ಬೆಳಗಾವಿನ್ಯಾಗ ಮಾಡಿರೋ ಅಧಿವೇಶನಾ ಐತಲ್ಲಾ, ಬಾಳಾ ಶಾಣೇ ಕೆಲ್ಸಾ ನೋಡ್ರಿ ಅದು.
ಸ್ವಲ್ಪ ದಿನದ ಹಿಂದ ನಿಮಗ ಬೆಳಗಾವಿ ಮೇಯರ್ ಮುಸುಡಿಗೆ ಕನ್ನಡದೋರು ಮಸಿ ಬಳ್ದಿದ್ ಗೊತ್ತಿರಾಕ ಬೇಕು, ಅದರ ಹಿನ್ನೆಲಿ ಒಳಗ ಈ ರೀತಿ ಅಧಿವೇಶ್ನಾ ಮಾಡಿದ್ರು ಅಂದ್ರ ನೋಡ್ರಿ ಅವಾಗ ನಮ್ ಜನ ಏನು ಅಂತ ಎಲ್ಲರಿಗೂ ಗೊತ್ತಾಕತಿ. ಅದನ್ನ ಬಿಟ್ಟು ಇವರು ಬೆಂಗಳೂರಿನ್ಯಾಗ ಸೇರಿಕ್ಯಂಬಿಟ್ಟು ಹಂಗಾಗ್ಲಿ, ಹಿಂಗಾಗ್ಲಿ ಅಂತ ಹಾರಾಡಿದ್ರ ಅದರಿಂದೇನಾಕತಿ? ಎಲ್ಲಿ ಸಮಸ್ಯಾ ಐತೋ ಅಲ್ಲೇ ಹೋಗಿ ಬಾಳುವೆ ನಡುಸ್ ಬೇಕಪಾ ಅದೇ ದೊಡ್ಡತನ. ಇಂತಾ ದೊಡ್ಡತನ ಕಂಡಾ ನಾನು ಕುಸಾ ಬಗ್ಗೆ ಒಂದು ಮೆಚ್ಚಿನ್ ಮಾತು ಅಂದ್ರ ನಿಮಗ್ಯಾರಿಗೂ ಬೇಜಾರಂತೀ ಇಲ್ಲ ಹೊದಿಲ್ಲೋ?
ನಮ್ ಕನ್ನಡಾ ಮಂದಿ ಎಲ್ಲ್ ಹೋದ್ರೂ ಕಿತ್ತಾಡೋದ್ ಬಿಡ್ತಾರೇನ್ರೀ? ಅಗಸನ ಕಟ್ಟಿ ಹತ್ಲಿ ಅಮೇರಿಕಾ ಮುಟ್ಲಿ ಜನಾ ಎಲ್ಲಾ ಒಂದಾ, ಇಲ್ಲಾಂತ್ ಅಂದ್ರ ಬೆಳಗಾವಿನ್ಯಾಗಾದ್ರೂ ಇನ್ನೂ ಎರಡ್ ದಿನಾ ಸೆತ ಮುಟ್ಟಿಲ್ಲಾ ಅಷ್ಟೊರಳಗಾ ಕಿತ್ತಾಡೋದು, ಬಡಿದಾಡೋದು, ಕೂಗಾಡೋದು ಅಂದ್ರೇನು? ಮಂಗ್ಯಾನ್ ತಗೋಂಡ್ ಹೋಗಿ ಎಲ್ಲಿ ಇಟ್ರ ಏನ್ ಬಂತು, ಯಾವಾಗ್ ನೋಡಿದ್ರೂ ಇವರ್ದೆಲ್ಲಾ ಒಂದೇ ರಾಗಾ ನೋಡ್ರಿ. ಅದೂ ಅಲ್ದೇ ನೆಟ್ಟಗೆ ಇದ್ದ ಬೆಳಗಾವೀನ ಉಳಿಸ್ಕ್ಯಣಾಕ್ ಬರಂಗಿಲ್ಲ ಇನ್ನ ಕಾಸರ್‌ಗೋಡ್ ಕೇಳ್ತಾರಂತೆ! ಅವರೇನ್ ಮಲಯಾಳೀ ಕುಟ್ಟಿಗಳು ಸುಮ್ನಿರ್‌ತಾರಂತೀರಾ ಮಹಾ ಘಾತಕ ನನ್ ಮಕ್ಳು ಮತ್ತೇನಾರಾ ಒಂದ್ ಕಿತಬಿ ಎಬ್ಬಿಸ್ತಾರಷ್ಟೇ.
