Wednesday, August 30, 2006

ಮೊದಲೂ ಅಪ್ಪಾರೂ, ಅಮ್ಯಾಕ್ ಅಣ್ಣಾರು ನೋಡ್ರಿ...

'ಸ್ನೇಹಿತ್ರಿಗ್ ಎಲ್ಲೂ ಕಾಲ ಇಲ್ಲಾ ಶಿವಾ, ನಾವೆಲ್ಲ ಸೇರಿಕ್ಯಂಡ್ ಕುಸಾ ನ ಮುಖ್ಯಮಂತ್ರಿ ಮಾಡಿದ್ವೋ, ಈಗ ಈ ವಯ್ಯಾ ನೋಡಿದ್ರೆ ಮನ್ಯೋರ್ ತಾಳಕ್ಕೆ ಕುಣಿಯೋ ಮಂಗ್ಯಾ ಅಗ್ಯಾನ...' ಅನ್ನೋ ಅರ್ಥದಲ್ಲಿ ಮೊನ್ನೆ ಸಂತೋಷ್ ಲಾಡ್ ಅವರ ಕೂಡಿ ಜಮೀರ್ ಅಹ್ಮದ್ ಸಾಹೇಬ್ರೂ ಇವರೂ ರೋಧನ ಹಚ್ಚಿದ್ರು ರ್ರೀ. ಇವರಿಬ್ಬರಿಗೆ ಬೇಕಾಗಿದ್ದು ಓನ್ಲಿ ಕುಸಾ ಫ್ರೆಂಡ್‌ಶಿಪ್ಪಂತೆ, ಆದ್ರೆ ಕುಸಾ ಈಗ ಯಾವ ದೋಸ್ತರ ಮಾತಿಗೂ ಗೋಣು ತಿರುಗಿಸ್ದೇ ಅಪ್ಪಾ, ಅಣ್ಣೋರ್ ಹೇಳಿದ್ದೇ ಪರಮಸತ್ಯ ಅಂತ ಕುತಗಂಡಾರಂತ!

ಕುಸಾ ಸಾಹೇಬ್ರು ಅಪ್ಪಾರ್ ಕಂಡ್ರೆ - ಅಂದ್ರೆ ದೊಡ್ಡ ಗೌಡ್ರು ಕಂಡ್ರೆ ಉರಿದು ಬೀಳ್ತಿದ್ದಿಲ್ಲ ಒಂದ್ ಕಾಲದಾಗ, ಅಥವಾ ಹಂಗ್ ನಟನೆ ಮಾಡಿದ್ರೋ ಯಾರಿಗ್ ಗೊತ್ತು? ಅಲ್ಲಪಾ, ಈ ಸಣ್ಣ ತಮ್ಮ ಅಧಿಕಾರ್‌ದಾಗಿದ್ರೆ ಅವರೆಲ್ಲಾ ಯಾಕ್ ಬರತಾರ ಕಡ್ಡೀ ಆಡ್ಸಾಕ ಅಂತ ನನಿಗಂತೂ ಹೊಳಿವಲ್ದು - ನಮ್ಮ ಕನ್ನಡ ಜಾಣ-ಜಾಣೆಯರಿಗೇನಾದ್ರೂ ಗೊತ್ತಾದ್ರ ತಿಳಸ್ರಿ...ನಾನು ಕೂಡ್ಲೇ ಲಾಡ್ ಸಾಹೇಬ್ರಿಗೆ ಫೋನ್ ಹಚ್ಚತೀನಂತ!

# posted by Satish : 10:55 am  1 comments

Monday, August 28, 2006

ಕಾಲಾ ಕೆಟ್ಟೋತ್ ಶಿವಾ, ಆಸಿಗೂ ಒಂದ್ ಮಿತಿ ಅನ್ನೋದ್ ಬ್ಯಾಡ್ವಾ?

ಇತ್ಲಾಗೆ ರೆಡ್ಡಿ ಬಾಂಬ್ ಠುಸ್ಸೋ ಅಲ್ವೋ ಅಂತ ಯಾರೂ ಕೆರಕೊಳಕೂ ಹೋಗದಿದ್ದಾಗ ಈ ದೇಶಪಾಂಡೆ ಅವ್ರಿಗೆ ರೆಡ್ಡಿ ಬಾಂಬ್ ಒಳಗ ಬಾಳ ಸತ್ಯ ಅದ ಅಂತ ಅನ್ಸೇತ್ ರೀ. ಫುಲ್ ಕುಸಾ ಕುಟುಂಬದ ಮ್ಯಾಲೇ ತೂಗು ಕತ್ತಿ ಐತಿ ಅಂತ ಹೇಳಿಕೆ ಕೊಟ್ಟ್ಯಾರಂತ್ ರೀ. ಎಲ್ಲಾರು ಸಮಗ್ರ ತನಿಖಿ ಆಗ್ ಬಕು, ಬಿಡಬಕು ಅಂತಾರಾ ಹೊರತೂ ಯಾವನೂ ಒಂದು ಹೆಜ್ಜೀನೂ ಮುಂದ್ ಇಟ್ಟಂಗಿಲ್ಲ. ಹೇಳಿ ಕೇಳಿ ಒಂದಾ ಎರಡಾ ರೂಪಾಯ್ ಆಗಿದ್ರೆ ಎಲ್ಲೋ ಕಳಕೊಂಡಾರ ಅನಬಹುದಿತ್ತು, ಆದರ, ನೂರಾ ಐವತ್ತು ಕೋಟೀನಾ ಯಾವ ಸ್ವಿಸ್ ಬ್ಯಾಂಕ್‌ನ್ಯಾಗ ಇಟ್ಟಾರ ಅಂತ ತಿಳಕೊಳ್ಳಾಕ ಇಷ್ಟ್ಯಾಕ ತಡಾ ಅಂತೀನಿ.

ಹೋಗ್ಲಿ ಬಿಡ್ರಪಾ, ಅನ್ನಂಗಿಲ್ಲ. ಯಾಕ್ ಗೊತ್ತೇನು, ಈ ರಾಜ್‌ಕಾರಣಿಗಳ ಹಣೇಬರವೇ ಇಷ್ಟಾ ಆದಂಗ, ನೋಡ್ರಿ ಈಗ ಅನಿತವ್ವಾರ್ ಪೆಟ್ರೋಲ್ ಬಂಕ್‌ನ್ಯಾಗ ಕಳಬೆರಕಿ ಅಂತ್ರೀ. ಅವನೌನ, ನ್ಯಾಯ ನೀಯತ್ತಿನಿಂದ ಯಾವನೂ ಬಾಳ್ವೇನೇ ಮಾಡ್ದಂಗ್ ಕಾಣಂಗಿಲ್ಲ!

ಅದಕ್ಕಾ ಅಂದಿದ್ದು, ಕಾಲ ಕೆಟ್ಟತೀ ಅಂತ. ದುಡ್ಡ್ ಮಾಡಿಕ್ಯಂಡ್ ಮ್ಯಾಡಿಕ್ಯಂಡ್ ರೂಢಿ ಆಗ್ಯತ್ ರೀ, ಆಸೀಗ್ ಒಂದ್ ಮಿತೀ ಅನ್ನಂಗಿಲ್ಲ, ಬಿಡಂಗಿಲ್ಲ...ಒಬ್ರುಗಿಂತ ಒಬ್ರು ಶಾಣ್ಯಾರದಾರಾ...ಏನ ಮ್ಯಾಡಿಕ್ಯಂತಾರ ಮಾಡಿಕ್ಯಳ್ಳಿ.

"ಕನ್ನಡವ್ವ ಬಡವಿಗ್ಯಾಳ, ದೇಶದಾಗ ನಮಿಗ್ ಒಂದು ಒಳ್ಳೇ ಹೆಸ್ರೂ ಇರದಂಗ್ ಮಾಡಿದ್ರು ಈ ನನ್ ಮಕ್ಳು" ಅಂತ ಮೊನ್ನೆ ಶಾಮೂ ಕಾಕಾ ಕೆಮ್ಮಿಕ್ಯಂಡ್ ಬಯ್ದಿದ್ದ್ ನಿಜಾನೇ ಇರಬಕು.

# posted by Satish : 6:24 am  0 comments

Saturday, August 26, 2006

ಶುದ್ಧ ಅಡ್‌ನಾಡೀ ನನ್‌ಮಕ್ಳು ಅಂತ ಆಗ್ಲೇ ಹೇಳ್ಲಿಲ್ಲಾ ನಾನು...

'ಅತ್ಲಾಗ್ ಜನಾರ್ಧನ್ ಪೂಜಾರಿ ಅದೇನೋ ಮಹಾ ಮಾಡ್‌ತೀನಿ ಅಂತಾ ಹೋಗಿ ಬರೀ ಮಾತಾಡವನಂತೆ, ಸಿಡಿ ತೋರಿಸ್ತೀನಿ ಅಂತ ಜನ್ರುನ್ನ ಕರ್ದು ಅದ್ಯಾವ್ದೋ ವಾರ್ ಪಿಚ್ಚರ್ ತೋರಿಸ್ ಕಳಿಸ್ಯಾನಂತೆ, ಮಾಡಕೇನ್ ಕೆಲ್ಸಾ ಬಗ್ಸಾ ಇದ್ದಂಗಿಲ್ಲ ಈ ನನ್ ಮಕ್ಳೀಗೆ...' ಅಂತ ಕೋಡೀಹಳ್ಳೀ ಮೇಷ್ಟ್ರು ಅಂದಿದ್ದೇ ತಡ ನನಗೂ ಹೌದಲ್ಲಾ ಅನ್ನಿಸ್ತು. ನನಗೆ ಉಸುರಾಡೋಕೂ ಬಿಡ್ದೆ, 'ಶುದ್ಧ ಆಡ್‌ನಾಡೀ ನನ್‌ಮಕ್ಳು...' ಅಂತ ಯಾರಿಗೋ ಶಾಪ ಹಾಕಿ ತೆಗ್ದದ್ದನ್ನ ನೋಡಿದ್ರೆ ಇವತ್ತು ಜನಾರ್ಧನ್ ಪೂಜಾರಿ ಕಾರು ಎಲ್ಲೋ ಆಕ್ಸಿಡೆಂಟ್ ಆಗಿ ಹೋಗೋ ಹಾಗೆ ಕಂಡ್ ಬಂತು.

ನಾನು 'ಮೇಷ್ಟ್ರೆ, ಬ್ಯಾಂಕ್ ಬ್ಯಾಲೆನ್ಸೂ, ಹೆಸರ್‌ನೂ ತೋರಿಸ್ಯಾರಂತ್ ರೀ...' ಅಂದಿದ್ದಕ್ಕೆ, 'ಥೂ, ಸುಮ್ಕಿರ್ರೀ, ಈ ಪೂಜಾರೀ ಆಟಾಟೋಪಾನ ನಾನು ಕಂಡೀನಿ!' ಅಂದು ಬಿಡೋದೆ. ನನಗ್ಯಾಕೆ ಈ ಮೇಷ್ಟ್ರು ಉಸಾಬರಿ ಅಂತ ಗಪ್‌ಚಿಪ್ ಆದೆ.

ಮೇಷ್ಟ್ರು 'ಅಲ್ರೀ, ಈ ಗೌಡರ ತಂಡಕ್ಕೆ ಏನಾಗೇತಿ ಈಗ? ಈವಯ್ಯಾ, ಸಿಡಿ ಹೊರಗೆ ತರತೀನಿ ಅಂದು ಎಲ್ಲರ್ ಟೈಮೂ ಹಾಳ್ ಮಾಡ್ಲಿಲ್ಲಾ? ಅದಕ್ಕ ಈ ಪೂಜಾರಿ ಮಗಂಗ ಮೊದ್ಲು ಹಿಡ್ದು ನಾಕ್ ಬಡೀ ಬಕು, ಆಮ್ಯಾಕ್ ಆ ಗೌಡ್ರ ತಂಡದಾಗ ಯಾವಯಾವನ್ ತಾಕ ಅದೆಷ್ಟು ದುಡ್ಡೈತಿ, ಅದೇನ್ ಕರೇನೋ, ಬಿಳೇನೋ ಎಲ್ಲಾ ತಿಳಕಂಬಕು, ಅಕಸ್ಮಾತ್ ತಪ್ಪ್ ಏನಾರ ಸಿಗ್ತು ಅಂದ್ರ, ಈ ಮಕ್ಳೀಗ್ ಸಾಯ ತಂಕ ಗಂಜೀ ಕುಡಿಯಂಗ್ ಮಾಡಬಕು, ಇಲ್ಲಾ ಪೂಜಾರಿ ತಲಿ ತೆಗೀಬಕು! ಏನಂತೀರಿ?' ಎಂದು ಹೊಸದಾಗಿ ಅತ್ತೆ ಕಾಟ ಶುರುವಾದ ಹೊತ್ತಿಗೆ ಗಂಡನ ಹತ್ರ ಅತ್ತೀ ಮ್ಯಾಗ ಕಂಪ್ಲೇಂಟ್ ಕೊಡೋ ಹೆಣ್‌ಮಗಳಂಗ ಕಂಡ್ ಬಂದ್ರು ಮೇಷ್ಟ್ರು.

ನಾನು 'ಅಲ್ಲಾ ಮೇಷ್ಟ್ರೇ, ನಾವ್ ಅಂದಂಗ್ ಎಲ್ಲಾರ್ ಆಕ್‌ತತೇನ್ರಿ?' ನಿಮಗ ಮೂರು ಕತ್ತಿ ವಯ್ಸಾತು ಇಷ್ಟೂ ಗೊತ್ತಾಗಿಂಲ್ಲಾ ಅನ್ನೋ ಧ್ವನಿಯೊಳಗ ಅಂದೆ...ಮೇಷ್ಟ್ರಿಗೆ ಉರಿ ಹತ್ತಿದ್ದು ಇನ್ನೂ ಆರಿಲ್ಲ ಅಂತ ನನಿಗೆ ಹೆಂಗ ತಿಳೀಬಕು! ಮೇಷ್ಟ್ರು 'ಸುಮ್ಕಿರ್ರಿ, ಎಲ್ಲಾ ತಿಳದೋರಂಗ ಆಡಬೇಡ್ರಿ, ಈ ಸರ್ತಿ ನೋಡ್ರಿ ಏನಾರ ಒಂದ ಆಗೇ ತೀರ್ತತಿ!' ಎಂದು ಶುಭ ನುಡಿಯೋ ಹಕ್ಕೀ ಹಂಗ ಕೊರಳು ಕೊಂಕಿದ್ರು.

ಈ ಪೂಜಾರಿ-ಕುಸಾ ಸವಾಸ ಅಲ್ಲ, ಈ ಹೊತ್ತಿನ್ಯಾಗ ಮೇಷ್ಟ್ರುದ್ದು ಅಂತೂ ತಲೀನೇ ಸರೀ ಇಲ್ಲ, ಅಂದು ನಾನು ಮನೀ ಕಡಿ ಹೊಂಟೆ.

# posted by Satish : 8:25 am  2 comments

Tuesday, August 22, 2006

ಮಂಗ್ಳ್‌ವಾರ ಅಂದ್ರು ಈಗ್ ಬುಧವಾರಾತು ನೋಡ್ರಿ!

ನಮ್ ದೇಶ್‌ದಾಗ ಯಾರಿಗೆ ರೊಕ್ಕ ಹುಟ್ಟದಿದ್ರೂ ಈ ವಿಮಾನ ಕಂಪನಿಯೋರಿಗ್ ಮಾತ್ರ ಯಾವತ್ತೂ ಕೊರತಿ ಅನ್ನೋದಾಗೋದಿಲ್ಲ ನೋಡ್ರಿ, ಈ ಮಾತು ಯಾಕಂತೀನಿ ಅಂದ್ರ, ಪ್ರತಿನಿತ್ಯ ಒಬ್ರಲ್ಲಾ ಒಬ್ರು ಬೆಂಗ್ಳೂರಿಂದ್ ಡೆಲ್ಲಿ, ಡೆಲ್ಲೀಯಿಂದ ಬೆಂಗ್ಳೂರಿಗ್ ಹೋಗ್ತಾರಲ್ಲ, ಇನ್ನೇನಾಕತಿ ಮತ್ತ? ಬರೀ ನಮ್ ಕನ್ನಡಾ ಮಂದಿ ಅಷ್ಟೇ ಅಲ್ಲ, ಎಲ್ಲಾ ರಾಜ್ಯದೋರೂ ಹೋಕ್ತಾರಂತ್ ರೀ, ಅಕ್ಕ ಪಕ್ಕದ ರಾಜ್ಯದೋರ್ ಹೋಗಿ-ಬಂದೂ ದುಡ್ಡೂ ಕಾಸು ಮಾಡಿಕ್ಯಂಡ್ರ್ ನಮ್ ರಾಜ್‌ಕಾರ್ಣಿಗಳು ಬರೀ ಅವರ ದುಕ್ಕಾ ಇವರಿಗೆ ಇವರ ದುಕ್ಕಾ ಅವರಿಗೆ ಹಂಚೋಕ್ ಹೋಗಿ ಜೋಲ್ ಮುಖಾ ಹಾಕ್ಕ್ಯಂಬರತಾರ್ ನೋಡ್ರಿ - ಇಂತೋರಿಗೆಲ್ಲ ಹಿಡ್ದು ನಡು ರಸ್ತಿ ಮ್ಯಾಗ್ ನಿಲ್ಲಸಿ ನಾಲ್ಕು ಬಾರ್ಸುಬೇಕು ಅನ್ಸಂಗಿಲ್ಲ?