ಸೀತಕ್ಕ ತುಳಸೀಗಿಡಕ್ಕ ನೀರ್ ಹೊಯ್ಯತಾ ಇದ್ದಳಾ, ನಾನು ಹೋದೋನೇ 'ಏನ್ ಸಿತಕ್ಕಾ, ಹೆಂಗಿದ್ದೀ?' ಎಂದಿದ್ದಕ್ಕೆ 'ನಮಿಗೇನ್ ಆಕತೋ ತಮ್ಮಾ, ಅರವತ್ತು ಮುಗಿದ ಮ್ಯಾಕ ಎದ್ದರ ಒಂದ್ ಲೆಕ್ಕ, ಕುಂತರ ಇನ್ನೊಂದರ ಲೆಕ್ಕಾ' ಅಂದಳು. 'ಹಂಗಲ್ಲ ಸೀತಕ್ಕಾ ನಿನಗಾದಂಗ ಎಲ್ಲಾರಿಗೂ ವಯಸ್ಸಾಕತಿ, ಅದನ್ನ ಯಾರೂ ನಿಂದರ್‌ಸಾಕ ಆಗಂಗಿಲ್ಲ' ಎಂದೆ. 'ಸುಮ್ನಿರೋ ಮಾರಾಯಾ, ನಮ್ ಪರಿಪಾಟ್ಲೆ ನಮಿಗೆ, ನಿನಗೇನ್ ಗೊತ್ತಾಕತಿ!' ಅಂದಳು. ನಾನು 'ನೋಡಬೆ, ಈಗ ನಿನ್ ವಾರಿಗಿ ಜನ್ರುನ್ನೇ ತಗಾ ಎಷ್ಟೋ ಮಂದಿ ಇನ್ನೂ ಕಲ್ ಗುಂಡಿನ್ಯಂಗ್ ಹೆಂಗಿಲ್ಲ, ವಯಸ್ಸಾತು ಅನ್ನೋದು ಮನಸ್ನ್ಯಾಗಿಂದ ತೆಗೆದು, ನೆಟ್ಟಗೆ ಓಡಾಡೋದ್ ಕಲಿ' ಎಂದೆ.
ಸೀತಕ್ಕ ಗುರ್ರ್ ಅನಕೊಂಡೇ ಪಡಸಾಲೀ ಮೆಟ್ಟಿಲ ಹತ್ತಿ ಒಳಕ್ಕ್ ಹೋದ್ಲೋ, ಒಳಗಿಂದ ಒಳ್ಳೇ ಗೂಳಿ ನುಗ್ಗಿದಂಗೆ ಪರಮ್ಯಾ ಓಡಿಬಂದ, 'ಏನಣ್ಣೋ, ಎತ್ಲಾಗ್ ಹೊಂಟ್ತು ಸವಾರಿ' ಎಂದವನಿಗೆ, 'ನನ್ದು ಎತ್ಲಾಗೂ ಇಲ್ಲ, ನಿಂದ್ ಯಾವಕಡಿ' ಅಂದೆ. 'ಸುಮ್ನೇ ಟಿವಿ ನೋಡಿ ಬೋರಾತು ಅಂತ ಹೊರಗಡೆ ಹೊಂಟೆ, ಥೂ ಯಾವಾಗ್ ನೋಡಿದ್ರೂ ಈ ಹಾಳಾದ್ ದೊಡ್ಡ ಗೌಡ್ರು ಮಕ್ಳು ಮುಖಾ ತೋರುಸ್ತಾರ್ ನೋಡು!' ಎನ್ನಬೇಕೆ. 'ಅಂತಾದ್ದೇನ್ ನಡೆದೈತೋ ಟಿವಿ ಒಳಗ' ಅಂದಿದ್ದಕ್ಕೆ 'ದೊಡ್ಡ ಗೌಡ್ರಿಗೆ ಈಗ ಧ್ವನಿ ಬಂದದಂತೆ - ಕಾಂಗ್ರೇಸ್ ಮ್ಯಾಕ ಹತ್ತಾರು ಆಪಾದನೆಗೊಳ್ ಪಟ್ಟೀನೆ ತಯಾರ್‌ಸ್ಯಾರಂತೆ, ಒಳ್ಳೇ ಗೂಳಿ ಗುಟುರು ಹೊಡದಂಗ ಮಾತ್ ಮಾತಿಗೆ ಉಸುರು ಬಿಡಾಕ್ ಹತ್ಯಾರಂತೆ!' ಎಂದು ವರದಿ ಒಪ್ಪಿಸಿದ.