ಜರಾ ಜನಾರ್ದ್ನ ರೆಡ್ಡೀ ಕತೀನೆ ತಗಳ್ರಿ, ಈ ವಯ್ಯಾ ಮಂಗ್ಳ್‌ವಾರ ಗಣಿ ಕತಿ ಹೇಳ್ತನಿ ಅಂತ ಕುಂತಿದ್ರು, ಈಗ ನೋಡಿದ್ರೆ ನಾಳಿ ಅನ್ನಕ್ ಹಿಡದಾರ. ನಾಳಿ ಮನೀ ಹಾಳಾತು, ಅದು ಎನ್ ವಿಷ್ಯಾ ಹೇಳೋ ಶಿವಾ ಅಂತ ಕುಂದರಬೇಕ್ ಅಷ್ಟೇ. ಅತ್ಲಾಗಿಂದ ಕುಸಾ ಸಾಹೇಬ್ರು ನಮ್ ಸರಕಾರ್ ಛೊಲೋ ಐತಿ, ಐನಾಗಿ ನಡೀತೈತಿ, ಏನೂ ತೊಂದ್ರಿಲ್ಲ ಅಂತಾರ, ಇತ್ಲಾಗ್ ನೋಡಿದ್ರೆ ರೆಡ್ಡಿ ಸಾಹೇಬ್ರು ಕುಸಾ ಕುರುಚೀ ಕೆಳಗ ಬಾಂಬ್ ಸಿಡಸ್ತೀನಿ, ಕುಸಾ ಕುಂದರೋ ಕುರುಚಿ ಹಾರಿ ಬೀಳೋ ಹಂಗ ಮಾಡತೀನಿ ಅಂತಾರ - ಅತ್ಲಾಗ್ ನೋಡಿದ್ರೆ ದೊಡ್ಡ ಗೌಡ್ರುದ್ದು ಇನ್ನೂ ನಿದ್ದೀನೆ ಆದಂಗಿಲ್ಲ - ನನಗಂತೂ ಕಾದೂ-ಕಾದೂ ಸಾಕಾಗೈತಿ ನೋಡ್ರಿ.

ಎಲ್ಲಾ ಅಷ್ಟೇ ರೀ, ಈ ರೆಡ್ಡಿ ಹೇಳೋ ಹುಳುಕಿಗೆ ಆ ಡೆಲ್ಲಿ ಅಮ್ಮನ ಕೃಪೆ ಬ್ಯಾರೆ ಬೇಕು. ಯಾವತ್ತಾದ್ರೂ ಇವ್ರು ತಮ್ಮ ಸ್ವತಾ ಯೋಚ್ನೀಯಿಂದ ಕೆಲಸ ಅಂತ ಮಾಡಿದ್ರೆ ಗೊತ್ತಿರತಿತ್ತು, ಎಲ್ಲದಕ್ಕೂ ಡೆಲ್ಲಿ ಹತ್ತೀ-ಇಳಿದೂ ಮಾಡ್ತಾರ, ಅದೇನ್ ಕಲತಾರಂತ ಇಷ್ಟು ದಿನಾ ರಾಜಕೀಯದಾಗs?

# posted by Satish : 10:13 am  2 comments

Saturday, August 19, 2006

ಅದೆಂತಾ ಆವೇಶ ಅಂದ್ರೆ...

ಅದೇ ಯಡ್ಡಿ ಆಲಿಯಾಸ್ ಯಡಿಯೂರಪ್ಪ ಆಲಿಯಾಸ್ ಡಿಸಿಎಂ - ಯಾವ್ದೋ ಒಂದು ಕೀಟನಾಶಕದ ಹೆಸ್ರು ಕೇಳ್ದಂಗಾಗಲ್ಲ? - ಪ್ರಚಂಡ ರೋಷಾವೇಶದಿಂದ ಮಾತಾಡ್ತಾರಂತಲ್ಲಪ್ಪ! ಅವ್ರು ಗುಡುಗಿದ ಹೊಡೆತಕ್ಕೆ ಗುಡುಗೇ ಹೆದರಿ ಮಳೆ ಬೀಳದಂಗೆ ಆಗಿ ಹೋತಂತೆ, ಎನ್ ಮಾಡದು? ಹಿಂದೆಲ್ಲಾ ಸಂಗೀತಗಾರ್ರು ಮೇಘಮಲ್ಲಾರ್ ಹೇಳಿ ಮಳೆ ತರ್ತಿರ್ಲಿಲ್ಲಾ, ಹಂಗೇ ನಮ್ ಎಡ್ಡಿ ಸಾಹೇಬ್ರು ಇಂತಾ ರಾಗ ಅಂತಿಲ್ಲ, ತಾಳಾ ಅಂತಿಲ್ಲ ಒಟ್ಟಿಗೆ ಗುಡುಗೋದ್ ಕಲ್ತವ್ರೆ. ಅವ್ರು ಅತ್ಲಾಗ್ ಎಲ್ಲಾ ಜರ್ನಲಿಸ್ಟ್‌ಗಳಿಗೆ ಬಯ್ದು ಹೋದ್ರಂತೆ, ಆಮ್ಯಾಕೆ ನಮ್ ಕುಸಾ ಸಾಹೇಬ್ರು ಎಲ್ರನ್ನೂ ಒಂಥರಾ ಕೂಲ್ ಮಾಡವ್ರೆ - 'ಎಡ್ಡಿ ಅಂದದ್ದಕೆ ಬೇಸ್ರ ಮಾಡ್ಕ್ಯಾಬ್ಯಾಡಿ - (ಅವ್ರು ಒಂತರಾ ಎಡವಟ್ಟೇ!) - ಇನ್‌ಮ್ಯಾಕೆ ನಾವೂ-ನೀವೂ ಏನಿದ್ರು ಬರೀ ಅಭಿವೃದ್ಧಿ ಬಗ್ಗೆ ಮಾತಾಡಾಣಾ' ಅಂದವರಂತೆ. ಅದರರ್ಥ ನಮ್ ಕರ್ನಾಟ್ಕದ ತುಂಬೆಲ್ಲ ಬರೀ ಅಭಿವೃದ್ಧಿಯೋ ಅಭಿವೃದ್ಧಿ - ಒಂಥರಾ ರಾಜ್‌ಕುಮಾರ್ ಮಗನ ಸಿನಿಮಾದ್ ಹಾಗೆ. ನಾವು ಯಾವ್ ಗಣಿ ಬೇಕಾದ್ರೂ ಕೊರಕಂತೀವಿ, ಅದರ ಅಭಿವೃದ್ಧಿ ಬಗ್ಗೆ ಮಾತಾಡ್‌ಬೇಡಿ ಅಂದವರಂತೆ.

ಧರಂ ಸಾಹೇಬ್ರು ಅದು ಬಿಟ್ಟು-ಇದು ಬಿಟ್ಟು ಈಗ ಜ್ಯೋತಿಷ್ಯ ಹೇಳೋಕ್ ಹಚ್ಚ್‌ಕೊಂಡೋರೆ, ನಿಮಗ್ ಗೊತ್ತಿಲ್ಲಾ? ದೋಸ್ತಿಯಿಂದಲೇ ದೋಸ್ತಿ ಸರ್ಕಾರದ ಕೊನೆ ಅಂದವರಂತೆ! ಅಂದ ಹಾಗೆ ಅವರ ಭವಿಷ್ಯ ಎಲ್ಲಿಗೆ ಬಂತೋ? ಜೀವರಗಿ ಭವಿಷ್ಯ ಕೇಳೋದೇ ಬ್ಯಾಡಾ ಅಲ್ವಾ?

ಕುಸಾ ತಮ್ಮ ಬರೀ ಹೇಳ್ಕೆ ಕೊಡಬ್ಯಾಡಾ, ಕೆಲ್ಸಾ ಮಾಡಿ ತೋರ್‌ಸೋಣು ಅಂತ ಅತ್ಲಾಗಿಂದ ರೇವ್ ಸಾಹೇಬ್ರು ತಿವಿದವರಂತೆ. ಇದೆಲ್ಲಾ ನೋಡಿದ್ ಮ್ಯಾಕ ನಮ್ ರಾಜ್ಯ, ಎಸ್‌ಪೆಷಲಿ, ಗೌಡ್ರು ಹಾಡ್ಯದಾಗ ಬಹಳಷ್ಟು ಕೆಲ್ಸಾ ನಡದಾವಂತs, ನೋಡಿಕ್ಯಂಬರಣ ಬರತೀರೇನ?

# posted by Satish : 4:53 pm  0 comments

Friday, August 18, 2006

ಬಂಡಾಯದಲ್ಲಿ ಹುಟ್ಟಿ ಬಂಡಾಯದಲ್ಲೇ ಬಡವಾದ್ಯಲ್ಲೋ ಶಿವನೇ!

ಇನ್ನೇನ್ ಸ್ವಾಮಿ ಹೇಳಣಾ, ಇದೇ ಕುಸಾ ಸಾಹೇಬ್ರೇ ಆರು ತಿಂಗಳ ಹಿಂದೆ ಬಂಡಾಯ ಬಿದ್ದು ಅದ್ಯಾವ್ದೋ ರೆಸಾರ್ಟ್‌ನಲ್ಲಿ ಎಲೆ ಆಡಿಕ್ಯಂಡು ತಮ್ಮ ಪಂಗಡದ ಒಂದಿಷ್ಟು ಜನ್ರ ಕೂಡಿ ಕಾಲ ಕಳ್ದಿರ್‌ಲಿಲ್ಲಾ? ಇವತ್ತು ನೋಡಿದ್ರಾ ಒಳ್ಳೇ ಪೆಟ್ರೋಲ್ ಬಂಕ್‌ನ್ಯಾಗ ಲೀಟರ್ ಲೆಕ್ಕಾ ಇಟ್‍ಗಳೋ ಮೀಟರ್‌ನಂಗ ಕುಸಾ ಸಾಹೇಬ್ರಿಗೆ ಕುರುಚೀ ಏರಿ ನೂರಾ ಎಂಭತ್ತು ದಿನಾ ಆತು, ಇನ್ನೊಂದು ಇಪ್ಪತ್ತ್ ದಿನದಾಗ ಇಳಿದುಬಿಡಾ ಶಿವಾ ಅಂತ ಗಂಟ್ ಬಿದ್ದಂಗ್ ಕಾಣ್ತಾರಲ್ಲಾ! ಏನ್ ಹೇಳೋಣು, ಇಂಥಾ ಆಡ್‌ನಾಡಿ ಜನಗಳ್ ಬಗ್ಗೆ.

ಸಂತೋಷ್ ಲಾಡ್ ಸವಕಾರ್ರು ತಾವೇ ಲಾಡು ತಿನ್ನಾಕ್ ಹತ್ಯಾರಂತ್ ರೀ, ಕುಸಾ ಸಾಹೇಬ್ರು ಇಕ್ಬಾಲ್ ಮತ್ತು ಅವರ ಗೆಣ್ಯಾ ಜಮೀರ್ ನಂಬಿಕ್ಯೊಂಡ್ ಕೆಟ್ರು ಬಿಡ್ರಿ. ಜನಾರ್ಧನ ರೆಡ್ಡಿಯೋರು ಅದೇನೋ ಕ್ಯಾಸೆಟ್ ಬಿಡುಗಡೆ ಮಾಡ್ತಾರಂತೆ, ಅದರ ನಂತರ ಕುರುಚೀ ಕಾಲಿನ ಹಂಚಿಕೆ ನಡಿಯುತ್ತೆ ಅನ್ನೋದು ಎಲ್ಲರ ಅಂಬೋಣ. ದೊಡ್ಡ ಗೌಡ್ರಿಗೂ ವಯಸ್ಸಾತು, ಎಷ್ಟೂ ಅಂತ ಮಕ್ಳನ್ನ ಹೊಟ್ಟೆ ಹೊರದಾರೂ? ಹೇಳಿಕೊಟ್ಟ ಬುದ್ಧಿ, ಕಟ್ಟಿಕೊಟ್ಟ ಬುತ್ತಿ ಎಲ್ಲೀವರೆಗೆ ಬಂದೀತೂ ಅಂತೀನಿ.

ಈಗ ಹನ್ನೆರಡು ಜನಾ ಎದ್ದ್ ನಿಂತ್ಯಾರಂತ, ಹನ್ನೆರಡು ಇದ್ದದ್ದು ನೂರಾ ಹನ್ನೆರಡು ಆತು ಅಂದ್ರ ಬೆಂಗ್ಳೂರಿಂದ ಹರದನಹಳ್ಳೀವರೆಗೂ ಗೌಡ್ರು ತಂಡ ಓಡಿಕ್ಯಂಡ್ 'ಹಾ, ಹೂ, ಬಿಕ್ಕಾನಾಕ್ಕಾ ಬಳಲೇ, ಬಿಕ್ಕೈ ಬಳಲೇ...' ಅಂತ ಗಂಜೀ ಕುಡೀಬೇಕಾಗ್‌ತತೇನೋ ನೋಡೋಣಾ?!

# posted by Satish : 11:02 am  2 comments

Tuesday, August 15, 2006

... ಅವ್ರಿಗೆ ಇಂಗ್ಲೀಷ್ ಬರದಿರೋ ಮಂದೀ ಮ್ಯಾಲೆ ಬಾಳ ಪ್ರೀತಿ ಕಣ್ರೀ

ನಮ್ ಸಾಹೇಬ್ರು, ಅದೆ ಕುಸಾ ಅವ್ರು, ಬೇರೇ ಏನಿಲ್ಲ ಅಂದ್ರೂ ಕನ್ನಡ ಜನಾ ಕಂಡ್ರೆ ಬಾಳಾ ಪ್ರೀತಿ ತೋರುಸ್ತಾರ್ರೀ...ಛೇ ಬಿಡ್ತು ಅನ್ರೀ, ಕನ್ನಡಾ ಬರೋ ಜನಾ ಅಲ್ಲ, ಇಂಗ್ಲೀಷ್ ಬರದಿರೋ ಜನಾ ಅಂತ ಹೇಳ್ದೆ! ಅವ್ರಿಗೋ ಇಂಗ್ಲೀಷ್ ಮಾತಡಕ್ ಅವರ ಅಪ್ಪಾ ಅಮ್ಮಾ ಕಲಿಸಿಲ್ಲಪಾ, ಅದಕ್ಕೇ ಅವರಂಗ್ ಇರೋ ಮಂದಿ ಅಂದ್ರೆ ಒಂಥರಾ ಶಾನೆ ಪ್ರೀತಿ ಅಂತಾರಲ್ಲ ಹಂಗೆ.

ಹೌದು, ನಮ್ ದೊಡ್ಡ್ ಗೌಡ್ರಿಗೆ ಇಂಗ್ಲೀಷ್ ಬರ್ತತೋ? ಅಂತ ಕೇಳಿದ್ದಕೆ ನಮಗೆ ಎಲ್ಲಾ ಹೊಡೆದು ಓಡಿಸಿದ್ರು ರೀ, ಅವರ ಊರಿಂದ. ಇಂಗ್ಲೀಷ್ ಬರಲೀ, ಬಿಡಲೀ ನಮ್ಮೂರ್ ಮುದ್ದೇ ಹೈದ ಪ್ರಧಾನ ಮಂತ್ರೀ ಆದನೋ ಇಲ್ಲೋ, ಅಲ್ಲಿ ಬೆಚ್ಚಗಿರೋ ಖುರುಚೀ ಮ್ಯಾಗ ಕುತಗೊಂಡು ನಿದ್ದೀ ಹೊಡೆದರೋ ಇಲ್ಲೋ. ಹಂಗಾs, ಕುಸಾ ಸಾಹೇಬ್ರೂ ಅಂತ ತಿಳಕೋರಿ. ಮ್ಯಾಗ ಹೋಗೋದಕ್ಕ, ಖುರುಚೀ ಮ್ಯಾಗ ಕುಂದ್ರೂದಕ್ಕ ಭಾಷೆ ಯಾತಕ್ ಬರಬೇಕ್ರಿ? ಹಂಗಾs, ರಾಜಕೀಯ ಮಾಡೋದಕ್ಕೂ ಅಷ್ಟೆ ಅಂದುಕೋರಿ.