'ಏನಾರ ಮಾಡಿಕ್ಯಳ್ಳಿ ಬಿಡು, ನಡೀ ನಾನು ಬಂದೆ ಪೇಟೆ ಕಡೆ ಹೊಂಡೋಣ' ಎಂದು ಜಡವಾದವನನ್ನು ಹೊರಡಿಸಿದೆ. 'ಅಲ್ಲಾ, ಈ ದೊಡ್ಡ ಗೌಡ್ರಿಗೆ ಯಾಕ್ ತನ್ನ್ ಮಕ್ಳು ಉಸಿಸ್‌ಬೇಕು ಅನ್ನೋ ಛಲ?' ಎನ್ನೋ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡದವನಾದೆ.
ನಮ್ ಕರ್ನಾಟಕದ ಮಂದೀ ಅಂದ್ರ ಮಹಾ ನಾಟಕದ ಮಂದಿ ನೋಡ್ರಿ, ಅದಕಾ ಐವತ್ತು ವರ್ಷದ ಹಿಂದ 'ಕರ್ನಾಟಕ' ಅಂತ ಹೆಸರು ಇಟ್ಟಾರೇನೋ ಅಂತ ನನಗೂ ಎಷ್ಟೊ ಸರ್ತಿ ಅನುಮಾನ ಬಂದತಿ. ಇಲ್ಲಾ ಅಂದ್ರ ಇವ್ರು ಯಾಕ್ ಹಿಂಗ್ ಆಡತಿದ್ರೂ ಅಂತ ನೀವಾರ ಒಸಿ ಕೇಳ್ರಲ್ಲಾ. ರೆಡ್ಡಿ ಮೊದಲು ಸಿಡಿ ತೋರಿಸ್ತೀನಿ ಅಂತ ಮೂಗಿಗೆ ತುಪ್ಪಾ ಸವರಿ ತನ್ ಕೆಲ್ಸಾ ತಾನ್ ಸಾಧಿಸಿಕಂಡನೋ, ಈಗಂತು ನಾಚಿಗ್ಗೆಟ್ಟೊರ್ ಹಂಗ ಡೈರೆಕ್ಟಾಗಿ ಪತ್ರಿಕ್ ಗಳಿಗೇ ಸಿಡಿ ಹಂಚೋ ವ್ಯವಸ್ಥೆ ನಡದತೇತಂತೆ. ಸ್ವಲ್ಪನಾರೂ ಕಬರು ಅನ್ನದ್ ಬ್ಯಾಡಾ ಇವರಿಗೆ? ಅಲ್ಲಪಾ, ಅಕಸ್ಮಾತ್ ಅದರಾಗ್ ಇರೋದ್ ನಿಜಾನೆ ಅಂತ ಅಂದ್ಕೊಳನಾ, ಈ ಪತ್ರಿಕ್ ಗೊಳಿಗೆ ದಮ್ ಇರತೇತೇನೂ ಅದನ್ನ ಹೆಂಗೈತೆ ಹಂಗೆ ಪಬ್ಲಿಷ್ ಮಾಡಾಕೇ?
ಒಂಥರಾ ಬಾಳಾ ಕ್ರಿಯೇಟಿವ್ ಮಂದಿ ಇವ್ರು ಅನ್ನೋದೇನೋ ನಿಜಾ, ಯಾಕಂದ್ರ ಒಳ್ಳೇದೂ ಕೆಟ್ಟದ್ದು ಎಲ್ಲಾ ಕೂಡೇ ಮಿಕ್ಸ್ ಮಾಡಿ ವಿಡಿಯೋ ತೆಗೆದು ಅದರ ಸಂಭಾಷಣೇ ಸಾರಾನೂ ಬರೆದು ಕೊಟ್ಯಾರಂತ. ನನ್ ಕೇಳಿದ್ರೆ ನೋಡ್ರಿ ಇವರ್ನೆಲ್ಲಾ ಒಟ್ಟಿಗೇ ಸೇರ್ಸಿ ಜೈಲಿನ್ಯಾಗ್ ಕೂಡಬಕು, ಒಂಥರಾ ನಮ್ ಇಂದ್ರಾ ಗಾಂಧಿ ಕೂಡಿದ್ಲಲ್ಲ ೭೭ ರಾಗ, ಹಂಗ.