ಕುಸಾ ಸಾಹೇಬ್ರು ಬೆಂಗ್ಳೂರ್‌ನಾಗಿರೋ ಎಲ್ಲರಿಗೂ ಅಂದ್ರ - ಹೊಟೇಲ್ ಮಾಣಿಗಳಿಂದ ಹಿಡಿದು ಅಟೋರಿಕ್ಷಾ ಡ್ರೈವರ್ರುಗಳ ತನಕಾ ಒಂದೊಂದ್ ಸೈಟ್ ಕೊಡುಸ್ತಾರಂತ, ಹಂಗ ಕೊಡಿಸಿದ್ ಸೈಟಿಗೆ ಅವರ ಮಕ್ಳು ಮೊಮ್ಮಕ್ಳು ಅಧಿಕಾರಕ್ಕ ಬಂದ ಮ್ಯಾಗ ಕೊಡೋ ಅನುದಾನದಿಂದ ಮನೀನೂ ಕಟ್‌ಸೋದಕ್ಕೆ ಪ್ಲಾನ್ ಐತಂತ. ಅತ್ಲಾಗ ನಾನೂ ಒಂದು ಸೈಟಿ ಅರ್ಜಿ ಬಿಸಾಕಾನ ಅಂದ್ರೆ ಮೊದಲು ಯಾವ್ದಾದ್ರೂ ಹೋಟ್ಲು ಸೇರಿಕ್ಯಳು ಪರಿಸ್ಥಿತಿ ಬಂದೇತ್ ನೋಡ್ರಿ! ಏನ್ ಮಾಡೋಣು?

# posted by Satish : 10:18 am  0 comments

Saturday, August 12, 2006

ದ್ಯಾವೇ ಗೌಡ್ರು ಶ್ರೀ ಕೃಷ್ಣರಾಗವರಂತೆ!

ಕೊನಿಗೂ ಗೌಡ್ರುದ್ದು ಮರ್ಮಾ ಹೊರಬಿದ್ದೋತಲ್ಲ - ಕುಮಾರ ಕುಸಾ ಮುಗಿಸಲು ಷಡ್‌ಯಂತ್ರ ನಡೆದಿದೆಯಂತೆ, ಅದಕ್ಕೆ ಇವರು ಕಂಡ್‌ಕಂಡೋರ್‌ನೆಲ್ಲ ಬಗ್ಗು ಬಡೀತಾರಂತೆ! ದುಷ್ಟ ಕೂಟದ ಮರ್ದನಾನೂ ಮಾಡ್ತಾರಂತೆ! ಅಯ್ಯೋ, ಹಂಗಾದ್ರೆ ಅವರು ಮನೀ ಬಿಟ್ಟು ಹೋರಗ್ ಹೋಗದೇ ಬ್ಯಾಡಾ, ಎಲ್ಲಾ ದುಷ್ಟರೂ ಅವರ ಮನ್ಯಾಗೆ ತುಂಬಿಕೊಂಡಿಲ್ವಾ? ಅಂತ ಯಾರೋ ಪ್ರಶ್ನೆ ಕೇಳಿ ನಗಾಡ್ತಾ ಇದ್ದಂಗಿತ್ತು.

ಜಾತ್ಯತೀತ ಗುರಿಯ ಹೆಸರಿನ ದೊರೆ, ಹೆಸರಿಗೆ ಗೌಡ, ಮೊನ್ನೆ ಉಪ್ಪಾರ ಜನಾಂಗದವರು ಏರ್ಪಡಿಸಿದ್ದ ಸಮಾವೇಶದಲ್ಲಿ ಆವೇಶವನ್ನು ಕೊಚ್ಚಿಕೊಳ್ತಾ ಇದ್ರಂತೆ. ಒಂದು ಕಡೆ ಗೌಡರು 'ಶ್ರೀಕೃಷ್ಣ'ನಾಗಿ ದುಷ್ಟ ಸಂಹಾರ ಮಾಡಿ ತಮ್ಮ ಕುಮಾರರನ್ನು ಉದ್ದಾರ ಮಾಡುವ ಪಣತೊಟ್ಟಿದ್ದರೆ ಮತ್ತೊಂದು ಕಡೆ ಧರಮ್ ಅಣ್ಣ ಗರಮ್ ಆಗಿ ಶ್ರಾವಣಾ ಮುಗಿಯೋದರೊಳಗೆ ಕಾದಿದೆ ಗೌಡರಿಗೆ ಗಂಡಾಂತರ ಎಂದು ಭವಿಷ್ಯ ನುಡಿದು ಬಿಟ್ಟಿದ್ದಾರೆ. ಮಗನ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳೋದಿಲ್ಲ ಅನ್ನೋ ಅಪ್ಪ, ಈಗ ಮಗನ ರಕ್ಷಣೆಗೇ ಕಂಕಣಬದ್ಧರಾಗಿ ನಿಂತಿರೋದು ಮಜಾ ಅನ್ಸಲ್ಲಾ?

ಎಲ್ಲಾ ಅವನದಯೆ, ಶ್ರೀ ಕೃಷ್ಣ ಪರಮಾತ್ಮ ನೀನು ಏನು ಬೇಕಾದರೂ ಮಾಡು, ಆದರೆ ದೇವೇಗೌಡರ ರೂಪದಲ್ಲಿ ಮಾತ್ರ ಅವತರಿಸಬೇಡ ಪ್ರಭುವೇ, ನಿನ್ನ ನುಣ್ಣನೆ ತಲೆಯನ್ನೂ, ದಪ್ಪನೇ ಮೂಗನ್ನೂ, ಕಂಡಕಂಡಲ್ಲಿ ಮುದ್ದೆ ಬಾಲಿನ ಪರಿಣಾಮದಿಂದ ಗೊರಕೆ ಹೊಡೆಯುವ ಪರಿಯನ್ನು ನೋಡಲಾರೆ ಪ್ರಭುವೇ. ಈ ಭಕ್ತನ ಕೋರಿಕೆಯನ್ನು ಮನ್ನಿಸಲಾರೆಯಾ? ನೀನು ಮತ್ತೊಮ್ಮೆ ಯಾದವನಾಗಿ 'ಲಾಲೂ' ಆದರೂ ಪರವಾಗಿಲ್ಲ (ಯಾಕಂದರೆ ನೀನು ಬಿಹಾರದಲ್ಲಿ ಬಿದ್ದಿರುತ್ತೀಯೆ), ಆದರೆ ಗೌಡನಾಗಿ ಕರ್ನಾಟಕಕ್ಕೆ ಮಾತ್ರ ಬರಬೇಡ, ಗೊತ್ತಾಯ್ತಾ?

# posted by Satish : 8:18 pm  0 comments

Tuesday, August 08, 2006

ಇನ್ನೊಬ್ರು ಮ್ಯಾಲ್ ಬೆಟ್ ಮಾಡಿ ತೋರಿಸಾಕೆ ನಂಬರ್ ಒನ್ ನೋಡಲೇ...

'ಥೂ ನಿಮ್ಮವ್ನ, ಅತ್ಲಾಗ್ ಇಪ್ಪತ್ತು ತಿಂಗ್ಳು ತೂಗಡಿಸಿಕೊಂಡ್ ಕಳದ್ದಿದ್ದಾತು, ಈಗ ಕುಸಾ ಮ್ಯಾಲ್ ಯಾಕಪ್ಪಾ ಬೆಟ್ ಮಾಡಿ ತೋರುಸ್ತಿ ಧರಮಣ್ಣ? ಹುಜೂರ್ ತಮ್ಮ ಆಡಳಿತದಾಗ ಏನ್ ಮಾಡದಿದ್ದ್ ಮ್ಯಾಗ ಯಾಕಪ್ಪಾ ಮಂದಿ ಉಸಾಬರಿ...' ಎಂದು ಧರಮ್ ಸಿಂಗರನ್ನು ಯಾರೋ ಕೇಳುತ್ತಿದ್ದ ಹಾಗನ್ನಿಸಿತು. ವಿಮಾನದಾಗೋ ಹೆಲಿಕಾಪ್ಟರ್‌ನ್ಯಾಗೋ ಕುತಗೊಂಡು ನೀರು ಹೊಕ್ಕ ಗ್ರಾಮಗಳ್ನ ನೋಡ್ತಾರಪಾ, ಅದು ಎಲ್ರೂ ಮಾಡೋ ಕೆಲ್ಸಾ, ಅಂತಾದ್ರಾಗ ಅವ್ರು ಬಿಟ್ಟು, ಇವ್ರು ಬಿಟ್ ಕುಸಾ ಮ್ಯಾಗ ಯಾಕಪ್ಪ ಕೈ ತೋರಿಸ್ ಬೇಕಿತ್ತು? ತಮ್ಮ ಅಧಿಕಾರ ಇದ್ದಾಗ ಗುಲ್ಬರ್ಗದ ಮುಖ ನೋಡೋಕೇ ಎಷ್ಟೋ ತಿಂಗಳು ತಗೊಂಡ ಧರಮಣ್ಣ ಈ ಮಾತು ಹೇಳಿದ್ರೆ ಯಾವ ದೇವ ಮೆಚ್ತಾನ್ ಶಿವ, ಆ ಜೀವರಿಗಿ ದೇವ್ರಿಗೊಂದೇ ಗೂತ್ತು.

ಕುಸಾ ಹಣೀ ಮ್ಯಾಗ ಚೋಲೋ ಅದೃಷ್ಟ ಬರದತಿ, ಅತ್ಲಾಗ್ ಮಾಡಿಕ್ಯಳ್ಳಿ ಬಿಡ್ರಿ ಪ್ರವಾಸನ, ಸರಕಾರ ದುಡ್ಡೂ ಅಂದ್ರೆ ಏನ್ ಕಮ್ಮೀ ಐತೇನು? ಸಾಹೇಬ್ರು ಆರು ತಿಂಗಳು ಅಧಿಕಾರ್‍ದಾಗಿದ್ದು ಒಂದು ನೆರೆ ಪೀಡಿತ ಪ್ರದೇಶಾನೂ ಸಂದರ್ಶಿಸಲಿಲ್ಲಾ ಅಂದ್ರ ಒಂದು ರೀತಿ ಮುಖದ್ ಮ್ಯಾಗ್ ಕಪ್ಪ್ ಚುಕ್ಕಿ ಇದ್ದಂಗಾ ನೋಡಪಾ. ಇವರೆಲ್ಲ ಮ್ಯಾಲಿನಿಂದ ಕಣ್ಣೀರು ಸುರುಸ್ಲಿ, ಅಲ್ಲಿ ಮಳ್ಯಾಗ ನೆಂದ ಜನ ಇಂಥೋರ್ ಕಣ್ಣಿಂದ ಮತ್ತಷ್ಟು ತೋಯ್ದು ಹೋಕ್ತಾರ, ಅಷ್ಟೇ ತಾನೆ, ಆಗಲಿ ಬಿಡು. ಕರ್ನಾಟಕದ ಗಂಡುಗಲಿ ಜನರಿಗೆ ಎಂತೆಂಥಾ ಮಳೀನಾ ಸಹಿಸ್ಕ್ಯಣಕಾಗ್‌ತತಿ, ಇನ್ನು ಈ ರಾಜ್‌ರಾರಣಿಗಳು ಒಂದೇ ಕಣ್ಣಲ್ ಸುರುಸೋ ನೀರು ತಡಿಯೋಕ್ ಆಗಲ್ಲ ಅಂದ್ರೆ ಹೆಂಗ?

ಕುಸಾ ಸಾಹೇಬ್ರ, ಅತ್ಲಾಗ ಗುಲಬರ್ಗಾದಿಂದ ಬರೋ ಮುಂದ ಸಂಡೂರ್‌ನೂ ಒಂದಿಷ್ಟು ಭೇಟ್ಟಿ ಕೊಟ್ ಬರಬೇಕಿತ್ರೀ. ಗಣಿ ಹೆಂಗ ತೆಗದಾರ, ಬಿಟ್ಟಾರ ಅಂತ ಇಂಟರ್‌ನೇಟ್ ನ್ಯಾಗ ಎಲ್ಲೋ ಹ್ಯಾಕಾರಂತ, ನೀವೂ ನೋಡಿಕ್ಯಂಡ್ ಬಂದಿದ್ರ ಚೊಲೋ ಇತ್ತು ನೋಡ್ರಿ!

# posted by Satish : 10:57 am  0 comments

Monday, August 07, 2006

ಧರಮ್ ಸಾಹೇಬ್ರಿಗೂ ಮಾತಾಡೋಕ್ ಬರತ್ತೆ...

"ರಾಜಿ ಸಂಧಾನದ ಮೂಲಕ ಬಗೆ ಹರಿಸೋಕೆ ಗಣಿ ಹಗರಣವೇನು ವರ ಮಹಾಲಕ್ಷ್ಮಿ ಪೂಜೆಯೇ?" ಎಂದು ಪ್ರಶ್ನೆ ಕೇಳಿದ್ದಾರಂತೆ! ಅದೂ ಬೆಂಗಳೂರಿನಲ್ಲೂ ಅಲ್ಲ, ಬಿಸಿಲಿನ ಜಳದಿಂದ ಕಾದಿರೋ ಗುಲ್ಬರ್ಗದಲ್ಲಿ. ಇಪ್ಪತ್ತು ತಿಂಗಳು ಅಧಿಕಾರದಲ್ಲಿದ್ದಾಗ ಒಂದಿನಾನೂ ಹಿಂಗ್ ಬಾಯಿ ಬಿಡಲಿಲ್ಲವಲ್ಲ ಸ್ವಾಮಿ...ಅದಿರ್ಲಿ ಅದ್ಯಾವ ರಾಜಿ ಸಂಧಾನದ ಮೂಲಕ ನಿಮ್ಮೂರಲ್ಲಿ 'ವರಮಹಾಲಕ್ಷ್ಮಿ' ಪೂಜೆ ಮಾಡ್ತಾರೇ ಅಂತ ಸ್ವಲ್ಪ ತಿಳಿಸಿದ್ರೆ ಒಳ್ಳೇದಿತ್ತು. ಧರಮ್ ಸಾಹೇಬ್ರ ನೋಡ್ರೀ ನಿಮ್ ಕಾಲ ಆಗಿ ಆರು ತಿಂಗಳಾತು, ನೀವು ವಿರೋಧ ಪಕ್ಷದ ನಾಯಕರಷ್ಟೇ ಈಗ, ಇನ್ನು ಈ ಜನ್ಮದೊಳಗೆ ಮತ್ತೆ ಮುಖ್ಯಮಂತ್ರಿ ಆಗೋದಿಲ್ಲ ಅಂತ ಗೊತ್ತಿದ್ದೂ ಗೊತ್ತಿದ್ದೂ ಹಿಂಗ್ಯಾಕ ಹುಚ್ಚು ಹುಚ್ಚು ಹೇಳಿಕೆ ಕೊಡ್ತೀರಿ ಸ್ವಾಮಿ!

ಓ, ಈಗ ಗೊತ್ತಾತು ನೋಡ್ರಿ ನಿಮ್ಮ ಹೂಟಿ, ಏನು ಅಂದ್ರ, ಅದೇ ನಮ್ ಗುಂಡೂರಾಯರ ಹೆಂಡತಿ ಹೆಸರು ವರಲಕ್ಷ್ಮಿ, ಅವರೇನಾದ್ರೂ ಸಂಧಾನದ ಪೂಜೆ ಈ ಹಿಂದೆ ಮಾಡಿದ್ದು ತಮ್ಮ ಪಕ್ಷ ಕಾಂಗ್ರೇಸಿನಲ್ಲೇ ನಾಲ್ಕು ದಶಕದಿಂದ ಪಾರ್ಕ್ ಮಾಡಿರೋ ನಿಮಗೇನಾದ್ರೂ ಗೊತ್ತೋ! ವಾವ್, ಧರಮ್ ಅಣ್ಣೋ, ನೀವೆಲ್ಲಿದ್ದ್ರೂ ಪ್ರಚಂಡ್ರೇ ಸೈ, ಅಡ್ಡ ಬಿದ್ದೇ ಗುರುವೇ...

ಅದಿರ್ಲಿ, ನಂಬರ್ ಒನ್ ಸ್ಥಾನದಲ್ಲಿದ್ದ ನಮ್ ಕರ್ನಾಟಕ ಈಗ ಎಲ್ಲೈತಿ ಅಂತೇನಾದ್ರೂ ಗೊತ್ತೇನು?

# posted by Satish : 4:47 am  0 comments

Saturday, August 05, 2006

ವೆಂಕಣ್ಣಯ್ಯನೋರ್ ಹೋದ್‌ಮೇಲೆ ಹೆಗ್ಡೆಯೋರು ಬಂದವ್ರಂತೆ...

ಆವಯ್ಯ, ಅದೇ ವೆಂಕಣ್ಣಯ್ಯ ಅಲಿಯಾಸ್ ವೆಂಕಟಾಚಲ ಬಂಗಾರದಂಗ್ ಇರೋ ಹೊತ್ಗೆ ಬೆಂಗ್ಳೂರ್‌ನಲ್ಲಿರೋ ಪೋಲೀಸ್ರೂ ಬಾಯ್-ಬಾಯ್ ಬಿಡೋ ಹಾಂಗಿತ್ತು, ಈ ಕುಸಾ ಸರ್ಕಾರದೋರು ಆವಪ್ಪನ್ನ ಸ್ವಲ್ಪ ದಿವ್ಸ ಇರೂ ಅಂತ್ಲೂ ಅನ್ಲಿಲ್ಲವಂತೆ! ಅಕಟಕಟಾ, ವೆಂಕಣ್ಣ ಅಚಲರಾಗಿ ಇರೋ ಹಾಗಿದ್ದಕ್ಕೆ ಜನಕ್ಕೆ ಸ್ವಲ್ಪನಾದ್ರೂ ನಡುಕ ಅನ್ನೊದ್ ಇತ್ತು, ಇನ್ ಮ್ಯಾಗೆ ಈ ಹೆಗ್ಡೆ ಮನ್ಷ ಏನ್ ಮಾಡ್ತಾರೋ ಯಾರಿಗ್ ಗೂತ್ತು?

ಕುಸಾ ಸರ್ಕಾರ ಲೋಕಾಯುಕ್ತ್‌ರಿಗೆ ಬೋ ಅಧಿಕಾರ ಕೊಟ್ಟು, ಒಂಥರಾ ಕೈ ಕೊಟ್ಟು ಕೋಳ ತೊಡಿಸಿಕೊಳ್ಳೋ ಹಂಗೆ ಕಾಣೋ ಮಾತಾಡುತ್ತಂತೆ! ಅದೂ ಅಲ್ದೇ ಎಲ್ಲರ ಮನೆ ಆಸ್ತೀನೂ, ಬ್ಯಾಂಕ್ ಬ್ಯಾಲೆನ್ಸೂವೇ ತೆಗ್ದು ಕಂಪ್ಯೂಟರ್‌ನಾಗೆ ಏರಿಸ್ತಾರಂತೆ ನಿಜವೇ? ನಂಬೋಕೇ ಆಗೋದಿಲ್ಲ! ಯಾರಿಗ್ಗೊತ್ತು ಶಿವಾ, ಎಲ್ರೂ ತಮ್-ತಮ್ ಆಸ್ತೀ ಅಂತಸ್ತಿನ ವಿವರ ಕೊಟ್ಟ್ ಕೊಟ್ಟೇ ಈಗ ಎಲೆಕ್ಷನ್‌ನ್ಯಾಗೆ ಗೆದ್ ಬರಾಕಿಲ್ವಾ, ಲಂಚಾ ತಗಳಾಕಿಲ್ವಾ - ಅದರಿಂದೇನಾತೂ ಅಂತೀನಿ. ಹಂಗೇ, ಈಗ ಕಂಪ್ಯೂಟರ್ ಪರದೇನ್ಯಾಗೆ ತೋರಿಸಿ ಬಿಟ್ರೆ, ಇವರ್ ಮನೇಲಿರೋ ಚಿನ್ನದ ಗಟ್ಟಿ, ಕರಿ ಲಕ್ಷ್ಮೀನೆಲ್ಲ ಎಣಿಸಿಕಂಬರೊರ್ಯಾರು ಅಂತ?

ಕಾಲ ಅಂತೂ ಕೆಟ್ಟೋಗತೆ, ಕೊನೇ ಪಕ್ಷ ಈ ಹೆಗ್ಡೆ ಮನ್ಷಾ ಕನ್ನಡ್ ಜನ ನೆನಪಿಸಿಕೊಳ್ಳೋ ಹಂಗೆ ಏನಾರೂ ಮಾಡಿದ್ರೆ ಬೋ ಚೆನ್ನಾಗಿತ್ತು ಸ್ವಾಮಿ, ಏನಂತೀರಿ?

# posted by Satish : 3:42 pm  3 comments

Thursday, August 03, 2006

ಕರ್ನಾಟಕದ ಸಮಸ್ಯೆಗಳನ್ನು ಏಕ್ ದಂ ಕಡಿಮೆ ಮಾಡೋ ಉಪಾಯ?

ನಮ್ಮ ಅಕ್ಕ ಪಕ್ಕದ ರಾಜ್ಯಗಳು ದೆಹಲಿಯಲ್ಲಿ ಯಾವುದೇ ಸರ್ಕಾರವಿದ್ದರೂ ಪದೇಪದೇ ಕೇಂದ್ರಕ್ಕೆ ತಮ್ಮ ಗಡಿ ಬೇಡಿಕೆಗಳನ್ನು ಇಡುತ್ತಲೇ ಬಂದಿವೆಯೆಲ್ಲಾ ಈ ಹಿನ್ನೆಲೆಯಲ್ಲಿ ನಮ್ಮ ಗಡಿಯಲ್ಲಿರುವ ಭಾಗಗಳನ್ನೆಲ್ಲ ಒಂದೊಂದಾಗೇ ಹಂಚಿಕೊಂಡು ಬಂದರೆ ಮೊದಲು ಕರ್ನಾಟಕ ಸಣ್ಣದಾಗುತ್ತದೆ, ಆಗಲಾದರೂ ಸಮಸ್ಯೆಗಳು ಕಡಿಮೆಯಾಗಬೇಕು, ಒಂದು ವೇಳೆ ಹಾಗೆ ಕಡಿಮೆಯಾಗದೇ ಹೋದಲ್ಲಿ ರೈಲಿನಲ್ಲಿ ಲಾಸ್ಟ್ ಡಬ್ಬಿಯನ್ನು ತೆಗೆದ ಹಾಗೆ ಎಲ್ಲ ಭಾಗಗಳನ್ನು ಕೊಟ್ಟು ಕರ್ನಾಟಕವನ್ನ ಡಿಸಾಲ್ವ್ ಮಾಡಿದರೆ ಹೇಗೆ?!

'ಏಕೆ ಭಕ್ತಾ, ಕರ್ನಾಟಕದ ಸಮಸ್ಯೆಗಳನ್ನು ಕಂಡು ಅಷ್ಟೊಂದು ಮನ ಕರಗಿದೆಯೇ?' ಎಂದು ತಾಯಿ ಭುವನೇಶ್ವರಿ ತಲೆಯ ಮೇಲೆ ಟಪ್ಪನೆ ಹೊಡೆದು ಕೇಳಿದ ಹಾಗಾಯಿತು.

'ಇಲ್ಲಾ ಅಮ್ಮಾ, ಮತ್ತೇನು ಹೇಳಲಿ, ನಮ್ಮ ನೆರೆ ಹೊರೆಯವರು ನಿಯೋಗಗಳನ್ನು ನಡೆಸಿಕೊಂಡು ಹೋಗಿ ಬರೋದರ ಸಂಚೇನು? ಉಳಿದವರೆಲ್ಲರೂ ಇನ್ನೇನೇನನ್ನೋ ಸೆಲೆಬ್ರೇಟ್ ಮಾಡಿಕೊಂಡು ಖುಷಿಯಲ್ಲಿದ್ದರೆ ನಾವು ನಮ್ಮ ಸರ್ಕಾರ ೬ ತಿಂಗಳನ್ನು ಯಶಸ್ವಿಯಾಗಿ ಕಳೆದಿದೆ ಎಂದು ಚಪ್ಪಾಳೆ ತಟ್ಟುವುದೇಕೆ?' ಎಂದು ಪ್ರಶ್ನಿಸುತ್ತಿದ್ದಂತೆ ಕನ್ನಡಮ್ಮ 'ಥೂ, ರಾಜಕೀಯದ ಬಗ್ಗೆ ಮಾತಾಡ್ತೀಯಾ ಹೊಲಸು ಬಡ್ಡೀಮಗನೆ!' ಎಂದು ಮಾಯವಾದರೆ, 'ಕುಸಾ ಕೇಳ್ಕ ಹೋಗಲೇ...' ಎಂದು ಯಾರೋ ಹಿಂದಿನಿಂದ ತಿವಿದಂತಾಯಿತು.

# posted by Satish : 6:00 pm  2 comments

Wednesday, August 02, 2006

ದೇವರಾಣೆಗೂ ನಾನೇನೂ ತಪ್ ಮಾಡಿಲ್ಲ!

ಪಾಪ, ಕುಸಾ ಸಾಹೇಬ್ರು ಈ ಪತ್ರಿಕೆಯೋರ್ನ ಎದುರ್ಸಿ ಎದುರ್ಸಿ ಸಾಕಾಗಿ ಕೊನೆಗೆ 'ನಾನೇನೂ ಮಾಡಿಲ್ಲ' ಅಂತ ಹೇಳ್ಕೆ ಕೊಡೋ ಸ್ಥಿತಿಗ್ ಬಂದೋಯ್ತು! ಅಲ್ಲಾ ಸಾರ್, ಒಬ್ಬ ಮುಖ್ಯಂತ್ರಿ ಅಂತ್ ಆದ್ ಮೇಲೆ ಇದು ತಮ್ಮ ವೈಯುಕ್ತಿಕ ವಿಷ್ಯ ಆಗೋದಿಲ್ಲ ಅಲ್ವ್‌ರಾ? ನೀವು ನಾಡಿಗ್ ದೊಡ್ಡೋರು, ಯಾರ್ಯಾರು ತಪ್ಪ್ ಮಾಡಿದ್ರೂ ಅವರ್ನೆಲ್ಲ ಹಿಡಿದು ಒತ್ತಟ್ಟಿಗೆ ತಳ್‌ಬೇಕಾದೋರು... ಸರಿ ನೀವೇನೋ ತಪ್ ಮಾಡಿಲ್ಲಪಾ, ತಪ್ ಯಾರ್ ಮಾಡೋವ್‌ರೆ ಅಂತಾನಾದ್ರೂ ಗೊತ್ತಾ? ಅಕಸ್ಮಾತ್ ಗೊತ್ತಿದ್ರೆ, ಅದನ್ನ ನೋಡಿಕೊಂಡ್ ಸುಮ್ಮನಿದ್ರೂ ಅದೂ ತಪ್ಪ್ ಅಲ್ವಾ ಸಾರ್?

ಯಾರೋ ತಪ್ ಮಾಡವ್ರಲ್ವಾ, ಯಾರದು? ನಮ್ ಸಂಡೂರಿನ್ ಮಣ್ಣೆಲ್ಲ ಎಲ್ಲಿಗೋಯ್ತು? ಕಬ್ಬಿಣಾ ತೆಗೆದು ಚಿನ್ನಾ ಯಾರ್ಯಾರು ಮಾಡ್ಕೊಂಡ್ರು, ಇದಕ್ಕೆಲ್ಲ ಏನ್ ತನಿಖೆ ನಡೀತಿದೆ? ನಮ್ ಚತುರ್ವೇದಿ ಸಾಹೇಬ್ರು ಏನ್ ಬರದವ್ರೆ? ನೀವೇನೋ ದೇವ್ರು ಮೇಲ್ ಪ್ರಮಾಣ್ ಮಾಡಿದ್ರಿ, ಆದ್ರೆ ನಮ್ಮಂತ ಆಮ್ ಜನ ಏನ್ ಮಾಡ್‌ಬೇಕು?

ನಾನೇನೂ ಔಷಧಿ ತಗೊಂಡಿಲ್ಲ ಅನ್ನೋ 'ಸತ್ಯ' ಹೇಳ್ದ ಲ್ಯಾಂಡಿಸ್ ಈಗ ತಾನೇ ಎಕ್ಸ್‌ಪ್ಲೇನ್ ಮಾಡೋ ಪರಿಸ್ಥಿತಿ ಬಂದಿದೆ ನೋಡಿ - ಓಪನ್ ಆಗಿ ಪ್ರಮಾಣ ಮಾಡೋದು ಬಹಳ ಡೇಂಜರಸ್ಸು!

# posted by Satish : 5:05 pm  0 comments

Tuesday, August 01, 2006

ಜನಾದೇಶ ಅಂದ್ರೇನು ಶಿವಾ!

ಇದೊಳ್ಳೇ ಕತೆ ಆಯ್ತಲ್ಲಾ, ನಾವ್ ಓಟ್ ಹಾಕ್ಸಿ ಕಳಸ್ತೀವಿ ಅಷ್ಟೇನೇ ಹೊರತೂ ಇಂತೋರು ಇಂತಿಂಥ ಮಂತ್ರೀ ಮಹೋದಯ್‌ರಾಗ್ರೀ ಅಂತಾ ಏನಾದ್ರೂ ಹೇಳ್ತೀವೇ? ಇವರಿಗೆಲ್ಲ ಕಷ್ಟ ಸುತ್‌ಗೊಂಡ್ ಹೊತ್ತಿಗೆ ಜನಾದೇಶ, ಜನರ ಒಪ್ಪಿಗೆ ಎಲ್ಲ ಲೆಕ್ಕಕ್ಕೆ ಬರುತ್ತೆ, ಅದೇ ಗಂಗಾಳ್‌ದಾಗೆ ಹಾಕ್ಕೊಂಡ್ ಹೊಡೀತಿರ್ತಾರಲ್ಲ, ಆವಾಗೇನಾದ್ರೂ ಈ ಬಡ ಪ್ರಜೆ ಕಣ್ಣಿಗೆ ಕಾಣ್ತಾರೋ ಅಂತ ಕೇಳ್‌ಬೇಕು ನೋಡಿ.

ಐದು ವರ್ಷಕ್ಕೆ ಮೂರು ಮತ್ತೊಂದು ಮಂತ್ರಿಗಳಾಗ್ಲಿ, ಅಸೆಂಬ್ಲಿಲಿದ್ದೋರೆಲ್ಲ ಪಟ್ಟ ಹತ್ಲಿ ಅಂತ ಶಾನೆ ನಾನಂತೂ ಯಾವಾಗೂ ಕೇಳ್ದಂಗಿಲ್ಲ, ನಿಮಗೇನಾರೂ ಜ್ಯಾಪ್ಕ ಇದ್ರೆ ಹೇಳಿ. ಕುಸಾ ಸಾಹೇಬ್ರೂ ಇಡೀ ರಾಜ್ಯಕ್ಕೆ ನೀರು ಕುಡಿಸೋ ಪ್ಲಾನ್ ಹಾಕವರಂತೆ, ಅಂದ್ರೆ ಕುಡಿಯುವ ನೀರಿನ ಯೋಜನೆ ಹಮ್ಮಿಕೊಂಡಿದ್ದಾರಂತೆ ಅಂತ ಹೇಳ್ದೆ, ಇಷ್ಟು ದಿವ್ಸ ಮತ್ತೆ ಮಾಡಿದ್ದೇನು, ಇವರು ಕುಡ್ಸಿದ್ ನೀರ್ನೇ ಅಲ್ವೇ ನಮ್ಮೋರೆಲ್ಲ ಕುಡೀತಿರೋದು - ಅವರದ್ದೇ ಆಟ, ಅವರದ್ದೇ ಮಾಟನಪ್ಪಾ, ಮತ್ತೆ ಅದಕ್ಕೊಂದ್ ಯೋಜ್ನೆ ಅಂತ ಹೆಸರ್ಯಾಕೋ - ಓ, ಗೊತ್ತಾಯ್ತು ಬಿಡಿ, ಹಂಗಾದ್ರೂ ಒಂದಿಷ್ಟು ದುಡ್ ಹೊಡಿಯೋದಕ್ಕೆ ಲೆಕ್ಕಾ ಇರ್ಲಿ ಅನ್ನೋ ಜಾಣ್‌ತನ ಇದ್ದ್ರಿರಬೋದು, ಯಾವನಿಗ್ಗೊತ್ತು?

ನೋಡಿ ಸಾರ್ "ಸಿದ್ದರಾಮ್ಯಯ ೫ -೬ ಬೋರ್ಡ್ ಹಾಕ್ಕಂಡು ಈಗ ಅದನ್ನೂ ತೆಗೆದು ಹಾಕಿ ಅಧಿಕಾರಕ್ಕಾಗಿ ಸೋನಿಯಾ ಗಾಂಧಿ ಸೆರಗಿನಡಿ ಹೊಕ್ಕಂಡವ್ರೆ. ಅವರ ಬಗ್ಗೆಲ್ಲ ನಾವ್ ತಲೆ ಕೆಡಿಸ್ಕಳ್ಳಲ್ಲ" ಅಂತ ಹೇಳ್ಕೆ ಕೊಡುತಾರಲ್ಲ ಎಂತ ಜನಾ ಇದ್ದಿರಬೋದು ನೀವೇ ಲೆಕ್ಕಾ ಹಾಕ್ಕಳಿ - ಹಿಂಗ್ ಮಾತನಾಡಿ ಅನ್ನೋದೇ ಜನಾದೇಶ್ವಾ, ಆ ದೇವನೇ ಬಲ್ಲ!

# posted by Satish : 1:04 pm  1 comments

This page is powered by Blogger. Isn't yours?

Links
Archives